ಸರ್ಕಾರವು ಗುರುವಾರ ಮಧ್ಯಾಹ್ನದಿಂದ ಪೊಲೀಸರನ್ನು ಬಳಸಿಕೊಂಡು ರಾಜ್ಯದಲ್ಲಿ ವರ್ತಕರು, ವ್ಯಾಪಾರಿಗಳಿಗೆ ಮಾಹಿತಿ ನೀಡದೆ ಅವರ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿದೆ. ಸರ್ಕಾರ ಅವರ ಆರೋಗ್ಯ, ಆರ್ಥಿಕ ಸ್ಥಿತಿ ಹಾಗೂ ಬದುಕಿನ ಬಗ್ಗೆ ಯೋಚಿಸದೆ ನಿರ್ಧಾರ ತೆಗೆದುಕೊಂಡಿದೆ. ಪ್ರಾಮಾಣಿಕವಾಗಿ ಜಿಎಸ್ಟಿ ತೆರಿಗೆ ಕಟ್ಟುತ್ತಿರುವ ವರ್ತಕರಿಗೆ ಪೊಲೀಸರಿಂದ ಲಾಠಿ ಏಟು ಕೊಡಿಸಲಾಗಿದೆ. ಉದ್ಯೋಗದಾತರಿಗೆ ಸರ್ಕಾರ ಅಪಮಾನ ಮಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇವರಿಗೆ ಆಗುವ ನಷ್ಟಕ್ಕೆ ಸರಕಾರ ಪರಿಹಾರ ನೀಡಬೇಕು. ಸರ್ಕಾರಕ್ಕೆ ಕೊಡಲಾಗದ ಉದ್ಯೋಗವನ್ನು ಈ ವರ್ತಕರು ನೀಡುತ್ತಿದ್ದಾರೆ. ಒಬ್ಬ ಬಟ್ಟೆ ಮಳಿಗೆಯವನು ಐವರಿಗೆ ಉದ್ಯೋಗ ನೀಡಿರುತ್ತಾನೆ. ಈ ವ್ಯಾಪಾರಿಗಳಿಗೆ ಪರಿಹಾರ ನೀಡದೆ ಸರ್ಕಾರ ಅಧಿಕಾರ ದುರುಪಯೋಗ ಮಾಡಿಕೊಂಡು ದಬ್ಬಾಳಿಕೆ ನಡೆಸುತ್ತಿದೆ. ಕರೋನಾ ಎರಡನೇ ಅಲೆಯನ್ನು ಬಿಜೆಪಿ ಅಲೆ ಎನ್ನಬೇಕೋ, ಮೋದಿ ಅಲೆ ಎನ್ನಬೇಕೋ ಗೊತ್ತಾಗುತ್ತಿಲ್ಲ. ಒಟ್ಟಿನಲ್ಲಿ ಕಳೆದ ಒಂದು ವರ್ಷ ಸರ್ಕಾರದ ವೈಫಲ್ಯದಿಂದ ಈ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದ್ದಾರೆ.
ನಮ್ಮೆಲ್ಲ ಶಾಸಕರಿಗೆ ನೂರಾರು ಕರೆಗಳು ಬರುತ್ತಿದ್ದು, ಎಲ್ಲರೂ ತಮ್ಮ ಸಂಕಷ್ಟ ಹೇಳಿಕೊಳ್ಳುತ್ತಿದ್ದಾರೆ. ನಾವು ತಜ್ಞರ ಸಮಿತಿ ಶಿಫಾರಸ್ಸು ಆಧಾರದ ಮೇಲೆ ನಿರ್ಧಾರಕ್ಕೆ ಬನ್ನಿ, ಸಹಕಾರ ನೀಡುತ್ತೇವೆ ಎಂದು ಹೇಳಿದ್ದೇವೆ. ಸರ್ಕಾರ ತನಗೆ ಬೇಕಾದ ನಿರ್ಧಾರ ತೆಗೆದುಕೊಳ್ಳಲಿ. ಆದರೆ ಅದರಿಂದ ತೊಂದರೆಯಾದವರಿಗೆ ಪರಿಹಾರ ನೀಡಬೇಕು. ಉದ್ಯೋಗ ಕಳೆದುಕೊಂಡವರು, ಉದ್ಯೋಗ ಕೊಟ್ಟು ನಷ್ಟ ಅನುಭವಿಸಿರುವವರಿಗೆ, ಅಸಂಘಟಿತ ಕಾರ್ಮಿಕರಿಗೆ ಪರಿಹಾರ ಸಿಗಬೇಕು ಎಂದು ಆಗ್ರಹಿಸಿದ್ದಾರೆ.
ಮುಖ್ಯಕಾರ್ಯದರ್ಶಿಗಳು ಮೊದಲು ಒಂದು ಆದೇಶ ಹೊರಡಿಸಿದ್ದರು. ನಂತರ ಶೆಡ್ಯೂಲ್ ಬದಲಾವಣೆ ಎಂದು ಹೇಳಿ ಅಂಗಡಿಗಳನ್ನು ಮುಚ್ಚಿಸಿದ್ದಾರೆ. ಅದ್ಯಾವ ಶೆಡ್ಯೂಲ್, ಸಾಮಾನ್ಯ ಜನರಿಗೆ ಏನು ಅರ್ಥವಾಗುತ್ತದೆ. ಸರ್ಕಾರ ಇವರ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಿದ ಮೇಲೆ ಅವರಿಂದ ತೆರಿಗೆ ಏಕೆ ತೆಗೆದುಕೊಳ್ಳುತ್ತಿದೆ? ಇವರಿಗೆ ಬ್ಯಾಂಕ್ ನಿಂದ ಒಂದು ಚೂರು ಸಹಾಯ ಮಾಡಿಲ್ಲ. ಈ ಸರ್ಕಾರ ಸಂಪೂರ್ಣ ವಿಫಲವಾಗಿದೆ. ರಾಜಕೀಯವನ್ನು ರಾಜಕೀಯವಾಗಿ ಹೋರಾಡುತ್ತೇವೆ. ಮಾನವೀಯತೆ ದೃಷ್ಟಿಯಲ್ಲಿ ಏನು ಸಹಕಾರ ನೀಡಬೇಕೋ ನೀಡುತ್ತೇವೆ. ನಾವು ಕೆಲವು ಸಲಹೆ ಕೊಟ್ಟಿದ್ದೇವೆ. ಮಂತ್ರಿಗಳು, ಅಧಿಕಾರಿಗಳನ್ನು ನೇಮಿಸಿ ಎಂದಿದ್ದೇವೆ. ನಮ್ಮ ಸಲಹೆಗಳನ್ನು ತಡವಾಗಿ ಪಾಲಿಸುತ್ತಿದ್ದಾರೆ ಎಂದಿದ್ದಾರೆ.
ಈ ಸರ್ಕಾರ ಯುವಕರ ವಿರೋಧಿ, ವರ್ತಕರ ವಿರೋಧಿ, ಯುವಕರ ವಿರೋಧಿ, ಬೀದಿ ವ್ಯಾಪಾರಿ ವಿರೋಧಿ, ಮಹಿಳಾ, ಕಾರ್ಮಿಕರ ವಿರೋಧಿ, ರೈತರು, ವಿದ್ಯಾರ್ಥಿಗಳ ವಿರೋಧಿ. ಮುಖ್ಯಮಂತ್ರಿಗಳು ಬ್ಯಾಂಕ್ ಗಳ ಮುಖ್ಯಸ್ಥರ ಸಭೆ ಕರೆದು, ಜನರಿಗೆ ಸಾಲದ ಬಡ್ಡಿ, ಕಂತುಗಳ ವಿನಾಯಿತಿ ಕೊಡಿಸಬೇಕು. ಕೇಂದ್ರ ಹಣಕಾಸು ಸಚಿವರೂ ನಮ್ಮ ರಾಜ್ಯದವರೇ ಆಗಿದ್ದು, ಈ ಸಭೆ ನಡೆಸಬೇಕು. ಎಲ್ಲ ಸಮುದಾಯದವರು ನಮ್ಮನ್ನು ಭೇಟಿ ಮಾಡಿ ಅವರ ಅಳಲು ಹೇಳಿಕೊಳ್ಳುತ್ತಿದ್ದಾರೆ. ನಾವು ಅವರ ಧ್ವನಿಯಾಗಿ ಕೆಲಸ ಮಾಡುತ್ತೇವೆ. ನಾವು ಎಲ್ಲರನ್ನೂ ಕರೆದು ಮಾತನಾಡುತ್ತೇವೆ ಎಂದು ಹೇಳಿದ್ದಾರೆ.
ಸರ್ಕಾರ ಎಲ್ಲ ಅಭಿವೃದ್ಧಿ ಕೆಲಸ ನಿಲ್ಲಿಸಿ ಜನರಿಗೆ ನೆರವಾಗಲಿ. ಉದ್ಯೋಗ ಕಳೆದುಕೊಂಡವನು ಉದ್ಯೋಗ ಕೊಟ್ಟವನು – ಹೀಗೆ ಎಲ್ಲರ ಹಿತ ಕಾಯಬೇಕು. ನಾವು ಸಲಹೆ ಕೊಟ್ಟ ಮೇಲೆ ಸರ್ಕಾರ ಅಧಿಕಾರಿಗಳನ್ನು ನೇಮಿಸುತ್ತಿದೆ. ಸ್ಮಶಾನಗಳನ್ನು ನಿರ್ಮಿಸುತ್ತಿದೆ. ಕೆಲವೊಮ್ಮೆ ಅದಕ್ಕೆ ತಡವಾಗಿ ಜ್ಞಾನೋದಯ ಆಗುತ್ತದೆ. ಸರ್ಕಾರ ಅಂದರೆ ಒಬ್ಬಿಬ್ಬರಲ್ಲ, ಸಚಿವರು ಏನು ಮಾಡುತ್ತಿದ್ದಾರೆ ಅಂತಾ ಮುಖ್ಯಮಂತ್ರಿಗಳನ್ನು ಕೇಳಿ. ಶ್ರೀರಾಮುಲು ಅವರು ಚುನಾವಣೆ ಪ್ರಚಾರ ಮಾಡುತ್ತಿದ್ದು, ಕೋವಿಡ್ ನಿಯಮ ಉಲ್ಲಂಘನೆ ಮಾಡಿರುವ ಕಾರಣ ಅವರ ವಿರುದ್ಧ ಪ್ರಕರಣ ದಾಖಲಿಸಬೇಕು. ಒಬ್ಬ ಮಂತ್ರಿಯಾಗಿ ಸಭೆ ಮಾಡುವುದು ಎಷ್ಟು ಸರಿ. ಕನಕಪುರ ಆಸ್ಪತ್ರೆಗೆ ಭೇಟಿ ನೀಡಿದ್ದೆ. ಇರುವ ಮೂಲಸೌಕರ್ಯದಲ್ಲೇ ಅವರು ಪರಿಸ್ಥಿತಿ ನಿಭಾಯಿಸುತ್ತಿದ್ದಾರೆ. ವೈದ್ಯರಿಗೆ, ನರ್ಸ್ ಗಳಿಗೆ ನೈತಿಕ ಸ್ಥೈರ್ಯ ತುಂಬುವ ಪ್ರಯತ್ನ ಮಾಡಬೇಕು. ಅದನ್ನು ಮಾಡಿದ್ದು, ಮುಂದಿನ ದಿನಗಳಲ್ಲಿ ರಾಮನಗರ ಜಿಲ್ಲಾ ಕೇಂದ್ರಕ್ಕೂ ಭೇಟಿ ನೀಡುತ್ತೇನೆಂದು ತಿಳಿಸಿದ್ದಾರೆ.
ರೆಮೆಡಿಸಿವಿಯರ್ ಕೊರತೆ ಇದೆ, ವೆಂಟಿಲೇಟರ್ ಇಲ್ಲ, ಆಕ್ಸಿಜನ್ ಇಲ್ಲ. ಒನ್ ನೇಷನ್, ಒನ್ ವ್ಯಾಕ್ಸಿನ್, ಒನ್ ರೇಟ್ ಮಾಡಬೇಕು. ಸರ್ಕಾರಿ ಆಸ್ಪತ್ರೆಯಲ್ಲಿ ಒಂದು ದರ, ಖಾಸಗಿ ಆಸ್ಪತ್ರೆಯಲ್ಲಿ ಒಂದು ದರವಂತೆ. ಇಡೀ ದೇಶದಲ್ಲಿ ಉಚಿತ ಲಸಿಕೆ ನೀಡಬೇಕು.ರಾಜ್ಯದಲ್ಲೂ ಉಚಿತವಾಗಿ ನೀಡಬೇಕು. ಮೋದಿ ಅವರು ಮೊನ್ನೆ ಪ್ರವಚನ ಮಾಡಿದ್ದರಲ್ಲ, ಏನಾದರೂ ಕೊಟ್ಟರಾ? ಜನರಿಗೆ ಏನಾದರೂ ನೆರವು ನೀಡಿದರಾ? ಬೆಲೆ ಇಳಿಸಿದರಾ? ತೆರಿಗೆ ವಿನಾಯಿತಿ ನೀಡಿದರಾ? ಯಾವುದೂ ಇಲ್ಲ. ಹೆಣ ಸಂಸ್ಕಾರಕ್ಕೂ, ವರದಿಗೂ ಲಂಚ ಕೇಳುತ್ತಿದ್ದಾರೆ. ಕರೋನಾ ವರದಿಯಲ್ಲೂ ಹಗರಣ ನೋಡಿದೆವು. ಮಾತೆತ್ತಿದರೆ ವಿರೋಧ ಪಕ್ಷ ಸಹಕಾರ ನೀಡಬೇಕು ಅಂತಾರೆ. ಇದಕ್ಕೆ ನಾವು ಸಹಕಾರ ನೀಡಬೇಕಾ? ಜನರ ಸೇವೆ ಮಾಡಿ ನಾವು ಸಹಕಾರ ನೀಡುತ್ತೇವೆಂದು ಡಿಕೆಶಿ ಭರವಸೆ ನೀಡಿದ್ದಾರೆ