ಮಲಪ್ಪುರಂ (ಕೇರಳ) : ಕಾಂಗ್ರೆಸ್ನ ಮಿತ್ರಪಕ್ಷ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಜಮಾತ್-ಎ-ಇಸ್ಲಾಮಿ, ಎಸ್ಡಿಪಿಐನಂತಹ ಕೋಮುವಾದಿ ಸಂಘಟನೆಗಳ ದಾಳವಾಗಿದೆ ಎಂದು ಕೇರಳ ಮುಖ್ಯ ಮಂತ್ರಿ ಪಿಣರಾಯಿ ವಿಜಯನ್ ಆರೋಪಿಸಿದ್ದಾರೆ.ಜಮಾತ್ ಎ ಇಸ್ಲಾಮಿ ಮತ್ತು ಎಸ್ಡಿಪಿಐ ಮೇಲೆ ಭಯೋತ್ಪಾದನೆ, ಕೋಮುಗಲಭೆ ನಡೆಸಿದ ಆರೋಪಗಳನ್ನು ಹೊಂದಿವೆ.
ಅಂತಹ ಸಂಘಟನೆಗಳೊಂದಿಗೆ ಮುಸ್ಲಿಂ ಲೀಗ್ ಕೈಜೋಡಿಸುತ್ತಿದೆ. ಇದು ಮುಂದಿನ ದಿನಗಳಲ್ಲಿ ದೊಡ್ಡ ಪರಿಣಾಮಗಳಿಗೆ ಕಾರಣವಾಗಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು. ಶುಕ್ರವಾರ ಮಲಪ್ಪುರಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಪಿಣರಾಯಿ, ಮುಸ್ಲಿಂ ಲೀಗ್ ಕೋಮುವಾದಿ ಶಕ್ತಿಗಳಿಗೆ ಶರಣಾಗುವ ಸ್ಥಿತಿಯಲ್ಲಿದೆ. ಇದೇ ಪ್ರವೃತ್ತಿ ಮುಂದುವರಿದರೆ ಲೀಗ್ ಅನ್ನೇ ದುರುಳರು ಕಬಳಿಸುತ್ತಾರೆ. ಇಂತಹ ರಾಜಕೀಯದ ಅಪಾಯವನ್ನು ಗುರುತಿಸಲು ವಿಫಲವಾದರೆ, ಮುಸ್ಲಿಂ ಲೀಗ್ ವಿನಾಶಕಾರಿ ಪರಿಣಾಮಗಳಿಗೆ ಕಾರಣವಾಗಬಹುದು ಎಂದು ಎಚ್ಚರಿಕೆ ನೀಡಿದರು.
ವಿಪಕ್ಷಗಳ I.N.D.I.A ಕೂಟದ ಮಿತ್ರಪಕ್ಷವಾಗಿರುವ ಕಾಂಗ್ರೆಸ್ ವಿರುದ್ಧವೂ ವಾಗ್ದಾಳಿ ನಡೆಸಿರುವ ಕೇರಳ ಸಿಎಂ, ಕೆಲವು ಮತಗಳಿಗಾಗಿ ಕಾಂಗ್ರೆಸ್ ಯಾವುದೇ ರಾಜಿಗೂ ಸಿದ್ಧವಾಗುತ್ತದೆ ಎಂದು ಹೇಳುವ ಮೂಲಕ ಆ ಪಕ್ಷವು ಮುಸ್ಲಿಮರ ಅತಿಯಾದ ಓಲೈಕೆಯನ್ನು ಮಾಡುತ್ತಿದೆ ಎಂದು ಟೀಕಿಸಿದರು. ಒಂದು ಸಮುದಾಯದ ಕೆಲವೇ ಮತಗಳಿಗಾಗಿ ಹೊಂದಾಣಿಕೆ ಮಾಡಿಕೊಳ್ಳುವ ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ನ ನಿಲುವು ಅಪಾಯಕಾರಿ. ಕಾಂಗ್ರೆಸ್ ನಿಜವಾಗಿಯೂ ಕೋಮುವಾದದ ವಿರುದ್ಧ ಹೋರಾಡುವ ಪಕ್ಷವೆಂದು ಹೇಳಿಕೊಳ್ಳಬಹುದೇ? ಎಂದು ಪಿಣರಾಯಿ ಪ್ರಶ್ನಿಸಿದರು.
ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಬಿಜೆಪಿಗೆ ಸೇರುತ್ತಿದ್ದಾರೆ. ಸಂಘ ಪರಿವಾರದ ಕಾರ್ಯಗಳನ್ನು ಬಹಿರಂಗವಾಗಿ ಪ್ರಶಂಸಿಸುತ್ತಿದ್ದಾರೆ. ಇದೆಲ್ಲವನ್ನೂ ಆ ಪಕ್ಷವು ನಿಯಂತ್ರಿಸಿಲ್ಲ. ಹಿಂದಿನ ತಪ್ಪುಗಳಿಂದ ಆ ಪಕ್ಷವು ಏನನ್ನೂ ತಿದ್ದಿಕೊಂಡಿಲ್ಲ ಎಂದು ಅವರು ಕುಟುಕಿದರು. ಬಿಜೆಪಿಯನ್ನು ಟೀಕಿಸಿದ ವಿಜಯನ್, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಅವಮಾನಿಸಿದ್ದಾರೆ. ಕೇಂದ್ರ ಸರ್ಕಾರವು ಕಾಂಗ್ರೆಸ್ನ ನೀತಿಗಳನ್ನೇ ಅನುಸರಿಸುತ್ತಿದೆ. ಉದಾರೀಕರಣದಂತಹ ನೀತಿಗಳನ್ನು ಪರಿಚಯಿಸುವುದು ತಪ್ಪು ಎಂದು ಕಾಂಗ್ರೆಸ್ಗೆ ಈಗಲಾದರೂ ಅರಿವಾಗಿದೆಯೇ ಎಂದು ಕೇಳಿದರು. ಕೇಂದ್ರ ಸರ್ಕಾರವು ತನ್ನ ವೈಫಲ್ಯಗಳಿಂದ ಸಾರ್ವಜನಿಕರ ಗಮನವನ್ನು ಬೇರೆಡೆಗೆ ಸೆಳೆಯಲು ಧಾರ್ಮಿಕ ವಿಚಾರಗಳನ್ನು ಮುನ್ನೆಲೆಗೆ ತರುತ್ತದೆ. ರಾಜ್ಯದಲ್ಲಿ ತಮ್ಮ ಸರ್ಕಾರ ಪರ್ಯಾಯ ಉದಾರೀಕರಣ ನೀತಿಗಳನ್ನು ಜಾರಿಗೆ ತರುತ್ತಿದೆ ಎಂದು ಕೇರಳ ಮುಖ್ಯಮಂತ್ರಿ ಹೇಳಿದರು.