ಸೆಂಟ್ರಲ್ ವಿಸ್ತಾ ಯೋಜನೆಗೆ ಬ್ರೇಕ್ ಹಾಕಿ, 20 ಸಾವಿರ ಕೋಟಿ ರೂ.ಗಳನ್ನು ಆರೋಗ್ಯ ಕ್ಷೇತ್ರಕ್ಕೆ ವ್ಯಯಿಸಿ ಮನುಷ್ಯರ ಜೀವ ಉಳಿಸಲು ವಿನಿಯೋಗಿಸಿ’ ಎಂಬ ಧ್ಯೇಯ ವಾಕ್ಯದೊಂದಿಗೆ #StopCentralVistaStartOxygen (ಸಂಸತ್ ಯೋಜನೆ ನಿಲ್ಲಿಸಿ, ಆಮ್ಲಜನಕ ಪೂರೈಸಿ) ಎಂಬ ಟ್ವಿಟರ್ ಅಭಿಯಾನವು ಇಂದಿನಿಂದ ಪ್ರಾರಂಭವಾಗಿದೆ.
ದೇಶ ಕರೋನಾ ಸಂಕಷ್ಟ ಎದುರಿಸುತ್ತಿದ್ದು, ಆರೋಗ್ಯ ಕ್ಷೇತ್ರ ಕುಸಿದಿದೆ. ಇದರ ಮಧ್ಯೆ ಸೆಂಟ್ರಲ್ ವಿಸ್ತಾ ಯೋಜನೆ ಮುಂದುವರೆಸಿದಕ್ಕೆ ತೀವ್ರ ಆಕ್ಷೇಪಗಳು ವ್ಯಕ್ತವಾಗುತ್ತಿದೆ. ಈ ಸೆಂಟ್ರಲ್ ವಿಸ್ತಾ ಯೋಜನೆ ಹೊಸ ಸಂಸತ್ ಭವನ ಮತ್ತು ಇತರೆ ಕಟ್ಟಡಗಳನ್ನು ನಿರ್ಮಿಸುವ ದುಬಾರಿ ಯೋಜನೆಯಾಗಿದ್ದು, ಈ ಯೋಜನೆಗಳನ್ನು ಕೂಡಲೇ ಕೈ ಬಿಟ್ಟು, ಕರೋನಾ ಬಿಕ್ಕಟ್ಟಿನ ವೇಳೆ ಜನರ ಜೀವ ಉಳಿಸಲು ಆರೋಗ್ಯ ಕ್ಷೇತ್ರಕ್ಕೆ 20 ಸಾವಿರ ಕೋಟಿಯನ್ನು ವೈದ್ಯಕೀಯ ಸೌಲಭ್ಯ ವಿಸ್ತರಿಸಲು ಬಳಸಬೇಕೆಂದು ಅಭಿಯಾನದ ಮೂಲಕ ಒತ್ತಾಯಿಸಲಾಗುತ್ತಿದೆ.
ಕೋವಿಡ್ ಬಿಕ್ಕಟ್ಟಿನ ನಡುವೆಯೂ ಕೇಂದ್ರ ಸರ್ಕಾರ ಸೆಂಟ್ರಲ್ ವಿಸ್ತಾ ಯೋಜನೆಯನ್ನು ಅಗತ್ಯ ವಸ್ತುಗಳ ಪಟ್ಟಿಗೆ ಸೇರಿಸಿ ನಿರ್ಮಾಣವನ್ನು ಮುಂದುವರೆಸಿದ್ದು, ಇದಕ್ಕೆ ತೀವ್ರ ವಿರೋಧಗಳು ವ್ಯಕ್ತವಾಗುತ್ತಿದೆ. ವೈದ್ಯಕೀಯ ವ್ಯವಸ್ಥೆ ದುರ್ಬಲಗೊಂಡು, ಸಾವಿರಾರೂ ಜನರು ಜೀವಕಳೆದು ಕೊಳ್ಳುತ್ತಿರುವ ಸಂಕಷ್ಟದ ಸಮಯದಲ್ಲಿಯೂ ಸೆಂಟ್ರಲ್ ವಿಸ್ತಾ ಯೋಜನೆಯನ್ನು ಮುಂದುವರೆಸಿದಕ್ಕಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಯೋಜನೆಗೆ ಬಳಸಿದ ಹಣವನ್ನು ಈಗಿನ ಈ ಪರಿಸ್ಥಿತಿಯಲ್ಲಿ ಆರೋಗ್ಯ ಕ್ಷೇತ್ರಕ್ಕೆ ಬಳಸಿ ಹೆಚ್ಚಿನ ಜನರಿಗೆ ಲಸಿಕೆ ನೀಡಲು ಮತ್ತು ಪಿಪಿಇ ಕಿಟ್‌ಗಳನ್ನು ಖರೀದಿಸಲು ಬಳಸಬೇಕೆಂದು ಪ್ರತಿಪಕ್ಷಗಳು ಬಯಸಿದ್ದವು. ಜೊತೆಗೆ ವಲಸೆ ಕಾರ್ಮಿಕರಿಗೆ ನೇರ ವರ್ಗಾವಣೆ ಮಾಡಬಹುದಿತ್ತು ಎಂದು ಪಶ್ಚಿಮ ಬಂಗಾಳ ತೃಣಮೂಲ ಕಾಂಗ್ರೆಸ್ ಮುಖಂಡ ಡೆರೆಕ್ ಒ’ಬ್ರಿಯೆನ್ ಮಾಧ್ಯಮವೊಂದಕ್ಕೆ ಕೇಳಿಕೆ ಕೊಟ್ಟಿದ್ದಾರೆ.
ಹೆಚ್ಚುತ್ತಿರುವ COVID-19 ಪ್ರಕರಣಗಳಿಂದಾಗಿ ಆರೋಗ್ಯ ವ್ಯವಸ್ಥೆಯು ತೀವ್ರ ಬಿಕ್ಕಟ್ಟಿನಲ್ಲಿದೆ, ಅದಾಗ್ಯೂ ಮೋದಿ ಸರ್ಕಾರ ಸೆಂಟ್ರಲ್ ವಿಸ್ಟಾ ಯೋಜನೆಯನ್ನು “ ಅಗತ್ಯ ಸೇವೆ” ಎಂದು ಪರಿಗಣಿಸಿ ಯೋಜನೆಯ ಕೆಲಸಗಳನ್ನು ಮುಂದುವರಿಸಲು ಅನುಮತಿ ನೀಡಿರುವುದಾಗಿ Scroll.in ವರದಿ ಮಾಡಿದೆ.