ಇಡೀ ಪ್ರಪಂಚವೇ ಇದೀಗ ಕೋವಿಡ್ ವಿರುದ್ಧ ಯುದ್ಧದಲ್ಲಿ ತೊಡಗಿದೆ. ಎಲ್ಲಾ ಕಡೆ ವಿಷಾದದ ಸುದ್ದಿಗಳೇ ಬರುತ್ತಿರುವಾಗ ಇಂದು ಜಾಗತಿಕ ಮಟ್ಟದಲ್ಲಿ ಎರಡು ಆಶಾದಾಯಕ ಬೆಳವಣಿಗೆಯಾಗಿದೆ ಎಂದು ನಿರ್ದೇಶಕ ಕವಿರಾಜ್ ತಮ್ಮ ಫೇಸ್ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಮೊದಲನೆಯದಾಗಿ ಇಸ್ರೇಲ್ ತನ್ನ ದೇಶದಲ್ಲಿ ಮಾಸ್ಕ್ ಕಡ್ಡಾಯ ಎನ್ನುವ ನಿಯಮವನ್ನು ಹಿಂಪಡೆದಿದೆ. ಅಲ್ಲೀಗ ಮಾಸ್ಕ್ ಧರಿಸದೆ ಮುಕ್ತವಾಗಿ ಓಡಾಡಬಹುದು. ಆ ದೇಶ ಈಗಾಗಲೇ ತನ್ನ ಜನಸಂಖ್ಯೆಯ 56% ಜನರಿಗೆ ವ್ಯಾಕ್ಸಿನ್ ಒದಗಿಸಿ ಇಂತಹದೊಂದು ಬೆಳವಣಿಗೆಗೆ ಮುನ್ನುಡಿ ಹಾಡಿದೆ.
ಎರಡನೆಯದಾಗಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ನಡುವೆ ಪ್ರಯಾಣಿಸುವವರಿಗೆ ಈ ತನಕ ಇದ್ದ 12 ದಿನಗಳ ಕ್ವಾರಂಟೈನ್ ಕಡ್ಡಾಯ ಎಂಬ ನಿಯಮವನ್ನು ಹಿಂಪಡೆಯಲಾಗಿದೆ . ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ನಡುವಿನ ಪ್ರಯಾಣಿಕರು ಇದೀಗ ಮುಕ್ತವಾಗಿ ಎರಡೂ ದೇಶಗಳಲ್ಲಿ ಸಂಚರಿಸಬಹುದು.
ಇವೆರೆಡೂ ಕಡು ಕತ್ತಲೆಯಲ್ಲಿ ದೂರದಲ್ಲಿ ಕಂಡ ದೀಪಗಳಂತೆ ಜಗತ್ತು ಮತ್ತೆ ಮೊದಲಿನಂತೆ ಮುಕ್ತವಾಗಲಿದೆ ಎಂಬ ಆಶಾಭಾವನೆಯ ಮೇಲೆ ಬೆಳಕು ಚೆಲ್ಲಿ ಭರವಸೆ ಮೂಡಿಸುತ್ತಿವೆ ಎಂದು ಕವಿರಾಜ್ ತಿಳಿಸಿದ್ದಾರೆ.