ಈ ವರ್ಷ ಕಾಂಗ್ರೆಸ್ ಪಾಲಿಗೆ ಸಂಕಷ್ಟಗಳ ವರ್ಷದಂತೆ ಗೋಚರಿಸುತ್ತಿದೆ. ಸದ್ಯಕ್ಕೆ ದೇಶದ ಮೂರು ರಾಜ್ಯಗಳಲ್ಲಿ ಮಾತ್ರ ಕಾಂಗ್ರೆಸ್ ನಾಯಕರು ಮುಖ್ಯಮಂತ್ರಿಗಳಾಗಿದ್ದು, ಆ ಮೂರು ರಾಜ್ಯಗಳ ಕಾಂಗ್ರೆಸ್ ಘಟಕದಲ್ಲಿ ಆಂತರಿಕ ಭಿನ್ನಾಭಿಪ್ರಾಯ ಮೂಡಿದೆ. ಮೊದಲು ಪಂಜಾಬ್, ನಂತರ ರಾಜಸ್ಥಾನದಲ್ಲಿ ಆಂತರಿಕ ಬೇಗುದಿ ಸ್ಫೋಟಗೊಂಡ ಬಳಿಕೆ ಈಗ ಛತ್ತೀಸ್ ಘಡದಲ್ಲಿಯೂ ಅಂತಹುದೇ ಪರಿಸ್ಥಿತಿ ಮರುಕಳಿಸುತ್ತಿದೆ.
ಛತ್ತೀಸ್ಘಡದ ಸಿಎಂ ಭೂಪೇಶ್ ಸಿಂಗ್ ಬಘೇಲ್ ಹಾಗೂ ರಾಜ್ಯದ ಆರೋಗ್ಯ ಮಂತ್ರಿ ಟಿ ಎಸ್ ಸಿಂಗ್ ದಿಯೋ ನಡುವಿನ ವೈಮನಸ್ಸು ಈಗ ಬಹಿರಂಗವಾಗಿದೆ. ಕಳೆದ ಕೆಲವು ವಾರಗಳಿಂದ ಇವರಿಬ್ಬರ ನಡುವೆ ನಡೆಯುತ್ತಿದ್ದ ಮುಸುಕಿನ ಗುದ್ದಾಟ ಈಗ ರಾಜ್ಯದ ಜನರ ಮುಂದೆ ಬಂದು ನಿಂತಿದೆ. ಈ ಬಾರಿ ಇವರಿಬ್ಬರ ನಡುವಿನ ಭಿನ್ನಾಭಿಪ್ರಾಯದ ಶಮನಕ್ಕೆ ಖುದ್ದು ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಮುಂದಾಗಿದ್ದಾರೆ.
ಮಂಗಳವಾರದಂದು, ರಾಹುಲ್ ಗಾಂಧಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಹಾಗೂ ಛತ್ತೀಸ್ ಘಡ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಪಿ ಎಲ್ ಪುನಿಯಾ ಅವರು ಬಘೇಲ್ ಹಾಗೂ ದಿಯೋ ಅವರನ್ನು ಭೇಟಿಯಾಗಿ ಸುದೀರ್ಘ ಮಾತುಕತೆ ನಡೆಸಿದ್ದಾರೆ.
ಸಭೆಯ ನಂತರ ಮಾಧ್ಯಮದೊಂದಿಗೆ ಮಾತನಾಡಿರುವ ನಾಯಕರು, ರಾಜ್ಯದ ಅಭಿವೃದ್ದಿ ಹಾಗೂ ಮುಂಬರಲಿರುವ ಚುನಾವಣೆಯ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಹೇಳಿದ್ದಾರೆ. ಛತ್ತೀಸ್ ಘಡದಲ್ಲಿ ಮುಂದಿನ ಚುನಾವಣೆಯು 2023ರ ಅಂತ್ಯಕ್ಕೆ ಬರಲಿದ್ದು, ಅದಕ್ಕಿಂತ ಮುಂಚಿತವಾಗಿ ಅಲ್ಲಿ ಯಾವುದೇ ಚುನಾವಣೆಗಳು ಇಲ್ಲ. ಆದರೂ, ಈಗಲೇ ಚುನಾವಣೆಯ ಕುರಿತು ಚರ್ಚೆ ನಡೆಸುವಂತದ್ದು ಏನಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಛತ್ತೀಸ್ ಘಡದಲ್ಲಿ ಈಗ ಉಂಟಾಗಿರುವ ಭಿನ್ನಮತಕ್ಕೆ ಕಾಂಗ್ರೆಸ್’ನ ನಿರ್ಧಾರಗಳು ಕೂಡಾ ಕಾರಣವಾಗಿವೆ. 2018ರ ಡಿಸೆಂಬರ್ ತಿಂಗಳಲ್ಲಿ ಸರ್ಕಾರ ರಚಿಸುವಾಗ ಮೊದಲಾರ್ಧದಲ್ಲಿ ಬಘೇಲ್ ಅವರು ಸಿಎಂ ಆಗಿರುತ್ತಾರೆ ಮತ್ತು ದ್ವಿತಿಯಾರ್ಧದಲ್ಲಿ ದಿಯೋ ಅವರು ಸಿಎಂ ಆಗಿರುತ್ತಾರೆ ಎಂದು ನಿರ್ಣಯಿಸಲಾಗಿತ್ತು ಎಂದು ಹಿರಿಯ ಕಾಂಗ್ರೆಸ್ ನಾಯಕರು ಹೇಳಿದ್ದಾರೆ.
“ಪಕ್ಷದ ಕೆಲವು ಮುಖಂಡರು ಈ ನಿರ್ಣಯದ ಕುರಿತು ಸ್ಪಷ್ಟಪಡಿಸಿದ್ದಾರೆ. ಆದರೆ, ಕಳೆದ ಎರಡೂವರೆ ವರ್ಷದಲ್ಲಿ ಬಹಳಷ್ಟು ಬದಲಾಗಿದೆ. ಬಘೇಲ್ ಅವರು ಕೇವಲ ಸಿಎಂ ಆಗಿ ಅಲ್ಲ, ಪಕ್ಷದಲ್ಲಿಯೂ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ದಿಯೋ ಅವರಿಗೆ ಸಿಎಂ ಸ್ಥಾನದ ಭರವಸೆ ನೀಡಿದ್ದರೆ, ಅವರು ಸಿಎಂ ಆಗಲೂಬಹುದು. ಆದರೆ, ಹೈಕಮಾಂಡ್ ಯೋಜನೆ ಏನಿದೆ ಎಂದು ಯಾರಿಗೂ ತಿಳಿದಿಲ್ಲ,” ಎಂದು ಛತ್ತೀಸ್ ಘಡದ ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ತಿಳಿಸಿದ್ದಾರೆ.
ಕಳೆದ ಡಿಸೆಂಬರ್ ತಿಂಗಳಲ್ಲಿ ನಾಯಕತ್ವ ಬದಲಾವಣೆಯ ಕುರಿತು ಎದ್ದಿದ್ದ ಪುಕಾರುಗಳಿಗೆ ಉತ್ತರಿಸಿದ್ದ ಬಘೇಲ್, ಹೈಕಮಾಂಡ್ ನಿರ್ಧಾರವೇ ಅಂತಿಮವಾಗಿರುತ್ತದೆ. ಅವರು ಯಾವಾಗ ರಾಜಿನಾಮೆ ನೀಡಲು ಹೇಳುತ್ತಾರೆಯೋ ಅಂದು ರಾಜಿನಾಮೆ ನೀಡುತ್ತೇನೆ, ಎಂದಿದ್ದರು. ಬಘೇಲ್ ಸರ್ಕಾರ ಎರಡೂವರೆ ವರ್ಷ ಪೂರ್ಣಗೊಳಿಸುತ್ತಲೇ ನಾಯಕತ್ವ ಬದಲಾವಣೆಯ ಚರ್ಚೆಯನ್ನು ಮುನ್ನೆಲೆಗೆ ತಂದಿದ್ದ ದಿಯೋ ಅವರು, ಮಧ್ಯಾವಧಿಯಲ್ಲಿ ಸಿಎಂ ಬದಲಾವಣೆ ಮಾಡುವುದು ತಪ್ಪಲ್ಲ. ಆದರೆ, ಈ ನಿರ್ಧಾರ ಹೈಕಮಾಂಡ್ ವಿವೇಚನೆಗೆ ಬಿಟ್ಟಿದ್ದು ಎಂದು ಹೇಳಿದ್ದರು.
ಈಗ ಕಾಂಗ್ರೆಸ್ ಹೈಕಮಾಂಡ್ಅನ್ನು ಭೇಟಿಯಾದ ನಂತರ ಮಾಧ್ಯಮದವರೊಂದಿಗೆ ಮಾತನಾಡಿರುವ ದಿಯೋ, “ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರ ನಿರ್ದೇಶನಗಳನ್ನು ಛತ್ತೀಸ್ ಘಡದಲ್ಲಿ ಪಾಲಿಸಲಾಗುತ್ತದೆ. ಈ ಸಭೆಯಲ್ಲಿ ಛತ್ತೀಸ್ ಘಡದ ಅಭಿವೃದ್ದಿ ಕುರಿತು ಚರ್ಚಿಸಲಾಗಿತ್ತು. ಪಕ್ಷದಲ್ಲಿ ಯಾವುದೇ ಒಡಕಿಲ್ಲ. ಹೈಕಮಾಂಡ್ ಸೂಚನೆಯಂತೆ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು, ” ಎಂದು ಅವರು ಹೇಳಿದ್ದಾರೆ.
ಇತ್ತೀಚಿಗೆ ಛತ್ತೀಸ್ ಘಡದ ಶಾಸಕರಾದ ಬೃಹಸ್ಪತಿ ಸಿಂಗ್ ಅವರು, ದಿಯೋ ಅವರ ಮೇಲೆ ಹಲ್ಲೆ ನಡೆಸಿದ ಆರೋಪ ಹೊರಿಸಿದ್ದರು. ಇದರಿಂದ ಸಿಟ್ಟಿಗೆದ್ದಿದ್ದ ದಿಯೋ ಬೆಂಬಲಿಗರು, ಬೃಹಸ್ಪತಿ ಅವರ ಮೇಲೆ ಶಿಸ್ತುಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು. ಪಕ್ಷದ ಹಿರಿಯ ನಾಯಕರು ಈ ವಿವಾದದ ಕುರಿತು ಸ್ಪಷ್ಟನೆಯನ್ನೂ ಕೇಳಿದ್ದರು. ಈ ಘಟನೆಯ ಬಳಿಕ ದಿಯೋ ಅವರು ನಾಯಕತ್ವ ಬದಲಾವಣೆಯ ಕುರಿತು ಬಹಿರಂಗವಾಗಿ ಮಾತನಾಡಲು ಆರಂಭಿಸಿದ್ದಾರೆ.
2018ರಲ್ಲಿ ಬಿಜೆಪಿಯ ಹದಿನೈದು ವರ್ಷಗಳ ಆಡಳಿತಕ್ಕೆ ಅಂಕಿತವಿಟ್ಟು ಕಾಂಗ್ರೆಸ್ ಬೃಹತ್ ಬಹುಮತದಿಂದ ಸರ್ಕಾರ ರಚಿಸಿತ್ತು. ಹದಿನೈದು ವರ್ಷಗಳ ಕಾಲ ರಮಣ್ ಸಿಂಗ್ ಅವರು ಸಿಎಂ ಆಗಿದ್ದರು. ಈಗ ಕಾಂಗ್ರೆಸ್ ನಾಯಕತ್ವ ಬದಲಾವಣೆಯ ನಿರ್ಧಾರ ತಾಳಿದರೆ, ಇದು ರಾಜಕೀಯವಾಗಿ ಬಿಜೆಪಿಯ ಬಾಯಿಗೆ ಆಹಾರವಾಗುವ ಪರಿಸ್ಥಿತಿ ತಂದೊಡ್ಡುವ ಭೀತಿಯೂ ಇದೆ. ಈ ಕಾರಣಕ್ಕೆ ಕಾಂಗ್ರೆಸ್ ಹೈಕಮಾಂಡ್ ನಾಯಕತ್ವ ಬದಲಾವಣೆಯ ಕುರಿತು ಬಹಿರಂಗವಾಗಿ ಚರ್ಚಿಸಲು ಹಿಂಜರಿಯುತ್ತಿದೆ.
ಪಂಜಾಬ್ ಮತ್ತು ರಾಜಸ್ಥಾನದಲ್ಲಿ ಹೊಗೆಯಾಡುತ್ತಿದ್ದ ಭಿನ್ನಮತವನ್ನು ಯಶಸ್ವಿಯಾಗಿ ಶಮನಗೊಳಿಸಿರುವ ಕಾಂಗ್ರೆಸ್ ಹೈಕಮಾಂಡ್, ಈಗ ಛತ್ತೀಸ್ ಘಡದಲ್ಲಿ ಯಾವ ರೀತಿಯಲ್ಲಿ ಬಿಕ್ಕಟ್ಟು ಶಮನಗೊಳಿಸಲು ಪ್ರಯತ್ನಿಸುತ್ತದೆ ಎಂದು ಕಾದು ನೊಡಬೇಕಿದೆ. ಟಿ ಎಸ್ ಸಿಂಗ್ ದಿಯೋ ಮತ್ತು ಅವರ ಆಪ್ತರಿಗೆ ಸರ್ಕಾರ ಹಾಗೂ ಪಕ್ಷದಲ್ಲಿ ಯಾವ ರೀತಿಯ ಸ್ಥಾನಮಾನಗಳನ್ನು ನೀಡುತ್ತದೆ ಎಂಬುದರ ಮೇಲೆ ಛತ್ತೀಸ್ ಘಡ ಸರ್ಕಾರದ ಮುಂದಿನ ಭವಿಷ್ಯ ನಿಂತಿದೆ.