ರಾಜ್ಯದಲ್ಲಿ ಕೊರೊನಾ ಸೋಂಕು ಅಬ್ಬರ ಶುರುವಾಗುವ ಸಾಧ್ಯತೆ ಇದೆ ಎಂದು ಆರೋಗ್ಯ ಸಚಿವರು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ದೇಶದಲ್ಲಿ ಕಳೆದ ಏಳೂವರೆ ತಿಂಗಳ ಬಳಿಕ ಕೊರೊನಾ ಸೋಂಕು ನಿಧಾನವಾಗಿ ಏರುಗತಿಯಲ್ಲಿ ಸಾಗುತ್ತಿದೆ. ಕೊರೊನಾ ಸೋಂಕು ಒಬ್ಬರಿಂದ ಒಬ್ಬರಿಗೆ ವೇಗವಾಗಿ ಹರಡುವ ಕಾರಣದಿಂದ ಕೇಂದ್ರ ಸರ್ಕಾರ ಈಗಾಗಲೇ ಎಲ್ಲಾ ರಾಜ್ಯಗಳಿಗೂ ಎಚ್ಚರಿಕೆ ರವಾನೆ ಮಾಡಿದೆ. ಹೀಗಾಗಿ ಕರ್ನಾಟಕ ಸರ್ಕಾರ ಎಚ್ಚೆತ್ತುಕೊಂಡಿದ್ದು, ತುರ್ತು ಸಭೆ ನಡೆಸಿದ್ದಾರೆ.
ರಾಜ್ಯದಲ್ಲಿ 58 ಆಕ್ಟೀವ್ ಕೊರೊನಾ ಕೇಸ್‌ಗಳಿದ್ದು, ಅದರಲ್ಲಿ 47 ಮಂದಿ ಹೋಂ ಐಸೋಲೇಷನ್‌ನಲ್ಲಿ ಇದ್ದಾರೆ. ಕೋವಿಡ್ ಹೆಚ್ಚಳ ಆಗೋ ಮಾಹಿತಿ ಇದೆ ಎಂದಿದ್ದಾರೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾ ಸೋಂಕು ಟೆಸ್ಟಿಂಗ್ ಮಾಡಲು ಸೂಚನೆ ಕೊಡಲಾಗಿದೆ. ಮುಂದಿನ ಮಂಗಳವಾರ ತಾಂತ್ರಿಕ ಸಲಹಾ ಸಮಿತಿ ಜೊತೆ ಮತ್ತೊಂದು ಸುತ್ತಿನ ಸಭೆ ನಡೆಸಿ ಹಲವು ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದಿದ್ದಾರೆ.
ಕೊರೊನಾ ಸೋಂಕಿನ ಜೊತೆಗೆ ಕೊರೊನಾ ಉಪತಳಿ ಆಗಿರುವ JN 1 ಸೋಂಕಿನ ಟೆನ್ಷನ್ ಕೂಡ ಶುರುವಾಗಿದೆ. ರಾಜ್ಯ ಸರ್ಕಾರ ಕೊರೊನಾ ಉಪತಳಿ JN 1 ಸೋಂಕು ಬಗ್ಗೆಯೂ ಕಟ್ಟೆಚ್ಚರ ವಹಿಸಲು ನಿರ್ಧಾರ ಮಾಡಲಾಗಿದೆ. ಕರ್ನಾಟಕ ಅಷ್ಟೇ ಅಲ್ಲದೆ ನೆರೆಯ ರಾಜ್ಯ ಕೇರಳ, ತಮಿಳುನಾಡಿನಲ್ಲಿ ಕೊರೊನಾ ಕೇಸ್‌ಗಳ ಸಂಖ್ಯೆ ಹೆಚ್ಚಾಳವಾಗ್ತಿದೆ. ತಮಿಳುನಾಡಿನ ಆರೋಗ್ಯ ಸಚಿವ ಸುಬ್ರಹ್ಮಣಿಯನ್ ಮಾತನಾಡಿ, RTPCR ಟೆಸ್ಟ್ ಹೆಚ್ಚಳ ಮಾಡಲಾಗಿದೆ. ತಮಿಳುನಾಡಿನಲ್ಲಿ 38 ಆ್ಯಕ್ಟೀವ್ ಕೋವಿಡ್ ಕೇಸ್‌ಗಳಿದ್ದು, ಅದರಲ್ಲಿ 17 ಕೇಸ್‌ಗಳು ಚೆನ್ನೈನಲ್ಲೇ ಕಾಣಿಸಿಕೊಂಡಿವೆ. ಯಾರಿಗೇ ಸೋಂಕಿನ ಲಕ್ಷಣಗಳು ಕಾಣಿಸಿದರೂ ಟೆಸ್ಟ್ ಮಾಡಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.
ಆಸ್ಪತ್ರೆಯಲ್ಲಿ ಬೆಡ್ ರೆಡಿ ಮಾಡಿಕೊಳ್ಳಲು ಕೇರಳ ಸರ್ಕಾರ ಈಗಾಗಲೇ ಸೂಚನೆ ಕೊಟ್ಟಿದೆ. ಭಾರತ ಮಾತ್ರವಲ್ಲ JN.1 ತಳಿ ಈಗಾಗಲೇ ಅಮೆರಿಕದಲ್ಲೂ ಜನರ ನಿದ್ರೆಗೆಡಿಸಿದೆ. ಚೀನಾದಲ್ಲೂ ಅಬ್ಬರ ಶುರು ಮಾಡಿದೆ. ಕೇರಳಾದಲ್ಲೂ JN.1 ಸೋಂಕು ಕೆಲವು ಭಾಗದಲ್ಲಿ ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ. ಇದೇ ಕಾರಣಕ್ಕೆ ಕರ್ನಾಟಕ ಸರ್ಕಾರ ಕೊರೊನಾ ಸೋಂಕು ಹೆಚ್ಚಳ ಆದರೆ ನಿಭಾಯಿಸುವ ಶಕ್ತಿಯನ್ನು ಹೆಚ್ಚಳ ಮಾಡಿಕೊಳ್ಳಲು ತಯಾರಿ ನಡೆಸುತ್ತಿದೆ. ಒಂದು ವೇಳೆ ಕೊರೊನಾ ಸೋಂಕು ಹೆಚ್ಚಳ ಆದರೆ ಅದರಲ್ಲೂ ವ್ಯಾಕ್ಸಿನ್ ಪಡೆದವರಲ್ಲೇ ಕೊರೊನಾ ಸೋಂಕು ಬರುತ್ತಿದ್ದರೆ ಕೊರೊನಾ ವ್ಯಾಕ್ಷಿನ್ ಬಗ್ಗೆಯೂ ದೇಶದಲ್ಲಿ ಚರ್ಚೆ ಹುಟ್ಟುಹಾಕುವ ಸಾಧ್ಯತೆಗಳಿವೆ.