ಕರೋನಾ ಎರಡನೇ ಅಲೆ ದೇಶದಲ್ಲಿ ಸಂದಿಗ್ಧ ಪರಿಸ್ಥಿತಿಯನ್ನುಂಟು ಮಾಡಿದೆ. ಬೆಡ್, ಆಕ್ಸಿಜನ್ ಇಲ್ಲದೆ ಸೋಂಕಿತರು ಸಾವನ್ನಪ್ಪುತ್ತಿದ್ದಾರೆ. ಮತ್ತೊಂದೆಡೆ ಸೋಂಕಿತರ ಅಂತ್ಯ ಸಂಸ್ಕಾರಕ್ಕೂ ಸ್ಥಳಾವಕಾಶವಿಲ್ಲದೆ ಪರದಾಡುವ ಪರಿಸ್ಥಿತಿ ಎದುರಾಗಿದೆ. ಇದೀಗಾ ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಪಕ್ಷದ ಎಲ್ಲಾ ಕಾರ್ಯಕರ್ತರಿಗೆ, ನಾಯಕರಿಗೆ ಸಾಮಾಜಿಕ ಜಾಲತಾಣದ ಮೂಲಕ ಮಹತ್ವದ ಸೂಚನೆ ಕೊಟ್ಟಿದ್ದಾರೆ.
ನಮ್ಮ ಆಡಳಿತ ವ್ಯವಸ್ಥೆ ವಿಫಲವಾಗಿದೆ. ಈ ವೇಳೆ ನಾವು ಸಾರ್ವಜನಿಕರ ಹಿತಾಸಕ್ತಿಯ ಬಗ್ಗೆ ಧ್ವನಿಯೆತ್ತಬೇಕು. ಕೋವಿಡ್ ಬಿಕ್ಕಟ್ಟಿನ ಸಂದಿಗ್ಧ ಪರಿಸ್ಥಿತಿಯಲ್ಲಿರುವ ದೇಶಕ್ಕೆ ಜವಬ್ದಾರಿಯುತ ನಾಗರೀಕರ ಅವಶ್ಯಕತೆಯಿದೆ. ಆದ್ದರಿಂದ ನಮ್ಮ ಪಕ್ಷದ ಎಲ್ಲಾ ಸಹೋದ್ಯೋಗಿಗಳು ಈ ಕೂಡಲೇ ರಾಜಕೀಯ ಕೆಲಸ ಕಾರ್ಯಗಳನ್ನು ಬದಿಗಿಟ್ಟು, ಜನತೆಯ ಸಹಾಯಕ್ಕೆ ಮುಂದಾಗಬೇಕೆಂದು ಈ ಮೂಲಕ ದೇಶವಾಸಿಗಳಿಗೆ ತೆಲೆದೂರಿದ ಸಂಕಷ್ಟವನ್ನು ಪರಿಹರಿಸೋಣ, ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮನವಿಮಾಡಿಕೊಂಡಿದ್ದಾರೆ. ಜೊತೆಗೆ ಇದು ಕಾಂಗ್ರೆಸ್ ಕುಟುಂಬದ ಧರ್ಮ ಎಂದಿದ್ದಾರೆ.
ಕರೋನಾ ಸೋಂಕಿನ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ತನ್ನೆಲ್ಲಾ ಚುನಾವಣಾ ರ್ಯಾಲಿಯನ್ನು ರದ್ದುಗೊಳಿಸಿ ರಾಹುಲ್ ಗಾಂಧಿ ಮೆಚ್ಚುಗೆ ಗಳಿಸಿದ್ದರು. ಇದೀಗ, ತಮ್ಮ ಪಕ್ಷದ ಕಾರ್ಯಕರ್ತರನ್ನು ರಾಜಕಾರಣದ ಕಾರ್ಯಗಳನ್ನು ಕೈಬಿಟ್ಟು ದೇಶವಾಸಿಗಳ ಸಹಾಯಕ್ಕೆ ಧಾವಿಸುವಂತೆ ಕರೆ ಕೊಟ್ಟಿರುವುದು ಸಾಕಷ್ಟು ಪ್ರಶಂಸೆಗೆ ಕಾರಣವಾಗಿದೆ.