ಮುಸ್ಲಿಂ ಯುವಕರ ಜೋಡಿ ಕೊಲೆ ಪ್ರಕರಣದಲ್ಲಿ ರಾಜಸ್ತಾನ ಪೊಲೀಸರಿಂದ ತಲೆ ಮರೆಸಿಕೊಂಡಿದ್ದ ಗೋರಕ್ಷಕ ಮೋನು ಮಾನೇಸರ್ ಅವರನ್ನು ಹರಿಯಾಣ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಹರಿಯಾಣ ಪೊಲೀಸರು ಅವರನ್ನು ರಾಜಸ್ಥಾನ ಪೊಲೀಸರಿಗೆ ಹಸ್ತಾಂತರಿಸಲಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾಜಸ್ಥಾನದ ಇಬ್ಬರು ಮುಸ್ಲಿಮರನ್ನು ಕೊಂದ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಮೋನು ಮಾನೇಸರ್ ಕಳೆದ ಕೆಲವು ತಿಂಗಳುಗಳಿಂದ ತಲೆ ಮರೆಸಿಕೊಂಡಿದ್ದ.
ಅತ್ಯಾಧುನಿಕ ಮೆಷೀನ್ ಗನ್ ಗಳೊಂದಿಗೆ ಗೋರಕ್ಷಣೆಗೆಂದು ತಂಡ ಕಟ್ಟಿ ಇಳಿಯುತ್ತಿದ್ದ ಮೋನು ಮಾನೇಸರ್ ಹಲವರಿಗೆ ಹಲ್ಲೆ ನಡೆಸಿಯೂ ಸ್ಥಳೀಯ ರಾಜಕಾರಣಿಗಳ ಕೃಪಕಟಾಕ್ಷದಿಂದ ಅಪರಾಧ ಚಟುವಟಿಕೆಗಳಲ್ಲಿ ತೊಡಗುತ್ತಿದ್ದ ಎನ್ನಲಾಗಿದೆ. ಸ್ಥಳೀಯ ಪೊಲೀಸ್ ಅಧಿಕಾರಿಗಳೊಂದಿಗೂ ಉತ್ತಮ ಸಂಬಂಧ ಹೊಂದಿದ್ದ.
2015 ರಲ್ಲಿ ಗೋಸಂರಕ್ಷಣಾ ಕಾನೂನನ್ನು ಜಾರಿಗೊಳಿಸಿದ ಬಳಿಕ ಹರ್ಯಾಣ ಸರ್ಕಾರ ಸ್ಥಾಪಿಸಿದ್ದ ಜಿಲ್ಲಾ ಗೋಸಂರಕ್ಷಣಾ ಕಾರ್ಯಪಡೆಯ ಸದಸ್ಯನಾಗಿರುವ ಮೋನು ಮಾನೇಸರ್, ಮೇವಾತ್‌ನಲ್ಲಿ ಗೋರಕ್ಷಕರ ಗುಂಪಿನ ನಾಯಕನಾಗಿದ್ದಾನೆ.
ಬಜರಂಗದಳದ ಸದಸ್ಯ ಮತ್ತು ಗೋರಕ್ಷಕನಾಗಿ ಗುರುತಿಸಿಕೊಂಡಿದ್ದ ಮೋನು ಮಾನೇಸರ್ ಅಲಿಯಾಸ್ ಮೋಹಿತ್ ಯಾದವ್, ಗುರುಗ್ರಾಮ್ ಬಳಿಯ ಮನೇಸರ್ ಮೂಲದವನು.
ರಾಜಸ್ಥಾನದ ಭರತ್‌ಪುರ ಜಿಲ್ಲೆಯ ಘಾಟ್ಮೀಕಾ ಗ್ರಾಮದ ನಿವಾಸಿಗಳಾದ ನಾಸಿರ್ ಮತ್ತು ಜುನೈದ್ ಎಂಬ ಇಬ್ಬರನ್ನು ಫೆಬ್ರವರಿ 15 ಅಪಹರಿಸಿ ಕೊಂದಿರುವ ಪ್ರಕರಣದಲ್ಲಿ ರಾಜಸ್ಥಾನ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದು, ಮೋನು ಮಾನೇಸರ್ ಅವರನ್ನು ಆರೋಪಿ ಎಂದು ಹೆಸರಿಸಿದ್ದಾರೆ.
ರಾಜಸ್ತಾನ ಪೊಲೀಸರು ಹುಡುಕಾಡುತ್ತಿದ್ದರೂ, ನುಹ್ ನಲ್ಲಿ ನಡೆದ ವಿಶ್ವ ಹಿಂದೂ ಪರಿಷದ್ ಮೆರವಣಿಗೆಯಲ್ಲಿ ತಾನು ಪಾಲ್ಗೊಳ್ಳುವುದಾಗಿ ಹೇಳಿಕೊಂಡು ವಿಡಿಯೋ ಬಿಡುಗಡೆ ಮಾಡಿದ್ದ ಮೋನು ಮಾನೆಸಾರ್ ತಾಕತ್ತಿದ್ದರೆ ನನ್ನನ್ನು ತಡೆಯಿರಿ ಎಂದು ಸವಾಲು ಹಾಕಿ ನುಹ್ ಗಲಭೆಗೆ ಪ್ರಚೋದನೆ ನೀಡಿದ್ದ.