ಬಿಹಾರ ಆಸ್ಪತ್ರೆಗಳ ಕರಾಳ ಮುಖ ಬಿಚ್ಚಿಟ್ಟ ಭಗಲ್ಪುರ ಮಹಿಳೆ!

ಕರೋನಾ ಮನುಷ್ಯನ ದೈಹಿಕ ದೌರ್ಬಲ್ಯವನ್ನು ಮಾತ್ರವಲ್ಲ; ಆತನ ಅಮಾನುಷ ವರ್ತನೆ, ಪಾಶವೀ ಮನಸ್ಥಿತಿಯನ್ನು ಕೂಡ ಬೆತ್ತಲು ಮಾಡುತ್ತಿದೆ.

ಚಿಕಿತ್ಸೆ ನೀಡಿ ಜೀವ ಉಳಿಸಲು ಮತ್ತು ಜೀವ ಹೋದ ಬಳಿಕ ಶವ ಕೊಡಲು ಕೂಡ ಆಸ್ಪತ್ರೆ ಆಡಳಿತಗಳು, ವೈದ್ಯರು ಮತ್ತು ಕೊನೆಗೆ ಆ್ಯಂಬುಲೆನ್ಸ್ ಚಾಲಕರು ಕೂಡ ಹೇಗೆ ಕರೋನಾ ಬಾಧಿತರು ಮತ್ತು ಅವರ ಕುಟುಂಬಗಳನ್ನು ದೋಚುತ್ತಿದ್ದಾರೆ ಎಂಬುದು ದಿನನಿತ್ಯದ ಸುದ್ದಿಯಾಗಿದೆ. ಬಿಹಾರದ ಭಗಲ್ಪುರದಿಂದ ಕೂಡ ಇಂತಹದ್ದೇ ಒಂದು ಹೃದಯವಿದ್ರಾವಕ ಘಟನೆ ವರದಿಯಾಗಿದೆ.

ಮತ್ತೊಬ್ಬರ ಸಂಕಟ, ಸಂಕಷ್ಟವನ್ನೇ ಪರಮ ಸ್ವಾರ್ಥದ ಅವಕಾಶವಾಗಿ ಬಳಸಿಕೊಳ್ಳುವ ಭಾರತೀಯ ಮನಸ್ಥಿತಿಯ ಕೊಳಕುತನದ ಮೇಲೆ ಬೆಳಕು ಚೆಲ್ಲಿರುವ ಈ ಘಟನೆಯಲ್ಲಿ ವಿವಾಹಿತ ಮಹಿಳೆಯೊಬ್ಬರು ತನ್ನ ಪತಿ ಮತ್ತು ಪತಿಯ ತಾಯಿ(ಅತ್ತೆ)ಯನ್ನು ಬದುಕಿಸಿಕೊಳ್ಳಲು ಆಸ್ಪತ್ರೆಗಳಲ್ಲಿ ಪಟ್ಟ ಪಾಡು ಅನಾವರಣಗೊಂಡಿದೆ.  

ನೋಯ್ಡಾದಿಂದ ತಮ್ಮ ಮೂಲ ಭಗಲ್ಪುರಕ್ಕೆ ತೆರಳಿದ್ದ ದಂಪತಿಗಳ ಪೈಕಿ ಗಂಡನಿಗೆ ಕೋವಿಡ್ ಕಾಣಿಸಿಕೊಂಡಿತ್ತು. ಆ ಹಿನ್ನೆಲೆಯಲ್ಲಿ ಗಂಡನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿಕೊಂಡಿದ್ದ ಮಹಿಳೆಗೆ ಆಸ್ಪತ್ರೆಯ ಸಹಾಯಕರು ಲೈಂಗಿಕ ಕಿರುಕುಳ ನೀಡಿ, ತನಗೆ ಸಹಕರಿಸಿದರೆ ನಿನ್ನ ಪತಿಯನ್ನು ಸರಿಯಾಗಿ ನೋಡಿಕೊಳ್ಳುವುದಾಗಿ ಹೇಳಿದ್ದರು! ಜೊತೆಗೆ ಅದೇ ವೇಳೆ ಪತಿಯ ತಾಯಿಗೂ ಕರೋನಾ ಸೋಂಕು ಉಲ್ಬಣಗೊಂಡಿದ್ದರಿಂದ ಅವರನ್ನೂ ಪಾಟ್ನಾದ ಗ್ಲೋಕಲ್ ಎಂಬ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆ ವೇಳೆ ಆಸ್ಪತ್ರೆಯ ಸಿಬ್ಬಂದಿ ನೀಡಿದ ಲೈಂಗಿಕ ಕಿರುಕುಳವನ್ನು ಪ್ರತಿಭಟಿಸುವ ಮನಸ್ಸಿದ್ದರೂ, ಅವರು ಪತಿ ಮತ್ತು ಅತ್ತೆಯ ಜೀವಕ್ಕೆ ಅಪಾಯ ತರುವ ಭಯದಿಂದ ಒಂದು ತಿಂಗಳ ಕಾಲ ಎಲ್ಲವನ್ನೂ ಸಹಿಸಿಕೊಂಡೆ. ಆದರೂ ಕೊನೆಗೂ ಪತಿಯನ್ನು ಉಳಿಸಿಕೊಳ್ಳಲಾಗಲಿಲ್ಲ ಎಂದು ಸಂತ್ರಸ್ತ ಮಹಿಳೆ ಹೇಳಿದ ವೀಡಿಯೋ ತುಣುಕು ಈಗ ವೈರಲ್ ಆಗಿದೆ.

ಲೈಂಗಿಕ ಕಿರುಕುಳವಷ್ಟೇ ಅಲ್ಲದೆ, ನೀರಿಗಾಗಿ ಅಂಗಾಲಾಚುತ್ತಿದ್ದ ಪತಿಗೆ ನೀರು ಕೊಡಲು ಕೂಡ ಹಣದ ಬೇಡಿಕೆ ಇಡಲಾಗುತ್ತಿತ್ತು. ಆಮ್ಲಜನಕ ನೀಡಲು ಕೂಡ ಲಕ್ಷಾಂತರ ರೂಪಾಯಿ ಹಣ ಕೇಳಿದರು. ಜೊತೆಗೆ ವೆಂಟಿಲೇಟರ್ ನಲ್ಲಿದ್ದ ತನ್ನ ಪತಿ ಮತ್ತು ಅತ್ತೆ ಉಸಿರಾಟದ ಸಮಸ್ಯೆಯಿಂದ ತಮ್ಮ ನೆರವಿಗೆ ಅಂಗಾಲಾಚುತ್ತಿದ್ದರೆ, ಆಸ್ಪತ್ರೆಯ ಸಹಾಯಕರು ತಮ್ಮ ಕೋಣೆಯ ಲೈಟ್ ಆಫ್ ಮಾಡಿಕೊಂಡು ಮೊಬೈಲುಗಳಲ್ಲಿ ಸಿನಿಮಾ ನೋಡುತ್ತಾ ಕೂತಿರುತ್ತಿದ್ದರು. ತಾನು ಎಷ್ಟೇ ಬೇಡಿಕೊಂಡರೂ ಕಣ್ಣೆತ್ತಿಯೂ ನೋಡುತ್ತಿರಲಿಲ್ಲ ಎಂದು ವೀಡಿಯೋದಲ್ಲಿ ಸುಮಾರು ಒಂದು ತಿಂಗಳ ಕಾಲ ತಾನು ಅನುಭವಿಸಿದ ನರಕಯಾತನೆಯನ್ನು ಬಿಚ್ಚಿಟ್ಟಿದ್ದಾರೆ.

ಜಭಲ್ಪುರ, ಮಾಯಾಗಂಜ್, ಪಾಟ್ನಾದ ವಿವಿಧ ಸರ್ಕಾರಿ ಮತ್ತು ಖಾಸಗೀ ಆಸ್ಪತ್ರೆಗಳಲ್ಲಿ ತಾನು ಅನುಭವಿಸಿದ ಕಿರುಕುಳ, ನಿರ್ಲಕ್ಷ್ಯ, ವೈದ್ಯಕೀಯ ಅಸಡ್ಡೆ, ಬ್ಯಾಕ್ ಮೇಲ್, ಹಣದ ಬೇಡಿಕೆ ಮತ್ತಿತರ ಅಮಾನುಷ ನಡವಳಿಕೆಗಳನ್ನು, ವೈದ್ಯ ಲೋಕವೇ ತಲೆತಗ್ಗಿಸುವಂತ ಹೇಯ ಘಟನೆಗಳನ್ನು ಮಹಿಳೆ ಹೇಳಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ, ಆ ಆಸ್ಪತ್ರೆಗಳ ವಿರುದ್ಧ ವ್ಯಾಪಕ ಆಕ್ರೋಶ ಮತ್ತು ಆಕೆಯ ಪರ ಸಂತಾಪಕ್ಕೆ ಕಾರಣವಾಗಿದೆ.

Related posts

Latest posts

ಕುಂಭ ಮೇಳ ಸಂದರ್ಭದಲ್ಲಿ ಮಾಡಿದ 1 ಲಕ್ಷ ಕೋವಿಡ್-19 ಪರೀಕ್ಷೆಗಳು ನಕಲಿ: ತನಿಖಾ ವರದಿ

ಹರಿದ್ವಾರದ ಕುಂಭ ಮೇಳ ಸಂದರ್ಭದಲ್ಲಿ ಮಾಡಲಾಗಿದ ನಾಲ್ಕು ಲಕ್ಷ ಕೋವಿಡ್ ಟೆಸ್ಟ್ ಫಲಿತಾಂಶಗಳಲ್ಲಿ ಹಲವು ನಕಲಿ ಎಂದು ಉತ್ತರಾಖಂಡ ಆರೋಗ್ಯ ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ವಿವರವಾದ ತನಿಖೆಯ 1,600 ಪುಟಗಳಲ್ಲಿ...

ನನ್ನ ಹೇಳಿಕೆಯಿಂದ ನಾನು ಹಿಂದೆ ಸರಿಯಲ್ಲ : ನಟ ಚೇತನ್ ಸ್ಪಷ್ಟನೆ

ಬ್ರಾಹ್ಮಣ್ಯ ವಿರೋಧಿ ಹೇಳಿಕೆ ಎಂಬ ಆರೋಪದ ಅಡಿ ಇಂದು ಬಸವನಗುಡಿ ಪೊಲೀಸರ ಮುಂದೆ ಹಾಜರಾದ ನಟ ಚೇತನ್ ತನ್ನ ಹೇಳಿಕೆಯ ಬಗ್ಗೆ ಪೊಲೀಸರ ಮುಂದೆ ಸ್ಪಷ್ಟನೆ ದಾಖಲಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ...

ಚಿಕ್ಕಬಳ್ಳಾಪುರ: ಅರ್ಹ ಫಲಾನುಭವಿಗಳನ್ನು ಗುರುತಿಸುವಲ್ಲಿ ವಿಫಲ: ರೈತರಿಗೆ ಸಿಗುತ್ತಿಲ್ಲ ಪರಿಹಾರ ಧನ

ಕೊರೋನಾ ಲಾಕ್ಡೌನ್ ಸಮಯದಲ್ಲಿ ಸಂಕಷ್ಟಕ್ಕೊಳಗಾದ ರೈತರಿಗೆ ಸರ್ಕಾರ ಪರಿಹಾರದ ಅಭಯ ಕೊಟ್ಟಿತು. ಆದರೆ ಅರ್ಹ ಫಲಾನುಭವಿಗಳನ್ನ ಗುರುತಿಸುವಲ್ಲಿ ವಿಫಲವಾದ ಪರಿಣಾಮ ನಿಜವಾದ ರೈತರಿಗೆ ಪರಿಹಾರ ಸಿಗದಂತಾಗಿದೆ. ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ರೈತರು ತಮ್ಮ...