ಬೆಂಗಳೂರು : ರಾಜ್ಯದಲ್ಲಿ ಅಧಿಕಾರ ಹಂಚಿಕೆಯ ಜಟಾಪಟಿಯ ನಡುವೆಯೇ ಕಾಂಗ್ರೆಸ್ ಶಾಕರು ರೆಬಲ್ ಆಗಿದ್ದಾರೆ. ಮೊದಲ ಬಾರಿಗೆ ಆಯ್ಕೆಯಾದವರು ಹಾಗೂ ಹಿರಿಯ ಶಾಸಕರು ಪಕ್ಷದ ಹೈಕಮಾಂಡ್ ನಾಯಕರಿಗೆ ಪತ್ರ ಬರೆದಿದ್ದು ಸಂಚಲನ ಸೃಷ್ಟಿಸಿದೆ.

ಪ್ರಮುಖವಾಗಿ ಹಲವು ದಿನಗಳಿಂದ ನೆನೆಗುದಿಗೆ ಬಿದ್ದಿರುವ ಸಂಪುಟ ವಿಸ್ತರಣೆ ವಿಚಾರಕ್ಕೆ ಸಿಡಿದೆದ್ದಿರುವ ಶಾಸಕರು ನೇರವಾಗಿ ರಾಹುಲ್ ಗಾಂಧಿ, ರಣದೀಪ್ ಸಿಂಗ್ ಸುರ್ಜೇವಾಲಾ ಹಾಗೂ ಕೆ.ಸಿ. ವೇಣುಗೋಪಾಲ್ ಅವರಿಗೆ ಪತ್ರ ಬರೆದು ಹಲವು ಅಂಶಗಳನ್ನು ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ.
ಎಲ್ಲ ರಾಜ್ಯಗಳಲ್ಲಿ ಮೊದಲ ಬಾರಿ ಆಯ್ಕೆಯಾದದವರೇ ಮಂತ್ರಿಗಳಾಗಿದ್ದಾರೆ..
ಸಂಪುಟ ಪುನರ್ ರಚನೆಯ ವಿಚಾರದಲ್ಲಿ ಹೈಕಮಾಂಡ್‌ನ ವಿಳಂಬಕ್ಕೆ ಅಸಮಾಧಾನ ಹೊರಹಾಕಿದ್ದಾರೆ. ಯುವ ಶಾಸಕರಿಗೆ ಅದರಲ್ಲೂ ಮೊದಲ ಬಾರಿಗೆ ಚುನಾಯಿತರಾಗಿರುವವರಿಗೆ ಸಂಪುಟದಲ್ಲಿ ಅವಕಾಶ ನೀಡಿ. ಯುವಕರಿಗೆ ಆದ್ಯತೆ ನೀಡುವುದನ್ನು ಗಮನಿಸಬೇಕು. ಇದು ಮುಂಬರುವ ಚುನಾವಣೆಗೆ ಸಹಕಾರಿಯಾಗಲಿದೆ. ನೂತನವಾಗಿ ಆಯ್ಕೆಯಾಗಿರುವ ಶಾಸಕರಿಗೆ ಸಂಪುಟದಲ್ಲಿ ಅವಕಾಶ ಕಲ್ಪಿಸಬೇಕು. ಎಲ್ಲ ರಾಜ್ಯಗಳ ಸರ್ಕಾರಗಳಲ್ಲಿ ಮೊದಲ ಬಾರಿಗೆ ಆಯ್ಕೆಯಾದ ಯುವ ಶಾಸಕರು ಮಂತ್ರಿಗಳಾಗಿದ್ದಾರೆ. ಹೀಗಾಗಿ ಕನಿಷ್ಠ ಐದು ಜನರಿಗೆ ಸಚಿವ ಸ್ಥಾನ ನೀಡಬೇಕೆಂದು ಪತ್ರದಲ್ಲಿ ಶಾಸಕರು ಮನವಿ ಮಾಡಿದ್ದಾರೆ.
ಕಾಂಗ್ರೆಸ್‌ನಿಂದ ಮೊದಲ ಬಾರಿಗೆ 38 ಮಂದಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಯುವಕರಿಗೆ ಅವಕಾಶ ನೀಡುವುದು ಈ ಕ್ಷಣದ ಬೇಡಿಕೆಯಾಗಿದೆ. ಶಾಸಕರಾದ ಎ.ಎಸ್.ಪೊನ್ನಣ್ಣ, ಭೀಮಸೇನ ಚಿಮ್ಮನಕಟ್ಟಿ, ಪ್ರದೀಪ್ ಈಶ್ವರ್, ಇಕ್ಬಾಲ್ ಹುಸೇನ್, ಎನ್.ಟಿ.ಶ್ರೀನಿವಾಸ, ಅಶೋಕ್ ಕುಮಾರ್ ರೈ, ಎನ್.ಶ್ರೀನಿವಾಸ, ದರ್ಶನ್ ಧ್ರುವನಾರಾಯಣ, ಶಿವಗಂಗಾ ಬಸವರಾಜು, ವಿಶ್ವಾಸ್ ವೈದ್ಯ, ನಾರಾ ಭರತ್ ರೆಡ್ಡಿ, ಪ್ರಕಾಶ್ ಕೋಳಿವಾಡ, ಕೆ.ಎಸ್.ಆನಂದ, ಮಂಥರ್ ಗೌಡ, ಚನ್ನಾರೆಡ್ಡಿ ಪಾಟೀಲ್, ದೇವೇಂದ್ರಪ್ಪ. ಡಿ.ರವಿಶಂಕರ್, ನಯನಾ ಮೋಟಮ್ಮ, ರಾಜಾವೇಣುಗೋಪಾಲ ನಾಯಕ, ಮಹೇಂದ್ರ ತಮ್ಮಣ್ಣನವರ್, ಎ.ಸಿ.ಶ್ರೀನಿವಾಸ, ಅಶೋಕ್ ಮನಗೂಳಿ, ಪಿ.ರವಿಕುಮಾರ್, ಬಾಬಾಸಾಹೇಬ್ ಪಾಟೀಲ್ ಸೇರಿ 31 ಶಾಸಕರು ಪತ್ರ ಬರೆದಿದ್ದಾರೆ.
ಸುರ್ಜೇವಾಲಾ ರಾಜ್ಯದಲ್ಲಿರುವಾಗಲೇ ಹೊಸ ದಾಳ..?
ಇನ್ನೂ ಪ್ರಮುಖವಾಗಿ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಬರೆಯಲಾಗಿರುವ ಪತ್ರದಲ್ಲಿ ಕಾಂಗ್ರೆಸ್ ಶಾಸಕರು ಹಲವು ಮನವಿಗಳನ್ನು ಮಾಡಿದ್ದಾರೆ. ಆದರೆ ಡಿಸೆಂಬರ್ ತಿಂಗಳಿನಲ್ಲಿ ಬರೆದು ಸಹಿಹಾಕಿ ಹೈಕಮಾಂಡ್ ನಾಯಕರಿಗೆ ನೀಡಲಾಗಿತ್ತು. ಆದರೆ ಆ ಪತ್ರ ರಾಜ್ಯ ಎಐಸಿಸಿ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ರಾಜ್ಯದಲ್ಲಿ ಇರುವಾಗಲೇ ಬಹಿರಂಗವಾಗಿದೆ. ಇದು ಕಾಂಗ್ರೆಸ್ ಪಕ್ಷದಲ್ಲಿಯೇ ಹೊಸ ರಾಜಕೀಯ ದಾಳ ಉರುಳಿಸಲು ಕಾಂಗ್ರೆಸ್ ನಾಯಕರು ಮಾಡಿಕೊಂಡಿರುವ ತಂತ್ರಗಾರಿಕೆಯೇ ಎನ್ನುವ ಪ್ರಶ್ನೆಯು ಉದ್ಭವಿಸಿದೆ.






