ತೀರ್ಥಹಳ್ಳಿ: ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಯಾರ ಹೆಸರನ್ನಾದರೂ ಇಡಲಿ ಆದರೆ ಜಮೀನು ಕಳೆದುಕೊಂಡವರಿಗೆ ಮೊದಲು ಪರಿಹಾರ ನೀಡಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಆಗ್ರಹಿಸಿದ್ದಾರೆ.
ತೀರ್ಥಹಳ್ಳಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ವಿಐಎಸ್ಎಲ್ ವಿಚಾರ ಕುರಿತು ಪ್ರತಿಕ್ರಿಯಿಸಿ, ವಿಐಎಸ್ಎಲ್ ವಿಚಾರವಾಗಿ ನೀಡಿರುವ ಹೇಳಿಕೆಗೆ ಬದ್ಧರಾಗಿದ್ದೇವೆ. ಈ ಕಾರ್ಖಾನೆಯನ್ನು ಮುಚ್ಚಬಾರದು, ಸರ್ಕಾರವೇ ನಡೆಸಬೇಕು. ಅವರಿಂದ ಸಾಧ್ಯವಾಗದಿದ್ದರೆ, ನಮ್ಮ ಸರ್ಕಾರ ಬಂದು ಆ ಕೆಲಸ ಮಾಡಲಿದೆ ಎಂದು ಹೇಳಿದರು.
ಬಿಜೆಪಿಯವರು ಖಾಸಗೀರಣದ ತೀರ್ಮಾನ ಕೈಬಿಟ್ಟು, ಕೇಂದ್ರ ಸಚಿವರು ಕೊಟ್ಟ ಮಾತಿನಂತೆ 6 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡಿಸಿ, ನಿಗದಿ ಮಾಡಲಾಗಿರುವ ಗಣಿ ಭೂಮಿಯಲ್ಲಿ ಗಣಿಗಾರಿಕೆಗೆ ಅನುಮತಿ ನೀಡಲಿ ಎಂದರು.
ಕಾಂಗ್ರೆಸ್’ನಲ್ಲಿ ನಾಯಕರಿಲ್ಲ ಎಂಬ ಬಿಜೆಪಿ ನಾಯಕರ ಹೇಳಿಕೆ ಬಗ್ಗೆ ಕೇಳಿದಾಗ, ‘ನಾವು ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಮಾಡುತ್ತೇವೆ ಎಂದು ಹೇಳಿದ್ದೇವೆ. ಆದರೆ ಅಮಿತ್ ಶಾ ಅವರು ಈ ಹಿಂದೆ ಬೊಮ್ಮಾಯಿ ಅವರ ನೇತೃತ್ವದಲ್ಲಿ ಚುನಾವಣೆ ಎಂದು ಹೇಳಿದ್ದು, ಇತ್ತೀಚೆಗೆ ಪ್ರಧಾನಿ ನರೇದ್ರ ಮೋದಿ ಅವರ ನೇತೃತ್ವದಲ್ಲಿ ಚುನಾವಣೆ ಮಾಡುತ್ತೇವೆ ಎಂದಿದ್ದಾರೆ. ಬಿಜೆಪಿಯವರು ಯಡಿಯೂರಪ್ಪನವರಿಗೆ ಕಣ್ಣೀರು ಹಾಕಿಸಿ ಅಧಿಕಾರದಿಂದ ಕೆಳಗಿಳಿಸಿದ್ದು ಯಾಕೆ? ಎಂದು ಜನರಿಗೆ ಮಾಹಿತಿ ನೀಡಲಿ ಎಂದು ಒತ್ತಾಯಿಸಿದರು.
ಇಡಿ ನೊಟೀಸ್ ವಿಚಾರವಾಗಿ ಕೇಳಿದ ಪ್ರಶ್ನೆಗೆ, ಯಂಗ್ ಇಂಡಿಯಾಗೆ ದೇಣಿಗೆ ನೀಡಿದ ವಿಚಾರವಾಗಿ ನಾವು ಈ ಹಿಂದೆ ಇಡಿ ಅಧಿಕಾರಿಗಳಿಗೆ ಉತ್ತರ ನೀಡಿ ಬಂದಿದ್ದೇವೆ. ಆದರೂ ಈಗ ಮತ್ತೆ ವಿಚಾರಣೆಗೆ ನೊಟೀಸ್ ನೀಡಿದ್ದಾರೆ. ಇನ್ನು ಸಿಬಿಐ ಮೂಲಕ ಮಗಳ ಕಾಲೇಜಿನ ಶುಲ್ಕದ ಬಗ್ಗೆ ವಿಚಾರಣೆಗೆ ಮುಂದಾಗಿದ್ದಾರೆ. ಈ ಬಗ್ಗೆ ಸಿಬಿಐಗೆ ಪತ್ರ ಬರೆದು ಸಲಹೆ ನೀಡಬೇಕು ಎಂದುಕೊಂಡಿದ್ದೇನೆ ಎಂದರು.

ಮಂತ್ರಿ ಸ್ಥಾನ ಕಳೆದುಕೊಂಡಿದ್ದಕ್ಕೆ ಪೇಚಾಡುತ್ತಿದ್ದಾರೆ
ರಮೇಶ್ ಜಾರಕಿಹೊಳಿ ದೆಹಲಿ ಪ್ರವಾಸದ ಬಗ್ಗೆ ಕೇಳಿದಾಗ, ಕೋರ್ಟ್’ನಲ್ಲಿ ಅವರು ಅಫಿಡಫಿಟ್ ಯಾಕೆ ಹಾಕಿದ್ದಾರೆ? ಅವರು ಯಾವ ಮನವಿ ಮಾಡಿದ್ದಾರೆ ಎಂಬುದರ ಬಗ್ಗೆ ತನಿಖೆ ಮಾಡಲಿ. ಮಂತ್ರಿ ಸ್ಥಾನ ಕಳೆದುಕೊಂಡ ಹಿನ್ನೆಲೆಯಲ್ಲಿ ರಮೇಶ್ ಜಾರಕಿಹೊಳಿ ಹಾಗೂ ಈಶ್ವರಪ್ಪ ಪೇಚಾಡುತ್ತಿದ್ದಾರೆ. ರಮೇಶ್ ಜಾರಕಿಹೊಳಿ ಮಾನಸಿಕ ಸ್ಥಿಮಿತ ಕಳೆದುಕೊಂಡವರಂತೆ ಮಾತಾಡುತ್ತಿದ್ದಾರೆ. ಆರೋಗ್ಯ ಸಚಿವರಿಗೆ ಶಿಫಾರಸ್ಸು ಮಾಡಿ ಚಿಕಿತ್ಸೆ ಕೊಡಿಸಲಿ. ಕೆಲವರು ನನ್ನ ಬಗ್ಗೆ ಮಾತನಾಡಿದರೆ ಮಾತ್ರ ಅವರ ಪಕ್ಷದಲ್ಲಿ ಮಾರ್ಕೆಟ್ ಇರುತ್ತದೆ. ಇಲ್ಲದಿದ್ದರೆ ಅವರ ಪಕ್ಷದಲ್ಲೇ ಅವರನ್ನು ಮಾತನಾಡಿಸುವುದಿಲ್ಲ ಎಂದು ಟೀಕಿಸಿದರು.