ಲೋಕಸಭಾ ಚುನಾವಣೆ (Loksabha Election) ಘೋಷಣೆಗೆ ದಿನಗಣನೆ ಶುರುವಾಗಿದೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಪ್ರಜಾಪ್ರಭುತ್ವಕ್ಕೆ ಸಂಕಷ್ಟ, ಸಂವಿಧಾನ ತನ್ನ ಮಹತ್ವ ಕಳೆದುಕೊಳ್ಳುವ ಸಾಧ್ಯತೆ ಇದೆ ಅನ್ನೋ ಚರ್ಚೆ ನಡೆಯುತ್ತಿದೆ. ಈ ನಡುವೆ ಸಂವಿಧಾನ (Constitution) ತಿದ್ದಪಡಿ ಬಗ್ಗೆ ಸಂಸದ ಅನಂತಕುಮಾರ ಹೆಗಡೆ (Ananthakumar Hegde) ಮತ್ತೆ ಮಾತನಾಡಿದ್ದಾರೆ. ಸಂವಿಧಾನ ತಿದ್ದುಪಡಿ ಅವಶ್ಯಕತೆ ಇದೆ ಎಂದು ಉತ್ತರ ಕನ್ನಡ ಜಿಲ್ಲೆ ಸಂಸದ ಅನಂತಕುಮಾರ ಹೆಗಡೆ ಹೇಳಿದ್ದಾರೆ. ಆದರೆ ಬಿಜೆಪಿ (BJP) ಅಂತರ ಕಾಯ್ದುಕೊಂಡಿದ್ದು, ಅನಂತ್ ಕುಮಾರ್ ಹೆಗಡೆ ಹೇಳಿಕೆ ಪಕ್ಷದ್ದಲ್ಲ.. ಅದು ಅವರ ವೈಯಕ್ತಿಕ ಹೇಳಿಕೆ ಎಂದು ಟ್ವೀಟ್ ಮಾಡುವ ಮೂಲಕ ತಟಸ್ಥ ನಿಲುವು ತಾಳಿದೆ.

ಕಾಂಗ್ರೆಸ್‌ನವರು ಸಂವಿಧಾನದಲ್ಲಿ ಬೇಡವಾದ ಅಂಶಗಳನ್ನೆಲ್ಲಾ ಸೇರಿಸಿದ್ದಾರೆ. ಅವುಗಳನ್ನು ತಿದ್ದುಪಡಿ ಮಾಡಬೇಕಿದೆ ಎಂದಿದ್ದಾರೆ ಅನಂತ್ ಕುಮಾರ್ ಹೆಗಡೆ. ಉತ್ತರ ಕನ್ನಡದ ಸಿದ್ದಾಪುರದ ಹಲಗೇರಿಯಲ್ಲಿ ನಡೆದ ಬಿಜೆಪಿ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ್ದು, ಲೋಕಸಭೆಯಲ್ಲಿ 400 ಸ್ಥಾನ ಗೆಲ್ಲಬೇಕು ಎಂದು ಪ್ರಧಾನಿ ಮೋದಿ (Modi) ಹೇಳಿದ್ದಾರೆ. 400 ಸ್ಥಾನಗಳನ್ನು ಗೆದ್ದರೆ ಸಂವಿಧಾನ ತಿದ್ದುಪಡಿ ಮಾಡಬಹುದು ಎಂದಿದ್ದಾರೆ ಸಂಸದ ಅನಂತ್ ಕುಮಾರ್ ಹೆಗಡೆ.

ಈ ಹಿಂದೆಯೂ ಕೂಡಾ ತಾವು ಬಂದಿರೋದೆ ಸಂವಿಧಾನ ಬದಲಾಯಿಸಲು ಎಂದಿದ್ದ ಸಂಸದ ಅನಂತ್ ಕುಮಾರ್ ಹೆಗಡೆ, ಇದೀಗ ಮತ್ತೊಮ್ಮೆ ಸಂವಿಧಾನ ತಿದ್ದುಪಡಿ ಬಗ್ಗೆ ಮಾತಾನಾಡಿದ್ದಾರೆ. ಆದರೆ ಸಂವಿಧಾನದ ಮೂಲ ಆಶಯಗಳಿಗೆ ಪೆಟ್ಟು ಬೀಳುವ ಬಗ್ಗೆ ಈಗಾಗಲೇ ಸಾಕಷ್ಟು ರಾಜಕೀಯ ತಜ್ಞರು ಹಾಗೂ ರಾಜಕೀಯ ಧುರೀಣರು ಆತಂಕ ವ್ಯಕ್ತಪಡಿಸುತ್ತಿರುವ ಈ ಹೊತ್ತಿನಲ್ಲಿ ಸಂವಿಧಾನ ಬದಲಾವಣೆಗಾಗಿಯೇ 400 ಸ್ಥಾನ ಕೇಳಿದ್ದಾರೆ ಮೋದಿ ಎನ್ನುವುದು ಜನರನ್ನು ಆತಂಕಕ್ಕೆ ಗುರಿ ಮಾಡಿದೆ.

ಸಂವಿಧಾನ ಬದಲಾವಣೆಯ ಬಗ್ಗೆ ಅನಂತ ಕುಮಾರ ಹೆಗಡೆ ಹೇಳಿಕೆಯನ್ನು ಸಿಎಂ ಸಿದ್ದರಾಮಯ್ಯ (siddaramaiah) ಖಂಡಿಸಿದ್ದಾರೆ. ಅನಂತ್ ಕುಮಾರ್ ಹೆಗಡೆಯನ್ನ ಚುನಾವಣಾ ಸ್ಪರ್ಧೆಯಿಂದ ಶಾಶ್ವತವಾಗಿ ಅನರ್ಹಗೊಳಿಸಬೇಕು. ಸಂವಿಧಾನಕ್ಕಿಂತ ಮೊದಲಿದ್ದ ಮನು ಸಂವಿಧಾನವನ್ನು ಜಾರಿಗೊಳಿಸುವ ದುಷ್ಠ ಆಲೋಚನೆ ಬಿಜೆಪಿ ಪಕ್ಷಕ್ಕೆ ಇದ್ದಂತಿದೆ. ಹೆಗಡೆಯವರ ಅಭಿಪ್ರಾಯಕ್ಕೆ ಪ್ರಧಾನಿಗಳ ಒಪ್ಪಿಗೆ ಇಲ್ಲದಿದ್ದರೆ ಅವರನ್ನು ಕೂಡಲೇ ಪಕ್ಷದಿಂದ ವಜಾ ಮಾಡಲಿ ಎಂದು ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಸವಾಲು ಎಸೆದಿದ್ದಾರೆ. ಸಂಸದ ಅನಂತ್‌ಕುಮಾರ್ ಹೆಗಡೆ ಹೇಳಿಕೆ ವೈಯಕ್ತಿಕ ಹೇಳಿಕೆ ಅಲ್ಲ . ಅದು ಭಾರತೀಯ ಜನತಾ ಪಕ್ಷದ ಗುಪ್ತ ಅಜೆಂಡಾದ ಭಾಗ. ನಮ್ಮ ಸಂವಿಧಾನ ಸರ್ವಧರ್ಮಗಳನ್ನೂ ಸಮಭಾವದಿಂದ ನೋಡುತ್ತದೆ. ಪ್ರತಿಯೊಬ್ಬ ಪ್ರಜೆಗೂ ತನ್ನ ನಂಬಿಕೆಯ ಧರ್ಮವನ್ನು ಪಾಲಿಸಿಕೊಂಡು ಬರುವ ಸ್ವಾತಂತ್ರ್ಯವನ್ನು ನೀಡಿದೆ. ಹೀಗಿರುವಾಗ ಸಂವಿಧಾನವನ್ನೇ ಬದಲಾಯಿಸಿ ಅನಂತ್ ಕುಮಾರ್ ಹೆಗಡೆ ಅವರು ಯಾವ ಹಿಂದೂ ಧರ್ಮವನ್ನು ರಕ್ಷಿಸಲು ಹೊರಟಿದ್ದಾರೆ? ಎಂದು ಕಿಡಿಕಾರಿದ್ದಾರೆ.
#Karnataka #bengaluru #Constitution #ananthkumarhegde #siddaramaiah #congress #bjp











