ಬೆಂಗಳೂರಿನಾದ್ಯಂತ ‘ಟಾರ್ಗೆಟೆಡ್ ವ್ಯಾಕ್ಸಿನ್’ ಮಾಡಲು ಮುಂದಾಗಿರುವ ಬಿಬಿಎಂಪಿ.!!
ಕೊರೋನಾ ಮೂರನೇ ಅಲೆ ತಡೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪ್ಲ್ಯಾನ್ವೊಂದನ್ನು ರೂಪಿಸಿದೆ. ನಗರದಲ್ಲಿ ವಾಸವಿರುವ ಪ್ರತಿಯೊಬ್ಬರಿಗೂ ಲಸಿಕೆ ಕೊಡುವ ಉದ್ದೇಶ ಹೊಂದಿರುವ ಬಿಬಿಎಂಪಿ, ಆದ್ಯತೆ ಮೇರೆಗೆ ಲಸಿಕೆ ಹಂಚಿಕೆ ಮಾಡಲು ಟಾರ್ಗೆಟೆಡ್ ವ್ಯಾಕ್ಸಿನ್ ಮಾಡಲು ಮುಂದಾಗಿದೆ. SERO ಸಮೀಕ್ಷೆ ಆದರಿಸಿ ನಗರದಲ್ಲಿ ಟಾರ್ಗೆಟೆಡ್ ವ್ಯಾಕ್ಸಿನ್ ನಡೆಸಲಿರುವ ಪಾಲಿಕೆ. ಮೊದಲಿಗೆ ನಗರದ ಯಾವ ವಾರ್ಡನಲ್ಲಿ ಕಡಿಮೆ ವ್ಯಾಕ್ಸಿನ್ ಆಗಿದೆ ಎಂಬುದನ್ನು ಗುರುತಿಸಿ ಅಂತಹ ಏರಿಯಾಗಳಿಗೆ ಆಧ್ಯತೆ ಮೇರೆಗೆ ಪಾಲಿಕೆ ಇನ್ಮುಂದೆ ಲಸಿಕೆ ಹಂಚಿಕೆ ಮಾಡಲಿದೆ. ಆರಂಭಿಕ ಹಂತದಲ್ಲಿ ಒಟ್ಟು ನಗರದ 30 ವಾರ್ಡ್ ಗಳಲ್ಲಿ ಬಿಬಿಎಂಪಿಯ ಟಾರ್ಗೆಟೆಡ್ ವ್ಯಾಕ್ಸಿನ್ ಅಭಿಯಾನ ನಡೆಯಲಿದೆ. ಆದರೆ ತಾಂತ್ರಿಕ ಕಾರಣದಿಂದ ಆ ವಾರ್ಡ್ ಗಳ ಹೆಸರನ್ನು ಬಹಿರಂಗ ಪಡಿಸಲು ಪಾಲಿಕೆ ಹಿಂದೇಟು ಹಾಕಿದೆ.
ಏನಿದು ಬಿಬಿಎಂಪಿಯ ಟಾರ್ಗೆಟೆಡ್ ವ್ಯಾಕ್ಸಿನ್.!?
– ಕಡಿಮೆ ಲಸಿಕೆ ಹಂಚಿಕೆಯಾಗಿರುವ ಪ್ರದೇಶಗಳಿಗೆ ಆಧ್ಯತೆ ಮೇರೆಗೆ ಲಸಿಕೆ
– ಹೆಚ್ಚು ಸೋಂಕು ಇರುವ ವಾರ್ಡ್ ಗಳಲ್ಲಿ ಪೂರ್ಣಪ್ರಮಾಣದಲ್ಲಿ ಲಸಿಕೆ ಹಂಚಿಕೆ
– ಮೊದಲ ಡೋಸ್ ಲಸಿಕೆ ಕಡಿಮೆ ಹಂಚಿಕೆ ಆಗಿರುವ ವಾರ್ಡ್ಗಳಿಗೆ ಆದ್ಯತೆ
– ಎರಡನೇ ಡೋಸ್ ಕಡಿಮೆ ಹಂಚಿಕೆಯಾದ ಪ್ರದೇಶಗಳಲ್ಲಿ, 45 ವರ್ಷ ಮೇಲ್ಪಟ್ಟವರು ಹೆಚ್ಚಿರುವ ಪ್ರದೇಶಗಳಲ್ಲಿ ಪರಿಣಾಮಕಾರಿಯಾಗಿ ಲಸಿಕೆ ಹಂಚಿಕೆ
– ಪಾಸಿಟಿವಿಟಿ ದರ ಹೆಚ್ಚಿರುವ ವಾರ್ಡ್ಗಳಲ್ಲಿ ಎರಡು ಡೋಸ್ ಹಂಚಿಕೆ ಗುರಿ
– ಸ್ಲಂ, ಮಾರ್ಕೆಟ್ ಏರಿಯಾಗಳು ಹೊಂದಿರುವ ವಾರ್ಡ್ ಜನರಿಗೆ ಕಡ್ಡಾಯವಾಗಿ ಲಸಿಕೆ ಹಂಚಿಕೆ
– ಜನ ಸಂಖ್ಯೆ ಹೆಚ್ಚು ಹೊಂದಿರುವ ವಲಯಗಳಲ್ಲಿ ಆದ್ಯತೆ ಮೇರೆಗೆ ಲಸಿಕೆ
ಹೇಗೆ ನಡೆಯಲಿದೆ ಬಿಬಿಎಂಪಿಯ ಟಾರ್ಗೆಟೆಡ್ ವ್ಯಾಕ್ಸಿನ್.!?
– ವಾರ್ಡ್ ಮಟ್ಟದಲ್ಲಿ ಟಾರ್ಗೆಟೆಡ್ ವ್ಯಾಕ್ಸಿನ್ಗೆಂದೇ ವಿಶೇಷ ಕ್ಯಾಂಪ್
– ಪ್ರತಿ ವಾರ್ಡ್ ಗೆ ತಂಡ ರಚಿಸಿ, ವ್ಯಾಕ್ಸಿನ್ ಮಾಹಿತಿ ಕಲೆ
– ಸ್ಲಂ ಏರಿಯಾಗಳಲ್ಲಿ ಲಸಿಕೆ ಹಂಚಿಕೆ ಮಾಡಲು ವಿಶೇಷ ತಂಡ ರಚನೆ
– ಜನರ ಯಾವುದೇ ಮಾಹಿತಿ ಪತ್ರ, ಯಾವ ದಾಖಲೆಯ ಅಗತ್ಯವೂ ಇಲ್ಲ
– ಕೇಂದ್ರ ಸರ್ಕಾರದ ಉಚಿತ ಲಸಿಕೆ ಅಭಿಯಾನದ ಅಡಿಯಲ್ಲೇ ಬಿಬಿಎಂಪಿ ಟಾರ್ಗೆಟೆಡ್ ವ್ಯಾಕ್ಸಿನ್ ಅಭಿಯಾನ
ಇನ್ನು SERO ಸಮೀಕ್ಷೆ ಮೂಲಕ ಯಾವ ವಾರ್ಡನಲ್ಲಿ ಮುಂದೆ ಹೆಚ್ಚು ಸೋಂಕು ಕಾಣಿಸಿಕೊಳ್ಳಬಹುದು ಎಂದು ಅಂದಾಜು ಮಾಡಿ ಅಂಥಾ ವಾರ್ಡ್ಗಳಿಗೂ ಲಸಿಕೆ ಹಂಚಿಕೆಯಾಗಲಿದೆ. ಸದ್ಯ ಪಾಲಿಕೆಯೇ ಕೊಟ್ಟಿರುವ ಮಾಹಿತಿ ಪ್ರಕಾರ ನಗರದ ಮೂರು ವಲಯಗಳಲ್ಲಿ ಅತಿ ಕಡಿಮೆ ಲಸಿಕೆ ಹಂಚಿಕೆಯಾಗಿದೆ. ಪಾಲಿಕೆ ವ್ಯಾಪ್ತಿಯ ಬೆಂಗಳೂರು ಪಶ್ಚಿಮ, ದಕ್ಷಿಣ, ಪೂರ್ವ ವಲಯಗಳಲ್ಲಿ ಈವರೆಗೆ ಆಗಿರುವುದು 60-65% ಲಸಿಕೆ ಹಂಚಿಕೆ ಮಾತ್ರ. ಹೀಗಾಗಿ ಈ ಮೂರು ವಲಯಗಳ 30 ವಾರ್ಡ್ಗಳಲ್ಲೇ ಆರಂಭಿಕವಾಗಿ ಟಾರ್ಗೆಟೆಡ್ ವ್ಯಾಕ್ಸಿನ್ ಅಭಿಯಾನ ಶುರು ಮಾಡಲು ಪಾಲಿಕೆ ಮುಂದಾಗಿದೆ. ಆದರೆ ಇನ್ನೂ ಕೂಡ ಟಾರ್ಗೆಟೆಡ್ ವ್ಯಾಕ್ಸಿನ್ ಅಭಿಯಾನಕ್ಕೆ ಪಾಲಿಕೆ ಚಾಲನೆ ನೀಡಿಲ್ಲ. ಕೇಂದ್ರ ಸರ್ಕಾರದಿಂದ ಲಸಿಕೆ ಪೂರೈಕೆಯಲ್ಲಿ ಅಡೆತಡೆಗಳು ಎದುರಾಗುತ್ತಿದೆ. ಮುಂದಿನ ವಾರ ಸಮರ್ಪಕವಾಗಿ ಲಸಿಕೆ ಪಡೆದುಕೊಂಡು, ಟಾರ್ಗೆಟೆಡ್ ವ್ಯಾಕ್ಸಿನ್ ಗೆ ಬಿಬಿಎಂಪಿ ಚಾಲನೆ ನೀಡಲಿದೆ. ಈ ಮೂಲಕ ಬಿಬಿಎಂಪಿ ಕೊರೋನಾ ಮೂರನೇ ಅಲೆ ವಿರುದ್ದ ಸಮರ ಸಾರಿದೆ.