ನಾ ದಿವಾಕರ
ಮಾನವ ಸಮಾಜದ ನಡಿಗೆಯಲ್ಲಿ, ವಿಭಿನ್ನ ಸಮಾಜಗಳು ತಾವೇ ರೂಪಿಸಿಕೊಂಡ ಕೆಲವು ಆದರ್ಶಗಳನ್ನು ʼಅನುಸರಿಸುವುದುʼ ವಾಸ್ತವ. ಆದರೆ ಸಾಮಾಜಿಕ ಉನ್ನತಿಗಾಗಿ ʼಅನುಕರಿಸುವುದುʼ ಮುಖ್ಯ. ಮತ್ತೊಂದು ಮಗ್ಗುಲಲ್ಲಿ ಚಾರಿತ್ರಿಕ ದಾರ್ಶನಿಕರು ಬಿಟ್ಟುಹೋದ ಜೀವನ ಮೌಲ್ಯಗಳನ್ನು ಅನುಕರಿಸುವುದು ವಾಡಿಕೆ. ಆದರೆ ಮೌಲ್ಯಗಳನ್ನು ʼಅಳವಡಿಸಿಕೊಳ್ಳಬೇಕುʼ. ವ್ಯಕ್ತಿ ಆರಾಧನೆಯ ವಾತಾವರಣದಲ್ಲಿ ಈ ಎರಡೂ ಅಂಶಗಳನ್ನು ಬದಿಗಿರಿಸುವ ಒಂದು ಸಮಾಜ ಅಂತಿಮವಾಗಿ ಕೇವಲ ಆಚರಣೆಗಳಲ್ಲಿ ಅಥವಾ ಆಲಂಕಾರಿಕ ನಿರೂಪಣೆಗಳಲ್ಲಿ ಸಾರ್ಥಕತೆ ಕಂಡುಕೊಳ್ಳುತ್ತದೆ. ಮೌಲ್ಯ ಮತ್ತು ಆದರ್ಶ ಎಂಬ ಉದಾತ್ತ ಚಿಂತನೆಗಳನ್ನು ಗ್ರಾಂಥಿಕ ನೆಲೆಯಿಂದ ಬೇರ್ಪಡಿಸಲಾಗದೆ ಕೇವಲ ಬೌದ್ಧಿಕ ಚರ್ಚೆ-ಪ್ರತಿಚರ್ಚೆಯಲ್ಲೇ ಕಾಲ ಕಳೆಯಬೇಕಾಗುತ್ತದೆ. ಭಾರತದ ಸಂವಿಧಾನ ಇಂದು ಈ ಸ್ಥಿತಿ ತಲುಪಿದೆ.

ವಸಾಹತು ದಾಸ್ಯದಿಂದ ವಿಮೋಚನೆ ಪಡೆದ ಸಾಂಪ್ರದಾಯಿಕ ಸಮಾಜದ ದೇಶವೊಂದು, ಭವಿಷ್ಯದ ಹಾದಿಯಲ್ಲಿ ವೈಚಾರಿಕತೆಯನ್ನು ರೂಢಿಸಿಕೊಂಡು, ಸಾಮಾಜಿಕ ಸಮಾನತೆ ಮತ್ತು ಸಮನ್ವಯತೆಯನ್ನು ಸಾಧಿಸುತ್ತಾ, ಬೌದ್ಧಿಕ ವಿವೇಕ ಮತ್ತು ಪ್ರಜ್ಞೆಯ ವಿವೇಚನೆಯನ್ನು ಪಡೆದುಕೊಳ್ಳುತ್ತಾ, ಎಲ್ಲರನ್ನೊಳಗೊಳ್ಳುವ ಸಮ ಸಮಾಜವನ್ನು ಕಟ್ಟಬೇಕು ಎಂಬ ಮಹದಾಶಯ ಹೊತ್ತ ಸಂವಿಧಾನ ಎಂಬ ಗ್ರಂಥವನ್ನು, ಭಾರತದ ಸಮಸ್ತ ಜನತೆ ತಮಗೆ ತಾವೇ ಅರ್ಪಿಸಿಕೊಂಡು 76 ವರ್ಷಗಳು ಸಂದಿವೆ. ಆಡಳಿತಾತ್ಮಕ ಪ್ರಜಾಸತ್ತೆ, ಸಾಂಸ್ಕೃತಿಕ ಸ್ವಾಯತ್ತತೆ, ಸಾಮಾಜಿಕ ಸಹಬಾಳ್ವೆ ಮತ್ತು ಆರ್ಥಿಕ ಮೇಲ್ ಚಲನೆ , ಭಾರತೀಯ ಸಂವಿಧಾನದ ಮೂಲ ಧಾತುಗಳು.

ಆಚರಣೆಯ ನೆಲೆಯಲ್ಲಿ ಸಂವಿಧಾನ
ಈ ನೆನಪಿನಲ್ಲಿ ಇಂದು ನಾವು ʼ ಸಂವಿಧಾನ ದಿನ ʼ ಆಚರಿಸುತ್ತಿದ್ದೇವೆ. ಭಾರತದ ರಾಜಕೀಯ ಭೂ ದೃಶ್ಯವನ್ನು (Political Landscape) ಹೊಸದಿಕ್ಕಿನಲ್ಲಿ ಕರೆದೊಯ್ಯುವ, ಸಾಂಸ್ಕೃತಿಕ ಮೂಲ ನೆಲೆಗಳನ್ನು (Cultural Foundations) ಹಿಂದಕ್ಕೆ ಎಳೆದೊಯ್ಯುವ, ಆರ್ಥಿಕ ಸಂರಚನೆಯನ್ನು (Economic Structure) ಪಲ್ಲಟಗೊಳಿಸುವ ಆಡಳಿತಾತ್ಮಕ ಪ್ರಯತ್ನಗಳ ನಡುವೆಯೇ, ಈ ಪರಿವರ್ತನೆಯ ಪ್ರತಿಪಾದಕರೂ ಸಹ ಇಂದು ಸಂವಿಧಾನವನ್ನು ಆರಾಧಿಸಿ, ಆಚರಿಸುತ್ತಾರೆ. ನಡೆ-ನುಡಿಯ ನಡುವಿನ ಈ ದ್ವಂದ್ವವನ್ನು ಬದಿಗಿಟ್ಟು, ನೆಲದ ವಾಸ್ತವಗಳತ್ತ (Ground realities) ಗಮನಹರಿಸಿದಾಗ, ಸಂವಿಧಾನ ಎನ್ನುವುದು ಇಂದು ಗ್ರಾಂಥಿಕವಾಗಿ ವೈಭವೀಕರಣಕ್ಕೊಳಗಾಗಿದೆ. ಆದರೆ ತಳಮಟ್ಟದ ಸಾಮಾಜಿಕ ವಾತಾವರಣದಲ್ಲಿ ಈ ಗ್ರಂಥದಲ್ಲಿ ಪ್ರತಿಪಾದಿಸಲಾಗಿರುವ ಆಡಳಿತಾತ್ಮಕ ಹಾಗೂ ಶಾಸನಾತ್ಮಕ ಮೌಲ್ಯಗಳು ಅವಗಣನೆಗೆ ಒಳಗಾಗುತ್ತಿವೆ.

ಈ ದ್ವಂದ್ವವನ್ನು ಸಾರ್ವಜನಿಕರಿಂದ ಮರೆಮಾಚುವ ಉದ್ದೇಶದಿಂದಲೇ ʼಸಂವಿಧಾನವನ್ನು ಬರೆದವರು ಯಾರು ?ʼ ಎಂಬ ಪ್ರಶ್ನೆಯನ್ನು, ಭಿನ್ನ ನಿರೂಪಣೆಗಳೊಂದಿಗೆ (Narratives) ಚಾಲ್ತಿಯಲ್ಲಿರಿಸಲಾಗುತ್ತಿದೆ. ಸಂವಿಧಾನದ ಬಗ್ಗೆ ಅಪಾರ ನಿಷ್ಠೆ ಮತ್ತು ಗೌರವ ಇರುವ ಬೌದ್ಧಿಕ ವಲಯದಲ್ಲಿ ಈ ನಿರೂಪಣೆಗಳಿಗೆ ಪ್ರತಿಕ್ರಿಯಿಸುವುದೇ ಮುಖ್ಯ ಎನಿಸುತ್ತದೆ. ಏಕೆಂದರೆ ಇಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಅವರನ್ನು ಅಪಮಾನಿಸುವ ದುರುದ್ದೇಶ ಕಾಣುತ್ತದೆ. ಆದರೆ 76 ವರ್ಷಗಳು ಕಳೆದರೂ, ನಾವಿನ್ನೂ ʼ ಸಂವಿಧಾನ ಬರೆದಿದ್ದು ಯಾರು ? ʼ ಎಂಬ ಪ್ರಶ್ನೆಯನ್ನೇ ಚರ್ಚಿಸುತ್ತಿರುವುದು ಬೌದ್ಧಿಕ ಅಪ್ರಬುದ್ಧತೆ ಅಲ್ಲವೇ ? ಇಲ್ಲಿ ಉಗಮಿಸುವ ವಾದ ಪ್ರತಿವಾದಗಳು ಚಾರಿತ್ರಿಕವಾಗಿ ಪ್ರಸ್ತುತವಾದರೂ ವರ್ತಮಾನದ ಜಟಿಲ ಸಮಸ್ಯೆ ಮತ್ತು ಸವಾಲುಗಳಿಗೆ ಮುಖಾಮುಖಿಯಾದಾಗ, ನಾವು ಇದನ್ನು ದಾಟಿ ಆಲೋಚನೆ ಮಾಡಬೇಕಿದೆ ಎನಿಸುವುದಿಲ್ಲವೇ ? ಏಕೆಂದರೆ ಸಂವಿಧಾನ ಎಂಬ ಗ್ರಂಥದಲ್ಲಿರುವುದು ಕೇವಲ ಅಕ್ಷರಗಳಲ್ಲ, ಭವಿಷ್ಯ ಭಾರತ ಅನುಸರಿಸಬೇಕಾದ, ಅಳವಡಿಸಿಕೊಳ್ಳಬೇಕಾದ, ಅನುಕರಿಸಬೇಕಾದ ಮೌಲ್ಯಗಳು, ಆದರ್ಶಗಳು ಹಾಗೂ ದೂರಗಾಮಿ ಗುರಿಗಳು.

ಈ ಉದಾತ್ತ ಚಿಂತನಾಧಾರೆಗಳು ಒಬ್ಬ ವ್ಯಕ್ತಿಯದ್ದಲ್ಲ, ಒಂದು ಸಮಾಜ ಅಥವಾ ಸಮುದಾಯದ್ದೂ ಅಲ್ಲ ಅಥವಾ ಒಂದು ನಿರ್ದಿಷ್ಟ ಗುಂಪಿನದಲ್ಲ. ಸಂವಿಧಾನ ರಚನಾ ಸಭೆಯಲ್ಲಿ ಕ್ರಿಯಾಶೀಲವಾಗಿದ್ದ ಚಿಂತನಾ ವಾಹಿನಿಗಳ ಬೆನ್ನ ಹಿಂದೆ, ಭಾರತದ ನೆಲಮೂಲ ಸಂಸ್ಕೃತಿಯನ್ನು ಸಂರಕ್ಷಿಸುವ, ಚಾರಿತ್ರಿಕ ಹಿರಿಮೆಗಳನ್ನು ಉಳಿಸಿಕೊಳ್ಳುವ, ಧಾರ್ಮಿಕ ಔದಾತ್ಯಗಳನ್ನು ಸುರಕ್ಷಿತವಾಗಿರಿಸುವ ಹಾಗೂ ತಳಸಮಾಜದ ಜನ ಸಂಸ್ಕೃತಿಯನ್ನು (Peoplesʼs Culture) ಸ್ವತಂತ್ರ ಭಾರತದ ಜೀವ ನಾಡಿಗಳನ್ನಾಗಿ ಪ್ರವಹಿಸುವಂತೆ ಮಾಡುವ ಮನಸ್ಸುಗಳಿದ್ದವು. ಈ ಎಲ್ಲ ಮನಸ್ಸುಗಳನ್ನೂ ಕ್ರೋಢೀಕರಿಸಿ, ತಮ್ಮದೇ ಆದ ಸಮ ಸಮಾಜದ ಕಲ್ಪನೆಯಲ್ಲಿ ಸಂವಿಧಾನ ಎಂಬ ಶಿಲ್ಪಕ್ಕೆ ಅಂತಿಮ ರೂಪ ನೀಡಿದವರು ಡಾ. ಬಿ. ಅರ್.ಅಂಬೇಡ್ಕರ್. ಬರೆದಿರುವುದು ಕೈಯ್ಯಿಂದಲೇ ಆದರೂ ಹಾಳೆಗಳ ಮೇಲಿನ ಅಕ್ಷರಗಳು ಈ ಹೃದಯಗಳಿಂದ ಉಗಮಿಸಿರುವುದನ್ನು ಇನ್ನಾದರೂ ಗುರುತಿಸಬೇಕಿದೆ.

ಆತಂಕಗಳ ನಡುವೆ ಭವಿಷ್ಯದ ಹಾದಿ
ಹಾಗಾಗಿ ʼಸಂವಿಧಾನ ಬರೆದವರು ಯಾರು?ʼ ಎಂಬ ಪ್ರಶ್ನೆಗಿಂತಲೂ ಮೂರ್ತ ಪ್ರಶ್ನೆ ʼ ಸಂವಿಧಾನದಲ್ಲಿ ಬರೆದಿರುವುದು ಏನು ? ʼ ಎಂಬ ಅರಿವು ಮುಖ್ಯವಾಗುತ್ತದೆ.. ಈ 76 ವರ್ಷಗಳಲ್ಲಿ ವಿಭಿನ್ನ ವಿಚಾರಧಾರೆಗಳ, ತಾತ್ವಿಕ ನೆಲೆಗಳ ಹಾಗೂ ಸೈದ್ಧಾಂತಿಕ ಕಲ್ಪನೆಗಳ ಚುನಾಯಿತ ಸರ್ಕಾರಗಳು ಪ್ರಜಾಪ್ರಭುತ್ವದ ರಥವನ್ನು ಮುನ್ನಡೆಸಿವೆ. ಈ ರಥದ ಸಾರಥಿಯಾಗಿ ಕಾರ್ಯನಿರ್ವಹಿಸಿರುವುದು ವ್ಯಕ್ತಿ ಅಥವಾ ಪಕ್ಷಗಳಲ್ಲ, ಅದು ಭಾರತದ ಸಂವಿಧಾನ. ಈ ದಶಕಗಳಲ್ಲಿ ಪ್ರಜಾಪ್ರಭುತ್ವಕ್ಕೆ ಒದಗಿರುವ ಅಪಾಯಗಳೆಲ್ಲವನ್ನೂ ಯಶಸ್ವಿಯಾಗಿ ದಾಟಿ ಚಲಿಸುತ್ತಿರುವುದು ಈ ಸಾರಥ್ಯದ ಬಲದಿಂದ. ಆದರೆ ಈ ಗ್ರಾಂಥಿಕ ಸಾರಥಿಯನ್ನು ಎಂದು ಪದಚ್ಯುತಗೊಳಿಸಲಾಗುವುದೋ ಎಂಬ ಆತಂಕದಲ್ಲಿ ವರ್ತಮಾನದ ರಾಜಕೀಯ ಬೆಳವಣಿಗೆಗಳು ಸಂಭವಿಸುತ್ತಿವೆ. 1975ರಲ್ಲಿ ಎರಡು ವರ್ಷಗಳ ಕಾಲ ದೇಶ ಎದುರಿಸಿದ ಕರಾಳ ದಿನಗಳು ದೇಶದ ನೆನಪಿನಿಂದ ಮಾಸುವ ಮುನ್ನವೇ, ಅದರ ರೂಪಾಂತರಿ ಅವತರಣಿಕೆಯು ಸಂವಿಧಾನದ ಚೌಕಟ್ಟಿನಲ್ಲೇ ತನ್ನ ಬಾಹುಗಳನ್ನು ಚಾಚುತ್ತಿದೆ.

ಈ ಆತಂಕಗಳ ನಡುವೆಯೇ ನಾವು ಭವಿಷ್ಯ ಭಾರತದ ಬಗ್ಗೆ ಗಂಭೀರ ಆಲೋಚನೆ ಮಾಡಬೇಕಿದೆ. ಇಲ್ಲಿ ನಮಗೆ ಮೇಲೆ ಉಲ್ಲೇಖಿಸಿದ ʼಸಂವಿಧಾನದಲ್ಲಿ ಬರೆದಿರುವುದು ಏನುʼ ಎಂಬ ಪ್ರಶ್ನೆ ಮುಖ್ಯವಾಗುತ್ತದೆ. ಜನಸಾಮಾನ್ಯರ, ತಳಮಟ್ಟದ ಸಮಾಜಗಳ ನಿತ್ಯ ಬದುಕಿನ ಸವಾಲುಗಳು ಜಟಿಲವಾದಷ್ಟೂ, ಈ ಅರಿವು ಮೂಡಿಸುವ ಮತ್ತು ಪಡೆದುಕೊಳ್ಳುವ ಅನಿವಾರ್ಯತೆ ಹೆಚ್ಚಾಗುತ್ತಲೇ ಹೋಗುತ್ತದೆ. ಅಂಬೇಡ್ಕರ್ ಮೂಲತಃ ಪ್ರತಿಪಾದಿಸಿದ ಪ್ರಜಾಪ್ರಭುತ್ವೀಯ ಹಾಗೂ ಮಾನವೀಯ ಮೌಲ್ಯಗಳನ್ನು ಮರುಭೇಟಿ ಮಾಡುವ ಅವಶ್ಯಕತೆ ಇಲ್ಲಿ ಕಾಣುತ್ತದೆ. ಈ ಕ್ರಿಯಾಶೀಲ ಚಟುವಟಿಕೆಯು ಆಚರಣೆಗಳಿಂದ, ವೈಭವೀಕರಣದಿಂದ ಅಥವಾ ಆತ್ಮರತಿಯ ಧೋರಣೆಗಳಿಂದ ಸಾಧ್ಯವಾಗುವುದಿಲ್ಲ. ಸಾಮಾಜಿಕ ನ್ಯಾಯದ ದೃಶ್ಯ ಕಂಡಾಗಲೆಲ್ಲಾ ʼ ನೋಡಿ ಸಂವಿಧಾನದ ತಾಕತ್ತು ʼ ಎಂದು Romanticise ಮಾಡುವ ಯುವ ತಲೆಮಾರಿಗೆ, ಸಫ್ದರ್ ಹಷ್ಮಿಯಿಂದ ಉಮರ್ ಖಾಲಿದ್‌ವರೆಗೆ, ಭವಾರಿ ದೇವಿಯಿಂದ ಸೌಜನ್ಯಾವರೆಗೆ, ಸಹಜ ನ್ಯಾಯ ಪಡೆಯಲಾಗದ ಅಸಹಾಯಕತೆ ಗೋಚರಿಸಿದಾಗ ಆತ್ಮವಿಮರ್ಶೆಯ ಕದಗಳು ತೆರೆದುಕೊಳ್ಳಬೇಕಾಗುತ್ತದೆ.
ಏಕೆಂದರೆ ಇದೇ ಸಂವಿಧಾನದ ಚೌಕಟ್ಟಿನಲ್ಲೇ ಸ್ವತಂತ್ರ ಭಾರತ ತುರ್ತುಪರಿಸ್ಥಿತಿಯಂತಹ ಕರಾಳ ಯುಗವನ್ನು ಕಂಡಿರುವುದೇ ಅಲ್ಲದೆ, ಯುಎಪಿಎ ಕಾಯ್ದೆ, ರಾಜದ್ರೋಹ ಕಾಯ್ದೆ (Sedition Act) ಮುಂತಾದ ಪ್ರಜಾತಂತ್ರ ವಿರೋಧಿ ಶಾಸನಗಳಿಗೂ ಸಾಕ್ಷಿಯಾಗಿದೆ. ಈಗ ಶ್ರಮಜೀವಿಗಳ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳುವ ನೂತನ ಕಾರ್ಮಿಕ ಸಂಹಿತೆಗಳಿಗೂ ಸಾಕ್ಷಿಯಾಗುತ್ತಿದೆ. ಸಂವಿಧಾನ ಭ್ರಮಿಸಿದ್ದ ಜಾತ್ಯತೀತತೆ (Secularism) , ಸಮಾಜವಾದ (Socialism) ಮತ್ತು ಸಾಂಸ್ಕೃತಿಕ ಬಹುತ್ವದ (Multi Culturalism), ಹಂತಹಂತವಾಗಿ ಶಿಥಿಲವಾಗುತ್ತಿರುವುದಕ್ಕೆ ಮಿಲೆನಿಯಂ ಯುವ ಸಮಾಜ ಸಾಕ್ಷಿಯಾಗುತ್ತಿದೆ. ನವ ಉದಾರವಾದದ ಕಾರ್ಪೋರೇಟ್ ಆರ್ಥಿಕತೆ, ಬಿಜೆಪಿ ಅನುಸರಿಸುತ್ತಿರುವ ಸಾಂಸ್ಕೃತಿಕ ರಾಜಕಾರಣ ಹಾಗೂ ಏಕ ಸಂಸ್ಕೃತಿಯ ಚಿಂತನಾ ಧಾರೆಗಳು ಈ ಮೂರೂ ಸಾಂವಿಧಾನಿಕ ಧ್ಯೇಯಗಳನ್ನು ಅಪಭ್ರಂಶಗೊಳಿಸಿ, ಕ್ರಮೇಣ ಶಿಥಿಲವಾಗಿಸುತ್ತಿವೆ.

ಯುವ ಸಮಾಜದ ಕನಸುಗಳ ನಡುವೆ
ಈ ಅಪಾಯಗಳನ್ನು ಮನಗಾಣಬೇಕಿರುವುದು ಭವಿಷ್ಯ ಭಾರತದ ಸ್ತಂಭಗಳಾದ ಮಿಲೆನಿಯಂ ಸಮಾಜ. ಇದನ್ನು ಮನದಟ್ಟು ಮಾಡಬೇಕಾದ ಜವಾಬ್ದಾರಿ ಇರುವುದು, ಏಳು ದಶಕಗಳ ಸಾಂವಿಧಾನಿಕ ಫಲಾನುಭವಿ ಸಮಾಜಗಳ ಮೇಲೆ. ಸಂವಿಧಾನ ದಿನಾಚರಣೆ, ಸಂವಿಧಾನ ಪೀಠಿಕೆಯ ನಿತ್ಯ ಪಠಣ, ಸಂವಿಧಾನ ಗ್ರಂಥದ ಅಂಬಾರಿ ಮೆರವಣಿಗೆ ಅಥವಾ ರಥೋತ್ಸವಗಳು ಈ ಜವಾಬ್ದಾರಿಯನ್ನು ಮರೆಯುವಂತೆ ಮಾಡುವ ಆಚರಣೆಗಳಾಗಿಬಿಡುತ್ತವೆ. ಅತ್ಯುನ್ನತ ನ್ಯಾಯಾಂಗದಿಂದ ಗ್ರಾಮೀಣ-ಮಂಡಲ ಪಂಚಾಯತಿಯವರೆಗೆ, ಉನ್ನತ ಶೈಕ್ಷಣಿಕ ಸಂಸ್ಥೆಗಳಿಂದ ಕುಗ್ರಾಮಗಳವರೆಗೆ ಈ ಸಾಂವಿಧಾನಿಕ ಅರಿವು ಮೂಡಿಸುವ ಕ್ರಿಯಾಶೀಲ, ಸೃಜನಾತ್ಮಕ ಪ್ರಯತ್ನಗಳು ನಡೆಯಬೇಕಿವೆ. ಏಕೆಂದರೆ ಭಾರತದ ಪ್ರಜಾಪ್ರಭುತ್ವ ತನ್ನ ಮೂಲ ಧಾತುವನ್ನು ಉಳಿಸಿಕೊಂಡಂತೆ ಕಂಡರೂ, ಅಧಿಕಾರ ರಾಜಕಾರಣದ ಪರಿಧಿಯಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳು ಹಂತಹಂತವಾಗಿ ಶಿಥಿಲವಾಗುತ್ತಿರುವುದನ್ನು ಕಾಣುತ್ತಲೇ ಬಂದಿದ್ದೇವೆ.
ಚುನಾಯಿತ/ಪರಾಜಿತ ಜನಪ್ರತಿನಿಧಿಗಳ ವರ್ತನೆ, ಶಾಸನ ಸಭೆಗಳ ಕಲಾಪದಲ್ಲಿ ಕೇಳಿಬರುವ ರಾಜಕೀಯ ಪರಿಭಾಷೆ, ಶಾಸಕ ಸಂಸದರ ಆರ್ಥಿಕ ಅಂತಸ್ತು ಮತ್ತು ಸಾಮಾಜಿಕ ದರ್ಪ ಹಾಗೂ ಇವರು ಪ್ರತಿನಿಧಿಸುವ ರಾಜಕೀಯ ಪಕ್ಷಗಳ ತಾತ್ವಿಕ ಚೌಕಟ್ಟುಗಳು , ಸಂವಿಧಾನವನ್ನು ಅಪಮೌಲ್ಯಗೊಳಿಸುವ ವಿದ್ಯಮಾನಗಳಾಗಿವೆ. ತತ್ಪರಿಣಾಮವಾಗಿ, ಮಹಿಳಾ ದೌರ್ಜನ್ಯಗಳು, ಅಪ್ರಾಪ್ತರ ಮೇಲಿನ ಲೈಂಗಿಕ ದೌರ್ಜನ್ಯಗಳು, ಅಸಹಾಯಕ ಮಹಿಳೆಯರ ಅತ್ಯಾಚಾರ-ಹತ್ಯೆಗಳು, ಅಸ್ಪೃಶ್ಯತೆ ಮತ್ತು ಸಾಮಾಜಿಕ ಬಹಿಷ್ಕಾರದ ಆಚರಣೆಗಳು, ಜಾತಿ ದೌರ್ಜನ್ಯಗಳು ಯಥೇಚ್ಛೆಯಾಗಿ ನಡೆಯುತ್ತಿವೆ. ಜನಪ್ರತಿನಿಧಿಗಳು/ರಾಜಕೀಯ ಪಕ್ಷಗಳು ಈ ಘಟನೆಗಳನ್ನು ಕಾನೂನು ಸುವ್ಯವಸ್ಥೆಯ ವ್ಯಾಪ್ತಿಯಲ್ಲಿ ನೋಡುವ ಮೂಲಕ, ಈ ಸಾಮಾಜಿಕ ವ್ಯಾಧಿಯ ಮೂಲ ಬೇರುಗಳನ್ನು ಕಣ್ಣೆತ್ತಿಯೂ ನೋಡುವುದಿಲ್ಲ. ತಮ್ಮ ರಾಜಕೀಯ ಸಿದ್ದಾಂತಗಳಿಗನುಗುಣವಾಗಿ ಎಂತಹ ಸಾಮಾಜಿಕ ಅನ್ಯಾಯಗಳನ್ನೂ ಸಾಪೇಕ್ಷವಾಗಿ ನೋಡುವ ಒಂದು ವಿಕೃತ ರಾಜಕೀಯ ಸಂಸ್ಕೃತಿಗೆ ನವ ಭಾರತ ಬಲಿಯಾಗಿರುವುದರಿಂದ , ಮಾನವೀಯ ಮೌಲ್ಯಗಳ ಉದಾತ್ತ ಕಲ್ಪನೆಯೇ ಅಪಮೌಲ್ಯಕ್ಕೊಳಗಾಗಿದೆ.

ಸಾಮಾಜಿಕ ವ್ಯಾಧಿಯ ಪರಿಧಿಯಲ್ಲಿ
ಈ ದೌರ್ಜನ್ಯ, ತಾರತಮ್ಯಗಳಿಗೆ ಗುರಿಯಾಗುತ್ತಿರುವ ತಳಸಮಾಜದ ಜನರಿಗೂ, ಆಡಳಿತ ಯಂತ್ರಗಳನ್ನು ನಿಯಂತ್ರಿಸುವ ಮತ್ತು ಪ್ರಭಾವಿಸುವ ಸಮಾಜಗಳಿಗೂ, ಇರುವ ಅಪಾರ ಅಂತರವನ್ನು ಸೂಕ್ಷ್ಮವಾಗಿ ಗಮನಿಸಬೇಕಿದೆ. ಅಂಬೇಡ್ಕರ್ ಕನಸಿನ ಸಮ ಸಮಾಜ ಅಥವಾ ಸಮನ್ವಯದ ಭಾರತ ಇಲ್ಲಿ ಗುರುತಿಸಲಾಗುವುದಿಲ್ಲ. ಇದು ಏಕೆ ಎಂಬ ಪ್ರಶ್ನೆ ನಮ್ಮನ್ನು ಕಾಡಬೇಕಲ್ಲವೇ ? ಸಂವಿಧಾನ ಇದಕ್ಕೆ ಉತ್ತರಿಸುವುದಿಲ್ಲ, ನಮ್ಮ ಸುತ್ತಲಿನ ಸಮಾಜ ಉತ್ತರ ನೀಡುತ್ತದೆ. ರಾಜಕೀಯ ಪಕ್ಷಗಳು ಪೋಷಿಸಿಕೊಂಡು ಬಂದಿರುವ ಹಣಬಲ-ತೋಳ್ಬಲದ ಚುನಾವಣಾ ಪ್ರಕ್ರಿಯೆ, ಅಧಿಕಾರಕ್ಕೆ ಬರಲು ರೂಪಿಸಿಕೊಂಡಿರುವ ತತ್ವಾಂತರವಿಲ್ಲದ ಪಕ್ಷಾಂತರಗಳು ಹಾಗೂ ಕಾರ್ಪೋರೇಟ್ ಬಂಡವಾಳದ ಅನಿಯಂತ್ರಿತ ಹರಿವು, ಭಾರತದ ಸಾಂವಿಧಾನಿಕ ನೈತಿಕತೆಯ ಬೇರುಗಳನ್ನೇ ಕಿತ್ತುಹಾಕುವಂತೆ ಕಾಣುತ್ತಿದೆ. ಚುನಾಯಿತ ಜನಪ್ರತಿನಿಧಿಗಳ ಪೈಕಿ ಅಪರಾಧ ಹಿನ್ನೆಲೆ ಇರುವವರ ಸಂಖ್ಯೆ ಇದಕ್ಕೆ ಸಾಕ್ಷಿಯಾಗಿದೆ.
ಅಧಿಕಾರ ರಾಜಕಾರಣದಿಂದಾಚೆ ನೋಡಿದಾಗ, ನಮ್ಮ ಆಧುನಿಕ ನಾಗರಿಕತೆಯ ನಡುವೆಯೂ, ಪ್ರಾಚೀನ ಸಾಮಾಜಿಕ ನಡವಳಿಕೆಗಳು, ಪದ್ಧತಿಗಳು ಜೀವಂತವಾಗಿರುವುದನ್ನು ಹೇಗೆ ನಿರ್ವಚಿಸಬೇಕು ? ಪ್ರಾಚೀನ ಸಮಾಜದ ಪಿತೃಪ್ರಧಾನ ಮೌಲ್ಯಗಳು, ಸಮಾಜದ ಎಲ್ಲ ಸ್ತರಗಳಲ್ಲೂ, ಎಲ್ಲ ವಲಯಗಳಲ್ಲೂ ಗಟ್ಟಿಯಾಗಿರುವುದರಿಂದಲೇ ಮಹಿಳಾ ಸಮಾನತೆ ಎನ್ನುವುದು ಆಲಂಕಾರಿಕ ಪದವಾಗಿದೆ. ಮತ್ತೊಂದು ಬದಿಯಲ್ಲಿ ದೌರ್ಜನ್ಯಗಳು ಹೆಚ್ಚಾಗುತ್ತಲೇ ಇವೆ. 76 ವರ್ಷಗಳ ನಂತರವೂ ಅಂಬೇಡ್ಕರ್ ಪ್ರತಿಪಾದಿಸಿದ ಮಹಿಳಾ ಸಮಾನತೆ, ಪ್ರಾತಿನಿಧಿಕ ರೂಪದಲ್ಲೂ ಸಹ ಸಾಕಾರಗೊಂಡಿಲ್ಲ. ಮಹಿಳಾ ಪ್ರಾತಿನಿಧ್ಯ ಎನ್ನುವುದು, ಪುರುಷ ಪ್ರಧಾನ ಸಮಾಜ ʼ ಕೊಡುವ ಅಥವಾ ಒದಗಿಸುವ ʼ ಅವಕಾಶವಾಗಿ ಮಾತ್ರ ಕಾಣುತ್ತಿದೆ. ಇದು ಆಡಳಿತ ಕೇಂದ್ರಗಳಿಂದ ತಳಮಟ್ಟದ ಸಾಂಸ್ಥಿಕ ವೇದಿಕೆಗಳವರೆಗೂ ಕಾಣಬಹುದಾದ ಸುಡು ವಾಸ್ತವ.

ಜಾತಿ ವ್ಯವಸ್ಥೆಯನ್ನು ಮತ್ತಷ್ಟು ಗಟ್ಟಿಗೊಳಿಸುವ ಪ್ರಯತ್ನಗಳು ಎಲ್ಲ ಸ್ತರಗಳಲ್ಲೂ ನಡೆಯುತ್ತಿದ್ದು, ಮೇಲ್ಜಾತಿ ದೌರ್ಜನ್ಯಗಳು ರೂಪಾಂತರಗೊಂಡಿವೆ. ತಾರತಮ್ಯಗಳ ಬಾಹ್ಯ ರೂಪ ಬದಲಾಗುತ್ತಿವೆ. ಅಸ್ಪೃಶ್ತತೆಯ ಆಚರಣೆ ಕೌಟುಂಬಿಕ ನೆಲೆಯಲ್ಲೂ ಚಾಲ್ತಿಯಲ್ಲಿದೆ. ಅವಕಾಶವಂಚಿತ ಸಮಾಜಗಳನ್ನು ಕಾಡುತ್ತಿರುವ ಹಸಿವು, ಬಡತನ, ನಿರುದ್ಯೋಗ ಮತ್ತು ನಿರ್ವಸತಿ ಅಸಂಖ್ಯಾತ ಜನರ ಬದುಕುವ ಘನತೆಯನ್ನೇ ಕಸಿದುಕೊಳ್ಳುತ್ತಿವೆ. ಇದಕ್ಕೆ ಪರಿಹಾರವನ್ನು ಮೀಸಲಾತಿಯಲ್ಲಿ ಹುಡುಕುತ್ತಿದ್ದೇವೆ. ಆದರೆ ಈ ಸಾಮಾಜಿಕ ವ್ಯಾಧಿಗೆ ಮದ್ದು ಇರುವುದು ಸಮಾಜದ ಅಂತರ್ ಗರ್ಭದಲ್ಲಿ. ಇದನ್ನು ಸಂವಿಧಾನ ಗುರುತಿಸುವುದಿಲ್ಲ, ನಾಗರಿಕತೆಯೇ ಗುರುತಿಸಬೇಕು. ನಾಗರಿಕತೆಯ ಪ್ರತಿನಿಧಿಗಳು ಸಂವಿಧಾನದ ಚೌಕಟ್ಟಿನಲ್ಲಿ ಪರಿಹಾರೋಪಾಯಗಳನ್ನು ಕಂಡುಹಿಡಿಯಬೇಕು.
ಆಚರಣೆಗಳನ್ನೂ ದಾಟಿ ನೋಡಿದಾಗ,,,,
ಸಂವಿಧಾನದ ಓದು, ಪೀಠಿಕೆಯ ಪಠಣ ಮತ್ತು ವಾರ್ಷಿಕ ಸಂವಿಧಾನ ದಿನಾಚರಣೆ ಇವೆಲ್ಲವೂ ಕಾಲದ ಅನಿವಾರ್ಯತೆಗಳು. ಆದರೆ ಒಂದು ಚಲನಶೀಲ ಸಮಾಜ, ಕ್ರಿಯಾಶೀಲ ದೇಶ ಇದನ್ನೂ ದಾಟಿ ಯೋಚಿಸಬೇಕಾಗುತ್ತದೆ. ನಿರಂತರವಾಗಿ ಕುಸಿಯುತ್ತಲೇ ಇರುವ, ಅಧೋಗತಿಗೆ ತಲುಪುತ್ತಿರುವ ಸಾಂವಿಧಾನಿಕ ನೈತಿಕತೆ ನಮ್ಮನ್ನು ಎಚ್ಚರಿಸಬೇಕಿದೆ. ಪಕ್ಷಾತೀತವಾಗಿ, ತಾವು ನಂಬಿರುವ ತತ್ವ ಸಿದ್ದಾಂತಗಳನ್ನು ಅನುಸರಿಸುತ್ತಲೇ, ಅದನ್ನು ದಾಟಿ ನೋಡುವ ವ್ಯವಧಾನ ಯುವ ಸಮಾಜದಲ್ಲಿ ಬೆಳೆಸಬೇಕಿದೆ. ಸಂವಿಧಾನವನ್ನು ಒಂದು ಪವಿತ್ರ ಗ್ರಂಥವಾಗಿ ನೋಡದೆ, ಅದರ ಆಂತರಿಕ ಮೌಲ್ಯಾದರ್ಶಗಳನ್ನು, ವರ್ತಮಾನಕ್ಕೆ ಮುಖಾಮುಖಿಯಾಗಿಟ್ಟು ನೋಡುವ ಅವಶ್ಯಕತೆ ಇದೆ. ಆಚರಣೆಗಳ ಆಡಂಬರಗಳು ಈ ಕ್ರಿಯಾಶೀಲತೆಯನ್ನು ಮಸುಕುಗೊಳಿಸುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗುವುದಿಲ್ಲ.

ಈ ವಿಶಾಲ ದೃಷ್ಟಿಕೋನದಿಂದ ನೋಡಿದಾಗ, ಸಂವಿಧಾನದ ಫಲಾನುಭವಿ ಸಮಾಜವು ತನ್ನ ಬೌದ್ಧಿಕ, ಭೌತಿಕ ಹಾಗೂ ಲೌಕಿಕ ಅರಿವನ್ನು ವಿಸ್ತರಿಸಿಕೊಂಡು, ಯುವ ತಲೆಮಾರಿಗೆ ತಲುಪಿಸುವ ನಿಟ್ಟಿನಲ್ಲಿ ಗಂಭೀರ ಆಲೋಚನೆ ಮಾಡಬೇಕಿದೆ. ಇದು ಸೆಮಿನಾರ್ ಹಾಲ್‌ಗಳ ಉಪನ್ಯಾಸಗಳಿಂದ ಆಗುವಂತಹುದಲ್ಲ. ನೆಲದ ವಾಸ್ತವಗಳನ್ನು (Ground Realities) ತಳಮಟ್ಟದವರೆಗೂ ಮನದಟ್ಟು ಮಾಡುವ ಈ ಪ್ರಕ್ರಿಯೆಗೆ ದೂರಗಾಮಿ ದೃಷ್ಟಿಕೋನ ಅಗತ್ಯವಿದೆ. ಇದನ್ನು ರೂಢಿಸಿಕೊಂಡರೆ, ಪ್ರಜಾಪ್ರಭುತ್ವದ ರಥವನ್ನು ಸಂವಿಧಾನದ ಸಾರಥ್ಯದಲ್ಲಿ ಮುಂದೆ ಸಾಗಿಸಬಹುದು. ಸಾಂವಿಧಾನಿಕ ಮೌಲ್ಯಗಳಾಗಿ ರಥದ ಚಕ್ರಗಳು ಉರುಳುತ್ತವೆ, ಸ್ವಾತಂತ್ರ್ಯದ ಕನಸುಗಳನ್ನು ಸಾಕಾರಗೊಳಿಸುವ ಅಂತಿಮ ಗುರಿಯನ್ನು ತಲುಪಲು ಸಾಧ್ಯವಾಗುತ್ತದೆ.
ಸಮಸ್ತರಿಗೂ ಸಂವಿಧಾನ ದಿನಾಚರಣೆಯ ಶುಭಾಶಯಗಳು
-0-0-0-











