ಕಾಂಗ್ರೆಸ್ ಪಕ್ಷಕ್ಕೆ ಇಂತಹ ಯವಕರ ಅಗತ್ಯ ಇತ್ತು. ರಾಜ್ಯದಲ್ಲಿ ಹಾಗೂ ದೇಶದಲ್ಲಿ NSUI ಎನ್ನುವಂತಹ ವಿದ್ಯಾರ್ಥಿ ಸಂಘಟನೆಯೊಂದು ಇದೆ ಎನ್ನುವುದೇ ಬಹಳ ಜನಕ್ಕೆ ಗೊತ್ತೇ ಇರಲಿಲ್ಲ. ಮೈನ್ ಕಾಂಗ್ರೆಸ್ ಮತ್ತು ಯುವ ಕಾಂಗ್ರೆಸ್ ನಡುವೆ ವಿದ್ಯಾರ್ಥಿ ಕಾಂಗ್ರೆಸ್ ಎನ್ನುವುದೊಂದು ಇದೆ ಎಂಬುದೂ ಗೊತ್ತಿರಲಿಲ್ಲ. ಆದರೀಗ ರಾಜ್ಯ NSUI ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಕೀರ್ತಿ ಗಣೇಶ್ ಸಂಚಲನ ಮೂಡಿಸಿದ್ದಾರೆ.
ಪಠ್ಯ ಪರಿಷ್ಕರಣೆ ಸಮಿತಿಯಲ್ಲಿ ಆಗಿರುವ ಲೋಪಗಳನ್ನು ಸರಿ ಮಾಡಬೇಕು. ರಾಷ್ಟ್ರಕವಿ ಕುವೆಂಪು ಅವರಿಗೆ ಅವಮಾನ ಮಾಡಿದ ಪಠ್ಯ ಪರಿಷ್ಕರಣೆ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ವಿರುದ್ಧ ಕ್ರಮ ಕೈಗೊಳ್ಳಬೇಕು. ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಮತ್ತು 12ನೇ ಶತಮಾನದಲ್ಲೇ ಪ್ರಜಾಪ್ರಭುತ್ವ, ಸಮಸಮಾಜದ ಕನಸುಕಂಡು ವಚನ ಕ್ರಾಂತಿ ಮಾಡಿದ ಬಸವಣ್ಣನವರ ವಿಚಾರಧಾರೆಗಳಿಗೆ ಕತ್ತರಿ ಹಾಕಿರುವ ಪಠ್ಯಗಳನ್ನು ಕಿತ್ತೆಸೆದು ಮೊದಲಿದ್ದ ಪಠ್ಯಗಳನ್ನೇ ಮಕ್ಕಳಿಗೆ ಬೋಧಿಸಬೇಕು. ಹೀಗೆ ಹಲವು ಸಕಾರಣಗಳೊಂದಿಗೆ ನಿಷ್ಕ್ರೀಯವಾಗಿದ್ದ ಆರ್ ಎಸ್ ಎಸ್ ಮೂಲದ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ವಿರುದ್ಧ ಪ್ರತಿಭಟನೆ ಮಾಡಲು ಹೋಗಿದ್ದ ಕೀರ್ತಿ ಗಣೇಶ್ ಈಗ ಜೈಲುಪಾಲಾಗಿದ್ದಾರೆ.
ಶಿಕ್ಷಣ ಸಚಿವರ ಮನೆ ಎದುರು ಚಡ್ಡಿ ಸುಟ್ಟಿದ್ದಾರೆ ಎಂಬುದು ಪೊಲೀಸರು ಕೀರ್ತಿ ಗಣೇಶ್ ಮೇಲೆ ಹೊರಿಸಿರುವ ಆರೋಪ. ಪ್ರತಿಭಟನೆಗೆ ಅನುಮತಿ ಪಡೆದಿರಲಿಲ್ಲ. ಶಿಕ್ಷಣ ಸಚಿವರ ಮನೆಗೆ ಮುತ್ತಿಗೆ ಹಾಕುವ ಪ್ರಯತ್ನ ಮಾಡಿದರು ಎಂಬವು ಇನ್ನಿತರ ಸಬೂಬುಗಳು. ಆದರೆ ಆಡಳಿತಾರೂಢ ಬಿಜೆಪಿ ಸರ್ಕಾರದ ಕಣ್ಣಿಗೆ ಬಿದ್ದಿರುವುದು ಹೊತ್ತಿ ಉರಿದ ಚಡ್ಡಿಯಿಂದ ಹಾರಿದ ಕಿಡಿ. ಆದುದರಿಂದ ಸಾಮಾನ್ಯವಾಗಿ ಮಾಡುತ್ತಿದ್ದ ಪ್ರತಿಭಟನಾಕಾರರನ್ನು ಬಂಧಿಸಿ ಬಿಡುಗಡೆ ಮಾಡುವ ಶಾಸ್ತ್ರವನ್ನು ಬದಿಗೊತ್ತಿ ಧೀರೋದಾತ್ತ ಪೊಲೀಸರು ಕೀರ್ತಿ ಗಣೇಶ್ ಅವರನ್ನು ಜೈಲಿಗಟ್ಟಿದ್ದಾರೆ.
ಆದರೆ ಬಿಜೆಪಿ ಸರ್ಕಾರದ ಮೂರ್ಖತನದಿಂದ ಕೀರ್ತಿ ಗಣೇಶ್ ಅವರ ಕೀರ್ತಿ ಇನ್ನಷ್ಟು ಹೆಚ್ಚಾಗಿದೆ. NSUI ಎನ್ನುವಂತಹ ವಿದ್ಯಾರ್ಥಿ ಸಂಘಟನೆ ಇದೆ ಎಂಬುದನ್ನು ಕೀರ್ತಿ ಗಣೇಶ್ ಸಾಬೀತುಪಡಿಸಿದ್ದಾರೆ. ಒಂದು ಕಾಲದಲ್ಲಿ NSUI ಸಂಘಟನೆ ಪದಾಧಿಕಾರಿಗಳಿಗೆ ಕವಡೆ ಕಾಸಿನ ಕಿಮ್ಮತ್ತು ಇರುತ್ತಿರಲಿಲ್ಲ. ಇಂದು ಪ್ರತಿಪಕ್ಷದ ನಾಯಕರಾದ ಸಿದ್ದರಾಮಯ್ಯ, ಬಿ.ಕೆ. ಹರಿಪ್ರಸಾದ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಂತಹ ಹಿರಿಯ ನಾಯಕರು ಕೀರ್ತಿ ಗಣೇಶ್ ಬಗ್ಗೆ ಮಾತನಾಡುತ್ತಿದ್ದಾರೆ. ಅಷ್ಟೇ ಏಕೆ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಸಂಸದ ಶಶಿ ತರೂರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ, ಅಖಿಲ ಭಾರತ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಬಿವಿ ಅವರಂತಹ ನಾಯಕರು ಕೂಡ ಕೀರ್ತಿ ಗಣೇಶ್ ಬಿಡುಗಡೆಗೆ ಆಗ್ರಹಿಸಿದ್ದಾರೆ.
ಸ್ವತಃ ದೇಶಾದ್ಯಂತ ಸಾವಿರಾರು ಪ್ರತಿಭಟನೆ ಮಾಡಿ, ನೂರಾರು ಕೇಸುಗಳನ್ನು ಹಾಕಿಸಿಕೊಂಡಿರುವ ಅಖಿಲ ಭಾರತ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಬಿವಿ ಈಗ ‘ಈ ಚಡ್ಡಿ ಸುಡುವ ಅಭಿಯಾನಕ್ಕೆ’ ಸ್ಫೂರ್ತಿ ನೀಡಿದ ಕೀರ್ತಿ ಗಣೇಶ್ ಬೆನ್ನೆಲುಬಾಗಿ ನಿಂತಿದ್ದಾರೆ. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ‘ರಾಜ್ಯಾದ್ಯಂತ ಚಡ್ಡಿ ಸುಡುವ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ’ ಎಂದು ರಾಜ್ಯ ಸರ್ಕಾರವನ್ನು ಎಚ್ಚರಿಸಿದ್ದಾರೆ. ಇದೇ NSUI ಸಂಘಟನೆಯ ವಕೀಲ ಶತಾಬಿಶ್ ಅವರು ಕೀರ್ತಿ ಗಣೇಶ್ ಪರ ನ್ಯಾಯಾಲಯದಲ್ಲಿ ವಕಾಲತ್ತು ವಹಿಸಿದ್ದಾರೆ. NSUI ಮಾಡಿದ ಪ್ರತಿಭಟನೆ ರಾಜ್ಯಮಟ್ಟದ ಪ್ರಮುಖ ಪತ್ರಿಕೆಗಳ ಮುಖಪುಟದಲ್ಲಿ ರಾರಾಜಿಸಿದೆ. ಟಿವಿ ವಾಹಿನಿಗಳು ಚರ್ಚೆ ನಡೆಸಿವೆ. ಈ ಮೂಲಕ ಯಾವುದೇ ವಂಶಪಾರಂಪರ್ಯದ ಹಿನ್ನೆಲೆಯೂ ಇಲ್ಲದ ಕೀರ್ತಿ ಗಣೇಶ್ ಕೆಲಸಕ್ಕೆ ಎಲ್ಲೆಡೆ ಮಾನ್ಯತೆ ದೊರಕಿದೆ.
ಕಾಂಗ್ರೆಸ್ ಪಕ್ಷದಲ್ಲಿ ವಂಶಪಾರಂಪರ್ಯ ಕೊನೆಯಾಗಬೇಕು. ಯುವಕರಿಗೆ ಹೆಚ್ಚು ಆದ್ಯತೆ ಸಿಗಬೇಕು. ಕೆಲಸ ಮಾಡುವವರನ್ನು ಗುರುತಿಸಬೇಕು ಎಂದು ಹೆಚ್ಚು ಚರ್ಚೆ ಆಗುತ್ತಿರುವ ವೇಳೆಯಲ್ಲೇ ‘ಇವೆಲ್ಲ ದೃಷ್ಟಿಯಿಂದಲೂ ಸೂಕ್ತ ಅಭ್ಯರ್ಥಿ ಹೇಗಿರಬೇಕೆಂದು’ ಒಂದೇ ಒಂದು ಪ್ರತಿಭಟನೆ ಮೂಲಕ ತೋರಿಸಿಕೊಟ್ಟಿದ್ದಾರೆ ಕೀರ್ತಿ ಗಣೇಶ್. ತೆರೆ ಮರೆಯಲ್ಲಿ ರಾಜಕಾರಣ ಮಾಡುವ ಆರ್ ಎಸ್ ಎಸ್ ಬಗ್ಗೆ ಮಾತನಾಡಲು ಹಿಂಜರಿಯುತ್ತಿದ್ದ ಕಾಂಗ್ರೆಸ್ ನಾಯಕರೂ ಈಗ ಸೊಲ್ಲೆತ್ತುವಂತಾಗಿದೆ. ವಿದ್ಯಾರ್ಥಿ ಸಂಘಟನೆ ಎಂದರೆ ನಮ್ಮ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಎಂದು ಬೀಗುತ್ತಿದ್ದ ಬಿಜೆಪಿಗೂ ಭಯ ಶುರುವಾಗಿದೆ. ಅದೇ ಕಾರಣಕ್ಕೆ ಚಡ್ಡಿ ಸುಟ್ಟ ಕೀರ್ತಿ ಗಣೇಶ್ ಅವರನ್ನು ಜೈಲಿಗಟ್ಟಿದೆ. ಇದರಿಂದ ಕೀರ್ತಿ ಗಣೇಶ್ ಅವರಂತಹ ಇನ್ನಷ್ಟು ಗಟ್ಟಿ ಯುವಕರನ್ನು ಆಕರ್ಷಿಸಲು ಕಾಂಗ್ರೆಸ್ ಪಕ್ಷಕ್ಕೆ ಸಹಕಾರಿಯಾಗಿದೆ.











