ದಿನ ದಿನಕ್ಕೆ ಕೊರೋನಾ ಸೋಂಕು ಹೆಚ್ಚಳ ಹಿನ್ನೆಲೆ ಸರ್ಕಾರ ಪರಿಷ್ಕೃತ ಕೊರೋನಾ ಮಾರ್ಗಸೂಚಿ ಬಿಡುಗಡೆ ಮಾಡಿದೆ. ತಜ್ಞರ ಹಾಗೂ ಅಧಿಕಾರಿಗಳ ಜೊತೆಗಿನ ಸಭೆ ಬಳಿಕ ಪರಿಷ್ಕೃತ ಮಾರ್ಗಸೂಚಿ ಬಿಡುಗಡೆಯಾಗಿದೆ. ಹಬ್ಬ ಹರಿದಿನಗಳಿಗೆ ಈಗಾಗಲೇ ವಿಶೇಷ ಮಾರ್ಗಸೂಚಿ ಸರ್ಕಾರ ಪ್ರಕಟಿಸಿದೆ.
ಕೊರೋನಾ ಪರಿಷ್ಕೃತ ಮಾರ್ಗಸೂಚಿಯ ಪ್ರಮುಖಾಂಶಗಳೇನು?
ಆಯಾ ಜಿಲ್ಲೆಗಳಲ್ಲಿ ನಿರ್ದಿಷ್ಟ ತಾಲೂಕು ಮಟ್ಟದ ಸೋಂಕಿನ ಪ್ರಮಾಣ ಗಮನದಲ್ಲಿಟ್ಟುಕೊಂಡು ಜಿಲ್ಲಾಧಿಕಾರಿಗಳಿಗೆ ನಿರ್ಬಂಧ ಹೇರುವ ಅವಕಾಶ ನೀಡಲಾಗಿದೆ. ಶಾಲೆ, ಕಾಲೇಜು, ವಸತಿ ಶಾಲೆ ಸೇರಿಂದತೆ ಇನ್ನಿತರ ಶಿಕ್ಷಣ ಸಂಸ್ಥೆಗಳನ್ನು ತರೆಯುವ ಅಥವಾ ಮುಚ್ಚುವ ಅಧಿಕಾರ ಜಿಲ್ಲಾಧಿಕಾರಿಗಳ ವಿವೇಚನೆಗೆ ಬಿಟ್ಟಿದ್ದು. ಮೆರವಣಿಗೆ, ಪ್ರತಿಭಟನೆ, ಧರಣಿ ಎಲ್ಲದಕ್ಕೂ ಮತ್ತೆ ನಿರ್ಬಂಧ ಹೇರಲಾಗಿದೆ. ತೆರೆದ ಜಾಗದಲ್ಲಿ ಮದುವೆ ಕಾರ್ಯಕ್ರಮಕ್ಕೆ 200 ಮಂದಿ, ಮುಚ್ಚಿದ ಜಾಗದಲ್ಲಿ 100 ಮಂದಿಗೆ ಅವಕಾಶ ನೀಡಿ ಆದರೆ CAB (Covid Appropriate Behavior) ಕಡ್ಡಾಯ ಮಾಡಲಾಗಿದೆ. ಕೇರಳ, ಮಹಾರಾಷ್ಟ್ರ, ಗೋವಾ ಗಡಿ ಭಾಗದಲ್ಲಿ ಮತ್ತಷ್ಟು ಬಿಗಿ ಕ್ರಮಕ್ಕೆ ಸೂಚನೆ ನೀಡುವುದರ ಜೊತೆಗೆ ಈಗಾಗಲೇ ಆರೋಗ್ಯ ಇಲಾಖೆ ಈ ಬಗ್ಗೆ ಹೊರಡಿಸಿರುವ ಮಾರ್ಗಸೂಚಿ ಪಾಲನೆಗೆ ತಾಕೀತು ಮಾಡಿದೆ.
ಇನ್ನು ಸೋಂಕು ಹೆಚ್ಚಳವಾಗಿರುವ ಪ್ರದೇಶಗಳಲ್ಲಿ ಸೋಂಕು ಹತೋಟಿಗೆ ತರಲು 144 ಸೆಕ್ಷನ್ ಜಾರಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಆಯಾ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿ, ಪೊಲೀಸ್ ಕಮಿಷನರ್ ಗಳು 144 ಸೆಕ್ಷನ್ ಜಾರಿ ಮಾಡಲು ಸ್ವತಂತ್ರರು ಎಂದು ಹೇಳಿದೆ. ಮೇಲಿನ ಕಾನೂನು ಉಲ್ಲಂಘಿಸುವವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 51,60 – 2005 ಹಾಗೂ IPC 188 ಕ್ರಮಕ್ಕೆ ಸೂಚನೆ ನೀಡಲಾಗಿದೆ. ಈ ಪರಿಷ್ಕೃತ ಮಾರ್ಗಸೂಚಿ ಜನವರಿ 31ರ ಬೆಳಗ್ಗೆ 5ರ ವರೆಗೆ ಜಾರಿಯಲ್ಲಿರಲಿದೆ ಎಂದು ಸುತ್ತೋಲೆಯಲ್ಲಿ ತಿಳಿಸಿದೆ.
ವೈಕುಂಠ ಏಕಾದಶಿ & ಮಕರ ಸಂಕ್ರಾತಿಗೆ ಮಾರ್ಗಸೂಚಿ ಬಿಡುಗಡೆ!
ಓಮೈಕ್ರಾನ್ ಹಾಗೂ ಕೊರೋನಾ ಹೆಚ್ಚಳ ಹಿನ್ನೆಲೆ ಹಬ್ಬಕ್ಕೂ ವಿಶೇಷ ಮಾರ್ಗಸೂಚಿ ಹೊರಡಿಸಲಾಗಿದೆ. ವೈಕುಂಠ ಏಕಾದಶಿ ಹಾಗೂ ಸಂಕ್ರಾಂತಿ ಹಬ್ಬಗಳ ಪ್ರಯುಕ್ತ ದೇವಾಲಯದ ಶಾಸ್ತ್ರ, ಸಂಪ್ರದಾಯದಂತೆ ದೇವಾಲಯಗಳ ಒಳ ಆವರಣದಲ್ಲಿ ಮಾತ್ರ ದೈನಂದಿನ ಪೂಜಾ ಕೈಂಕರ್ಯಗಳನ್ನು ನಡೆಸಲು ಅನುಮತಿ ನೀಡಲಾಗಿದೆ. ವೈಕುಂಠ ಏಕಾದಶಿ ದಿನದಂದು ಈಗಾಗಲೇ ನಿಗದಿ ಪಡಿಸಿರುವಂತೆ ಪೂರ್ಣ ಪ್ರಮಾಣದ ಕೋವಿಡ್-19 ಲಸಿಕೆ ಪಡೆದ 50 ಜನರಿಗೆ ಮಾತ್ರ ಒಂದು ಬಾರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಇತರ ಯಾವುದೇ ಪೂಜೆ, ಕಾರ್ಯಕ್ರಮಕ್ಕೆ ಅವಕಾಶವಿಲ್ಲ. ಹಬ್ಬಗಳ ಆಚರಣೆಯ ಸಲುವಾಗಿ ಎಲ್ಲಾ ರೀತಿಯ ಮೆರವಣಿಗೆ, ಮನೋರಂಜನಾ ಕಾರ್ಯಕ್ರಮಗಳಿಗೆ ನಿರ್ಬಂಧ ಹೇರಲಾಗಿದೆ.
ಬೆಂಗಳೂರು ವ್ಯಾಪ್ತಿಯಲ್ಲಿ ಮುಖ್ಯ ಆಯುಕ್ತರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ವ್ಯಾಪ್ತಿಯಲ್ಲಿ ಜಿಲ್ಲಾಧಿಕಾರಿಗಳು ಸ್ಥಳೀಯ ಕೋವಿಡ್ ಪರಿಸ್ಥಿತಿಯನ್ನು ಅವಲೋಕಿಸಿ ಇನ್ನೂ ಹೆಚ್ಚಿನ ನಿರ್ಬಂಧಗಳನ್ನು ವಿಧಿಸಲು ಸ್ವತಂತ್ರರು ಎಂದು ಸರ್ಕಾರ ಸ್ಪಷ್ಟವಾಗಿಸಿದೆ. ಈ ಕ್ರಮಗಳನ್ನು ಉಲ್ಲಂಘಿಸುವ ಯಾವುದೇ ಆಡಳಿತ ಮಂಡಳಿಗಳು ಭಾರತ ದಂಡ ಸಂಹಿತೆಯ 188 ಪ್ರಕರಣದಡಿ ಹಾಗೂ ಅನ್ವಯ ಆಗಬಹುದಾದ ಇತರ ಕಾನೂನು ಉಪ ಬಂಧಗಳಡಿಯಲ್ಲಿನ ಕ್ರಮದ ಜೊತೆಗೆ ವಿಪತ್ತು ನಿರ್ವಹಣಾ ಅಧಿನಿಯಮ 2005 ರ ಸೆಕ್ಷನ್ 51 ರಿಂದ 60ರ ಅನ್ವಯ ಕಾನೂನು ಕ್ರಮ ಜರುಗಿಸಲು ತಾಕೀತು ಮಾಡಲಾಗಿದೆ.