2023ರ ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದ್ದು, ಈಗಾಗಲೇ ಪಕ್ಷದ ನಾಯಕರು, ಮುಖಂಡರು ಆಯಾ ಪಕ್ಷಗಳ ಭರ್ಜರಿ ಮತಪ್ರಚಾರ ನಡೆಸುತ್ತಿದ್ದಾರೆ. ಇಂದು ಸುದ್ಧಿಗೋಷ್ಠಿ ನಡೆಸಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ʻಮುಂಬರುವ ವಿಧಾನಸಭೆ ಚುನಾವಣೆ ಗೆಲ್ಲಲು ನಾಳೆಯಿಂದ ಎರಡು ದಿನಗಳ ಬಿಜೆಪಿಯ ಮಹಾ ಪ್ರಚಾರ ಅಭಿಯಾನ ಆಯೋಜಿಸಲಾಗಿದೆ. ಬೂತ್ ಮಟ್ಟದಿಂದ ಹಿಡಿದು ಎಲ್ಲಾ ಹಂತಗಳಲ್ಲೂ ಮಹಾ ಪ್ರಚಾರ ಅಭಿಯಾನ ನಡೆಯಲಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ 98 ಕೇಂದ್ರ ಸಚಿವರು, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಗಳಾದ ಯಡಿಯೂರಪ್ಪ, ಸದಾನಂದಗೌಡ ಸೇರಿದಂತೆ ಘಟಾನುಘಟಿ ನಾಯಕರು ಬಿಜೆಪಿಯ ಮಹಾಪ್ರಚಾರ ಅಭಿಯಾನದಲ್ಲಿ ಭಾಗಿಯಾಗಲಿದ್ದಾರೆ ಅಂತ ಸಿ.ಟಿ.ರವಿ ತಿಳಿಸಿದರು. ʻಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಿಜೆಪಿ ಜಾರಿಗೊಳಿಸಿರುವ ಮೀಸಲಾತಿಯನ್ನು ರದ್ದುಗೊಳಿಸುವುದಾಗಿ ಕಾಂಗ್ರೆಸ್ ನಾಯಕರು ಹೇಳುತ್ತಿದ್ಧಾರೆ. ಹಾಗಾದರೆ ಯಾವ ಸಮುದಾಯದ ಮೀಸಲಾತಿ ಕಡಿತ ಮಾಡುತ್ತೀರಾ ಎಂಬುದನ್ನು ಚುನಾವಣೆಗೂ ಮುನ್ನ ಕಾಂಗ್ರೆಸ್ ನಾಯಕರು ಸ್ಪಷ್ಟಪಡಿಸಬೇಕು. ಲಿಂಗಾಯತರ ಡ್ಯಾಮ್ ಒಡೆಯುತ್ತೇವೆಂದು ಹೇಳುತ್ತಿದ್ದೀರಿ. ಹಿಂದುತ್ವದ ಜೊತೆಗೆ ಲಿಂಗಾಯತ ಡ್ಯಾಮ್ ಕೂಡ ಬಿಜೆಪಿ ಜೊತೆ ಭದ್ರವಾಗಿದೆ. ಹೀಗಾಗಿ ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಮುಳುಗುವುದು ನಿಶ್ಚಿತ ಅಂತ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಮೈಸೂರಿನಲ್ಲಿ ಹೇಳಿಕೆ ನೀಡಿದರು.

ಇನ್ನು ಲಿಂಗಾಯತ ಸಿಎಂಗಳು ಹೆಚ್ಚು ಭ್ರಷ್ಟಾಚಾರ ಮಾಡಿದ್ದಾರೆ ಎಂದು ಸಿದ್ಧರಾಮಯ್ಯ ವಿವಾದಾತ್ಮಕ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಿ.ಟಿ.ರವಿ, ʻಸಿದ್ಧರಾಮಯ್ಯ ಅಸಹನೆಯಿಂದ ಈ ಮಾತು ಹೇಳಿದ್ದಾರೆ. ಇಡೀ ಲಿಂಗಾಯತ ಸಮುದಾಯವನ್ನು ಭ್ರಷ್ಟಾಚಾರಿಗಳು ಎಂದು ಹೇಳಿರುವುದು ಸರಿಯಲ್ಲ. ಇಡೀ ಕಾಂಗ್ರೆಸ್ ನೀತಿಯೇ ಸಮಾಜವನ್ನು ಒಡೆಯುವುದಾಗಿದೆ. ವರುಣದಲ್ಲಿ ಚಕ್ರವ್ಯೂಹದಲ್ಲಿ ಸಿಲುಕಿದ್ದೇನೆಂದು ಸಿದ್ಧರಾಮಯ್ಯಗೆ ಅನಿಸಿದ್ಧು ಅಸಹನೆಯಿಂದ ಮಾತನಾಡಿದ್ದಾರೆ. ಸಿದ್ಧರಾಮಯ್ಯನವರನ್ನು ಸೋಲಿಸಲು ಡಿಕೆಶಿ ಪ್ರಯತ್ನಿಸುತ್ತಿದ್ದಾರೆ. ಡಾ.ಜಿ.ಪರಮೇಶ್ವರ್ ಅವರನ್ನು ಸೋಲಿಸಿದ ಶಾಪ ಸಿದ್ಧರಾಮಯ್ಯಗೆ ಶಾಪ ತಟ್ಟಲಿದೆ.

ಸಿದ್ಧರಾಮಯ್ಯನವರು ತುಂಬಾ ಹತಾಶರಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಸಿದ್ದರಾಮಯ್ಯ ಸಿಎಂ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಡಿ ಕೆ ಶಿವಕುಮಾರ್ ಖರ್ಗೆಯವರನ್ನು ಸಿಎಂ ಮಾಡುವ ವಿಚಾರ ಮುಂದಿಟ್ಟಿದ್ಧಾರೆ. ಹೀಗಾಗಿ ತನಗೆ ದಕ್ಕದ್ಧು ಬೇರೆಯವರಿಗೂ ಧಕ್ಕದಿರಲಿ ಎಂಬ ಕಾರಣಕ್ಕೆ ಸಿದ್ಧರಾಮಯ್ಯ ವಿವಾದಾತ್ಮಕ ಹೇಳಿಕೆಗಳನ್ನು ಕೊಡುತ್ತಿದ್ಧಾರೆ ಅಂತ ಸಿ.ಟಿ.ರವಿ ಸಿದ್ದರಾಮಯ್ಯವರ ವಿರುದ್ಧ ಕಿಡಿಕಾರಿದರು. ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಆರೋಪ ವಿಚಾರವಾಗಿ ಮಾತ್ನಾಡಿದ ಸಿ.ಟಿ.ರವಿ, ʻಇದು ರಾಜಕೀಯ ವ್ಯಭಿಚಾರನಾ ? ಇದನ್ನು ಹೆಚ್.ಡಿ ಕುಮಾರಸ್ವಾಮಿ ಸ್ಪಷ್ಟಪಡಿಸಬೇಕು. ರಾಜಕೀಯ ಹಾದರದ ಬಗ್ಗೆ ಜನ ತೀರ್ಮಾನ ಮಾಡುತ್ತಾರೆ ಅಂತ ಆಕ್ರೋಶ ಹೊರಹಾಕಿದ್ರು. ಇನ್ನು ಸಿ.ಟಿ ರವಿ ಮುಂದಿನ ಸಿಎಂ ಕೂಗು ವಿಚಾರವಾಗಿ ಮಾತ್ನಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು, ʻಇದು ಕ್ಷೇತ್ರದಲ್ಲಿ ಮಾತ್ರ ಕೇಳುತ್ತಿರುವ ಕೂಗು. ರಾಜ್ಯದಲ್ಲಿ ಎಲ್ಲಾ ಕಡೆ ಈ ಕೂಗು ಕೇಳಿದಾಗ ನನ್ನನ್ನ ಸಿಎಂ ಮಾಡುವಂತೆ ಕೇಳುತ್ತೇನೆ. ಖಂಡಿತಾ ನನಗೂ ಸಿಎಂ ಆಗಬೇಕೆಂಬ ಆಸೆ ಇದೆ ಅಂತ ಮೈಸೂರಿನಲ್ಲಿ ಸಿ.ಟಿ ರವಿ ಸ್ಪಷ್ಟನೆ ನೀಡಿದ್ರು. ಬಳಿಕ ವರುಣದಲ್ಲಿ ಬಿಜೆಪಿ ಜೆಡಿಎಸ್ ಒಳ ಒಪ್ಪಂದ ಆರೋಪ ವಿಚಾರವಾಗಿ ಮಾತನಾಡಿದ ಅವರು, ʻವರುಣದಲ್ಲಿ ಯಾವುದೇ ಒಪ್ಪಂದವಿಲ್ಲ. ಕಾಂಗ್ರೆಸ್ ಪಕ್ಷ ನಮ್ಮ ನೇರ ಎದುರಾಳಿ. ಜೆಡಿಎಸ್‌ನವರು ಏನು ಮಾಡುತ್ತಾರೋ ಗೊತ್ತಿಲ್ಲ ಅಂತ ಸಿ ಟಿ ರವಿ ಹೇಳಿಕೆ ನೀಡಿದ್ರು.
