ಪೊಲೀಸ್ ಠಾಣೆಗೆ ಬಂದಿದ್ದ ಮಹಿಳೆಯ ತಲೆಗೆ ಎಸ್ಐ ಓರ್ವ ಅಚಾನಕ್ಕಾಗಿ ಗುಂಡು ಹಾರಿಸಿದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಇಲ್ಲಿನ ಅಲೀಘರ್ ಠಾಣೆಯಲ್ಲಿ ಈ ದುರಂತ ಸಂಭವಿಸಿದೆ. ನಿನ್ನೆ ಮಧ್ಯಾಹ್ನ ಪಾಸ್ ಪೋರ್ಟ್ ಕುರಿತಾಗಿ ವಿಚಾರಿಸಲು ಮಹಿಳೆಯೊಬ್ಬರು ಬಂದಿದ್ದರು. ಈ ವೇಳೆ ಪೊಲೀಸ್ ಪೇದೆಯೊಬ್ಬ ಎಸ್ ಐ ಮನೋಜ್ ಶರ್ಮಾಗೆ ಬುಲೆಟ್ ತುಂಬಿದ ಪಿಸ್ತೂಲ್ ನೀಡಿದ್ದಾನೆ. ಈ ವೇಳೆ ಎಸ್ ಐ ಪಿಸ್ತೂಲ್ ನಿಂದ ಅಲ್ಲಿಯೇ ಬಳಿಯೇ ನಿಂತಿದ್ದ ಮಹಿಳೆ ತಲೆಗೆ ನೇರವಾಗಿ ಗುಂಡು ತಗುಲಿದೆ. ಪರಿಣಾಮ ಮಹಿಳೆ ಅಲ್ಲಿಯೇ ಕುಸಿದುಬಿದ್ದಿದ್ದಾರೆ. ಕೂಡಲೇ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಚಿಂತಾಜನಕ ಸ್ಥಿತಿಯಲ್ಲಿರುವ ಮಹಿಳೆಗೆ ಚಿಕಿತ್ಸೆ ಮುಂದುವರಿದಿದೆ.
ಈ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ನೋಡುಗರ ಎದೆ ಝಲ್ ಎನ್ನುವಂತೆ ಮಾಡ್ತಿದೆ.
ಘಟನೆ ಬಳಿಕ ತಲೆ ಮರೆಸಿಕೊಂಡಿದ್ದ ಎಸ್ ಐ ಮನೋಜ್ ಶರ್ಮಾರನ್ನು ಬಂಧಿಸಲಾಗಿದ್ದು, ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ ಅಲ್ಲದೆ ಆತನ ವಿರುದ್ಧ ಕ್ರಿಮಿನಲ್ ಕೇಸ್ ಕೂಡ ದಾಖಲಾಗಿದೆ.