ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರುವುದಕ್ಕೆ ಕ್ಷಣಗಣನೆ ಆರಂಭವಾಗಿದೆ. ಮಂತ್ರಿ ಮಂಡಲ ಸಮೇತವಾಗಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯಾಗಿ ಶನಿವಾರ ಮಧ್ಯಾಹ್ನ 12.30ಕ್ಕೆ ಪದಗ್ರಹಣ ಕಾರ್ಯಕ್ರಮಕ್ಕೆ ತಯಾರಿ ನಡೆಯುತ್ತಿದೆ. ದೆಹಲಿಯಲ್ಲಿ ಹಗ್ಗಾಜಗ್ಗಾಟದ ಬಳಿಕ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೂ ಡಿ.ಕೆ ಶಿವಕುಮಾರ್ ಉಪಮುಖ್ಯಮಂತ್ರಿ ಸ್ಥಾನಕ್ಕೂ ಹಕ್ಕುದಾರರಾಗಿ, ಬೆಂಗಳೂರಿಗೆ ವಾಪಸ್ ಆಗಿದ್ದಾರೆ. HAL ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದ ಹಾಗೆ ನೂರಾರು ಜನರು ಅದ್ಧೂರಿಯಾಗಿ ಸ್ವಾಗತ ಮಾಡಿದ್ದಾರೆ. ಸಂಜೆ 7 ಗಂಟೆಗೆ ಕೆಪಿಸಿಸಿ ಕಚೇರಿಯಲ್ಲಿ ಶಾಸಕಾಂಗ ಸಭೆ ಬಳಿಕ ಮತ್ತೆ ದೆಹಲಿಗೆ ವಾಪಸ್ ತೆರಳಿ, ಮಂತ್ರಿ ಮಂಡಲದಲ್ಲಿ ಯಾರನ್ನು ಸೇರಿಸಿಕೊಳ್ಳಬೇಕು ಅನ್ನೋ ಬಗ್ಗೆ ಹೈಕಮಾಂಡ್ ಜೊತೆಗೆ ಚರ್ಚೆ ನಡೆಸಿ ಅಂತಿಮ ನಿರ್ಧಾರ ಮಾಡಲಾಗುವುದು ಎನ್ನಲಾಗಿದೆ.
ಲಿಂಗಾಯತರನ್ನು ನಿರ್ಲಕ್ಷ್ಯ ಮಾಡಿತೇ ಕಾಂಗ್ರೆಸ್..?

ಈಗ ಸದ್ಯಕ್ಕೆ ಹಿಂದುಳಿದ ಕುರುಬ ಸಮುದಾಯದ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿ ಆಯ್ಕೆ ಆಗಿದ್ದಾರೆ. ಇನ್ನು ಒಕ್ಕಲಿಗ ಸಮುದಾಯದ ಡಿ,ಕೆ ಶಿವಕುಮಾರ್ಗೆ ಉಪಮುಖ್ಯಮಂತ್ರಿ ಮಾಡುವ ಮೂಲಕ ಒಕ್ಕಲಿಗರಿಗೂ ಸ್ಥಾನಮಾನ ನೀಡುವ ಮೂಲಕ ಗೌರವ ಕೊಡಲಾಗಿದೆ. ಆದರೆ ಕಾಂಗ್ರೆಸ್ನ ಈ ಅಭೂತಪೂರ್ವ ಗೆಲುವಿನಲ್ಲಿ ಲಿಂಗಾಯತ ಸಮುದಾಯದ ಕೊಡುಗೆಯೂ ಇದೆ. ಆದರೆ ಉಪಮುಖ್ಯಮಂತ್ರಿ ಆಗಿ ಯಾರನ್ನೂ ಮಾಡುತ್ತಿಲ್ಲ. ಕೇವಲ ಓರ್ವ ಡಿಸಿಎಂ ಎಂದು ಕಾಂಗ್ರೆಸ್ ಹೈಕಮಾಂಡ್ ಅಧಿಕೃತವಾಗಿ ಘೋಷಣೆ ಮಾಡಿ ಆಗಿದೆ. ಹೀಗಾಗಿ ಲಿಂಗಾಯತ ಸಮುದಾಯವನ್ನು ಕಡೆಗಣಿಸುವ ಕೆಲಸ ಆಯ್ತಾ..? ಅನ್ನೋ ಚರ್ಚೆ ಶುರುವಾಗಿದೆ. ಒಂದು ವೇಳೆ ಲಿಂಗಾಯತರು ಬಿಜೆಪಿಯನ್ನೇ ಹಿಂಬಾಲಿಸಿದ್ದರೆ ಕಾಂಗ್ರೆಸ್ಗೆ ಬಹುಮತ ಸಾಧ್ಯವೇ ಇರಲಿಲ್ಲ. ಆದರೂ ಲಿಂಗಾಯತರನ್ನು ದೂರ ತಳ್ಳುವ ಕೆಲಸ ಮಾಡಿದ್ದು ಯಾಕೆ..? ಅನ್ನೋದು ಯಕ್ಷಪ್ರಶ್ನೆಯಾಗಿದೆ.
ದಲಿತರಿಗೂ ಶುರುವಾಗಿದೆ ಅಸಮಾಧಾನ..! ಮುಂದೇನು..?

ಡಿಸಿಎಂ ಹುದ್ದೆಗೆ ಸಾಂವಿಧಾನಿಕವಾಗಿ ಯಾವುದೇ ಸ್ಥಾನಮಾನವಿಲ್ಲ. ಆದರೂ ಗೌರವಕ್ಕಾಗಿ ಡಿಸಿಎಂ ಪೋಸ್ಟ್ ಕ್ರಿಯೇಟ್ ಮಾಡಲಾಗುತ್ತದೆ. ಆದರೂ ಡಿ.ಕೆ ಶಿವಕುಮಾರ್ಗೆ ಡಿಸಿಎಂ ಪೋಸ್ಟ್ ಕೊಡಲಾಗಿದೆ. ಆದರೆ ಡಿಕೆ ಶಿವಕುಮಾರ್ ಒಬ್ಬನೇ ಉಪಮುಖ್ಯಮಂತ್ರಿ ಇರಬೇಕು, ಬೇರೆ ಯಾರೂ ಉಪಮುಖ್ಯಮಂತ್ರಿ ಮಾಡುವಂತಿಲ್ಲ ಅನ್ನೋ ಷರತ್ತು ಹಾಕಿದ್ದಾರೆ ಎನ್ನಲಾಗಿದೆ. ಆದರೂ ದಲಿತ ಸಮುದಾಯದಲ್ಲಿ ಆಕ್ರೋಶ ಭುಗಿಲೆದ್ದಿದೆ. ಈ ಬಗ್ಗೆ ಅಸಮಾಧಾನದಲ್ಲಿ ಮಾತನಾಡಿರುವ ಸತೀಶ್ ಜಾರಕಿಹೊಳಿ, ಡಿಸಿಎಂ ಸ್ಥಾನಕ್ಕೆ ಯಾವುದೇ ಮಾನ್ಯತೆ ಇಲ್ಲ. ಸಮಾಧಾನ ಪಡಿಸಲು, ಗೌರವ ನೀಡಲು ಡಿಸಿಎಂ ಸ್ಥಾನ ಕೊಡಲಾಗುತ್ತದೆ ಎಂದಿದ್ದಾರೆ. ಮತ್ತೋರ್ವ ದಲಿತ ಸಮುದಾಯದ ನಾಯಕ ಡಾ ಜಿ.ಪರಮೇಶ್ವರ್ ಮಾತನಾಡಿ, ದಲಿತ ಸಮುದಾಯ ನಿರೀಕ್ಷೆ ಬಹಳ ದೊಡ್ಡದಿದೆ. ಅದನ್ನು ಅರ್ಥ ಮಾಡಿಕೊಂಡು ವರಿಷ್ಠರು ತೀರ್ಮಾನಿಸ್ತಾರೆ. ಇಲ್ಲದಿದ್ರೆ ಸ್ವಾಭಾವಿಕವಾಗಿ ಸಮುದಾಯದ ಪ್ರತಿಕ್ರಿಯೆ ಇದ್ದೇ ಇರುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ.
ಲಿಂಗಾಯತರನ್ನು ಸಮಾಧಾನ ಮಾಡುತ್ತಾ ಹೈಕಮಾಂಡ್..?

ಲಿಂಗಾಯತ ಸಮುದಾಯಕ್ಕೆ ಉತ್ತಮ ಸ್ಥಾನಮಾನ ಕೊಡಬೇಕು ಅಂತಾ ಸಾಕಷ್ಟು ಒತ್ತಾಯ ಕೇಳಿ ಬಂದಿತ್ತು. ಇದೀಗ ಲಿಂಗಾಯತ ಸಮುದಾಯಕ್ಕೆ ಸಚಿವ ಸ್ಥಾನಗಳನ್ನು ನೀಡುವ ಮೂಲಕ ಸಮಾಧಾನ ಮಾಡಲಾಗುತ್ತೆ ಎನ್ನಲಾಗ್ತಿದೆ. ಆದರೂ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರಿಗೆ ಡಿಸಿಎಂ ಸ್ಥಾನ ನೀಡಬೇಕು. ಈಶ್ವರ ಖಂಡ್ರೆ ಡಿಸಿಎಂ ಸ್ಥಾನ ಪಡೆಯಲು ಯೋಗ್ಯರಿದ್ದಾರೆ ಎಂದು ಯಾದಗಿರಿಯಲ್ಲಿ ನೂತನ ಕಾಂಗ್ರೆಸ್ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಹೇಳಿದ್ದಾರೆ. ಸಿದ್ದರಾಮಯ್ಯ ಆಡಳಿತದಲ್ಲಿ ಮೂರು ನಾಲ್ಕು ಡಿಸಿಎಂ ಸ್ಥಾನ ಕೊಡಬಹುದು, ಆದ್ರೆ ಯಾವಾಗ ಅನ್ನೋದು ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟಿದ್ದು ಅನ್ನೋ ಮಾತುಗಳು ಕೇಳಿ ಬಂದಿವೆ. ಲಿಂಗಾಯತರಿಗೆ ಡಿಸಿಎಂ ಸ್ಥಾನ ನೀಡದಿದ್ರೆ ಮುಂದಿನ ದಿನಗಳಲ್ಲಿ ಸಂಕಷ್ಟ ಕಟ್ಟಿಟ್ಟ ಬುತ್ತಿ ಅನ್ನೋ ಸಂದೇಶಗಳೂ ಹರಿದಾಡ್ತಿವೆ.
ಕೃಷ್ಣಮಣಿ