2ಜಿ ತರಂಗಾಂತರ (2G Spectrum) ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ಮತ್ತು ಮಾಜಿ ಸಂಸದ ಸಂಜಯ್ ನಿರುಪಮ್ ಅವರು ತಮ್ಮ ಮೇಲೆ ಒತ್ತಡ ಹೇರಿದ್ದಾರೆ ಎಂದು ಆರೋಪಿಸಿದ ಏಳು ವರ್ಷಗಳ ನಂತರ, ಮಾಜಿ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ವಿನೋದ್ ರಾಯ್ ಅವರು ಸಂಜಯ್ ನಿರುಪಮ್ ಅವರಿಗೆ “ಬೇಷರತ್ ಕ್ಷಮೆಯಾಚನೆ” ಯನ್ನು ಮಾಡಿದ್ದಾರೆ.
2014 ರಲ್ಲಿ, ವಿನೋದ್ ರಾಯ್ ಅವರು ಮಾಧ್ಯಮಗಳ ಜೊತೆ ಮಾತನಾಡುತ್ತಾ, 2ಜಿ ಸ್ಪೆಕ್ಟ್ರಮ್ ಹರಾಜಿನ ಲೆಕ್ಕ ಪರಿಶೋಧಕರ ವರದಿಯಿಂದ ಸಿಂಗ್ ಅವರ ಹೆಸರನ್ನು ಹೊರಗಿಡುವಂತೆ ಭಾರತದ ಸಿಎಜಿಗೆ ಒತ್ತಡ ಹೇರಿದವರಲ್ಲಿ ಕಾಂಗ್ರೆಸ್ ನಾಯಕ ಸಂಜಯ್ ನಿರುಪಮ್ ಅವರೂ ಸೇರಿದ್ದಾರೆ ಎಂದು ಹೇಳಿದ್ದರು. ವಿನೋದ್ ರೈ ಅವರ 2014 ರ ಪುಸ್ತಕ, Not Just an Accountant: The Diary of the Nation’s Conscience Keeper ಬಿಡುಗಡೆಯ ಸಮಯದಲ್ಲಿ ಈ ಸಂದರ್ಶನವನ್ನು ಪ್ರಸಾರ ಮಾಡಲಾಯಿತು ಮತ್ತು ಮಾಧ್ಯಮಗಳಲ್ಲಿ ಅವರ ಹೇಳಿಕೆಯನ್ನು ಪ್ರಕಟಿಸಲಾಗಿತ್ತು.
ಇದು ಸಂಪೂರ್ಣ ಸುಳ್ಳು, ತನ್ನ ಹೇಳಿಕೆಯನ್ನು ವಾಪಸ್ ಪಡೆಯುವಂತೆ ವಿನೋದ್ ರಾಯ್ ಗೆ ಮೊದಲಿಗೆ ಹೇಳಲಾಗಿತ್ತು. ಆದರೆ, ಆ ರೀತಿ ಮಾಡದ ಕಾರಣ ಪಟಿಯಾಲ ಹೌಸ್ ಕೋರ್ಟ್ ನಲ್ಲಿ ಮಾನ ನಷ್ಟ ಕೇಸ್ ದಾಖಲಿಸಲಾಗಿತ್ತು ಕಾಂಗ್ರೆಸ್ ಮುಖಂಡ ಸಂಜಯ್ ನಿರುಪಮ್ ತಿಳಿಸಿದರು.
ನನ್ನ ಹೇಳಿಕೆಯಿಂದ ಸಂಜಯ್ ನಿರುಪಮ್ ಹಾಗೂ ಅವರ ಕುಟುಂಬ, ಹಿತೈಷಿಗಳಿಗೆ ನೋವು, ಸಂಕಟವಾಗಿರುವುದು ನನಗೆ ಅರ್ಥವಾಗಿದೆ. ಅದಕ್ಕಾಗಿ ನಾನು ಬೇಷರತ್ ಕ್ಷಮೆಯಾಚಿಸುವುದಾಗಿ ವಿನೋದ್ ರಾಯ್ ತಮ್ಮ ಅಫಿಢವಿಟ್ ನಲ್ಲಿ ಹೇಳಿದ್ದಾರೆ.
ವಿನೋದ್ ರಾಯ್ ಅವರ ಬೇಷರತ್ತಾದ ಕ್ಷಮೆಯಾಚನೆಯ ಕುರಿತು ಪ್ರತಿಕ್ರಿಯಿಸಿ ವಿಡಿಯೊ ಹೇಳಿಕೆ ಬಿಡುಗಡೆ ಮಾಡಿರುವ ಸಂಜಯ್ ನಿರುಪಮ್, ಇದನ್ನು “ಸುವರ್ಣ ದಿನ” ಎಂದು ಬಣ್ಣಿಸಿದ್ದಾರೆ.
2011 ಮತ್ತು 2012 ರಲ್ಲಿ ರಾಯ್ ಅವರ ವರದಿಗಳ ನಂತರ 2ಜಿ ತರಂಗಾಂತರ ಮತ್ತು ಕಲ್ಲಿದ್ದಲು ಬ್ಲಾಕ್ ಹರಾಜಿನಲ್ಲಿ ಬೊಕ್ಕಸಕ್ಕೆ ₹ 1.76 ಲಕ್ಷ ಕೋಟಿ ಮತ್ತು ₹ 1.86 ಲಕ್ಷ ಕೋಟಿ ಕಾಲ್ಪನಿಕ ನಷ್ಟ ಉಂಟಾಗಿದೆ ಎಂದು ಹೇಳಿದ ನಂತರ ಭ್ರಷ್ಟಾಚಾರ ಮತ್ತು ದುರಾಡಳಿತದ ಆರೋಪಗಳನ್ನು ಎದುರಿಸಿದ ಯುಪಿಎ ಸರ್ಕಾರವು 2014 ರಲ್ಲಿ ಅಧಿಕಾರದಿಂದ ಕೆಳಗಿಳಿತ್ತು.
2ಜಿ ಹಂಚಿಕೆ ವಿಚಾರದಲ್ಲಿ ನ್ಯಾಯಾಲಯದ ಮೂಲಕವೂ ಸೇರಿದಂತೆ ಕಳೆದ ಏಳು ವರ್ಷಗಳಿಂದ ಪಿತೂರಿಯನ್ನು ಪದೇ ಪದೇ ಬಹಿರಂಗಪಡಿಸಲಾಗಿದೆ ಎಂದು ಖೇರಾ ಹೇಳಿದರು.
2017ರಲ್ಲಿ ಸಿಬಿಐ ವಿಶೇಷ ನ್ಯಾಯಾಲಯ 2ಜಿ ತರಂಗಾಂತರ ಹಂಚಿಕೆ ಪ್ರಕರಣದಲ್ಲಿ ಎ ರಾಜಾ ಮತ್ತು ಕನಿಮೊಳಿ ಸೇರಿದಂತೆ ಎಲ್ಲಾ 18 ಆರೋಪಿಗಳನ್ನು ಖುಲಾಸೆಗೊಳಿಸಿತ್ತು.










