ಮೊನ್ನೆ ಮಾಜಿ ಪ್ರಧಾನಿ ಡಾ ಮನಮೋಹನ ಸಿಂಗ್ ಅವರು ಕರೋನಾ ನಿಯಂತ್ರಣದ ಕುರಿತು ಕೆಲವು ಸಲಹೆಗಳನ್ನು ನೀಡಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದರು. ಮುಖ್ಯವಾಗಿ ಕರೋನಾ ನಿಯಂತ್ರಣದ ವಿಷಯದಲ್ಲಿ ಲಸಿಕೆ ನೀಡಿಕೆಯನ್ನು ಆದ್ಯತೆಯಾಗಿ ಪರಿಗಣಿಸಬೇಕು. ಲಸಿಕೆ ಎಷ್ಟು ಜನರಿಗೆ ನೀಡಿದ್ದೇವೆ ಎಂಬುದಕ್ಕಿಂತ, ದೇಶದ ಎಷ್ಟು ಶೇಕಡ ಜನರು ಲಸಿಕೆ ಪಡೆದಿದ್ದಾರೆ ಎಂಬುದು ಗಮನಾರ್ಹ ಎಂಬುದೂ ಸೇರಿದಂತೆ ಐದು ಸಲಹೆಗಳನ್ನು ಸಿಂಗ್ ತಮ್ಮ ಪತ್ರದಲ್ಲಿ ಪ್ರಸ್ತಾಪಿಸಿದ್ದರು.
ಒಬ್ಬ ಮಾಜಿ ಪ್ರಧಾನಿ, ಮೇಧಾವಿ ಮುತ್ಸದ್ಧಿ ನೀಡಿದ ಸೌಹಾರ್ದಯುತ ಸಲಹೆಗೆ ಪ್ರಧಾನಿ ಮೋದಿಯವರ ಸರ್ಕಾರ ಪ್ರತಿಕ್ರಿಯಿಸಿದ ರೀತಿ ಎಂತಹ ದರ್ಪದಿಂದ ಕೂಡಿತ್ತು ಎಂದರೆ; ಮೋದಿ ಸಂಪುಟ ಸಹೋದ್ಯೋಗಿ, ಆರೋಗ್ಯ ಸಚಿವ ಡಾ ಹರ್ಷವರ್ಧನ ಅವರ ಉದ್ಧಟತನದ ಪ್ರತಿಕ್ರಿಯೆಗೆ ದೇಶದ ಜನರೇ ಛೀಮಾರಿ ಹಾಕಿದರು. ಮನಮೋಹನ್ ಸಿಂಗ್ ಅವರ ಸಲಹೆಗಳ ಸಾಧಕ-ಬಾಧಕಗಳ ಆಧಾರದ ಮೇಲೆ ಆ ಬಗ್ಗೆ ಚರ್ಚಿಸುವುದು ಬೇರೆ. ಆದರೆ, ಒಬ್ಬ ಮಾಜಿ ಪ್ರಧಾನಿಯ ಸೌಜನ್ಯದ ಸಲಹೆಗಳಿಗೆ ಕನಿಷ್ಟ ಘನತೆಯಿಂದ ಪ್ರತಿಕ್ರಿಯಿಸುವ ಸಂಸ್ಕಾರ ಕೂಡ ಬಿಜೆಪಿಯ ಆರೋಗ್ಯ ಸಚಿವರಿಗೆ ಇಲ್ಲ. ಅಷ್ಟರಮಟ್ಟಿಗೆ ಅವರ ಸಂಸ್ಕೃತಿ ರೋಗಗ್ರಸ್ಥ ಸ್ಥಿತಿಗೆ ತಲುಪಿದೆ ಎಂದು ನೆಟ್ಟಿಗರು ಕಟು ವ್ಯಂಗ್ಯವಾಡಿದರು.

ಕೇಂದ್ರದ ಆರೋಗ್ಯ ಸಚಿವರಾಗಿರುವ ಮತ್ತು ಸ್ವತಃ ವೈದ್ಯಕೀಯ ಹಿನ್ನೆಲೆಯ ಡಾ ಹರ್ಷವರ್ಧನ್ ತಮ್ಮ ಸ್ಥಾನಮಾನದ ಘನತೆ ಗೌರವ ಮರೆತು, ಹೀಗೆ ಹೀಗೆ ಪಕ್ಷದ ವಕ್ತಾರರ ರೀತಿ ಪ್ರತಿಕ್ರಿಯಿಸುತ್ತಿರುವುದು ಇದೇ ಮೊದಲೇನಲ್ಲ.
ಕರೋನಾ ವಿಷಯದಲ್ಲಂತೂ ಅವರ ಯಡವಟ್ಟು ಹೇಳಿಕೆಗಳು, ದಿಕ್ಕುತಪ್ಪಿಸುವ ಮಾಹಿತಿಗಳಿಗೆ ಲೆಕ್ಕವಿಲ್ಲ. ಅದು ಕರೋನಾ ಪ್ರಕರಣಗಳ ವಿಷಯದಲ್ಲಿರಬಹುದು, ಕರೋನಾ ಪರೀಕ್ಷೆಯ ವಿಷಯದಲ್ಲಿರಬಹುದು, ಸೀರಂ ಸರ್ವೆ ವಿಷಯದಲ್ಲಿರಬಹುದು, ಲಸಿಕೆಯ ವಿಷಯದಲ್ಲಿರಬಹುದು ಡಾ ಹರ್ಷವರ್ಧನ್ ಹೇಳಿಕೆಗಳು ಬಹುತೇಕ ವಿವಾದಿತವೇ. ಜಗತ್ತಿನ ಅತಿ ದೊಡ್ಡ ಜನದಟ್ಟಣೆಯ ದೇಶ, ಕರೋನದಂತಹ ಭೀಕರ ಸಾಂಕ್ರಾಮಿಕದ ದವಡೆಗೆ ಸಿಲುಕಿರುವಾಗ, ಒಬ್ಬ ಆರೋಗ್ಯ ಸಚಿವರಾಗಿ ಅವರು ಹೊರಬೇಕಾದ ಹೊಣೆಗಾರಿಕೆಯನ್ನು ಹೊರಲಿಲ್ಲ. ವಹಿಸಬೇಕಾದ ಎಚ್ಚರಿಕೆಯನ್ನು ವಹಿಸಲಿಲ್ಲ. ನಡೆದುಕೊಳ್ಳಬೇಕಾದ ರೀತಿಯಲ್ಲಿ ನಡೆದುಕೊಳ್ಳಲಿಲ್ಲ ಎಂಬುದಕ್ಕೆ ಕರೋನಾ ಮೊದಲ ಅಲೆಯ ಹೊತ್ತಿನಲ್ಲಿ ಸ್ಥಿತಿಗತಿಗಳ ಕುರಿತು ದೇಶದ ಜನತೆಗೆ ಮಾಹಿತಿ ನೀಡಲು ಸ್ವತಃ ಮುಂದೆ ಬರುವ ಬದಲು, ಇಲಾಖೆಯ ಅಧಿಕಾರಿಗಳನ್ನು ಮುಂದೆ ಬಿಟ್ಟು, ತಾವು ಪತ್ನಿಯೊಂದಿಗೆ ಬೆಂಡೆ ಕಾಯಿ ಗೊಜ್ಜು ಮಾಡುತ್ತಾ ಕಾಲಹರಣ ಮಾಡಿದ್ದಕ್ಕಿಂತ ಮತ್ತೊಂದು ನಿದರ್ಶನ ಬೇಕಿಲ್ಲ.
ಇದೀಗ ಇಡೀ ದೇಶ ಕರೋನಾ ಎರಡನೇ ಅಲೆಯ ಭೀಕರತೆಗೆ ನಲುಗಿ ಹೋಗುತ್ತಿರುವುದಕ್ಕೂ ಆರೋಗ್ಯ ಸಚಿವ ಹರ್ಷವರ್ಧನ ಅವರ ಅಂತಹ ಅಪ್ರಬುದ್ಧ ನಡೆಗಳ ಕೊಡುಗೆ ದೊಡ್ಡದಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವಿಶ್ಲೇಷಿಸತೊಡಗಿವೆ. ಹಾಗೇ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ನೀತಿ-ನಿಲುವುಗಳ ದ್ವಂದ್ವ ಮತ್ತು ದ್ವಿಮುಖ ವರಸೆಗಳೂ ಎರಡನೇ ಅಲೆಯ ಭೀಕರತೆಗೆ ಕಾರಣ ಎಂಬುದು ಅಂತಾರಾಷ್ಟ್ರೀಯ ಮಾಧ್ಯಮಗಳ ವಾದ(ದೇಶೀಯ ಮಾಧ್ಯಮಗಳು ಬಹುತೇಕ ಇಂತಹ ವಿಶ್ಲೇಷಣೆ ಮಾಡುವುದಿಲ್ಲ!).

ಆ ಪೈಕಿ ‘ಬಿಬಿಸಿ’ ಪ್ರಕಟಿಸಿರುವ ‘ಹೌ ಇಂಡಿಯಾ ಫೇಲ್ಡ್ ಟು ಪ್ರಿವೆಂಟ್ ಎ ಡೆಡ್ಲಿ ಸೆಕೆಂಡ್ ವೇವ್’ ಎಂಬ ವರದಿ, ಇಡೀ ಜಗತ್ತನ್ನೇ ಆತಂಕಕ್ಕೆ ತಳ್ಳಿರುವ ಭಾರತದ ಕರೋನಾ ಎರಡನೇ ಅಲೆಯ ಭೀಕರತೆಯ ಹಿಂದೆ ಆಡಳಿತ ವ್ಯವಸ್ಥೆಯ ವೈಫಲ್ಯಗಳ ಪಾಲೇನು ಎಂಬುದನ್ನು ವಿಶ್ಲೇಷಿಸಿದೆ.
ಆರೋಗ್ಯ ಸಚಿವ ಡಾ ಹರ್ಷವರ್ಧನ್, ಕಳೆದ ಮಾರ್ಚ್ ಆರಂಭದಲ್ಲಿ “ಕೋವಿಡ್ -19 ಸಾಂಕ್ರಾಮಿಕಕ್ಕೆ ಅಂತ್ಯ ಹಾಡುವ ನಿಟ್ಟಿನಲ್ಲಿ ಭಾರತ ಯಶಸ್ವಿಯಾಗಿದೆ. ಭಾರತದಲ್ಲಿ ಕರೋನಾ ವೈರಾಣು ಮುಗಿದ ಕಥೆ. ಕೋವಿಡ್ ವಿರುದ್ಧದ ಭಾರತದ ಈ ಯಶಸ್ವಿನ ಹಿಂದೆ ಪ್ರಧಾನಿ ಮೋದಿಯವರ ಶ್ರಮವಿದೆ. ಮೋದಿಯವರ ಕರೋನಾ ವಿರುದ್ಧದ ಸಮರ ತಂತ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸಹಕಾರದ ವಿಷಯದಲ್ಲಿ(ಲಸಿಕೆ ನೆರವು) ಇಡೀ ಜಗತ್ತು ಮೋದಿಯವರ ಮಾದರಿಯನ್ನು ಗಮನಿಸುತ್ತಿದೆ” ಎಂದು ಹೇಳಿದ್ದರು. ಅಷ್ಟರಲ್ಲಾಗಲೇ ಜನವರಿ 16ರಿಂದ ದೇಶದಲ್ಲಿ ಲಸಿಕೆ ಅಭಿಯಾನ ಆರಂಭವಾಗುತ್ತಲೇ ಪ್ರಧಾನಿ ಮೋದಿಯವರು ಲಕ್ಷಾಂತರ ಸಂಖ್ಯೆಯ ಲಸಿಕೆಗಳನ್ನು ವಿವಿಧ ದೇಶಗಳಿಗೆ ಸರಬರಾಜು ಮಾಡಿ, ‘ವ್ಯಾಕ್ಸಿನ್ ಡಿಪ್ಲೊಮಸಿ(ಲಸಿಕೆ ರಾಜತಾಂತ್ರಿಕತೆ)’ಯನ್ನೂ ಆರಂಭಿಸಿದ್ದರು.
ಕಳೆದ ವರ್ಷದ ಫೆಬ್ರವರಿಯಿಂದ ಆರಂಭವಾಗಿದ್ದ ಭಾರತದ ಮೊದಲ ಕರೋನಾ ಅಲೆಯ ವ್ಯಾಪಕತೆ, ಸೆಪ್ಟೆಂಬರ್ ಮಧ್ಯದ ಹೊತ್ತಿಗೆ ದಿನವೊಂದಕ್ಕೆ ಬರೋಬ್ಬರಿ 97,800ಕ್ಕೂ ಅಧಿಕ ಪ್ರಕರಣಗಳನ್ನು ದಾಖಲಿಸುವ ಮೂಲಕ ಜಗತ್ತಿನ ಅತಿ ಹೆಚ್ಚು ಪ್ರಕರಣಗಳ ಪಟ್ಟಿಯಲ್ಲಿ ದೇಶವನ್ನು ಎರಡನೇ ಸ್ಥಾನಕ್ಕೆ ಏರಿಸಿದ್ದವು. ಆದರೆ, ಕ್ರಮೇಣ ತಗ್ಗುತ್ತಾ ಬಂದ ಹೊಸ ಪ್ರಕರಣಗಳ ಸಂಖ್ಯೆ ಕಳೆದ ಫೆಬ್ರವರಿ ಹೊತ್ತಿಗೆ ದಿನಕ್ಕೆ 10 ಸಾವಿರದ ಆಸುಪಾಸಿಗೆ ಕುಗ್ಗಿತ್ತು. ಪ್ರಕರಣಗಳ ಸಂಖ್ಯೆಯಲ್ಲಿ ಕುಸಿತಕ್ಕೆ ಅಸಲೀ ಕಾರಣಗಳೇನು? ನಿಜಕ್ಕೂ ವೈರಾಣು ದೇಶದಿಂದ ಕಾಲ್ಕಿತ್ತಿದೆಯೇ? ದೇಶ ಕರೋನಾ ವಿರುದ್ಧ ಕೈಗೊಂಡ ಕ್ರಮಗಳು(ಅಂತಹ ಕ್ರಮ ಕೈಗೊಂಡಿದ್ದರೆ!) ಫಲ ಕೊಟ್ಟಿವೆಯೇ? ಎಂಬ ಯಾವ ಅಧ್ಯಯನವನ್ನೂ ಮಾಡದೆ, ಯಾವ ಆಧಾರವೂ ಇಲ್ಲದೆ, ಆರೋಗ್ಯ ಸಚಿವರು ಏಕಾಏಕಿ “ಕರೋನಾ ವಿರುದ್ಧದ ಭಾರತದ ಹೋರಾಟ ಅಂತಿಮ ಘಟ್ಟಕ್ಕೆ ಮುಟ್ಟಿದೆ. ಭಾರತದ ಯಶಸ್ವಿ ಹೋರಾಟವನ್ನು ಇಡೀ ಜಗತ್ತು ಗಮನಿಸುತ್ತಿದೆ” ಎಂದು ಘೋಷಿಸಿಬಿಟ್ಟರು. ಜೊತೆಗೆ ತಮ್ಮ ಎಂದಿನ ಭಟ್ಟಂಗಿತನದ ವರಸೆಯಲ್ಲಿ ಎಲ್ಲಾ ಯಶಸ್ಸನ್ನು ಮೋದಿಯವರ ತಲೆಗೆ ಕಟ್ಟಿ ಅವರ ‘ಅವತಾರ ಪುರುಷ’ ಇಮೇಜಿಗೆ ಮತ್ತೊಂದು ಗರಿ ಮೂಡಿಸುವ ಧಾವಂತವನ್ನೂ ತೋರಿದರು!
ಆರೋಗ್ಯ ಸಚಿವರ ಅಂತಹ ಅಪ್ರಬುದ್ದ ಹೇಳಿಕೆಯ ಬೆನ್ನಲ್ಲೇ ದೇಶದಲ್ಲಿ ಕರೋನಾ ಎರಡನೇ ಅಲೆಯ ರುದ್ರತಾಂಡವ ಶುರುವಾಯಿತು. ತಜ್ಞರು ಎರಡನೇ ಅಲೆಯ ಭೀಕರತೆಯ ಬಗ್ಗೆ, ಅದು ಭಾರತದಲ್ಲಿ ಸೃಷ್ಟಿಸಬಹುದಾದ ಅನಾಹುತಗಳ ಬಗ್ಗೆ ಕಳೆದ ನವೆಂಬರಿನಲ್ಲಿಯೇ ಎಚ್ಚರಿಕೆ ನೀಡಿದ್ದರೂ, ಕೇಂದ್ರ ಸರ್ಕಾರ ಮತ್ತು ಸ್ವತಃ ಡಾ ಹರ್ಷವರ್ಧನ್ ಅಂತಹ ಯಾವ ಸಲಹೆ, ಸೂಚನೆಗಳನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ. ಬದಲಾಗಿ, ಮಾಜಿ ಪ್ರಧಾನಿಯ ಹೇಳಿಕೆಗೆ ಪ್ರತಿಕ್ರಿಯಿಸಿದ ರೀತಿಯಲ್ಲೇ ಉಡಾಫೆಯ ವರಸೆ ಪ್ರದರ್ಶಿಸಿದ್ದರು.
ಒಂದು ಕಡೆ ಆರೋಗ್ಯ ಸಚಿವರೇ ಇಂತಹ ಕಟ್ಟುಕಥೆಗಳ ಮೂಲಕ ದೇಶದ ಜನರಲ್ಲಿ ಕರೋನಾ ಎಂಬುದು ಇನ್ನು ಮುಗಿದ ಅಧ್ಯಾಯ ಎಂಬ ಹುಸಿ ಭ್ರಮೆ ಬಿತ್ತಿ, ಜನತೆ ಮಾಸ್ಕ್, ದೈಹಿಕ ಅಂತರ, ಸ್ಯಾನಿಟೈಸರ್ ಬಳಕೆಯಂತಹ ಎಲ್ಲಾ ಮುನ್ನೆಚ್ಚರಿಕೆಗಳನ್ನೂ ಮರೆತು, ಮೈಮರೆತು ರಾಜಾರೋಷವಾಗಿ ಸುತ್ತಲು ಪ್ರೇರಣೆ ನೀಡಿದರೆ, ಮತ್ತೊಂದು ಕಡೆ ಆರ್ ಬಿಐ, ಚುನಾವಣಾ ಆಯೋಗದಂತಹ ಸಂವಿಧಾನಿಕ ಸಂಸ್ಥೆಗಳು ಕೂಡ ಭಾರತ ಕರೋನಾ ವಿರುದ್ಧ ದಿಗ್ವಿಜಯ ಸಾಧಿಸಿಬಿಟ್ಟಿದೆ ಎಂಬಂತೆ ಹೇಳಿಕೆಗಳನ್ನೂ ನೀಡಿದವು.
ಕೋವಿಡ್ ಸೋಂಕಿನ ರೇಖೆ ಬಾಗಿಸುವಲ್ಲಿ ಭಾರತ ಯಶಸ್ವಿಯಾಗಿದೆ ಎಂದು ಆರ್ ಬಿಐ ಅಧಿಕಾರಿಗಳು ಹೇಳಿದರೆ, ಚುನಾವಣಾ ಆಯೋಗ ಪಶ್ಚಿಮಬಂಗಾಳ ಸೇರಿದಂತೆ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯನ್ನು ವಿವಿಧ ಹಂತಗಳಲ್ಲಿ ಬರೋಬ್ಬರಿ ಒಂದು ತಿಂಗಳ ಸುದೀರ್ಘ ಅವಧಿಯಲ್ಲಿ ನಡೆಸುವುದಾಗಿ ಘೋಷಿಸಿತು. 18.6 ಕೋಟಿ ಮತದಾರರು ವಿವಿಧ ಹಂತಗಳಲ್ಲಿ ಮತದಾನ ಮಾಡುವ ಈ ಬೃಹತ್ ಚುನಾವಣಾ ಪ್ರಕ್ರಿಯೆಗೆ ಕೋವಿಡ್ ಕಾರಣವನ್ನೇ ಮುಂದೊಡ್ಡಿ ವಿವಿಧ ರಾಜಕೀಯ ಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದರೂ, ಆಯೋಗ ಕೋವಿಡ್ ಪ್ರಕರಣಗಳ ಇಳಿಗತಿಯನ್ನೇ ಮುಂದೊಡ್ಡಿ ತನ್ನ ಅಧಿಸೂಚನೆಯನ್ನು ಸಮರ್ಥಿಸಿಕೊಂಡಿತ್ತು.
ಹಾಗೇ ಗೃಹ ಸಚಿವ ಅಮಿತ್ ಶಾ ಪುತ್ರ ಜೈ ಶಾ ನೇತೃತ್ವದ ಬಿಸಿಸಿಐ, ಲಕ್ಷಾಂತರ ಜನರನ್ನು ಸೇರಿಸಿ, ಗುಜರಾತಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾರತ- ಇಂಗ್ಲೆಂಡ್ ಕ್ರಿಕಟ್ ಪಂದಯಾವಳಿಯನ್ನು ಆಯೋಜಿಸಿತು. ಒಂದು ಕಡೆ ತಮ್ಮ ಪುತ್ರ ಹೀಗೆ ಲಕ್ಷಾಂತರ ಕ್ರೀಡಾಭಿಮಾನಿಗಳ ಜಾತ್ರೆ ನಡೆಸುತ್ತಿದ್ದರೆ, ಸ್ವತಃ ಅಮಿತ್ ಶಾ ಅವರು, ಪಶ್ಚಿಮಬಂಗಾಳ, ಅಸ್ಸಾಂ, ತಮಿಳುನಾಡು, ಕೇರಳ, ಪಾಂಡಿಚೇರಿಯಲ್ಲಿ ಚುನಾವಣಾ ರ್ಯಾಲಿಗಳನ್ನು ನಡೆಸಿ ಲಕ್ಷಾಂತರ ಮತದಾರರ ಪರಿಷೆ ನಡೆಸಿದರು. ಸ್ವತಃ ಪ್ರಧಾನಿ ಮೋದಿಯವರು ದೇಶದ ಕರೋನಾ ಪ್ರಕರಣಗಳ ಸಂಖ್ಯೆ ಹೊಸ ದಾಖಲೆ ಬರೆಯುತ್ತಿರುವಾಗಲೂ ಲಕ್ಷಾಂತರ ಜನರನ್ನು ಸೇರಿಸಿ, ಇಷ್ಟೊಂದು ಜನ ಸೇರಿದ್ದೇ ಸಂತೋಷದ ವಿಷಯ ಎಂದು ಸಂಭ್ರಮಿಸಿದರು. ಮತ್ತೊಂದು ಕಡೆ ಲಕ್ಷಾಂತರ ಮಂದಿ ಕುಂಭಮೇಳದ ಹೆಸರಿನಲ್ಲಿ ಬೃಹತ್ ಜನಜಾತ್ರೆ ನಡೆಸಿದರು. ಆ ಮೂಲಕ ಇಡಿಯಾಗಿ ಆಡಳಿತ ವ್ಯವಸ್ಥೆಯೇ, ಕೋವಿಡ್ ಮುಗಿದುಹೋದ ಅಧ್ಯಾಯ ಎಂಬಂತೆ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನೂ ಗಾಳಿಗೆ ತೂರಿತು. ಸರ್ಕಾರದ ಈ ಕ್ರಮಗಳು ದೇಶದ ಜನಸಾಮಾನ್ಯರಿಗೆ ರವಾನಿಸಿದ ಸಂದೇಶ ಎಷ್ಟು ಭೀಕರವಾಗಿತ್ತು ಎಂಬುದಕ್ಕೆ ಈಗ ಭಾರತ ಕಾಣುತ್ತಿರುವ ಎರಡನೇ ಅಲೆಯ ಸುನಾಮಿಯೇ ಸಾಕ್ಷಿ.
ಪರಿಣಾಮ: ದೇಶದಲ್ಲಿ ಕರೋನಾ ಸುನಾಮಿಯೇ ಎದ್ದಿದೆ. ದಿನವೊಂದಕ್ಕೆ ದೇಶದ ಹೊಸ ಪ್ರಕರಣಗಳ ಸಂಖ್ಯೆ ಮೂರು ಲಕ್ಷದ ಗಡಿಮುಟ್ಟಿದೆ. ನಿತ್ಯದ ಸಾವಿನ ಸಂಖ್ಯೆ ಎರಡು ಸಾವಿರಕ್ಕೂ ಹೆಚ್ಚಿದೆ. ಈಗ ಜನ ಹಾದಿಬೀದಿಯ ಹೆಣವಾಗುತ್ತಿದ್ದಾರೆ.
“ದೇಶದ ಬಹುಸಂಖ್ಯಾತ ಯುವ ಸಮೂಹ, ಪ್ರಾದೇಶಿಕ ರೋಗನಿರೋಧಕತೆ ಮತ್ತು ಬಹುತೇಕ ಗ್ರಾಮವಾಸಿ ಜನಸಂಖ್ಯೆಯ ಹಿನ್ನೆಲೆಯಲ್ಲಿ ಕರೋನಾ ಮೊದಲ ಅಲೆಯ ಹೊತ್ತಿಗೆ ದೇಶ ಹಂತಹಂತವಾಗಿ ರೋಗನಿರೋಧಕತೆ ಸಾಧಿಸಿರಬಹುದು. ಹಾಗಾಗಿ ಪ್ರಕರಣಗಳ ಸಂಖ್ಯೆ ತಾನೇತಾನಾಗಿ ಕಡಿಮೆಯಾಗಿರಬಹುದು. ಜೊತೆಗೆ ಕರೋನಾ ಪರೀಕ್ಷೆಗಳ ಪ್ರಮಾಣದಲ್ಲಿ ಆದ ಗಣನೀಯ ಇಳಿಕೆ ಕೂಡ ಒಟ್ಟಾರೆ ಪ್ರಕರಣಗಳ ಸಂಖ್ಯೆಯ ಇಳಿಕೆಗೆ ಕೊಡುಗೆ ನೀಡಿರಬಹುದು. ಆದರೆ, ಆ ಯಾವ ಅಂಶವನ್ನೂ ಗಣನೆಗೆ ತೆಗೆದುಕೊಳ್ಳದೆ, ಯಾವ ವೈಜ್ಞಾನಿಕ, ಪ್ರಾಯೋಗಿಕ ಅಧ್ಯಯನಗಳನ್ನೂ ನಡೆಸದೆ ಆಡಳಿತ, ಕರೋನಾ ವಿರುದ್ಧ ಗೆದ್ದುಬಿಟ್ಟಿವು ಎಂದು ಬೀಗಿದ್ದು ಹಾಸ್ಯಾಸ್ಪದ. ಅದರೊಂದಿಗೆ ಅಧಿಕಾರಶಾಹಿಯ ದರ್ಪ, ಹೈಪರ್ ನ್ಯಾಷನಲಿಸಂ, ಜನಪ್ರಿಯತೆಯ ಹಪಾಹಪಿತನ ಮತ್ತು ನೌಕರಶಾಹಿಯ ಸಮರ್ಥತೆಗಳೂ ಸೇರಿ ಇಡೀ ದೇಶವನ್ನು ನರಕಸದೃಶ ಮಾಡಿವೆ” ಎಂದು ಅಂಕಣಕಾರ ಮಿಹಿರ್ ಶರ್ಮಾ ಅಭಿಪ್ರಾಯಪಟ್ಟಿದ್ದಾರೆ.
‘ಬಿಬಿಸಿ’ ವರದಿಯಲ್ಲಿ ಉಲ್ಲೇಖಿಸಿರುವ ಈ ಮಾತು, ಅಕ್ಷರಶಃ ದೇಶದ ಇವತ್ತಿನ ದುರಂತಕ್ಕೆ ಕನ್ನಡಿ ಹಿಡಿದಿದೆ. ಇದೀಗ ಅಂತಹ ಅವಿವೇಕದ, ದುಡುಕಿನ ಕ್ರಮಗಳಿಗೆ ಇಡೀ ದೇಶ ಬೆಲೆ ತೆರುವಂತಾಗಿದೆ. ಒಂದು ಕಡೆ ಸುನಾಮಿಯಂತೆ ಹಬ್ಬುತ್ತಿರುವ ಸೋಂಕು, ಮತ್ತೊಂದು ಕಡೆ ಯಾವ ತಯಾರಿಯೂ ಇಲ್ಲದೆ ಕುಸಿದುಬಿದ್ದಿರುವ ವೈದ್ಯಕೀಯ ವ್ಯವಸ್ಥೆ. ಅದು ಸಾಲದು ಎಂಬಂತೆ ಔಷಧಿ, ಆಮ್ಲಜನಕ ಮತ್ತು ಲಸಿಕೆಗಳ ಕೊರತೆ!
ಇಂತಹ ಪರಿಸ್ಥಿತಿಯಲ್ಲಿ; ಜನರ ನೆರವಿಗೆ ಬರಬೇಕಾದ ಸರ್ಕಾರ, ಈಗಲೂ ತನ್ನೆಲ್ಲಾ ತುರ್ತಲ್ಲದ ಯೋಜನೆಗಳನ್ನು ಬದಿಗಿಟ್ಟು, ಆ ಯೋಜನೆಗಳಿಗೆ, ಕಾರ್ಯಕ್ರಮಗಳಿಗೆ ಮೀಸಲಿಟ್ಟ ಹಣವನ್ನು ಕೂಡಲೇ ಕರೊನಾ ನಿಯಂತ್ರಣ ಕ್ರಮಗಳಿಗೆ ವಿನಿಯೋಗಿಸಿ, ಆಸ್ಪತ್ರೆ, ಕರೋನಾ ಕೇರ್ ಸೆಂಟರ್, ಔಷಧಿ, ಆಮ್ಲಜನಕ, ಹಾಸಿಗೆ, ವೈದ್ಯಕೀಯ ಸಿಬ್ಬಂದಿ, ಆ್ಯಂಬುಲೆನ್ಸ್ ಮುಂತಾದ ತುರ್ತು ಅಗತ್ಯಗಳನ್ನು ವ್ಯವಸ್ಥೆ ಮಾಡುವ ಬದಲು, ನಿಮ್ಮ ಜೀವ ಉಳಿಸಿಕೊಳ್ಳುವುದು ನಿಮ್ಮ ಕೈಯಲ್ಲೇ ಇದೆ ಎಂದು ಜನತೆಗೆ ಕರೆ ನೀಡಿ ಕೈತೊಳೆದುಕೊಂಡಿದೆ. ಬುಧವಾರ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ನಿಮ್ಮ ಜೀವ ನಿಮ್ಮ ಕೈಯಲ್ಲೇ ಇದೆ. ಮುಂಜಾಗ್ರತೆ ವಹಿಸಿ, ಲಾಕ್ ಡೌನ್ ಹೇರಿಕೆ ತಡೆಯಿರಿ” ಎಂದಿದ್ದಾರೆ. ಆ ಮೂಲಕ ತಮ್ಮ ಹೆಗಲ ಹೊಣೆ ಜಾರಿಸಿಕೊಂಡಿದ್ದಾರೆ!
ಈ ನಡುವೆ ಸಾಂಕ್ರಾಮಿಕ ರೋಗ ತಜ್ಞರು, ಭಾರತದಲ್ಲಿ ಇನ್ನೂ ಸಾಮುದಾಯಿಕ ರೋಗ ನಿರೋಧಕತೆ ಬಂದಿಲ್ಲ. ಹಾಗಾಗಿ ಈ ಎರಡನೇ ಅಲೆ ಜುಲೈ ಮಧ್ಯಭಾಗದ ಹೊತ್ತಿಗೆ 25 ಕೋಟಿ ಮಂದಿಗೆ ವ್ಯಾಪಿಸಲಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ಇನ್ನಷ್ಟು ಅಲೆಗಳೂ ಬರುವ ಸಾಧ್ಯತೆ ಇದೆ. ಹಾಗಾಗಿ, ಅಂತಹ ತೀರಾ ಅನಾಹುತಕಾರಿ ಸನ್ನಿವೇಶದಿಂದ ದೇಶವನ್ನು ಪಾರು ಮಾಡಲು ಸದ್ಯಕ್ಕೆ ಇರುವ ಅವಕಾಶ, ವೈದ್ಯಕೀಯ ವ್ಯವಸ್ಥೆಯನ್ನು ಈಗಿರುವ ನಾಲ್ಕಾರು ಪಟ್ಟು ಹೆಚ್ಚಿಸುವುದು ಮತ್ತು ವ್ಯಾಪಕ ಲಸಿಕೆ ನೀಡುವುದು ಮಾತ್ರ ಎಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ ಇದೇ ಅಭಿಪ್ರಾಯ ವ್ಯಕ್ತಪಡಿಸಿದ ಮಾಜಿ ಪ್ರಧಾನಿಯನ್ನೇ ಅಪಹಾಸ್ಯ ಮಾಡಿದ ಆರೋಗ್ಯ ಸಚಿವರು ಮತ್ತು ಅವರ ಬಿಜೆಪಿ ಸರ್ಕಾರದಿಂದ ಇಂತಹದ್ದನ್ನು ನಿರೀಕ್ಷಿಸಬಹುದೆ?
ಆದರೆ, ದೇಶವನ್ನುವಿಶ್ವಗುರು ಮಾಡುವ ಆಶ್ವಾಸನೆಯ ಮೇಲೆ ಅಧಿಕಾರಕ್ಕೆ ಬಂದ ಚೌಕಿದಾರರು, “ನಿಮ್ಮ ಜೀವ ನಿಮ್ಮ ಕೈಯಲ್ಲೇ ಇದೆ” ಎಂದು ಕೈಚೆಲ್ಲಿದ್ದಾರೆ. ಹಾಗಾಗಿ, ನಿಜಕ್ಕೂ ಈಗ ಜನರ ಜೀವ ಉಳಿಸಿಕೊಳ್ಳಬೇಕಾದವರು ಜನರೇ. ಅದಕ್ಕೆ ಇರುವ ದಾರಿ ಮಾಸ್ಕ್ ಧರಿಸುವುದು, ದೈಹಿಕ ಅಂತರ ಕಾಯ್ದುಕೊಳ್ಳುವುದು, ಸ್ಯಾನಿಟೈಸರ್ ಬಳಸುವುದು ಮತ್ತು ಅನಗತ್ಯವಾಗಿ ಹೊರಹೋಗದೆ, ಮಾರ್ಗಸೂಚಿಗಳನ್ನು ಪಾಲಿಸುವುದು! ಅಷ್ಟೇ.