ಮಾನವ ಸಮಾಜ ಕೋವಿಡ್ ಸೋಂಕಿನಿಂದ ತತ್ತರಿಸಿ ಹೋಗುತ್ತಿರುವ ಹೊತ್ತಲೇ, ಪ್ರಾಣಿಗಳಲ್ಲಿಯೂ ಕರೋನಾ ಮಾಹಮಾರಿ ಕಾಣಿಸಿಕೊಂಡಿದೆ. ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಹೈದರಬಾದ್ನ ನೆಹರೂ ಝೂಲಾಜಿಕಲ್ ಪಾರ್ಕ್ (NZP) ನಲ್ಲಿ ಒಟ್ಟು ಎಂಟು ಏಷ್ಯಾಟಿಕ್ ಸಿಂಹಗಳಿಗೆ ಕರೋನಾ ಪಾಸಿಟಿವ್ ಧೃಡಪಟ್ಟಿದೆ ಎಂದು ಬ್ಯುಸಿನಸ್ ಟುಡೆ ವರದಿ ಮಾಡಿದೆ.
380 ಎಕರೆ ಜಾಗದಲ್ಲಿರುವ ಮೃಗಾಲಯದಲ್ಲಿ ಈ ಸಿಂಹಗಳು ನೆಲೆಸಿದ್ದು, COVID-19 ಲಕ್ಷಣಗಳು ಕಂಡುಬಂದ ಹಿನ್ನಲೆ, ಸಿಂಹಗಳಿಗೆ ಆರ್ಟಿ-ಪಿಸಿಆರ್ ಪರೀಕ್ಷೆ ನಡೆಸಲಾಗಿತ್ತು.

ಸೆಲ್ಯುಲರ್ ಮತ್ತು ಮೊಲೆಕ್ಯೂಲರ್ ಬಯಾಲಜಿ (ಸಿಸಿಎಂಬಿ) ಕೇಂದ್ರವು ಏಪ್ರಿಲ್ 29 ರಂದು ನೆಹರೂ ಝೂಲಾಜಿಕಲ್ ಪಾರ್ಕ್ (NZP) ಅಧಿಕಾರಿಗಳಿಗೆ ತಿಳಿಸಿದೆ. ನಂತರ NZP ನಿರ್ದೇಶಕ ಡಾ. ಸಿದ್ಧಾನಂದ ಕುಕ್ರೆಟಿ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಸಿಂಹಗಳಲ್ಲಿ ಕೋವಿಡ್ ಲಕ್ಷಣಗಳು ಕಂಡುಬಂದಿರುವುದು ನಿಜ, ಸಿಸಿಎಂಬಿ ಇಂದ ಆರ್ಟಿ-ಪಿಸಿಆರ್ ವರದಿಗಳನ್ನು ನಾನಿನ್ನೂ ಸ್ವೀಕರಿಸಿಲ್ಲದ ಕಾರಣ ಈ ಬಗ್ಗೆ ನಾನೀಗ ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ ಎಂದಿದ್ದಾರೆ. ಆದಾಗ್ಯೂ ಸಿಂಹಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದಾಗಿ ತಿಳಿಸಿದ್ದಾರೆ.
ಕೆಲವು ದಿನಗಳಿಂದ ಸಿಂಹಗಳು ಆಹಾರ ಸೇವಿಸದಿರುವುದು (ಹಸಿವು ಕಡಿಮೆ) ಜ್ವರ, ಕೆಮ್ಮು ಸೇರಿದಂತೆ ಕರೋನಾ ಸೋಂಕಿನ ಲಕ್ಷಣಗಳು ಕಂಡುಬಂದಿದ್ದರಿಂದ ಅಲ್ಲಿನ ಪಶು ವೈದ್ಯರು NZP ಅಧಿಕಾರಿಗಳಿಗೆ ತಿಳಿಸುತ್ತಾರೆ. ತಕ್ಷಣ ಎಚ್ಚೆತ್ತು ಕೊಂಡ ಅಧಿಕಾರಿಗಳು ಸಿಂಹಗಳ ಮಾದರಿ ತರಿಸಿಕೊಂಡು ಹೈದರಾಬಾದ್ನ ಸಿಸಿಎಂಬಿ ಕೇಂದ್ರಕ್ಕೆ ಕಳುಹಿಸಿ ಕೊಟ್ಟಿದ್ದರು.

40 ಎಕರೆ ಜಾಗದಲ್ಲಿರುವ ಲಯನ್ ಸಫಾರಿಯಲ್ಲಿ ಒಟ್ಟು 12 ಸಿಂಹಗಳಿದ್ದು, ಅದರಲ್ಲಿ 4 ಗಂಡು ಮತ್ತು 4 ಹೆಣ್ಣು ಸಿಂಹಗಳಿಗೆ ಒಟ್ಟು 8 ಸಿಂಹಗಳಿಗೆ ಕರೋನಾ ಪಾಸಿಟಿವ್ ಇರುವುದನ್ನು ಸೆಲ್ಯುಲರ್ ಮತ್ತು ಮೊಲೆಕ್ಯೂಲರ್ ಬಯಾಲಜಿ (ಸಿಸಿಎಂಬಿ ) ತಿಳಿಸಿದೆ.

ಈ ನಿಟ್ಟಿನಲ್ಲಿ ದೇಶಾದ್ಯಂತ ಮೃಗಾಲಯಗಳಲ್ಲಿಯೂ ಹೆಚ್ಚಿನ ಭದ್ರತೆಗೆ ಮುಂದಾಗಿದ್ದು, ವನ್ಯಜೀವಿಗಳ ರಕ್ಷಣಾ ಕಾರ್ಯದಲ್ಲಿ ತೊಡಗಿರುವವರು ಜಾಗೃತರಾಗಿರುವಂತೆ ಸೂಚಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಪ್ರಾಣಿಗಳಲ್ಲೂ ಕೂಡ ಕೋವಿಡ್-19 ಸೋಂಕು ಕಾಣಿಸಿಕೊಂಡಿದೆ ಎಂದು ಸುದ್ದಿ ಬರುತ್ತಿದ್ದು, ತಾವು ರಕ್ಷಣೆ ಮಾಡುವ ವೇಳೆ ಎಲ್ಲಾ ರೀತಿಯ ಮುಂಜಾಗ್ರತೆ ಕ್ರಮವಹಿಸುವುದು ಹಾಗು ಪ್ರಾಣಿಗಳ ರಕ್ಷಣೆ ಕಾರ್ಯಾಚರಣೆ ಮಾಡಿದ ಸಂದರ್ಭದಲ್ಲಿ ರಕ್ಷಣೆಗೆ ಕರೆ ಮಾಡಿದ ಸಾರ್ವಜನಿಕರ ಮಧ್ಯೆ ಸಾಮಾಜಿಕ ಅಂತರ ಮತ್ತು ಕರೆ ಮಾಡಿದವರ ಹಿನ್ನೆಲೆ ತಿಳಿದುಕೊಂಡು ಜಾಗೃತೆ ವಹಿಸುತಕ್ಕದ್ದು ಎಂದು ವನ್ಯಜೀವಿ ಪರಿಪಾಲಕರು ಬೆಂಗಳೂರು ನಗರ ವಿಭಾಗ ಮತ್ತು ಅರಣ್ಯ ಇಲಾಖೆ ಕರ್ನಾಟಕ ಸರ್ಕಾರದ ಮುಖ್ಯಸ್ಥರಾದ ಪ್ರಸನ್ನ ಕುಮಾರ್ ತಿಳಿಸಿದ್ದಾರೆ.
