ಕಾಂಗ್ರೆಸಿನ ಇಂದಿನ ದೈನೇಸಿ ಸ್ಥಿತಿಗೆ ಆ ಪಕ್ಷ ಅನುಸರಿಸುವ ಇಂತಹ ನಸುಗುನ್ನಿ ಧೋರಣೆಗಳೇ ಕಾರಣ. ಇತ್ತೀಚೆಗೆ ರಾಜಸ್ಥಾನದ ಉದಯಪುರದಲ್ಲಿ ಮೂರು ದಿನ ನವ ಸಂಕಲ್ಪ ಶಿಬಿರ ಅಥವಾ ಚಿಂತನ ಶಿಬಿರ ನಡೆಸಿತು. ಬಳಿಕ ‘ಉದಯಪುರದ ನಿರ್ಣಯಗಳನ್ನು’ ಅಂಗೀಕರಿಸಿತು. ಅವುಗಳೆಂದರೆ ಪಕ್ಷದಲ್ಲಿ ವಂಶಪಾರಂಪರ್ಯ ರಾಜಕಾರಣಕ್ಕೆ ಕಡಿವಾಣ ಹಾಕಬೇಕು. ಐದು ವರ್ಷ ಸೇವೆ ಸಲ್ಲಿಸಿದ ಬಳಿಕವೇ ಕುಟುಂಬದವರಿಗೆ ಅವಕಾಶ ಕಲ್ಪಿಸಬೇಕು. ರಾಜ್ಯಸಭೆಗೆ ಎರಡಕ್ಕಿಂತ ಹೆಚ್ಚು ಬಾರಿ ಅವಕಾಶ ನೀಡಬಾರದು. 75 ವರ್ಷ ಮೀರಿದವರಿಗೆ ಅವಕಾಶ ನೀಡಬಾರದು. ಒಬ್ಬರಿಗೆ 5 ವರ್ಷ ಮಾತ್ರ ಅಧಿಕಾರ ನೀಡಬೇಕು. ಯುವಕರಿಗೆ ಆದ್ಯತೆ ನೀಡಬೇಕು. ಪಕ್ಷ ಮತ್ತು ಸರ್ಕಾರದಲ್ಲಿ ಶೇಕಡಾ 50ರಷ್ಟನ್ನು ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದವರಿಗೆ ಮತ್ತು ಯುವಕರಿಗೆ ನೀಡಬೇಕು ಇತ್ಯಾದಿ.
ರಾಜ್ಯಸಭೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಚಿಂತನ ಶಿಬಿರದ ಯಾವುದಾದರೂ ಚಿಂತನೆಯನ್ನು ಜಾರಿಗೊಳಿಸಿದೆಯಾ? ಕರ್ನಾಟಕದಿಂದ ಜೈರಾಂ ರಮೇಶ್, ಛತ್ತೀಸ್ಗಢದಿಂದ ರಾಜೀವ್ ಶುಕ್ಲಾ ಮತ್ತು ರಂಜಿತ್ ರಂಜನ್, ಹರಿಯಾಣದಿಂದ ಅಜಯ್ ಮಾಕೆನ್, ಮಧ್ಯಪ್ರದೇಶದಿಂದ ವೀವೇಕ್ ಟಂಕಾ, ಮಹಾರಾಷ್ಟ್ರದಿಂದ ಇಮ್ರಾನ್ ಪ್ರತಾಪ್ಗರ್ಹಿ, ರಾಜಸ್ಥಾನದಿಂದ ರಣದೀಪ್ ಸಿಂಗ್ ಸುರ್ಜೆವಾಲಾ, ಮುಕುಲ್ ವಾಸ್ನಿಕ್ ಮತ್ತು ಪ್ರಮೋದ್ ತಿವಾರಿ ಹಾಗೂ ತಮಿಳುನಾಡಿನಿಂದ ಪಿ. ಚಿದಂಬರಂ ಅವರಿಗೆ ಟಿಕೆಟ್ ಕೊಟ್ಟಿದೆ.
ಈ ಪೈಕಿ ಜೈರಾಂ ರಮೇಶ್, ರಾಜೀವ್ ಶುಕ್ಲಾ, ವೀವೇಕ್ ಟಂಕಾ ಮತ್ತು ಪ್ರಮೋದ್ ತಿವಾರಿ ಬ್ರಾಹ್ಮಣರು. ಕಾಂಗ್ರೆಸ್ ಪಕ್ಷ ಯಾವ ಆಧಾರದಲ್ಲಿ 10ರಲ್ಲಿ 4 ಸೀಟುಗಳನ್ನು ಬ್ರಾಹ್ಮಣರಿಗೆ ನೀಡಿದೆ? ಅವರು ಪಕ್ಷಕ್ಕೆ ನೀಡಿದ ಕೊಡುಗೆ ಪರಿಗಣಿಸಿ ನೀಡಲಾಗಿದೆ ಎಂದು ಹೇಳಿದರೆ ಅಲ್ಲಿಗೆ ಪಕ್ಷದಲ್ಲಿ ಕೆಲಸ ಮಾಡಲು ಅವಕಾಶ ಕೊಟ್ಟಿದ್ದೂ ಬ್ರಾಹ್ಮಣರಿಗೇ ಎಂದಾಗುತ್ತದೆ. ಅವರು ಬುದ್ಧಿವಂತಿಕೆಯನ್ನು ನೋಡಿ ಅವಕಾಶ ಕೊಟ್ಟಿದ್ದೇವೆ ಎಂದರೆ ಈವರೆಗೆ ಬೇರೆ ಸಮುದಾಯದ ಬುದ್ದಿವಂತರನ್ನು ಗುರುತಿಸಿಲ್ಲ ಎಂದಾಗುತ್ತದೆ.
ಇವರು ಆಸ್ಥಾನ ಕಲಾವಿದರು. ಅಥವಾ ಹೈಕಮಾಂಡ್ ನಾಯಕರನ್ನು ರೀಚ್ ಆಗಬಲ್ಲವರು, ಅಂದರೆ ಲಾಬಿ ಮಾಡಬಲ್ಲವರೂ ಕೂಡ. ಲಾಬಿ ಮಾಡಿದ್ದಾರೆ, ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಇವರು ‘ಅರ್ಹರು’ ಎಂದು ಹೇಳುವ ಎದೆಗಾರಿಕೆ ಯಾರಿಗಾದರೂ ಇದೆಯಾ? ಇನ್ನೂ ಇವರ ಹಿನ್ನೆಲೆಗಳನ್ನು ನೋಡಿ. ಜೈರಾಂ ರಮೇಶ್ ಹೇಳಿಕೊಳ್ಳಲು ಕರ್ನಾಟಕದವರು. ಆದರೆ ಕನ್ನಡ ಮಾತನಾಡಲ್ಲ, ಈಗಾಗಲೇ 3 ಬಾರಿ ಅವಕಾಶ ಸಿಕ್ಕಿತ್ತು. ಕರ್ನಾಟಕದಿಂದಲೂ ಅವಕಾಶ ಸಿಕ್ಕಿತ್ತು. ಕರ್ನಾಟಕದ ಒಂದೇ ಒಂದು ಸಮಸ್ಯೆ ಬಗ್ಗೆ ರಾಜ್ಯಸಭೆಯಲ್ಲಿ ದನಿ ಎತ್ತಿಲ್ಲ.

ರಾಜೀವ್ ಶುಕ್ಲಾ ಉತ್ತರ ಪ್ರದೇಶದವರು, ಈಗಾಗಲೇ ಒಮ್ಮೆ ರಾಜ್ಯಸಭಾ ಸದಸ್ಯರಾಗಿದ್ದರು. ಬಿಸಿಸಿಐ ಉಪಾಧ್ಯಕ್ಷ, ಐಪಿಎಲ್ ಚೇರ್ಮನ್ ಆಗಿದ್ದವರು. ಕ್ರಿಕೆಟ್ ಧಂಧೆ ಎಂತಹುದು ಎಂದು ಬಿಡಿಸಿ ಹೇಳಬೇಕಾಗಿಲ್ಲ. ಈಗ ‘ಇವರು ರಾಜ್ಯಸಭೆಯಲ್ಲಿ ಇಲ್ಲದೆ ಹೋದರೆ ದೇಶ ಸರ್ವನಾಶ ಆಗಿಬಿಡುತ್ತದೆ’ ಎಂದು ಛತ್ತೀಸ್ಗಢ ರಾಜ್ಯದಿಂದ ಅವಕಾಶ ನೀಡಲಾಗಿದೆ. ವಿವೇಕ್ ಟಂಕಾ ಅವರಿಗೆ ಮತ್ತೊಮ್ಮೆ ಅವಕಾಶ ನೀಡಲಾಗಿದೆ. ಪ್ರಮೋದ್ ತಿವಾರಿ ಉತ್ತರ ಪ್ರದೇಶದಲ್ಲಿ ಶಾಸಕರಾಗಿದ್ದರು. ಉತ್ತರ ಪ್ರದೇಶದ ಕಾಂಗ್ರೆಸ್ ಸ್ಥಿತಿ ಕರುಣಾಜನಕವಾಗಿದ್ದರೂ ಇವರಿಗೆ ಮಾತ್ರ 2013ರಲ್ಲಿ ರಾಜ್ಯಸಭೆ ಒಲಿದು ಬಂತು. ಈಗ ಮತ್ತೊಮ್ಮೆ ಅವಕಾಶ ನೀಡಲಾಗಿದೆ. ಪ್ರಿಯಾಂಕಾ ಗಾಂಧಿ ಅವರಿಗೆ ಜೈಕಾರ ಕೂಗಿದ್ದಕ್ಕೆ, ಕೂಗಿಸಿದ್ದಕ್ಕೆ ಬಂಪರ್ ಲಭಿಸಿದೆ ಎನ್ನುತ್ತಾರೆ ಕಾಂಗ್ರೆಸ್ ಕಾರ್ಯಕರ್ತರು.
ನಾಲ್ವರು ಬ್ರಾಹ್ಮಣರನ್ನು ಹೊರತುಪಡಿಸಿದರೆ ಅಜಯ್ ಮಾಕೆನ್ ಪಂಜಾಬಿ ಜಾಟ್. ದೆಹಲಿಯಲ್ಲಿ ಶಾಸಕರಾಗಿದ್ದರು. 10 ವರ್ಷ ಲೋಕಸಭಾ ಸದಸ್ಯರಾಗಿದ್ದರು. 2009ರಿಂದ 2013ರವರೆಗೆ ಕೇಂದ್ರ ಮಂತ್ರಿ ಆಗಿದ್ದರು. ದೆಹಲಿ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ದೆಹಲಿಯಲ್ಲಿ ಕಾಂಗ್ರೆಸ್ ಶೂನ್ಯ ಸಾಧನೆ ಮಾಡಲು ಇವರ ಕೊಡುಗೆ ಕೂಡ ಇದೆ. ಇವರನ್ನೀಗ ಹರಿಯಾಣದಿಂದ ರಾಜ್ಯಸಭೆಗೆ ಕಳುಹಿಸಲಾಗುತ್ತಿದೆ. ಹರಿಯಾಣದ ಜಾಟ್ ರಣದೀಪ್ ಸಿಂಗ್ ಸುರ್ಜೆವಾಲಾ ಅವರನ್ನು ರಾಜಸ್ಥಾನದಿಂದ ರಾಜ್ಯಸಭೆಗೆ ಕಳುಹಿಸಲಾಗುತ್ತಿದೆ. ನಿರಂತರವಾಗಿ ಎಐಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥರಾಗಿದ್ದಾರೆ. ಮಾಧ್ಯಮಗಳು ಬಿಜೆಪಿಗೆ ಮಾರಿಕೊಂಡಿರುವ ಈ ಸಂದರ್ಭದಲ್ಲಿ ಪರ್ಯಾಯವಾಗಿ ಏನು ಮಾಡಬೇಕೆಂದು ಪ್ರಯತ್ನಿಸದ ಸುರ್ಜೆವಾಲಾಗೂ ಕಾಂಗ್ರೆಸಿನಲ್ಲಿ ಅವಕಾಶ ಲಭಿಸುತ್ತದೆ. ಇದೇ ರಾಜಸ್ಥಾನದಿಂದ ಮಹಾರಾಷ್ಟ್ರದ ಮುಖುಲ್ ವಾಸ್ನಿಕ್ ಮತ್ತು ಉತ್ತರ ಪ್ರದೇಶದ ಪ್ರಮೋದ್ ತಿವಾರಿಗೆ ಅವಕಾಶ ನೀಡಲಾಗಿದೆ. ರಾಜಸ್ಥಾನದಲ್ಲಿ ಕಾಂಗ್ರೆಸ್ ಸಿಗುತ್ತಿರುವುದು ಮೂರು ಸೀಟು ಮೂರನ್ನೂ ಬೇರೆ ರಾಜ್ಯದವರಿಗೆ ನೀಡಲಾಗಿದೆ.
ಛತ್ತೀಸ್ಗಢದಿಂದ ಅವಕಾಶ ಪಡೆದಿರುವ ರಂಜಿತ್ ರಂಜನ್ ಮಧ್ಯಪ್ರದೇಶದ ರೇವಾದಲ್ಲಿ ಹುಟ್ಟಿದವರು. ಬೆಳೆದದ್ದು ಜಮ್ಮುವಿನಲ್ಲಿ. ಓದಿದ್ದು ಪಂಜಾಬಿಯಲ್ಲಿ. ನೆಲೆಸಿರುವುದು ದೆಹಲಿಯಲ್ಲಿ. ಅವರ ಪೂರ್ವಜರು ಕಾಶ್ಮೀರಿ ಪಂಡಿತರು. ಈಗ ಅವರು ಸಿಖ್ ಆಗಿ ಪರಿವರ್ತಿತಗೊಂಡಿದ್ದಾರೆ. ಮದುವೆಯಾಗಿರುವುದು ಪಪ್ಪು ಯಾದವ್ ಅವರನ್ನು. ಹಾಗಾಗಿ ಇವರನ್ನು ಓಬಿಸಿ ಎಂದು ಕರೆಯಬೇಕು. 2 ಬಾರಿ ಲೋಕಸಭಾ ಸದಸ್ಯರಾಗಿದ್ದ ಇವರಿಗೆ ಈಗ ರಾಜ್ಯಸಭೆಯಲ್ಲಿ ಅವಕಾಶ ಮಾಡಿಕೊಡಲಾಗಿದೆ.

ನಾಲ್ವರು ಬ್ರಾಹ್ಮಣರು ಮತ್ತು ಇಬ್ಬರು ಜಾಟರು ಅಂದರೆ ಮೇಲ್ವರ್ಗದವರು. ಯಾದವ್ ಸಮುದಾಯದ ಒಬ್ಬರಿಗೆ ಕಾಂಗ್ರೆಸ್ ಮಣೆ ಹಾಕಿದೆ. ಈ ಯಾವ ಸಮುದಾಯವೂ ಇಂದು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುತ್ತಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಇಡಿಯಾಗಿ ಮತಹಾಕುತ್ತಿರುವ ಅಲ್ಪಸಂಖ್ಯಾತರಿಗೆ ಒಂದೇ ಒಂದು ಸ್ಥಾನ. ಮಹಾರಾಷ್ಟ್ರದಿಂದ ಇಮ್ರಾನ್ ಪ್ರತಾಪ್ಗರ್ಹಿ ಅವರಿಗೆ. ಇನ್ನೂ ಕಾಂಗ್ರೆಸ್ ಪಕ್ಷವನ್ನೂ ಪೂರ್ಣವಾಗಿ ಬಿಟ್ಟುಹೋಗಿಲ್ಲದ ದಲಿತರಿಗೂ ಒಂದೇ ಒಂದು ಸೀಟು. ಅ್ಉ ಮುಕುಲ್ ವಾಸ್ನಿಕ್ ಅವರಿಗೆ. ಇದನ್ನು ಹೊರತುಪಡಿಸಿ ಚಟ್ಡಿಯಾರ್ ಸಮುದಾಯದ ಪಿ. ಚಿದಂಬರಂ ಅವರಿಗೆ ತಮಿಳುನಾಡಿನಿಂದ ಅವಕಾಶ ನೀಡಿದೆ. ಚಿದಂಬರಂ ಈಗಾಗಲೇ ಬಹಳಷ್ಟು ಅಧಿಕಾರ ಉಂಡವರು. ಅವರ ಪುತ್ರ ಕಾರ್ತಿ ಚಿದಂಬರಂ ಕೂಡ ಸಂಸದ. ಅವರಿಗೆ ಮತ್ತೊಂದು ಅವಕಾಶ ಕೊಡುವ ಅಗತ್ಯ ಇತ್ತಾ ಎಂಬ ಪ್ರಶ್ನೆಗಳು ಉದ್ಭವಿಸಿವೆ. ಮೇಲಿನ ವಿವರಣೆ ನೋಡಿದರೆ ಕಾಂಗ್ರೆಸ್ ಯಾರ ಪರ? ಯಾವ ನಿಲುವು ಹೊಂದಿದೆ? ಈ ಪಕ್ಷಕ್ಕೆ ದೂರದೃಷ್ಟಿ ಇದೆಯಾ? ಉದಯಪುರ ನಿರ್ಣಯದ ಗತಿ ಏನಾಯಿತು ಎಂಬ ಅನುಮಾನ ಬರುವುದು ಗ್ಯಾರಂಟಿ?