ಒಮಿಕ್ರೋನ್ ರೂಪಾಂತರಿ ತಳಿಯ ಕರೋನಾ ಮೂರನೇ ಅಲೆ ದೇಶದ ಉದ್ದಗಲಕ್ಕೆ ಮತ್ತೊಂದು ಸುತ್ತಿನ ಆತಂಕ ಹಬ್ಬಿಸಿದೆ. ಕೇಂದ್ರ ಮತ್ತು ವಿವಿಧ ರಾಜ್ಯ ಸರ್ಕಾರಗಳು ಮೊದಲೆರಡು ಅಲೆಯ ಕರೋನಾ ನಿರ್ವಹಣೆಯಿಂದ ಕಲಿತ ಪಾಠಗಳೇನು ಎಂಬುದು ಮತ್ತು ದೇಶದ ವೈದ್ಯಕೀಯ ರಂಗದ ಜನಪರ ಕಾಳಜಿ ಎಷ್ಟು ಎಂಬುದನ್ನು ಕೂಡ ಈ ಒಮಿಕ್ರೋನ್ ಅಲೆ ಬಯಲುಮಾಡುತ್ತಿದೆ.
ಒಂದು ಕಡೆ ವೀಕೆಂಡ್ ಕರ್ಫ್ಯೂ, ರಾತ್ರಿ ಕರ್ಫ್ಯೂ, ಸೋಂಕಿತರ ಪತ್ತೆ, ಪರೀಕ್ಷೆ, ಐಸೋಲೇಷನ್, ಕ್ವಾರಂಟೈನ್ ಎಂಬ ಅದೇ ಹಳೆಯ ಅಸ್ತ್ರಗಳನ್ನು ಝಳಪಿಸುತ್ತಿರುವ ಸರ್ಕಾರಗಳು, ಅದೇ ಹೊತ್ತಿಗೆ ಕರೋನಾ ದಾಳಿಯ ಈ ಎರಡು ವರ್ಷಗಳಲ್ಲಿ, ಮೂರನೇ ಅಲೆಯ ನಿರೀಕ್ಷೆ ಮತ್ತು ಅಂದಾಜು ಹೊರತಾಗಿಯೂ ದೇಶದ ಆರೋಗ್ಯ ವ್ಯವಸ್ಥೆಯನ್ನು ಇನ್ನೂ ಶೋಚನೀಯ ಸ್ಥಿತಿಯಲ್ಲಿಯೇ ಇಟ್ಟಿವೆ.
ಒಮಿಕ್ರೋನ್ ರೂಪಾಂತರಿ ವೈರಸ್ ಸೋಂಕು ಹರಡುವ ವೇಗ ಮತ್ತು ಪ್ರಮಾಣ ಹಿಂದಿನ ಡೆಲ್ಟಾ ಮತ್ತು ಬೀಟಾ ರೂಪಾಂತರಿಗಳಿಗೆ ಹೋಲಿಸಿದರೆ ಹತ್ತಾರು ಪಟ್ಟು ಹೆಚ್ಚು ಎಂಬುದು ನಿಜವಾದರೂ, ಅದರ ಸೋಂಕಿತರು ಆಸ್ಪತ್ರೆಗೆ ದಾಖಲಾಗುವ ಮತ್ತು ಐಸಿಯುಗಳಿಗೆ ಸೇರಿಸಬೇಕಾದ ಗಂಭೀರ ಪರಿಸ್ಥಿತಿ ಎದುರಿಸುವ ಪ್ರಮಾಣ ತೀರಾ ಕಡಿಮೆ ಎಂಬುದು ಈಗಾಗಲೇ ದಕ್ಷಿಣ ಆಫ್ರಿಕಾದಲ್ಲಿ ಸಾಬೀತಾಗಿದೆ. ಜೊತೆಗೆ ಒಮಿಕ್ರೋನ್ ತೀವ್ರತೆ ಕುರಿತು ಇಂಗ್ಲೆಂಡ್ ಮತ್ತು ಸ್ಕಾಟ್ ಲೆಂಡ್ ನಲ್ಲಿ ನಡೆದಿರುವ ಇತ್ತೀಚಿನ ಎರಡು ಅಧ್ಯಯನಗಳು ಕೂಡ ಡೆಲ್ಟಾಗೆ ಹೋಲಿಸಿದರೆ ಒಮಿಕ್ರೋನ್ ನಿಂದ ಆಸ್ಪತ್ರೆಗೆ ಸೇರುವವರ ಪ್ರಮಾಣ ಶೇ.45-50ರಷ್ಟು ಕಡಿಮೆ ಎಂದು ಹೇಳಿವೆ.
ಆದರೆ, ಅದೇ ಹೊತ್ತಿಗೆ ಭಾರತದಲ್ಲಿ ಒಮಿಕ್ರೋನ್ ಸೋಂಕು ಈಗಾಗಲೇ ವ್ಯಾಪಕವಾಗಿ ಹರಡಿರುವುದು ದಿನನಿತ್ಯದ ಪ್ರಕರಣಗಳ ಜಿಗಿತದಲ್ಲೇ ಗೊತ್ತಾಗುತ್ತಿದೆ. ಹಾಗಾಗಿ ದೇಶದ ಒಟ್ಟಾರೆ ಜನಸಂಖ್ಯೆಯ ಹಿನ್ನೆಲೆಯಲ್ಲಿ ನೋಡಿದರೆ ಆರೋಗ್ಯ ವ್ಯವಸ್ಥೆಯ ಒತ್ತಡ ಹೆಚ್ಚದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಕರ್ಫ್ಯೂ, ಕ್ವಾರಂಟೈನ್ ನಂತಹ ಕ್ರಮಗಳು ಪ್ರಯೋಜನಕಾರಿ ಎನಿಸಿಬಹುದು. ಆದರೆ, ಈ ಎರಡು ವರ್ಷಗಳಲ್ಲಿ ದೇಶದ ಆರೋಗ್ಯ ವ್ಯವಸ್ಥೆಯನ್ನು, ಅದರಲ್ಲೂ ಗ್ರಾಮ ಮಟ್ಟದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಬಲೀಕರಣಗೊಳಿಸಲು ಸರ್ಕಾರಗಳು ಆದ್ಯತೆ ನೀಡಿದ್ದರೆ ಮತ್ತು ಕೋವಿಡ್ ಹೆಸರಿನಲ್ಲಿ ಪಿಎಂ ಕೇರ್ಸ್ ನಂತಹ ವ್ಯವಸ್ಥೆಯಲ್ಲಿ ಸಂಗ್ರಹವಾದ ಸಾರ್ವಜನಿಕ ಹಣವನ್ನು ಸರಿಯಾದ ರೀತಿಯಲ್ಲಿ ಬಳಸಿದ್ದರೆ ಇಂತಹ ಆತಂಕದ, ದಿಗಿಲುಬಡಿದಂತೆ ವರ್ತಿಸುವ ಪರಿಸ್ಥಿತಿ ಬರುತ್ತಿರಲಿಲ್ಲ ಎಂಬುದನ್ನು ತಳ್ಳಿಹಾಕಲಾಗದು.
Also Read : ಓಮಿಕ್ರಾನ್ ಅಲೆ: ನಾವು ಕಲಿಯಬೇಕಾಗಿದ್ದ ದಕ್ಷಿಣ ಆಫ್ರಿಕಾದ ಪಾಠ
ಹಾಗೆ ನೋಡಿದರೆ; ಸರ್ಕಾರ ಕಳೆದ ಎರಡು ವರ್ಷಗಳ ಜಾಗತಿಕ ಸಾಂಕ್ರಾಮಿಕವನ್ನು ಎದುರಿಸುವಲ್ಲಿ ಮತ್ತು ನಿಭಾಯಿಸುವಲ್ಲಿ ಹೀನಾಯವಾಗಿ ಎಡವಿದ ಬಳಿಕವೂ ಬುದ್ದಿ ಕಲಿತಿಲ್ಲ ಮತ್ತು ಜನ ಹಿತ ಎಂಬುದು ಆಳುವ ಮಂದಿಗೆ ಆದ್ಯತೆಯಾಗಿಯೇ ಇಲ್ಲ ಎಂಬುದಕ್ಕೆ ಕೇವಲ ಪಿಎಂ ಕೇರ್ಸ್ ಮಾತ್ರವಲ್ಲದೆ; ಕೋವಿಡ್ ಸಾವುಗಳು, ಲಸಿಕೆ, ಪರೀಕ್ಷೆ, ವೈದ್ಯಕೀಯ ಸೌಲಭ್ಯ, ವೈದ್ಯರು ಮತ್ತು ದಾದಿಯರು ಸೇರಿದಂತೆ ವೈದ್ಯಕೀಯ ಸಿಬ್ಬಂದಿಯ ವೇತನ, ಸೌಲಭ್ಯ, ಕೋವಿಡ್ ಕೇರ್ ಸೆಂಟರ್ ಮತ್ತು ಕ್ವಾರಂಟೈನ್ ಪ್ರದೇಶಗಳ ನಿರ್ವಹಣೆ ಸೇರಿದಂತೆ ಕೋವಿಡ್ ಗೆ ಸಂಬಂಧಿಸಿದ ಪ್ರತಿ ವಿಷಯದಲ್ಲೂ ನಿರ್ಣಾಯಕ ಮಾಹಿತಿಯನ್ನು, ಕರ್ಚು ವೆಚ್ಚದ ವಿವರಗಳನ್ನು ಮುಚ್ಚಿಟ್ಟಿರುವುದೇ ನಿದರ್ಶನ.
ಇದೀಗ ದೇಶದ ಶೇ.65ರಷ್ಟು ವಯಸ್ಕ ಜನಸಂಖ್ಯೆಗೆ ಎರಡೂ ಡೋಸ್ ಲಸಿಕೆ ನೀಡಿದ್ದರೂ ಮತ್ತು ಈಗಾಗಲೇ ಶೇ.80ರಷ್ಟು ಜನಸಂಖ್ಯೆಗೆ ಈಗಾಗಲೇ ನೈಸರ್ಗಿಕವಾಗಿಯೇ ಪ್ರತಿಕಾಯಗಳು ವೃದ್ಧಿಯಾಗಿವೆ ಎಂಬುದನ್ನು ಸರ್ಕಾರವೇ ಅಧಿಕೃತವಾಗಿ ಹೇಳಿದ್ದರೂ ಒಮಿಕ್ರೋನ್ ರೋಗ ತೀವ್ರತೆಯ ವಿಷಯದಲ್ಲಿ ಸರ್ಕಾರ ಯಾಕೆ ಇಷ್ಟು ದಿಗಿಲುಬೀಳುತ್ತಿದೆ? ಎಂಬುದು ಪ್ರಶ್ನೆ.
ಆ ಹಿನ್ನೆಲೆಯಲ್ಲೇ, ಯಾವುದೇ ತಯಾರಿಗಳಿಲ್ಲದ, ಪೂರ್ವಪರ ಮಾಹಿತಿ ಇಲ್ಲದ, ಲಸಿಕೆ, ಔಷಧ ಮತ್ತು ನಿಯಂತ್ರಣ ಕ್ರಮಗಳು ಗೊತ್ತಿಲ್ಲದ ಮೊದಲ ಅಲೆಯ ಸಂದರ್ಭದಲ್ಲಿ ವರ್ತಿಸಿದ ರೀತಿಯಲ್ಲೇ ಸರ್ಕಾರ ಈಗಲೂ ವರ್ತಿಸುತ್ತಿರುವುದು ಜನಸಾಮಾನ್ಯರಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟಿಸಿದೆ. ಅದರಲ್ಲೂ ಮುಖ್ಯವಾಗಿ ಲಸಿಕೆಯ ಪರಿಣಾಮ ಮತ್ತು ಪ್ರಮಾಣೀಕತೆಯ ಬಗ್ಗೆಯೇ ಸಾರ್ವಜನಿಕ ವಲಯದಲ್ಲಿ ಚರ್ಚೆ ಆರಂಭವಾಗಿದೆ.
ಅದಕ್ಕೆ ಪೂರಕವಾಗಿ ಸರ್ಕಾರ ಕೂಡ ಒಮಿಕ್ರೋನ್ ಸೋಂಕಿನ ವಿಷಯದಲ್ಲಿ ಲಸಿಕೆಗೆ ಸಂಬಂಧಿಸಿದಂತೆ ಮಹತ್ವದ ಮಾಹಿತಿಯನ್ನು ಮುಚ್ಚಿಡುತ್ತಿದೆ. ದೇಶದಲ್ಲಿ ಪ್ರಮುಖವಾಗಿ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆಯನ್ನು ನೀಡಲಾಗಿದೆ. ಆ ಪೈಕಿ ಶೇ.90ರಷ್ಟು ಕೋವಿಶೀಲ್ಡ್ ಬಳಕೆಯಾಗಿದೆ. ಇದೀಗ ಒಮಿಕ್ರೋನ್ ಸೋಂಕಿತರಲ್ಲಿ ಯಾವ ಲಸಿಕೆ ಪಡೆದವರ ಪ್ರಮಾಣ ಹೆಚ್ಚಿದೆ? ಅಥವಾ ಯಾವುದೇ ಲಸಿಕೆ ಪಡೆಯದವರ ಪ್ರಮಾಣ ಹೆಚ್ಚಿದೆಯೇ? ನಿರ್ದಿಷ್ಟವಾಗಿ ಒಮಿಕ್ರೋನ್ ಸೋಂಕಿತರಲ್ಲಿ ಒಂದು ಡೋಸ್ ಪಡೆದವರು ಎಷ್ಟು? ಎರಡು ಡೋಸ್ ಪಡೆದವರು ಎಷ್ಟು ಪ್ರಮಾಣದಲ್ಲಿದ್ದಾರೆ? ಎಂಬಂತಹ ಯಾವ ಮಾಹಿತಿಯನ್ನೂ ಸರ್ಕಾರ ಬಹಿರಂಗಪಡಿಸುತ್ತಿಲ್ಲ!
ಹಾಗೇ ಕೋವಿಡ್ ನಿಯಂತ್ರಣದ ಹೆಸರಿನಲ್ಲಿ ಸರ್ಕಾರ ಜಾರಿಗೆ ತಂದಿರುವ ಹಲವು ಕ್ರಮಗಳು ಕೂಡ ಗೊಂದಲಕಾರಿಯಾಗಿದ್ದು, ಜನಸಾಮಾನ್ಯರಲ್ಲಿ ಕೋವಿಡ್ ಸಂಬಂಧಿತ ಎಲ್ಲದರ ಮೇಲೂ ಅನುಮಾನ ಹುಟ್ಟುವಂತೆ ಮಾಡುತ್ತಿವೆ.
ಉದಾಹರಣೆಗೆ ಗಮನಿಸುವುದಾದರೆ; ಅಂತಾರಾಷ್ಟ್ರೀಯ ವಿಮಾನ ಪ್ರಯಾಣಿಕರಿಗೆ ಮತ್ತು ಅಂತಾರಾಜ್ಯ ಪ್ರಯಾಣಿಕರಿಗೆ ಕಡ್ಡಾಯಗೊಳಿಸಿರುವ ಆರ್ ಟಿಪಿಸಿಆರ್ ಮತ್ತು ಕ್ವಾರಂಟೈನ್ ವಿಷಯವನ್ನೇ ನೋಡಬಹುದು. ಬಹುತೇಕ ಒಮಿಕ್ರೋನ್ ಅಲೆಯ ಇರುವ ದೇಶಗಳಿಂದ ಭಾರತಕ್ಕೆ ಬರುವ ಪ್ರಯಾಣಿಕರು ವಿಮಾನ ಏರುವ ಮುನ್ನ ಆರ್ ಟಿಪಿಸಿಆರ್ ಪರೀಕ್ಷೆ ಮಾಡಿಸಿಯೇ ಇರುತ್ತಾರೆ. ನಂತರ ಭಾರತಕ್ಕೆ ಪ್ರವೇಶಿಸುತ್ತಲೇ ವಿಮಾನ ನಿಲ್ದಾಣದಲ್ಲಿಯೇ ಮತ್ತೊಂದು ಸುತ್ತಿನ ಆರ್ ಟಿಪಿಸಿಆರ್ ಪರೀಕ್ಷೆ ಮಾಡಲಾಗುತ್ತದೆ. ಆ ಪರೀಕ್ಷೆಯಲ್ಲಿ ನೆಗೆಟಿವ್ ಬಂದ ಬಳಿಕವೇ ಅವರನ್ನು ವಿಮಾನ ನಿಲ್ದಾಣದಿಂದ ಹೊರಕಳಿಸಲಾಗುತ್ತದೆ. ಹಾಗೆ ಹೊರ ಬಂದ ಬಳಿಕವೂ ಅವರು 15 ದಿನಗಳ ಕಾಲ ಹೋಂಕ್ವಾರಂಟೈನ್ ಆಗಿರಬೇಕು ಮತ್ತು ಪಾಸಿಟಿವ್ ಬಂದವರನ್ನು ಅಲ್ಲಿಂದಲೇ ಹೋಟೆಲ್ ಕ್ವಾರಂಟೈನ್ ಗೆ ಕಳಿಸಲಾಗುತ್ತಿದೆ. ಕ್ವಾರಂಟೈನ್ ಆಗಿ ಎಂಟನೇ ದಿನ ನಡೆಸುವ ಆರ್ ಟಿಪಿಸಿಆರ್ ಪರೀಕ್ಷೆಯಲ್ಲಿ ನೆಗೆಟಿವ್ ಬಂದರೆ ಮನೆಗೆ ಕಳಿಸಲಾಗುವುದು!
Alos Read : ರಾಜಕೀಯ ರ್ಯಾಲಿಗಳಿಗೆ ಬ್ರೇಕ್ ಹಾಕದೆ ಲಾಕ್ ಡೌನ್ ಬೆದರಿಕೆ ಹಾಕುವುದು ಎಷ್ಟು ಸರಿ ಗೃಹ ಸಚಿವರೇ?
ಅಂದರೆ; ಆರ್ ಟಿಪಿಸಿಆರ್ ಪರೀಕ್ಷೆಯ ಸಾಚಾತನದ ಬಗ್ಗೆಯೇ ಅನುಮಾನ ಹುಟ್ಟಿಸುವ ರೀತಿಯಲ್ಲಿ ಒಬ್ಬ ವ್ಯಕ್ತಿಗೆ ಆತನ ಪ್ರಯಾಣ ಆರಂಭದಿಂದ ಆತ ಮನೆ ಸೇರುವವರೆಗೆ ಬರೋಬ್ಬರಿ ಮೂರು ಬಾರಿ ಆರ್ ಟಿಪಿಸಿಆರ್ ಪರೀಕ್ಷೆ ನಡೆಸಲಾಗುತ್ತಿದೆ. ಪ್ರತಿ ಪರೀಕ್ಷೆಗೆ ಸಾವಿರಾರು ರೂ. ತೆರುವ ಜೊತೆಗೆ ಪಾಸಿಟಿವ್ ಬಂದಲ್ಲಿ ಹೋಟೆಲ್ ಮತ್ತು ಲಾಡ್ಜಿಂಗ್ ಗಳ ಲಕ್ಷಲಕ್ಷ ಬಿಲ್ ಕಟ್ಟಬೇಕು. ಇಂತಹ ಲಕ್ಷಾಂತರ ರೂಪಾಯಿ ವ್ಯವಹಾರದ ‘ಲಾಭ’ ಕೂಡ ಹೀಗೆ ಸುತ್ತಿಬಳಸಿ ಮತ್ತೆ ಅದದೇ ಹಳೆಯ ವರಸೆಗಳಿಗೆ ಸರ್ಕಾರಗಳನ್ನು ತಂದು ನಿಲ್ಲಿಸುತ್ತಿದೆಯೇ? ಎಂಬ ಅನುಮಾನಗಳೂ ಇವೆ.
ಇನ್ನು ಕೋವಿಡ್ ಪರೀಕ್ಷಾ ಕಿಟ್ ಗಳ ವಿಷಯದಲ್ಲಂತೂ ಬಹುದೊಡ್ಡ ಹಗರಣವೇ ನಡೆದಿದೆ. ಮೂರನೇ ಅಲೆಯ ನಿರೀಕ್ಷೆಯಲ್ಲಿದ್ದ ಸರ್ಕಾರ ಕಳೆದ ಆಗಸ್ಟ್-ಸೆಪ್ಟೆಂಬರ್ ಸಾವಿರಾರು ಕೋಟಿ ಸುರಿದು ಭಾರೀ ಪ್ರಮಾಣದ ಟೆಸ್ಟ್ ಕಿಟ್ ಗಳನ್ನು ತಂದು ಗೋದಾಮುಗಳನ್ನು ತುಂಬಿಸಿತ್ತು. ಆದರೆ, ತೀರಾ ಡಿಸೆಂಬರ್ ಎರಡನೇ ವಾರ ಕಳೆದರೂ ಅಂತಹ ಯಾವುದೇ ಅಲೆ ಕಾಣಿಸಿಕೊಂಡಿರಲಿಲ್ಲ. ಅದು ಸರ್ಕಾರಗಳನ್ನು ಚಿಂತೆಗೆ ಈಡುಮಾಡಿತ್ತು. ಆದರೆ ಅಷ್ಟರಲ್ಲಿ ಒಮಿಕ್ರೋನ್ ಪ್ರಕರಣಗಳು ವರದಿಯಾಗತೊಡಗಿದವು. ಅದನ್ನೇ ನೆಪವಾಗಿಟ್ಟುಕೊಂಡು ದಿಢೀರನೇ ಶಾಲೆ, ರೈಲ್ವೆ ಮತ್ತು ಬಸ್ ನಿಲ್ದಾಣಗಳಲ್ಲಿ ಪರೀಕ್ಷೆಗಳನ್ನು ಆರಂಭಿಸಲಾಯಿತು. ಗೋದಾಮುಗಳಲ್ಲಿ ಮತ್ತು ಪರೀಕ್ಷಾ ಕೇಂದ್ರಗಳಲ್ಲಿ ಕಿಕ್ಕಿರಿದಿರುವ ಟೆಸ್ಟ್ ಕಿಟ್ ಕರಗಿಸಲು ಸರ್ಕಾರ ಒಮಿಕ್ರೋನ್ ಭೀತಿಯನ್ನೇ ಅಸ್ತ್ರವಾಗಿ ಬಳಸುತ್ತಿದೆ ಎಂಬ ಮಾತುಗಳೂ ಆರೋಗ್ಯ ಇಲಾಖೆಯ ಒಳಗಿಂದಲೇ ಕೇಳಿಬರುತ್ತಿವೆ.
ಹೀಗೆ ಒಂದು ಕಡೆ ವೀಕೆಂಡ್ ಕರ್ಫ್ಯೂ, ರಾತ್ರಿ ಕರ್ಫ್ಯೂ, ಕ್ವಾರಂಟೈನ್ ಗಳಂತಹ ಕೋವಿಡ್ ನಿಯಂತ್ರಣ ಕ್ರಮಗಳು ಮತ್ತು ಲಸಿಕೆ, ಪರೀಕ್ಷೆಯಂತಹ ರೋಗ ನಿರ್ವಹಣೆಯ ಕ್ರಮಗಳು ಕೂಡ ಸರ್ಕಾರದ ಮುಚ್ಚುಮರೆ, ವಿವೇಚನಾಹೀನ ನಡೆಗಳಿಂದಾಗಿ ಜನಸಾಮಾನ್ಯರ ಕಣ್ಣಲ್ಲಿ ತೀವ್ರ ಶಂಕೆ ಮತ್ತು ಅನುಮಾನಗಳಿಗೆ ಕಾರಣವಾಗಿವೆ. ಕರೋನಾ ಮೊದಲ ಅಲೆಯಲ್ಲಿ ಉಳಿದೆಲ್ಲಾ ವಿಷಯಗಳಲ್ಲಿ ಮಾಡಿದಂತೆಯೇ, ಜನ ಸಾಮಾನ್ಯರ ನಂಬಿಕೆ ಮತ್ತು ವಿಶ್ವಾಸ ಉಳಿಸಿಕೊಳ್ಳುವ ವಿಷಯದಲ್ಲಿ ಕೂಡ ಸರ್ಕಾರ ಪದೇಪದೆ ಎಡವುತ್ತಿದೆ.