“ಸಾಮೂಹಿಕ ಕೋವಿಡ್ ಪರೀಕ್ಷೆ ಬೇಡ. ಸೋಂಕು ತಡೆಗಾಗಿ ಲಾಕ್ ಡೌನ್ ಬೇಡ. ಶಾಲೆಗಳನ್ನು ಮುಚ್ಚುವುದು ಬೇಡ. ಕೋವಿಡ್ ಹೊಸ ಪ್ರಕರಣಗಳ ಲೆಕ್ಕ ಹಾಕುವುದನ್ನು ಬಿಡಬೇಕು…”
ಹೀಗೆ ಕಳೆದ ಎರಡು ವರ್ಷಗಳಿಂದ ಕೋವಿಡ್ ಗೆ ಸಂಬಂಧಿಸಿದಂತೆ ಯಾವುದೆಲ್ಲಾ ಕಡ್ಡಾಯವಾಗಿ ಜಾರಿಗೆ ಬಂದಿತ್ತೋ, ಯಾವುದೆಲ್ಲಾ ಜನಸಾಮಾನ್ಯರ ದುಃಸ್ವಪ್ನವಾಗಿ ಕಾಡಿತ್ತೋ, ಯಾವುದೆಲ್ಲಾ ಪೊಲೀಸ್ ಮತ್ತು ಇತರೆ ಸರ್ಕಾರಿ ವ್ಯವಸ್ಥೆಯ ಪಾಲಿಗೆ ಜನರನ್ನು ಭಯಬೀಳಿಸುವ ಅಸ್ತ್ರಗಳಾಗಿ ಬಳಕೆಯಾಗಿದ್ದವೋ ಅವೆಲ್ಲವನ್ನೂ ನಿಲ್ಲಿಸಿ, ಕೈಬಿಡಿ ಎಂದು ಹೇಳುತ್ತಿರುವುದು ಬೇರಾರೂ ಅಲ್ಲ; ಎರಡು ವರ್ಷಗಳಿಂದ ಆ ಕಾನೂನುಗಳನ್ನು, ನಿರ್ಬಂಧಗಳನ್ನು ಹೇರುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿದ್ದ ತಜ್ಞ ವೈದ್ಯರೇ ಎಂಬುದು ವಿಪರ್ಯಾಸ!
ಹೌದು, ಕೋವಿಡ್ ವಿಷಯದಲ್ಲಿ ಏನು ಮಾಡಬೇಕು ಏನು ಮಾಡಬಾರದು ಎಂದು ಸರ್ಕಾರಕ್ಕೆ ಸಲಹೆ ನೀಡಲು ನೇಮಕವಾಗಿರುವ ಕೋವಿಡ್ ಟಾಸ್ಕ್ ಫೋರ್ಸ್ ಅಧ್ಯಕ್ಷರಾಗಿರುವ ಡಾ ದೇವಿಪ್ರಸಾದ್ ಶೆಟ್ಟಿ ಅವರೇ ಇದೀಗ ಸರ್ಕಾರಕ್ಕೆ ನೀಡಿರುವ ಸಲಹೆಗಳಿವು!
ವಾಸ್ತವವಾಗಿ ಕೋವಿಡ್ ಮೊದಲ ಅಲೆ ಆರಂಭವಾದಾಗ ಕರೋನಾ ವೈರಾಣುವೇ ಜಗತ್ತಿಗೆ ಹೊಸದಾಗಿತ್ತು. ಅದು ಹರಡುವುದು, ಮನುಷ್ಯನ ಮೇಲಿನ ಪರಿಣಾಮ ಸೇರಿದಂತೆ ಎಲ್ಲವೂ ಬಹುತೇಕ ನಿಗೂಢವೇ ಆಗಿತ್ತು. ಹಾಗಾಗಿ ಆ ಸೋಂಕು ಆರಂಭದಲ್ಲಿ ಕಾಣಿಸಿಕೊಂಡ ದೇಶಗಳಲ್ಲಿ ಅನುಸರಿಸಿದ ನಿಯಂತ್ರಣ ಮತ್ತು ಮುಂಜಾಗ್ರತಾ ಕ್ರಮಗಳನ್ನು ಕಣ್ಣುಮುಚ್ಚಿಕೊಂಡು ಅನುಸರಿಸುವುದು ಭಾರತವೂ ಸೇರಿದಂತೆ ಎಲ್ಲಾ ದೇಶಗಳಿಗೂ ಅನಿವಾರ್ಯವಾಗಿತ್ತು. ಆದರೆ, ಮೊದಲ ಅಲೆಯ ಸಾವುನೋವಿನ ಬಳಿಕ, ಲಾಕ್ ಡೌನ್ ಕ್ರಮದಿಂದಾಗಿ ಸಂಭವಿಸಿದ ಜೀವ ಮತ್ತು ಜೀವನ ನಷ್ಟದ ಬಳಿಕ ದೇಶದ ಆಡಳಿತ ಮತ್ತು ವೈದ್ಯಕೀಯ ರಂಗ ಪಾಠ ಕಲಿಯಬೇಕಿತ್ತು. ಆದರೆ, ಮೊದಲ ಅಲೆಯ ಆರು ತಿಂಗಳ ಬಳಿಕ ಬಂದ ಎರಡನೇ ಅಲೆಯಲ್ಲಿ ದೇಶದ 80ಲಕ್ಷಕ್ಕೂ ಅಧಿಕ(ವಾಸ್ತವಿಕ ಅಂದಾಜು) ಮಂದಿ ಜೀವ ಕಳೆದುಕೊಂಡರು. ಕೋಟ್ಯಂತರ ಜನರ ಬದುಕು ನಾಶವಾಯ್ತು. ಉದ್ಯೋಗ, ಉದ್ಯಮಗಳನ್ನು ಕಳೆದುಕೊಂಡು ಜನರ ಬದುಕು ನರಕವಾಯ್ತು.
ಮೊದಲ ಅಲೆಯ ಪಾಠಗಳನ್ನು ಮರೆತು ಚುನಾವಣಾ ಪ್ರಚಾರ, ರಾಜಕೀಯ ಲಾಭನಷ್ಟದಲ್ಲಿ ಮುಳುಗಿದ ದೇಶದ ನಾಯಕತ್ವ ಮತ್ತು ಸೂಕ್ತ ಮತ್ತು ಸಕಾಲಿಕವಾಗಿ ವೈಜ್ಞಾನಿಕ ತಳಹದಿಯ ಮೇಲೆ ಸಲಹೆ ಸೂಚನೆ ನೀಡುವ ಬದಲು ತಟ್ಟೆಲೋಟ ಬಾರಿಸುವುದು, ಮೊಂಬತ್ತಿ ಹಚ್ಚುವುದು, ಸಗಣಿ ಗಂಜಲ ಕುಡಿಯುವುದು ಮುಂತಾದ ಆಳುವ ಪಕ್ಷದ ಮೆಜಾರಿಟೇರಿಯನ್ ಮೌಢ್ಯಗಳನ್ನು ಬೆಂಬಲಿಸಿದ ತಜ್ಞರು ಸಮೂಹದ ಜನದ್ರೋಹಿ ನಡೆಗಳಿಂದಾಗಿ ಭಾರತ-ಪಾಕಿಸ್ತಾನ ವಿಭಜನೆಯ ಹಿಂಸಾಚಾರದ ಸಾವುನೋವುಗಳಿಗೆ ಸರಿಸಮನಾದ ಅನಾಹುತಗಳಿಗೆ ದೇಶ ಸಾಕ್ಷಿಯಾಯಿತು.
ಆಗಲೂ ಇದೇ ಡಾ ದೇವಿಪ್ರಸಾದ್ ಶೆಟ್ಟಿ ಮತ್ತು ಅವರಂಥ ಮೇಧಾವಿಗಳೇ ಕರ್ನಾಟಕವೂ ಸೇರಿದಂತೆ ದೇಶದ ವಿವಿಧ ರಾಜ್ಯಗಳು ಮತ್ತು ಕೇಂದ್ರದ ಮಟ್ಟದಲ್ಲಿ ಕೋವಿಡ್ ಟಾಸ್ಕ್ ಫೋರ್ಸ್ ಗಳಲ್ಲಿ ಇದ್ದರು ಮತ್ತು ಅಂತಹವರ ಸಲಹೆ ಮತ್ತು ಶಿಫಾರಸುಗಳ ಮೇಲೆಯೇ ಸರ್ಕಾರಗಳು ವೈದ್ಯಕೀಯ ವ್ಯವಸ್ಥೆಯ ಬಲವರ್ಧನೆ, ಉಚಿತ ವೈದ್ಯಕೀಯ ಸೇವೆಯ ಲಭ್ಯತೆ ಮತ್ತು ಜನಸಾಮಾನ್ಯರ ಆರೋಗ್ಯ ಕಾಳಜಿಯ ಪ್ರಯತ್ನಗಳಿಗಿಂತ ಲಾಕ್ ಡೌನ್, ಸೀಲ್ ಡೌನ್, ಕರ್ಫ್ಯೂ ನಂತಹ ಕ್ರಮಗಳ ಮೂಲಕ ಜನರನ್ನು ಕಟ್ಟಿಹಾಕುವ ಕಡೆಗೇ ಹೆಚ್ಚಿನ ಗಮನ ಹರಿಸಿದವು. ಪರಿಣಾಮವಾಗಿ ಕರೋನಾ ವೈರಸ್ ದಾಳಿಗೊಳಗಾಗಿ ಚಿಕಿತ್ಸೆ ಫಲಿಸದೆ ಸತ್ತವರಿಗಿಂತ ಆಮ್ಲಜನಕವಿಲ್ಲದೆ, ವೆಂಟಿಲೇಟರ್ ಇಲ್ಲದೆ, ಆಂಬ್ಯುಲೆನ್ಸ್ ಇಲ್ಲದೆ, ಆಸ್ಪತ್ರೆಗಳಲ್ಲಿ ಹಾಸಿಗೆಗಳಿಲ್ಲದೆ ಬೀದಿಯಲ್ಲಿ ಸತ್ತವರೇ ಹೆಚ್ಚು! ಅಷ್ಟರಮಟ್ಟಿಗೆ ದೇಶದ ಆಸ್ಪತ್ರೆ ಮತ್ತು ವೈದ್ಯಕೀಯ ವ್ಯವಸ್ಥೆಯನ್ನು ಎರಡನೇ ಅಲೆಗೆ ಸಜ್ಜುಗೊಳಿಸದೆ ಕೈಚೆಲ್ಲಿದ ಆಡಳಿತದ ಹೊಣೆಗೇಡಿತನಕ್ಕೆ ಜನಸಾಮಾನ್ಯರು ಜೀವದ ಬೆಲೆ ತೆರಬೇಕಾಯಿತು. ಆ ಸಾವುನೋವುಗಳಿಗೆ ಆಡಳಿತದ ಹೊಣೆ ಹೊತ್ತುವರು ಎಷ್ಟು ಕಾರಣವೋ, ಅಷ್ಟೇ ಕೋವಿಡ್ ಟಾಸ್ಕ್ ಫೋರ್ಸ್ ಮತ್ತು ಇತರೆ ಕೋವಿಡ್ ಸಂಬಂಧಿತ ಸಮಿತಿ-ಸಭೆಗಳಲ್ಲಿ ಸರ್ಕಾರಕ್ಕೆ ಸಲಹೆ-ಸೂಚನೆ ಕೊಡುತ್ತಿದ್ದ ತಜ್ಞರೆನಿಸಿಕೊಂಡವರ ಅಧಿಕಾರಸ್ಥರ ತಾಳಕ್ಕೆ ಕುಣಿವ ವರಸೆಯೂ ಕಾರಣವಾಗಿತ್ತು.

ಅಷ್ಟೇ ಅಲ್ಲದೆ, ಮೊದಲ ಮತ್ತು ಎರಡನೇ ಅಲೆಯಲ್ಲಿ ರೋಗದ ಕುರಿತ ಅಜ್ಞಾನ ಮತ್ತು ಗೊಂದಲಗಳು ಜನರಲ್ಲಿ ಮೂಡಿಸಿದ್ದ ಭೀತಿ ಮತ್ತು ಅಸಹಾಯಕತೆಯ ಲಾಭ ಪಡೆದವರಲ್ಲಿ ಖಾಸಗಿ ಆಸ್ಪತ್ರೆಗಳು ಮುಂಚೂಣಿಯಲ್ಲಿದ್ದವು. ಕೋವಿಡ್ ಚಿಕಿತ್ಸೆ ಮತ್ತು ಪರೀಕ್ಷೆಗಳಿಗೆ ಸರ್ಕಾರ ನಿಗದಿ ಮಾಡಿದ ದರಕ್ಕಿಂತ ಹತ್ತಾರು ಪಟ್ಟು ದುಬಾರಿ ಹಣ ವಸೂಲಿ ಮಾಡಿದ ಖಾಸಗಿ ಆಸ್ಪತ್ರೆಗಳಿಗೆ ಅಂತಿಮವಾಗಿ ಸುಪ್ರೀಂಕೋರ್ಟ್ ಚಾಟಿ ಬೀಸಿ ಸರಿದಾರಿಗೆ ತರಬೇಕಾಯಿತು. ಹಾಗೆ ಜನರ ಜೀವಭೀತಿಯನ್ನೇ ಬಂಡವಾಳ ಮಾಡಿಕೊಂಡು ಲೂಟಿ ಹೊಡೆದ ಆಸ್ಪತ್ರೆಗಳ ಪೈಕಿ ಇದೇ ಡಾ ದೇವಿಪ್ರಸಾದ್ ಶೆಟ್ಟಿ ಮಾಲೀಕತ್ವದ ಆಸ್ಪತ್ರೆಯೂ ಸೇರಿದಂತೆ ಹಲವು ಕೋವಿಡ್ ಟಾಸ್ಕ್ ಫೋರ್ಸ್ ತಜ್ಞರ ಆಸ್ಪತ್ರೆಗಳೂ ಇವೆ ಎಂಬುದು ಗುಟ್ಟೇನಲ್ಲ!
ಹೀಗೆ ಜನರ ಜೀವ ಉಳಿಸಲು ನಿಜವಾಗಿಯೂ ಏನು ಮಾಡಬೇಕಿತ್ತೋ ಅದನ್ನು(ವೈದ್ಯಕೀಯ ವ್ಯವಸ್ಥೆ ಸಬಲೀಕರಣ) ಮಾಡುವುದನ್ನು ಬಿಟ್ಟು ಉಳಿದೆಲ್ಲಾ ಮಾಡಿದ ಮತ್ತು ಆ ಮೂಲಕವೇ ಭಾರೀ ಲಾಭವನ್ನೂ ಮಾಡಿಕೊಂಡ ತಜ್ಞರು ಇದೀಗ ಮೂರನೇ ಅಲೆಯ ಆರಂಭದಲ್ಲಿ ಕೂಡ ಸೋಂಕಿನ ಕುರಿತು ಅದಾಗಲೇ ದಕ್ಷಿಣ ಆಫ್ರಿಕಾ, ಬ್ರಿಟನ್, ಜರ್ಮನಿ, ಕೆನಡಾದಂತಹ ರಾಷ್ಟ್ರಗಳಲ್ಲಿ ಅನುಸರಿಸಿದ ವೈಜ್ಞಾನಿಕ ಕ್ರಮಗಳು ಮತ್ತು ಸೋಂಕಿನ ತೀವ್ರತೆಯ ಕುರಿತ ಮಾಹಿತಿಗಳ ಆಧಾರದ ಮೇಲೆ ವೈಜ್ಞಾನಿಕ ಕ್ರಮಗಳನ್ನು ಶಿಫಾರಸು ಮಾಡುವ ಬದಲು, ಮತ್ತದೇ ಲಾಕ್ ಡೌನ್, ಕರ್ಫ್ಯೂ, ಶಾಲೆ ಕಾಲೇಜು ಬಂದ್, ಸಿನಿಮಾ, ಕ್ಲಬ್, ಹೋಟೆಲ್ ನಿರ್ಬಂಧದಂತಹ ಕ್ರಮಗಳನ್ನೇ ಶಿಫಾರಸು ಮಾಡಿದ್ದರು.
ಹಲವು ಸಾಂಕ್ರಾಮಿಕ ರೋಗ ತಜ್ಞರು, ಅಸಲೀ ತಿಳಿವಳಿಕೆಯ ವೈದ್ಯರು ಮತ್ತು ಕೆಲವು ಮಾಧ್ಯಮಗಳು ಕೂಡ ಒಮಿಕ್ರೋನ್ ರೂಪಾಂತರಿ ವೈರಸ್ ಮೊದಲು ಕಾಣಿಸಿಕೊಂಡ ದಕ್ಷಿಣ ಆಫ್ರಿಕಾದಲ್ಲಿ ಯಾವುದೇ ಸಾವು ಇಲ್ಲದೆ ಮೂರನೇ ಅಲೆ ತಗ್ಗಿದೆ. ಸೋಂಕಿನ ವ್ಯಾಪಕತೆ ಹೆಚ್ಚಿದ್ದರೂ ಗಂಭೀರ ಆರೋಗ್ಯ ಸಮಸ್ಯೆಗಳಾಗಲೀ, ಆಸ್ಪತ್ರೆಗೆ ದಾಖಲಾಗುವಂತಹ ಪರಿಸ್ಥಿತಿಯಾಗಲೀ ಬಂದಿರುವುದು ತೀರಾ ವಿರಳ. ಶೇ.5ಕ್ಕಿಂತ ಕಡಿಮೆ ಮಂದಿಗೆ ಆಸ್ಪತ್ರೆಗೆ ದಾಖಲಾಗುವ ಪರಿಸ್ಥಿತಿ ಬಂದಿದೆ. ಹಾಗಾಗಿ ಅಲ್ಲಿನ ಸರ್ಕಾರ ಕೋವಿಡ್ ಪರೀಕ್ಷೆ, ಪತ್ತೆ ಮತ್ತು ಐಸೋಲೇಷನ್ ಹಾಗೂ ಲಾಕ್ ಡೌನ್ ನಂತಹ ಕ್ರಮಗಳನ್ನು ಅಧಿಕೃತವಾಗಿಯೇ ಕೈಬಿಟ್ಟಿದೆ ಎಂದು ಮಾಹಿತಿ ಸಹಿತ ವಿವರಿಸುವ ಮೂಲಕ ರಾಜ್ಯದಲ್ಲಿ ಕೂಡ ಕರ್ಫ್ಯೂ, ಶಾಲೆ ಬಂದ್ ನಂತಹ ಕ್ರಮಗಳು ಸಲ್ಲದು ಎಂಬ ಸಲಹೆ ನೀಡಿದ್ದರು. ಆದರೆ, ಸರ್ಕಾರಕ್ಕೆ ಸಲಹೆ ನೀಡುವಂತೆ ನೇಮಕವಾಗಿದ್ದ ಡಾ ದೇವಿ ಪ್ರಸಾದ್ ಶೆಟ್ಟಿ ಅವರ ನೇತೃತ್ವದ ಸಮಿತಿ ತಥಾಕಥಿತ ಲಾಕ್ ಡೌನ್, ಸೀಲ್ ಡೌನ್, ಶಾಲಾಕಾಲೇಜು ಬಂದ್, ಪರೀಕ್ಷೆ, ಸೋಂಕಿತರ ಪತ್ತೆ, ಐಸೋಲೇಷನ್, ಕ್ವಾರಂಟೈನ್, ಕ್ಲಸ್ಟರ್ ಮುಂತಾದ ಕ್ರಮಗಳನ್ನೇ ಶಿಫಾರಸು ಮಾಡಿ ಶೀತ ನೆಗಡಿಯಂತಹ ಒಮಿಕ್ರೋನ್ ಸೋಂಕಿಗೂ ರಾಜ್ಯದ ಜನರ ಬದುಕನ್ನು ಮೂರೇಬಟ್ಟೆ ಮಾಡಿತ್ತು.
ಇದೀಗ ಸರಿಸುಮಾರು ಒಂದೂವರೆ ತಿಂಗಳ ಎಲ್ಲಾ ಅವಾಂತರದ ಬಳಿಕ ಒಮಿಕ್ರೋನ್ ಕೋವಿಡ್ ಅಲೆ ಅತ್ಯಂತ ದುರ್ಬಲ. ಅದರಿಂದಾಗಿ ಜೀವ ಹಾನಿ ತೀರಾ ವಿರಳ. ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕೂಡ ಕಡಿಮೆ. ಹಾಗಾಗಿ ಇನ್ನು ಕೋವಿಡ್ ಸಾಮೂಹಿಕ ಪರೀಕ್ಷೆ, ಸೋಂಕಿತರ ಪತ್ತೆ, ಲಾಕ್ ಡೌನ್, ಸೀಲ್ ಡೌನ್, ಶಾಲಾಕಾಲೇಜು ಬಂದ್, ಕ್ವಾರಂಟೈನ್ ನಂತಹ ಕ್ರಮಗಳನ್ನು ಕೈಬಿಡಬೇಕು ಎಂದು ಅದೇ ದೇವಿಪ್ರಸಾದ್ ಶೆಟ್ಟರೇ ದ ಟೈಮ್ಸ್ ಆಫ್ ಇಂಡಿಯಾದಲ್ಲಿ ಪ್ರಕಟವಾಗಿರುವ ತಮ್ಮದೊಂದು ಲೇಖನದಲ್ಲಿ ಅಭಿಪ್ರಾಯಪಟ್ಟಿದ್ದಾರೆ!
ಡಾ ಶೆಟ್ಟಿ ಅವರ ಈ ದಿಢೀರ್ ಯೂಟರ್ನ್ ಅನ್ನು ಹೇಗೆ ಅರ್ಥಮಾಡಿಕೊಳ್ಳುವುದು? ಕರೋನಾ ಹೆಸರಿನಲ್ಲಿ ದೇಶದ ಜನಸಮಾನ್ಯರ ಸಾವಿನ ಮೇಲೆ ದಂಧೆ ಮಾಡಿ ಕೊಬ್ಬಿದ ಖಾಸಗಿ ವೈದ್ಯಕೀಯ ವಲಯದ ನಿರೀಕ್ಷೆಯಂತೆ ಮೂರನೇ ಅಲೆ ಅವರಿಗೆ ಲಾಭ ತಂದುಕೊಡಲಿಲ್ಲ ಎಂಬ ಹತಾಶೆ ಇಂತಹ ಅಭಿಪ್ರಾಯಕ್ಕೆ ಕಾರಣವೆ? ಅಥವಾ ಕೋವಿಡ್ ಹೆಸರಿನಲ್ಲಿ ಇನ್ನು ಜನರಿಗೆ ಮಂಕುಬೂದಿ ಎರಚಲಾಗದು. ಚಿಕಿತ್ಸೆಯ ಹೆಸರಿನಲ್ಲಿ ಒಂದಕ್ಕೆ ಹತ್ತು ಪಟ್ಟು ಬಿಲ್ ಮಾಡಿ ಲೂಟಿ ಮಾಡಲಾಗದು ಎಂಬುದು ಖಾತರಿಯಾದ ಬಳಿಕ ತಜ್ಞರು ಈ ಯೂ ಟರ್ನ್ ಹೊಡೆದರೇ ಎಂಬುದು ಈಗ ಸಾಮಾಜಿಕ ಜಾಲತಾಣದಲ್ಲಿ ಜೋರಾಗಿ ಕೇಳಿಬರುತ್ತಿರುವ ಮಾತು.