ದೇಶದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಹಾಗೂ ಓಮಿಕ್ರಾನ್ ರೂಪಾಂತರಿ ಸೋಂಕಿನ ಪ್ರಕರಣಗಳು ಜಾಸ್ತಿಯಾಗುತ್ತಿದ್ದು ಸೋಂಕಿನಿಂದ ಪಾರಾಗಲು ಲಸಿಕೆಯೊಂದೆ ದಾರಿ ಎಂದು ತಜ್ಞರ ಸಮಿತಿ ಅಭಿಪ್ರಾಯಪಟ್ಟಿದೆ. ಈ ಮಧ್ಯೆ ಭಾರತ ಪ್ರಪಂಚದಾದ್ಯಂತ ಲಸಿಕೆ ಅಭಿಯಾನದಲ್ಲಿ ವಿಶಿಷ್ಟ ದಾಖಲೆ ಮಾಡಿದೆ ಈ ನಿಟ್ಟಿನಲ್ಲಿ ಈಗ ಭಾರತ ಸರ್ಕಾರ 12-14 ಷರ್ಷದ ಮಕ್ಕಳಿಗೆ ಲಸಿಕೆ ನೀಡಲು ನಿರ್ಧಸಿದೆ ಎನ್ನಲಾಗಿದೆ ಎಂದು ಡಿಎಚ್ ವರದಿ ಮಾಡಿದೆ.
ದೇಶಾದ್ಯಂತ 15-18ರ ವಯೋಮಾನದ ಮಕ್ಕಳಿಗೆ ಇಲ್ಲಿಯವರೆಗೆ ಒಟ್ಟು 7.4 ಕೋಟಿ ಮಕ್ಕಳ ಪೈಕಿ 3.45ಕೋಟಿ ಮಕ್ಕಳಿಗೆ ಇಲ್ಲಿಯವರೆಗೆ ಮೊದಲ ಡೋಸ್ ಕೋವ್ಯಾಕ್ಸಿನ್ ಲಸಿಕೆಯನ್ನು ನೀಡಲಾಗಿದೆ ಮತ್ತು ಲಸಿಕೆ ಅಭಿಯಾನದಲ್ಲಿ ದಾಪುಗಾಲಿಟ್ಟಿದೆ. ಈ ಮಧ್ಯೆ ರಾಷ್ಟ್ರೀಯ ಇಮ್ಯುನೈಸೇಷನ್ ತಾಂತ್ರಿಕ ಸಲಹಾ ಸಮಿತಿ ಸದಸ್ಯರು ಹೇಳುವಂತೆ ಈ ಮಕ್ಕಳು ಹೆಚ್ಚು ಉತ್ಸುಕತೆಯಿಂದ ಲಸಿಕೆ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಮತ್ತು ಫೆಬ್ರವರಿ ಅಂತ್ಯದ ವೇಳೆ ಎರಡನೇ ಡೋಸ್ ಲಸಿಕೆ ನೀಡಿಕೆಯೂ ಮುಗಿಯುತ್ತದೆ ಎಂದು ಸಮಿತಿ ತಿಳಿಸಿದೆ.
ಫೆಬ್ರವರಿ ಅಷ್ಟರಲ್ಲಿ ಈ ವಯೋಮಾನದ ಮಕ್ಕಳಿಗೆ ಲಸಿಕೆ ನೀಡಿಕೆ ಮುಗಿದರೆ ಮಾರ್ಚ್ ವೇಳೆಗೆ 12-14 ವರ್ಷದ ವಯೋಮಾನದ ಮಕ್ಕಳಿಗೆ ಲಸಿಕೆ ನೀಡಿಕೆ ಶುರುವಾಗುತ್ತದೆ. ಅಂದಾಜು 7.4ಕೋಟಿ ಮಕ್ಕಳು ಅಭಿಯಾನದ ಭಾಗವಾಗಲಿದ್ದಾರೆ ಎಂದು ಸಮಿತಿ ಸದಸ್ಯರೊಬ್ಬರು ತಿಳಿಸಿದ್ದಾರೆ.
ದೇಶದಲ್ಲಿ ಇಲ್ಲಿಯವರೆಗೂ 157.20 ಕೋಟಿ ಜನರಿಗೆ ಮೊದಲ ಹಾಗೂ ಎರಡನೇ ಡೋಸ್ ಲಸಿಕೆಯನ್ನು ನೀಡಲಾಗಿದೆ. ಕಳೆದ ವರ್ಷ ಜನವರಿ 16ರಂದು ದೇಶದಲ್ಲಿ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಲಾಗಿತ್ತು. ಮೊದಲ ಹಂತದಲ್ಲಿ ಆರೋಗ್ಯ ಇಲಾಖೆಯ ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆಯನ್ನು ನೀಡಲಾಗಿತ್ತು ಮತ್ತು ಆ ನಂತರ 60+, 45+ ಮತ್ತು 18+ ವಯೋಮಾನದವರಿಗೆ ಲಸಿಕೆಯನ್ನು ನೀಡಲಾಗಿತ್ತು.