ದೇಶದ ತೆರಿಗೆ ಕಾನೂನುಗಳು ಸರಳವಾದಷ್ಟು ಸಾಮಾನ್ಯರಿಗೆ ಅನುಕೂಲವಾಗಲಿದೆ. ಹೆಚ್ಚು ತೆರಿಗೆ ಸಂಗ್ರಹವಾಗುತ್ತಿದ್ದರೆ, ದೇಶ ಅಭಿವೃದ್ಧಿ ಆಗುತ್ತಿದೆ ಎಂಬುದರ ಸಂಕೇತ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶನಿವಾರ (ಆಗಸ್ಟ್ 5) ಅಭಿಪ್ರಾಯಪಟ್ಟರು.
ಬೆಂಗಳೂರಿನಲ್ಲಿ ರಾಷ್ಟ್ರೀಯ ತೆರಿಗೆ ಸಲಹೆಗಾರರ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, “ಮನುಷ್ಯನ ಆರ್ಥಿಕ ಬೆಳವಣಿಗೆ ಹೊಂದಲ ಬಯಸುತ್ತಾನೆ. ನಾನು ಹಣಕಾಸು ಸಚಿವನಾಗಿ ಅಧಿಕಾರ ಸ್ವೀಕರಿಸಿದಾಗ ಆರ್ಥಿಕ ಪರಿಸ್ಥಿತಿ ಸರಿ ಇರಲಿಲ್ಲ” ಎಂದು ಹೇಳಿದರು.
“ಮೂರು ತಿಂಗಳಲ್ಲಿ ಶೇ 70 ರಷ್ಟು ಆದಾಯ ಹೆಚ್ಚಳ ಮಾಡಿದೆ. ರಾಜ್ಯದ ಆದಾಯ ಹೆಚ್ಚಿಸಿ ಎರಡು ವರ್ಷದ ಅವಧಿಯಲ್ಲಿ ಬಜೆಟ್ ಮಂಡನೆ ಮಾಡಿದೆ. ಈಗಿನ ಸರ್ಕಾರ ಉಚಿತ ಯೋಜನೆಗಳಿಗೆ ಹೆಚ್ಚಿನ ಹಣ ವೆಚ್ಚ ಮಾಡುತ್ತಿದ್ದು, ಸರ್ಕಾರಕ್ಕೆ ಆದಾಯ ಕಡಿಮೆಯಾಗುತ್ತದೆ” ಎಂದು ಬಸವರಾಜ ಬೊಮ್ಮಾಯಿ ಟೀಕಿಸಿದರು.
ರಾಜ್ಯದ ಆರ್ಥಿಕತೆ ಹೆಚ್ಚಿಸಲು ಸಹಕಾರ ನೀಡಿದ ತೆರಿಗೆದಾರರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಆರ್ಥಿಕತೆ ಬೆಳವಣಿಗೆಯಲ್ಲಿ ತೆರಿಗೆದಾರರ ಪಾತ್ರ ಮಹತ್ವದ್ದಾಗಿದೆ. ಅಂತಿಮವಾಗಿ ದೇಶದ ಅಭಿವೃದ್ಧಿ ಆಗಬೇಕು. ಅದರಲ್ಲಿ ತೆರಿಗೆದಾರರ ಪಾತ್ರ ಮುಖ್ಯವಾಗಿದೆ ಎಂದು ತಿಳಿಸಿದರು.
ಆರ್ಥಿಕತೆ ಯಾವುದೇ ಒತ್ತಡವಿಲ್ಲದೇ ಬೆಳೆಯುವಂತಾಗಬೇಕು. ಆಗ ಮಾತ್ರ ಪ್ರಧಾನಿ ನರೇಂದ್ರ ಮೋದಿಯವರ ಐದು ಟ್ರಿಲಿಯನ್ ಡಾಲರ್ ಆರ್ಥಿಕತೆ ಗುರಿ ಮುಟ್ಟುವ ಕನಸು ಸಾಧ್ಯವಾಗಲಿದೆ. ಆರಂಭದ ದಿನಗಳಲ್ಲಿ ಬಹುತೇಕರು ಜಿಎಸ್ಟಿ ಯನ್ನು ವಿರೋಧಿಸಿದ್ದರು. ಆದರೆ ಈಗ ಎಲ್ಲರು ಒಪ್ಪಿಕೊಂಡಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ಸಂಗ್ರಹವಾಗುತ್ತಿದೆ ಎಂದು ಬಸವರಾಜ ಬೊಮ್ಮಾಯಿ ವಿವರಿಸಿದರು.
ಈ ಸುದ್ದಿ ಓದಿದ್ದೀರಾ? ಸೌಜನ್ಯ ಪ್ರಕರಣ | ಭಕ್ತರ ಸೋಗಿನಲ್ಲಿ ಬಂದರೆ ಗೂಂಡಾಗಳು..!?
ಆರ್ಥಿಕ ತಜ್ಞರು ಜಿಡಿಪಿಯನ್ನು ಕ್ಲಿಷ್ಟಮಯಗೊಳಿಸುತ್ತಾರೆ. ಕೆಲವರಿಗೆ ಕಾನೂನಿನ ಅರಿವಿಲ್ಲದೆ ತೆರಿಗೆ ಕಟ್ಟದೇ ಉಳಿಯುತ್ತಾರೆ. ಕೆಲವರಿಗೆ ಕಾನೂನಿನ ಮಾಹಿತಿ ಇದ್ದರೂ ಅದರಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ಸಣ್ಣವರು ಹೆಚ್ಚು ಪ್ರಾಮಾಣಿಕವಾಗಿ ತೆರಿಗೆ ಕಟ್ಟುತ್ತಾರೆ. ಅವರಿಗೆ ಒಂದು ಸಾವಿರ ರೂಪಾಯಿ ಹೆಚ್ಚಿಗೆ ತೆರಿಗೆ ಕಟ್ಟಿ ಎಂದರೆ ಕಟ್ಟುತ್ತಾರೆ. ಆದರೆ, ದೊಡ್ಡ ವ್ಯಕ್ತಿಗಳಿಗೆ ಒಂದು ಕೋಟಿ ರೂ. ತೆರಿಗೆ ಹೆಚ್ಚಾದರೂ ಸಮಸ್ಯೆ ಎದುರಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
“ತೆರಿಗೆ ಕಾನೂನುಗಳು ಸರಳವಾಗಬೇಕು. ದೇಶದ ಆರ್ಥಿಕತೆಯನ್ನು ತೆರಿಗೆ ಸಂಗ್ರಹದ ಮೂಲಕ ಅಳೆಯಲಾಗುವುದು. ತೆರಿಗೆ ಸಂಗ್ರಹ ಹೆಚ್ಚಾದರೆ ದೇಶ ಅಭಿವೃದ್ಧಿಯಾಗುತ್ತಿದೆ ಎಂದು ಅರ್ಥ. ವ್ಯಾಪಾರ ಮತ್ತು ತತ್ವಜ್ಞಾನದಲ್ಲಿ ಲಾಭ ನಷ್ಟದ ಲೆಕ್ಕ ತದ್ವಿರುದ್ದವಾಗಿದ್ದು, ವ್ಯಾಪಾರದಲ್ಲಿ ಪಾಪ ಪುಣ್ಯ, ತತ್ವಜ್ಞಾನದಲ್ಲಿ ಲಾಭನಷ್ಟದ ಲೆಕ್ಕ ಹಾಕಬೇಕು ಎಂದು ಬಸವರಾಜ ಬೊಮಾಯಿ ಸಲಹೆ ನೀಡಿದರು.






