ಮುಡಾ ಹಗರಣದಲ್ಲಿ ಖಾಸಗಿ ದೂರು ಒಂದು ಕಡೆಯಾದರೆ ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಕೊಟ್ಟಿದ್ದನ್ನು ಹೈಕೋರ್ಟ್ ಎತ್ತಿ ಹಿಡಿಯುವ ಕೆಲಸ ಮಾಡಿತ್ತು. ಆ ಬಳಿಕ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಅನ್ನೋ ಆಕ್ರೋಶ ಹೆಚ್ಚಾಗಿತ್ತು. ಬಿಜೆಪಿ-ಜೆಡಿಎಸ್ ಎರಡೂ ಪಕ್ಷಗಳ ನಾಯಕರು ರಾಜೀನಾಮೆಗೆ ಆಗ್ರಹ ಮಾಡಿದ್ದರು. ಆದರೆ ಕಾಂಗ್ರೆಸ್ ಸರ್ಕಾರ ಒಂದೆರಡು ದಿನದಲ್ಲಿ ಮೈತ್ರಿ ನಾಯಕರ ಬಾಯಿ ಮುಚ್ಚಿಸುವಲ್ಲಿ ಸಫಲವಾಗಿದೆ. ಇದೀಗ ಬಿಜೆಪಿ ನಾಯಕರು ಸಿದ್ದರಾಮಯ್ಯ ರಾಜೀನಾಮೆ ಕೇಳುವುದನ್ನು ಸ್ವತಃ ತಾವೇ ಬಿಟ್ಟು ಬಿಡುವಂತಾಗಿದೆ. ಒಂದು ವೇಳೆ ರಾಜೀನಾಮೆ ಕೇಳಿದರೆ ಕಾಂಗ್ರೆಸ್ ಸರ್ಕಾರ ಹೂಡಿರುವ ಬಲೆಯಲ್ಲಿ ಸಿಕ್ಕಿ ಬೀಳುತ್ತಾರೆ.
ಕೇಂದ್ರ ಸರ್ಕಾರ ನಡೆಸಿದ ಚುನಾವಣಾ ಬಾಂಡ್ ಅಕ್ರಮ ಎಂದು ಈಗಾಗಲೇ ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟು ಎಲೆಕ್ಷನ್ ಬಾಂಡ್ ಖರೀದಿಗೆ ತಡೆ ನೀಡಿದೆ. ಇನ್ನು ಯಾವೆಲ್ಲಾ ಕಂಪನಿಗಳು ಎಷ್ಟು ಹಣವನ್ನು ಚುನಾವಣಾ ಬಾಂಡ್ ಮೂಲಕ ಖರೀದಿ ಮಾಡಿದ್ದಾರೆ ಎನ್ನುವುದನ್ನು ಬಹಿರಂಗ ಮಾಡಬೇಕು ಎಂದು ಚುನಾವಣಾ ಆಯೋಗಕ್ಕೆ ಸೂಚನೆ ನೀಡಲಾಗಿತ್ತು. ಅದರಂತೆ ಈಗಾಗಲೇ ಚುನಾವಣಾ ಆಯೋಗದ ವೆಬ್ಸೈಟ್ನಲ್ಲಿ ಲಿಸ್ಟ್ ಹಾಕಲಾಗಿದೆ. ಈ ನಡುವೆ ರಾಜ್ಯದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗು ಜಾರಿ ನಿರ್ದೇಶನಾಲಯದ ವಿರುದ್ಧ ದೂರು ದಾಖಲಾಗಿದೆ.
ತಿಲಕ್ ನಗರ ಠಾಣೆಯಲ್ಲಿ ಎಫ್ಐಆರ್ ದಾಖಲು ಆಗಿದ್ದು, ಸಿದ್ದರಾಮಯ್ಯ ರಾಜೀನಾಮೆ ಕೇಳುವುದಾದರೆ ನಿರ್ಮಲಾ ಸೀತಾರಾಮನ್ ಅವರ ರಾಜೀನಾಮೆಯನ್ನು ಸ್ವತಃ ಬಿಜೆಪಿ, ಜೆಡಿಎಸ್ ನಾಯಕರೇ ಕೇಳಬೇಕಿದೆ. ಸಿದ್ದರಾಮಯ್ಯ ವಿರುದ್ಧ ಖಾಸಗಿ ದೂರು ದಾಖಲಿಸಿದಂತೆ ನಿರ್ಮಲಾ ವಿರುದ್ಧವೂ ಖಾಸಗಿ ದೂರು ದಾಖಲು ಮಾಡಿ, ತನಿಖೆ ಮಾಡುವಂತೆ ಕೋರ್ಟ್ ಸೂಚನೆ ಕೊಟ್ಟಿದೆ. ಇದೀಗ ನಿರ್ಮಲಾ ಸೀತಾರಾಮನ್ ಅವರನ್ನು ವಿಚಾರಣೆಗೆ ಕರೆಯಲು ನೋಟಿಸ್ ನೀಡುವ ತಯಾರಿಯಲ್ಲಿದೆ ಪೊಲೀಸ್ ಇಲಾಖೆ. ಜನಾಧಿಕಾರ ಸಂಘರ್ಷ ಸಮಿತಿ ದಾಖಲಿಸಿದ್ದ ಕೇಸ್ ವಿಚಾರಣೆ ನಡೆಸಿದ್ದ MP MLA ಕೋರ್ಟ್ FIR ದಾಖಲು ಮಾಡಿ ತನಿಖೆಗೆ ಸೂಚನೆ ನೀಡಿತ್ತು.
ಶುಕ್ರವಾರ ಕೋರ್ಟ್ ಆದೇಶ ಆಗುತ್ತಿದ್ದಂತೆ ಶನಿವಾರ ಎಫ್ಐಆರ್ ಆಗಿದೆ. ಭಾನುವಾರ ರಾಜೀನಾಮೆ ಕೇಳುವ ಬಿಜೆಪಿ ನಾಯಕರ ಸಂಖ್ಯೆ ಇಳಿಮುಖವಾಗಿದೆ. ಇನ್ಮುಂದೆ ಎಫ್ಐಆರ್ ಆಗಿದೆ ಎನ್ನುವ ಕಾರಣಕ್ಕೆ ರಾಜೀನಾಮೆ ಕೇಳಿದರೆ. ಮೊದಲು ನಿರ್ಮಲಾ ಸೀತಾರಾಮನ್ ರಾಜೀನಾಮೆ ಕೇಳಿ ಎನ್ನುವುದು ಕಾಂಗ್ರೆಸ್ ಕೊಡುವ ರೆಡಿಮೇಡ್ ಉತ್ತರ ಆಗಿರಲಿದೆ. ಎಫ್ಐಆರ್ ಅಷ್ಟೇ ಆಗಿದೆ, ತನಿಖೆ ನಡೆಸಲಿ, ಚಾರ್ಜ್ ಶೀಟ್ ಹಾಕಲಿ ಎಂದು ಬಿಜೆಪಿ ನಾಯಕರು ಹೇಳಿದರೆ ಸಿದ್ದರಾಮಯ್ಯಗೂ ಅದೇ ರೀತಿ ತನಿಖೆ ನಡೆದು ಚಾರ್ಜ್ಶೀಟ್ ಹಾಕಲಿ, ಅಲ್ಲೀವರೆಗೂ ತಾಳ್ಮೆಯಿಂದ ಇರಿ ಎನ್ನುವ ತಿರುಗೇಟು ಕಾಂಗ್ರೆಸ್ ಕಡೆಯಿಂದ ಬರುವುದು ಶತಸಿದ್ಧ. ಒಟ್ಟಾರೆ ಬಿಜೆಪಿ ಆರ್ಭಟವನ್ನು ಕಾಂಗ್ರೆಸ್ ಒಂದೆರಡು ದಿನದಲ್ಲಿ ತಣಿಸಿದೆ ಎನ್ನುವುದು ಮಾತ್ರ ಸತ್ಯ.