ಕೋಲಾರ: ಟಿಪ್ಪು ಸಿದ್ದಾಂತವನ್ನು ಕಾಂಗ್ರೆಸ್ ಬೆಂಬಲಿಸುತ್ತದೆ, ಒಡೆಯರ್ ಸಿದ್ದಾಂತವನ್ನು ಬಿಜೆಪಿ ಬೆಂಬಲಿಸುತ್ತದೆ. ಒಡೆಯರ್ ಸಿದ್ದಾಂತವೇ ಸಾವರ್ಕರ್ ಸಿದ್ದಾಂತ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ತಿಳಿಸಿದರು.
ಕೋಲಾರದ ಪ್ರವಾಸಿ ಮಂದಿರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಟಿಪ್ಪು ರಾಜ ಅಲ್ಲವೇ ಅಲ್ಲ, ಮೈಸೂರು ಒಡೆಯರ ಸೇನಾಧಿಪತಿ ಅಷ್ಟೇ. ರಾಜಾಮ್ಮಣಿ, ರಾಜ ಪರಿವಾರದವರನ್ನು ಸೆರೆಮನೆ ವಾಸಕ್ಕೆ ದೂಡಿದ್ದು ಟಿಪ್ಪು ,ಕೊಡಗಿನಲ್ಲಿ ನರಮೇಧ, ಕನ್ನಡ ಭಾಷೆಯ ಬದಲಿ ಪಾರ್ಶಿ ಭಾಷೆ ಹೇರಿಕೆ ಮಾಡಿದ್ದು ಟಿಪ್ಪು ಎಂದು ಹರಿಹಾಯ್ದರು.
ಕೋಲಾರದಿಂದ ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧೆ ಘೋಷಣೆ ಕುರಿತು ಪ್ರತಿಕ್ರಿಯಿಸಿ, ಕೇವಲ ಮತಕ್ಕಾಗಿಯೇ ಸಿದ್ದರಾಮಯ್ಯ ಕೋಲಾರಕ್ಕೆ ಬಂದಿದ್ದಾರೆ. ಶ್ರೀರಾಮುಲು ಬಾದಾಮಿಯಲ್ಲಿ ಇನ್ನು ಹೆಚ್ಚು ಪ್ರಚಾರ ಮಾಡಿದ್ದರೇ ಸಿದ್ದರಾಮಯ್ಯ ಗೆಲ್ಲುತ್ತಿರಲಿಲ್ಲ. ಸಿದ್ದರಾಮಯ್ಯ ಜನರ ಸಂಕಷ್ಟಕ್ಕೆ ಸ್ಪಂದಿಸದ್ದರೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲುತ್ತಿರಲಿಲ್ಲ ಎಂದು ಹೇಳಿದರು.
ಬ್ರಾಹ್ಮಣ ಸಿಎಂ ಕುರಿತು ಹೆಚ್.ಡಿ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಸಿ.ಟಿ.ರವಿ, ಜಾತ್ಯಾತೀತ ಜನತಾದಳ ಎನ್ನುವ ಬದಲು ಜಾತೀಯ ವಾದಿ ಜನತಾದಳ ಎಂದು ಇಟ್ಟುಕೊಳ್ಳಲಿ. ಜಾತೀಯ ದ್ವೇಷ ಮತ್ತು ಜಾತ್ಯಾತೀತತೆ ಒಟ್ಟಿಗೆ ಇರಲು ಸಾದ್ಯವಿಲ್ಲ ಎಂದು ಹೇಳಿದರು.
ಏನೇ ತಿಪ್ಪರಲಾಗ ಹಾಕಿದರೂ ಪ್ರತಿಸಲ ಲಾಟರಿ ಹೊಡೆಯಲ್ಲ. ೨೦೦೬ ರಲ್ಲಿ ಮತ್ತು ೨೦೧೮ರಲ್ಲಿ ಅವರಿಗೆ ಲಾಟರಿ ಹೊಡೆದಿದೆ. ಪ್ರತಿಸಲ ಲಾಟರಿ ಹೊಡೆದರೆ ಪ್ರಜಾಪ್ರಭುತ್ವ ದುರ್ಬಲ ಆಗುತ್ತದೆ. ಎಲ್ಲ ಕಾಲಕ್ಕೂ ಲಾಟರಿ ಹೊಡೆಯುತ್ತದೆ ಎಂದು ಕುಮಾರಸ್ವಾಮಿ ಭಾವಿಸಬಾರದು ಎಂದು ವ್ಯಂಗ್ಯವಾಡಿದರು.
ನಮ್ಮ ಪಕ್ಷದಲ್ಲಿ ಅವರವರ ಕಾರ್ಯಕ್ಷಮತೆ ಪ್ರಕಾರ ಯಾವ ಎತ್ತರಕ್ಕೂ ಬೇಕಾದರೂ ಬೆಳೆಯಬಹುದು. ನರೇಂದ್ರ ಮೋದಿಯವರು ನಾಲ್ಕು ಬಾರಿ ಸಿಎಂ ಮತ್ತು ಎರಡು ಬಾರಿ ಪ್ರಧಾನಮಂತ್ರಿಯಾಗಿದ್ದು, ಜಾತಿ ಹೆಸರು ಹೇಳಿಕೊಂಡಿದ್ದರಿಂದ ಅಲ್ಲ. ಅವರು ಅತೀ ಸಣ್ಣಸಂಖ್ಯೆಯ ಜಾತಿಯಿಂದ ಬಂದವರು. ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತನೂ ಸಿದ್ದಾಂತ ರಾಜಕಾರಣ ಮಾಡಬೇಕು ಎಂದು ಹೇಳಿದರು.