
ಪ್ರಕರಣ-1:
ಬಿಬಿಎಂಪಿ’ಯ ಕಂದಾಯ ಅಧಿಕಾರಿಯೊಬ್ಬ ಒಂದು ಜಾಗದ ಖಾತೆ ಮಾಡಿಕೊಡಲು ಒಬ್ಬ ಹಿರಿಯ ಮಹಿಳೆಯಿಂದ ಒಂದು ಲಕ್ಷ ರೂಪಾಯಿ ಲಂಚ ತೆಗೆದುಕೊಂಡು, ಏಪ್ರಿಲ್ ತಿಂಗಳಲ್ಲಿ ಮಾಡಿಕೊಡುತ್ತೇನೆ ಎಂದು ಹೇಳಿದ್ದ. ಆ ಹಿರಿಯ ನಾಗರಿಕರ ಮಗ ಇದನ್ನು Facebook’ನಲ್ಲಿ ಹಾಕಿದ್ದರು. ನಾನು ವಿಚಾರಿಸಿದೆ. ಅವರು ಒಂದಷ್ಟು ಮಾಹಿತಿ ನೀಡಿದರು. ಇಲ್ಲಿ ಆ ಹಿರಿಯ ಮಹಿಳೆ ನಮ್ಮ ಮಾತು ಕೇಳುವ ಮತ್ತು ದೂರು ನೀಡಲು ಮುಂದಾಗುವ ಬಗ್ಗೆ ಖಾತರಿ ಇರಲಿಲ್ಲ. ಕೊನೆಗೆ ನಾನು ವಿಷಯ ಗೊತ್ತಾದ ಮೇಲೂ ಸುಮ್ಮನಿರುವುದು ಸರಿಯಲ್ಲ ಎಂದು ಆ ಅಧಿಕಾರಿಗೆ ಫೋನ್ ಮಾಡಿ, ಈ ಕೂಡಲೇ ಲಂಚದ ಹಣವನ್ನು ಹಿಂದಿರುಗಿಸಬೇಕು ಮತ್ತು ತಡಮಾಡದೆ ಅವರ ನ್ಯಾಯಬದ್ಧ ಕೆಲಸ ಮಾಡಿಕೊಡಬೇಕು, ಇಲ್ಲವಾದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಎಚ್ಚರಿಸಿದೆ.
ಒಂದೇ ದಿನದಲ್ಲಿ ಅವರ ಹಣ ಹಿಂದಿರುಗಿಸಿದ ಆ ಖದೀಮ, ಎರಡು ತಿಂಗಳ ನಂತರ ಮಾಡಿಕೊಡುತ್ತೇನೆ ಎಂದಿದ್ದ ಕೆಲಸವನ್ನು ಎರಡೇ ಗಂಟೆಯಲ್ಲಿ ಮಾಡಿ, ಮಾರನೆಯ ದಿನ ಅವರ ಮನೆಗೇ ಹೋಗಿ ದಾಖಲೆ ತಲುಪಿಸಿ ಕ್ಷಮೆ ಕೇಳಿದ.

ಪ್ರಕರಣ-2:
ಆಸ್ತಿಯೊಂದರ ವಿಚಾರದಲ್ಲಿ ಒಂದೂರಿನ ನಗರಸಭೆಯವರು ಎರಡು ವರ್ಷದ ಹಿಂದೆ ಸುಮಾರು ಮುವ್ವತ್ತು ಸಾವಿರ ರೂಪಾಯಿ ತೆರಿಗೆ ಹಾಕಿದ್ದರು. ಕಳೆದ ವರ್ಷ ಇದ್ದಕ್ಕಿದ್ದಂತೆ ಅದೇ ಆಸ್ತಿಗೆ ಒಂದೂವರೆ ಲಕ್ಷ ತೆರಿಗೆ ಹಾಕಿ ಚಲನ್ ಕೊಟ್ಟರು. ಆಶ್ಚರ್ಯಪಟ್ಟ ಆಸ್ತಿದಾರರು ಈ ವಿಚಾರವಾಗಿ ಏನಾದರೂ ಮಾಡಬೇಕು ಎಂದು ತೆರಿಗೆ ಕಟ್ಟದೇ ಮುಂದಕ್ಕೆ ಹಾಕಿದ್ದರು. ಈಗ ವಿಧಿಯಿಲ್ಲದೆ ತೆರಿಗೆ ಕಟ್ಟಲು ಮತ್ತೆ ಹೊಸ ಚಲನ್ ಕೇಳಿದರೆ, ಹಿಂದೆ ಒಂದೂವರೆ ಲಕ್ಷ ಇದ್ದ ತೆರಿಗೆಯನ್ನು ಈಗ ಅದೇ ವರ್ಷಕ್ಕೆ ಸುಮಾರು ಎರಡೂವರೆ ಲಕ್ಷಕ್ಕೆ ಏರಿಸಿ ಹೊಸ ಚಲನ್ ಕೊಟ್ಟರು. ಆಸ್ತಿದಾರರು ನಮ್ಮ ಸಹಾಯ ಕೇಳಿದರು. ನಾನು ಸಂಬಂಧಪಟ್ಟ ಅಧಿಕಾರಿಗೆ ಫೋನ್ ಮಾಡಿ ಮಾತನಾಡಿದೆ. ಇಂದು KRS ಪಕ್ಷದ ಸೈನಿಕರು ಹೋಗಿ ಹೊಸ ಚಲನ್ ಕೇಳಿದರೆ ಈಗ ಕೇವಲ ಐದೂವರೆ ಸಾವಿರ ತೆರಿಗೆಯ ಚಲನ್ ಕೊಟ್ಟಿದ್ದಾರೆ.
ಎಷ್ಟೆಲ್ಲಾ ಮೋಸ ನಡೆಯುತ್ತಿದೆ ಎಂದರೆ ಇದರ ವ್ಯಾಪ್ತಿ, ಆಳ ಅಗಲ ಅಸದಳ.

ಅಂತಹ ಭ್ರಷ್ಟ ಮತ್ತು ನೀಚ ವ್ಯವಸ್ಥೆ ಇದು. ವಿದ್ಯಾವಂತರು ಮತ್ತು ಸಿರಿವಂತರೇ ಇದರ ಪೋಷಕರು. ಅವರೂ ಸಂತ್ರಸ್ತರೆ. ಆದರೆ ಬಡವರು ಮತ್ತು ದುರ್ಬಲರು ಬಹುದೊಡ್ಡ ಬಲಿಪಶುಗಳು.
ಬಡಿಗೆ ಮತ್ತು ಚಪ್ಪಲಿ ಹಿಡಿಯದೆ ನೀಚರು ಪಾಠ ಕಲಿಯುವ ಹಾಗೆ ಕಾಣುತ್ತಿಲ್ಲ. ಅಧಿಕಾರಿಗಳು ಬದಲಾಗದೆ ರಾಜಕಾರಣ ಬದಲಾಗಲು ಸಾಧ್ಯವೇ ಇಲ್ಲ. ಈಗಿನ ಖದೀಮ ರಾಜಕಾರಣಿಗಳು ತಮ್ಮ ಎಲ್ಲಾ ಪಾಪಕೃತ್ಯಗಳನ್ನು ಬೆನ್ನುಮೂಳೆ ಇಲ್ಲದ, ವ್ಯಕ್ತಿತ್ವ/character ಇಲ್ಲದ, ಧನದಾಹಿ ಸರ್ಕಾರಿ ಅಧಿಕಾರಿಗಳ ಮೂಲಕ ಮಾಡಿಸುತ್ತಿದ್ದಾರೆ. ಹಾಗಾಗಿ ಭ್ರಷ್ಟಾಚಾರ ನಿಲ್ಲಬೇಕು ಹಾಗೂ ಬಡವರು ಬದುಕಬೇಕು ಎಂದಾದರೆ ಮೊದಲು ಅಧಿಕಾರಿಶಾಹಿಯನ್ನು ಸರಿ ಮಾಡಬೇಕು.

KRS ಪಕ್ಷದ ಹೆಸರು ಹೇಳಿಕೊಂಡು ಅದೆಷ್ಟು ಜನ ತಮ್ಮ ಕೆಲಸ ಮಾಡಿಸಿಕೊಂಡಿದ್ದಾರೋ ಲೆಕ್ಕವಿಲ್ಲ. ಪ್ರಾಮಾಣಿಕರಿರಲಿ, ಭ್ರಷ್ಟರೂ ಕೂಡ KRS ಪಕ್ಷದ ಹೆಸರು ಹೇಳಿದರೆ ಪ್ರಾಮಾಣಿಕವಾಗಿ ಅವರ ಕೆಲಸ ಮಾಡಿಕೊಡುತ್ತಿದ್ದಾರೆ. ಅಧಿಕಾರಿವರ್ಗದಲ್ಲಿ KRS ಪಕ್ಷದ ಬಗ್ಗೆ ಗೌರವವೂ ಇದೆ, ಭಯವೂ ಇದೆ. ಹಾಗಾಗಿ J.C.B ಪಕ್ಷಗಳ ಭ್ರಷ್ಟ ಮತ್ತು ಖದೀಮ ಜನರೂ KRS ಪಕ್ಷದ ಹೆಸರನ್ನು ಬಳಸಿಕೊಂಡು ಲಂಚ ಕೊಡದೆ ರಾಜ್ಯಾದ್ಯಂತ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ಸದ್ಯಕ್ಕೆ ಇದು ಸ್ವಾಗತಾರ್ಹ ಬೆಳವಣಿಗೆಯೇ.
