ಹಾಸನ: ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಸ್ವಂತ ಶಕ್ತಿ ಮೇಲೆ ಅಧಿಕಾರಕ್ಕೆ ಬರುವುದು ಖಚಿತ. ಅದರಲ್ಲಿ ಯಾವುದೇ ಅನುಮಾನ ಬೇಡ. ನಾವು ಅಧಿಕಾರಕ್ಕೆ ಬಂದ ನಂತರ ಈ 7ನೇ ವೇತನ ಆಯೋಗದ ವರದಿಯನ್ನು ಜಾರಿಗೊಳಿಸುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.
ಹಾಸನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಾವು ಸರ್ಕಾರಿ ನೌಕರರ ನೋವು, ಸಮಸ್ಯೆಗಳಿಗೆ ಸ್ಪಂದಿಸುತ್ತೇವೆ. ಅವರು ತಮ್ಮ ಹಕ್ಕನ್ನು ಕೇಳುತ್ತಿದ್ದು, ಅದನ್ನು ನೀಡಲು ಕಾಂಗ್ರೆಸ್ ಬದ್ಧವಾಗಿದೆ. ಅವರ ಹೋರಾಟ ಅವರ ಮೂಲಭೂತ ಹಕ್ಕು. ಈ ಸರ್ಕಾರ ರಾಜ್ಯವನ್ನು ಭ್ರಷ್ಟಾಚಾರದಲ್ಲಿ ಮುಳುಗಿಸಿದೆ ಎಂದು ಆರೋಪಿಸಿದರು.
ಹಿಂದೆ ನಮ್ಮ ಸರ್ಕಾರ 6ನೇ ವೇತನ ಆಯೋಗದ ವರದಿಯನ್ನು ಜಾರಿ ಮಾಡಿತ್ತು. ಎಲ್ಲ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಇಂದು ಕೂಡ ಅಡುಗೆ ಅನಿಲ ಸಿಲಿಂಡರ್ ಬೆಲೆ 50 ರೂ. ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ನೌಕರರು 7ನೇ ವೇತನ ಆಯೋಗದ ವರದಿ ಜಾರಿಗೆ ಅರ್ಹರಾಗಿದ್ದಾರೆ. ಈ ಹಿಂದೆ ಈ ವಿಚಾರವಾಗಿ ಮಾತು ನೀಡಿದ್ದರು. ಆದರೆ ಅವರು ನುಡಿದಂತೆ ನಡೆಯಲಿಲ್ಲ ಎಂದು ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಮಲ್ಲಿಕಾರ್ಜುನ ಖರ್ಗೆ ಅವರನ್ನು ರಬ್ಬರ್ ಸ್ಟಾಂಪ್ ಅಧ್ಯಕ್ಷರು ಎನ್ನುವ ರೀತಿಯಲ್ಲಿ ಬಿಂಬಿಸಿ, ಅವಹೇಳನ ಮಾಡಿದ್ದಾರೆ. ಒಬ್ಬ ದಲಿತ ನಾಯಕ ಗುಲ್ಬರ್ಗ ಪಟ್ಟಣ ಪಾಲಿಕೆ ಸದಸ್ಯ ಸ್ಥಾನದಿಂದ ಹಿಡಿದು 50 ವರ್ಷಗಳ ಕಾಲ ನಿರಂತರವಾಗಿ ಸಂಸದೀಯ ಜವಾಬ್ದಾರಿಯನ್ನು ನಿಭಾಯಿಸಿ ಸ್ವಂತ ಸಾಮರ್ಥ್ಯದ ಮೇಲೆ ಬೆಳೆದಿದ್ದಾರೆ. ಕಾಂಗ್ರೆಸ್ ಪಕ್ಷದ ಪ್ರಜಾಪ್ರಭುತ್ವ ವ್ಯವಸ್ಥೆಯ ಚುನಾವಣೆಯಲ್ಲಿ ಗೆದ್ದು ಅಧ್ಯಕ್ಷರಾಗಿ ಆಯ್ಕೆಯಾಗಿರುವವರ ವಿರುದ್ಧ ಈ ರೀತಿ ಮಾತನಾಡುವುದು ಸರಿಯಲ್ಲ. ಆದರೆ ನಮ್ಮ ಪಕ್ಷದಲ್ಲಿ ಸ್ವತಂತ್ರ್ಯವಾಗಿ ಕೆಲಸ ಮಾಡುತ್ತಿರುವ ಖರ್ಗೆ ಅವರ ಬಗ್ಗೆ ಪ್ರಧಾನಮಂತ್ರಿಗಳ ಮಾತು ಖಂಡನೀಯ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಗೌರವ ತರುವ ನಡೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಧಾನಿಗಳು ಯಡಿಯೂರಪ್ಪನವರಿಗೆ ತಲೆಬಾಗಿ ನಮಿಸಿದರೆ ಸಾಲದು. ಯಡಿಯೂರಪ್ಪ ಅವರ ಕಣ್ಣಲ್ಲಿ ನೀಕು ಹಾಕಿಸಿದ್ದು ಯಾಕೆ? ಎಂಬ ವಿಚಾರವಾಗಿ ಸ್ಪಷ್ಟತೆ ನೀಡಬೇಕು. ಅವರ ಕುಟುಂಬಕ್ಕೆ ತನಿಖೆ ಸಂಸ್ಥೆಗಳ ವಿಚಾರಣೆ ಹೆಸರಲ್ಲಿ ನೀಡಿದ ಕಿರುಕುಳದ ಬಗ್ಗೆ ಮಾತನಾಡಲಿ. ಅವರ ನಾಯಕತ್ವದಲ್ಲಿ ಚುನಾವಣೆ ನಡೆಸುವುದೇ ಆದರೆ, ಅವರನ್ನು ಇವತ್ತೇ ಮುಖ್ಯಮಂತ್ರಿಯನ್ನಾಗಿ ಮಾಡಲಿ ಎಂದು ಸವಾಲು ಹಾಕಿದರು.
ಬಿಜೆಪಿ ತನ್ನ ನಾಯಕರನ್ನು ಬಳಸಿ ಬಿಸಾಡುವ ಸಿದ್ಧಾಂತ ಹೊಂದಿದೆ. ಈ ವಿಚಾರದಲ್ಲಿ ಅನಗತ್ಯ ಗೊಂದಲ ಸೃಷ್ಟಿಸುವುದು ಬೇಡ. ರಾಜ್ಯದಲ್ಲಿ ಬಿಜೆಪಿ ನಾಯಕತ್ವ ಇಲ್ಲದ ಪಕ್ಷವಾಗಿದೆ. ಬೊಮ್ಮಾಯಿ ಅವರನ್ನು ಬಿಜೆಪಿಯವರೇ ನಾಯಕ ಎಂದು ಒಪ್ಪಿಕೊಳ್ಳುತ್ತಿಲ್ಲ. ಕೇಂದ್ರ ನಾಯಕರು ಇಲ್ಲಿ ಬಂದು ಚುನಾವಣೆ ಮಾಡಲು ಸಾಧ್ಯವಿಲ್ಲ. ಈ ಸರ್ಕಾರದ ಅವಧಿ ಇನ್ನು 30 ದಿನ ಮಾತ್ರ. ನಂತರ ನಿಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್ ಸರ್ಕಾರ ರಾಜ್ಯದ ಕಳಂಕ ತೊಡೆದು ಹಾಕಿ ನಾವು ಕೊಟ್ಟ ಮಾತು ಉಳಿಸಿಕೊಂಡು ದಕ್ಷ ಆಡಳಿತ ನೀಡಲಿದೆ ಎಂದು ಹೇಳಿದರು.

ವೀರೇಂದ್ರ ಪಾಟೀಲ್ ಹಾಗೂ ನಿಜಲಿಂಗಪ್ಪ ಅವರಿಗೆ ಕಾಂಗ್ರೆಸ್ ಅಪಮಾನ ಮಾಡಿತ್ತು ಎಂಬ ಬಿಜೆಪಿ ಆಪಾದನೆ ಕುರಿತ ಪ್ರಶ್ನೆಗೆ, ಮೋದಿ ಅವರು ನಿಜಲಿಂಗಪ್ಪ, ವೀರೇಂದ್ರ ಪಾಟೀಲ್ ವಿಚಾರ ಮಾತನಾಡುವ ಮುನ್ನ, ಅವರ ಪಕ್ಷದಲ್ಲಿ ಲಾಲ್ ಕೃಷ್ಣ ಆಡ್ವಾಣಿ, ಮುರಳಿ ಮನೋಹರ್ ಜೋಷಿ ಸೇರಿದಂತೆ ಅವರ ನಾಯಕರಿಗೆ ಏನು ಮಾಡಿದರು ಎಂದು ನೋಡಿಕೊಳ್ಳಲಿ. ನಾವು ನಿಜಲಿಂಗಪ್ಪ ಅವರಿಗೆ ಯಾವ ಅನ್ಯಾಯ ಮಾಡಿದ್ದೇವೆ? ವೀರೇಂದ್ರ ಪಾಟೀಲ್ ಅವರ ಕಾಲದಲ್ಲಿ ನಾನು ಶಾಸಕನಾಗಿದ್ದೆ. ವೀರೇಂದ್ರ ಪಾಟೀಲ್ ಅವರ ಆರೋಗ್ಯ ಏನಾಗಿತ್ತು ಎಂದು ನನಗೆ ಗೊತ್ತಿದೆ. ನಾನು ರಾಜೀವ್ ಗಾಂಧಿ ಅವರ ಜತೆ ಆಸ್ಪತ್ರೆಗೆ ಹೋಗಿದ್ದೆ. ಅವರ ಆರೋಗ್ಯ ಪರಿಸ್ಥಿತಿ ವಿಚಾರಿಸಿದರು. ಅವರು ಚೇತರಿಸಿಕೊಳ್ಳುವ ಸ್ಥಿತಿ ಇರಲಿಲ್ಲ. ಹೀಗಾಗಿ ಚರ್ಚೆ ಮಾಡಿ, ವೀರೇಂದ್ರ ಪಾಟೀಲ್ ಅವರನ್ನು ಬದಲಿಸುವ ತೀರ್ಮಾನ ಮಾಡಲಾಯಿತು. ಅವರ ಕುಟುಂಬದ ಸದಸ್ಯರಿಗೆ ಅವಕಾಶ ಮಾಡಿಕೊಟ್ಟಿದ್ದೇವೆ. ಪ್ರಧಾನಮಂತ್ರಿಗಳು ಭಾವನೆ ಬಗ್ಗೆ ಮಾತನಾಡುವ ಬದಲು ಬದುಕಿನ ಬಗ್ಗೆ ಮಾತನಾಡಬೇಕು ಎಂದರು.
ಹಾಸನದಲ್ಲಿ ನೀವು ಸ್ವರೂಪ್ ಅವರ ಜತೆ ಸಂಪರ್ಕದಲ್ಲಿದ್ದು ಪಕ್ಷಕ್ಕೆ ಸೇರಿಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆಯೇ ಎಂದು ಕೇಳಿದಾಗ, ರಾಜಕೀಯದಲ್ಲಿ ಎಲ್ಲ ಸಾಧ್ಯತೆಗಳ ಬಗ್ಗೆಯೂ ಚರ್ಚೆ ಆಗುತ್ತದೆ. ನಾನು ಎ. ಮಂಜು ಅವರ ಜತೆ ಮಾತನಾಡಿದ್ದು ನಿಜ. ಸ್ವರೂಪ್ ಎಲ್ಲ ಪಕ್ಷದ ಜತೆ ಮಾತನಾಡುತ್ತಿದ್ದಾರೆ. ಎ.ಟಿ ರಾಮಸ್ವಾಮಿ ಅವರು ನನ್ನನ್ನು ಭೇಟಿ ಮಾಡಿ ಮಾತನಾಡಿ ಮನವಿ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷ ಈ ಬಗ್ಗೆ ಇನ್ನು ತೀರ್ಮಾನ ಮಾಡಬೇಕಿದೆ ಎಂದರು.
ಟಿಕೆಟ್ ಹಂಚಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ಈ ತಿಂಗಳು 7-8 ರಂದು ನಮ್ಮ ಪಕ್ಷದ ಸ್ಕ್ರೀನಿಂಗ್ ಕಮಿಟಿ ಸಭೆ ನಡೆಯಲಿದೆ. ನಂತರ ನಾವು ಅಂತಿಮ ಪಟ್ಟಿ ಪ್ರಕಟಿಸುತ್ತೇವೆ ಎಂದರು.
ತನ್ವೀರ್ ಸೇಠ್ ಅವರು ರಾಜಕೀಯ ನಿವೃತ್ತಿ ಬಗ್ಗೆ ಮಾತನಾಡಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ಅವರು ಆರೋಗ್ಯದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಅವರು ಪಕ್ಷದ ಆಧಾರಸ್ತಂಭ. ಅವರು ಈ ವಿಚಾರವಾಗಿ ನನ್ನ ಹಾಗೂ ಸಿದ್ದರಾಮಯ್ಯ ಅವರ ಬಳಿ ಮಾತನಾಡಿದ್ದಾರೆ. ಈಗ ಅವರು ಕಾರ್ಯಕರ್ತರ ಅಭಿಪ್ರಾಯ ಪಡೆದು ತೀರ್ಮಾನ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ ಎಂದರು.
ಶಿವಮೊಗ್ಗದಲ್ಲಿ ಕನಿಷ್ಠ 500 ಕೋಟಿ ಬಂಡಾಳ ಹೂಡಿಕೆ ಮಾಡಲು ಯಾರೊಬ್ಬರೂ ಮುಂದೆ ಬರುತ್ತಿಲ್ಲ. ಮಂಗಳೂರು, ಉಡುಪಿಯಲ್ಲಿ ಯಾಕೆ ಬಂಡವಾಳ ಹೂಡಿಕೆಯಾಗುತ್ತಿಲ್ಲ. ಹೂಡಿಕೆದಾರರಿಗೆ ಶಾಂತಿಯುತ ಪರಿಸರ ಬೇಕು. ಅದು ಸಿಗುತ್ತಿಲ್ಲ. ಬಂಡವಾಳ ಹೂಡಿಕೆ ಸಮಾವೇಶದಲ್ಲಿ 10 ಲಕ್ಷ ಕೋಟಿ ಬಂತು ಎನ್ನುತ್ತಾರೆ. ಎಲ್ಲೆಲ್ಲಿ ಹೂಡಿಕೆಯಾಗುತ್ತಿದೆ ಎಂಬ ಪಟ್ಟಿ ಬಿಡುಗಡೆ ಮಾಡಲಿ ಎಂದರು.
200 ಯುನಿಟ್ ವಿದ್ಯುತ್ ಉಚಿತ ನೀಡುವುದು ಅಸಾಧ್ಯ ಎಂಬ ರೇವಣ್ಣ ಅವರ ಹೇಳಿಕೆ ಬಗ್ಗೆ ಕೇಳಿದಾಗ, ಈಗ ಬಜೆಟ್ ನಲ್ಲಿ ಬಿಪಿಎಲ್ ಕುಟುಂಬಗಳಿಗೆ 500 ರೂ. ನೀಡುವುದಾಗಿ ಹೇಳಿ ಈಗ 1000 ನೀಡುವುದಾಗಿ ಹೇಳಿದ್ದಾರೆ. ಇವರ 40% ಕಮಿಷನ್ ಹಾಗೂ ಟೆಂಡರ್ ಅಕ್ರಮ ನಿಲ್ಲಿಸಿದರೆ ಸಾಕು. ಈ ಯೋಜನೆಗಳನ್ನು ಜಾರಿ ಮಾಡಬಹುದು ಎಂದು ತಿಳಿಸಿದರು.
ಮೋದಿ ಸಾಯಲಿ ಎಂದು ಕಾಂಗ್ರೆಸ್ ಬಯಸುತ್ತಿದೆ ಎಂಬ ಹೇಳಿಕೆ ಬಗ್ಗೆ ಕೇಳಿದಾಗ, ಮಾನವೀಯತೆ ಹಾಗೂ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ನಾಯಕರನ್ನು ಒಳಗೊಂಡ ಪಕ್ಷ ಯಾವುದಾದರೂ ಇದ್ದರೆ ಅದು ಕಾಂಗ್ರೆಸ್ ಮಾತ್ರ. ನಾವು ಯಾರ ಸಾವನ್ನೂ ಬಯಸುವುದಿಲ್ಲ. ನಾವು ಜನರ ಹೊಟ್ಟೆ ತುಂಬಿಸುವ ಬಗ್ಗೆ ಮಾತ್ರ ಯೋಚಿಸುತ್ತೇವೆ ಎಂದರು.