ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಸದ್ಯ ಚುನಾವಣೆ ವಿಚಾರವೊಂದೇ ಚಾಲ್ತಿಯಲ್ಲಿದೆ. ಅಭ್ಯರ್ಥಿಗಳ ಪಟ್ಟಿ ಬಿಡುಗಡೆ, ಟಿಕೆಟ್ ವಂಚಿತರ ಬಂಡಾಯ, ಪಕ್ಷಾಂತರ ಕಾರ್ಯಕ್ರಮಗಳು ಹೀಗೆ ರಾಜಕೀಯವಾಗಿ ರಾಜ್ಯದಲ್ಲಿ ದಿನಕ್ಕೊಂದು ಬೆಳವಣಿಗೆಗಳು ಸಂಭವಿಸುತ್ತಿದೆ. ಜೆಡಿಎಸ್ ಈಗಾಗಲೇ 93 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದರೆ ಕಾಂಗ್ರೆಸ್ 166 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಫೈನಲ್ ಮಾಡಿದೆ.
ಇನ್ನು ಇತ್ತ ಬಿಜೆಪಿಯ ಅಭ್ಯರ್ಥಿಗಳ ಪಟ್ಟಿ ಕೂಡ ರೆಡಿಯಾಗಿದ್ದು ಇಂದು ಯಾವುದೇ ಕ್ಷಣದಲ್ಲಾದರೂ ಬಿಡುಗಡೆಗೊಳ್ಳುವ ಸಾಧ್ಯತೆ ದಟ್ಟವಾಗಿದೆ. ಎಲ್ಲಾ ಕ್ಷೇತ್ರಗಳಲ್ಲಿ ಆಂತರಿಕ ಸರ್ವೇ ನಡೆಸಿರುವ ಬಿಜೆಪಿ ಹೈಕಮಾಂಡ್ 175 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಫೈನಲ್ ಮಾಡಿದೆ ಎನ್ನಲಾಗಿದೆ .

ಇಂದು ಬೆಳಗ್ಗೆ ದೆಹಲಿಯಲ್ಲಿ ಈ ವಿಚಾರವಾಗಿ ಸಭೆ ನಡೆಯಲಿದ್ದು ಬಳಿಕ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಪಟ್ಟಿ ಬಿಡುಗಡೆ ಮಾಡಲಿದ್ದಾರೆ ಎನ್ನಲಾಗಿದೆ. ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಫೈನಲ್ ಮಾಡಲು ಪ್ರಧಾನಿ ಮೋದಿ 2 ಗಂಟೆಗಳ ಕಾಲ ವರಿಷ್ಠರ ಜೊತೆ ಸಭೆ ನಡೆಸಿದ್ದಾರೆ ಎನ್ನಲಾಗಿದೆ. ಇಂದಿನ ಪಟ್ಟಿಯಲ್ಲಿ 10ಕ್ಕೂ ಅಧಿಕ ಹಾಲಿ ಶಾಸಕರಿಗೆ ಕೊಕ್ ನೀಡಲಾಗಿದ್ದು ಪಟ್ಟಿ ಬಿಡುಗಡೆಗೂ ಮುನ್ನ ಅನೇಕರಿಗೆ ಢವ ಢವ ಶುರುವಾಗಿದೆ.