ಕಾಂಗ್ರೆಸ್ ಸರ್ಕಾರ ಈಗಾಗಲೇ ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯದ ಜನರನ್ನು ಸೆಳೆಯುವ ಕೆಲಸ ಮಾಡುತ್ತಿದೆ. ಇದೀಗ ರಾಜ್ಯದ ಯುವ ಶಕ್ತಿಯ ಮೇಲೆ ಕಾಂಗ್ರೆಸ್ ಕಣ್ಣು ಇಟ್ಟಿದ್ದು, ಯುವಕರ ಸೆಳೆಯುವ ಉದ್ದೇಶದಿಂದ ಉದ್ಯೋಗ ಮೇಳ ನಡೆಸಲು ಸರ್ಕಾರ ನಿರ್ಧಾರ ಮಾಡಿದೆ. ಯುವ ನಿಧಿ ನೋಂದಣಿಗೆ ಚಾಲನೆ ಕೊಟ್ಟಿರುವ ಬೆನ್ನಲ್ಲೇ, ಉದ್ಯೋಗ ಮೇಳ ಆಯೋಜನೆ ಮಾಡುವ ಮೂಲಕ ಯುವಕರ ಕಾಂಗ್ರಸ್ ಸರ್ಕಾರ ಆಕರ್ಷಿಸಲು ಸಿದ್ದತೆ ಮಾಡಿಕೊಳ್ಳಲಾಗಿದೆ. ರಾಜ್ಯದಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಲು ಸರ್ಕಾರ ತಯಾರಿ ಮಾಡಿಕೊಂಡಿದ್ದು, ರಾಜ್ಯ ಮಟ್ಟದ ಉದ್ಯೋಗ ಮೇಳ ನಡೆಸಿ ಹಲವಾರು ಯುವಕರಿಗೆ ಉದ್ಯೋಗ ಕೊಡಿಸುವುದು ಸರ್ಕಾರದ ನಿರ್ಧಾರಕ್ಕೆ ಕಾರಣ.
ಗೃಹ ಕಚೇರಿ ಕೃಷ್ಣದಲ್ಲಿ ಸಿಎಂ ಸಿದ್ದರಾಮಯ್ಯ ಮಹತ್ವದ ಸಭೆ
ಶುಕ್ರವಾರ ಸಂಜೆ ಸಿಎಂ ಸಿದ್ದರಾಮಯ್ಯ ಮಹತ್ವದ ಸಭೆ ನಡೆಸಿದ್ದು, ಸಹಕಾರ ಇಲಾಖೆ, ಉನ್ನತ ಶಿಕ್ಷಣ, ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ, ಕಾರ್ಮಿಕ ಇಲಾಖೆ, ಕ್ರೀಡಾ ಇಲಾಖೆ, ಪ್ರವಾಸೋದ್ಯಮ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಗಳ ಸಚಿವರು ಮತ್ತು ಅಧಿಕಾರಿಗಳು ಭಾಗಿಯಾಗಿದ್ದರು. ಸರ್ಕಾರದಿಂದ ಆಯೋಜನೆ ಆಗುವ ರಾಜ್ಯ ಮಟ್ಟದ ಉದ್ಯೋಗ ಮೇಳ ವಿಚಾರವಾಗಿ ಸಮಗ್ರ ಚರ್ಚೆ ನಡೆಸಿದ್ದು, ಉದ್ಯೋಗ ಮೇಳ ಪೂರ್ವ ಸಿದ್ಧತೆ ಕುರಿತು ಸಿಎಂ ಸಿದ್ದರಾಮಯ್ಯಗೆ ಅಧಿಕಾರಿಗಳು ಮಾಹಿತಿ ನೀಡಿದ್ರು. ಮುಂದಿನ ತಿಂಗಳು ರಾಜ್ಯ ಮಟ್ಟದ ಉದ್ಯೋಗ ಮೇಳ ನಡೆಸಲು ಸರ್ಕಾರ ತೀರ್ಮಾನ ಮಾಡಿತು. ರಾಜಧಾನಿ ಬೆಂಗಳೂರಿನಲ್ಲೇ ರಾಜ್ಯ ಮಟ್ಟದ ಉದ್ಯೋಗ ಮೇಳ ನಡೆಸಲು ತೀರ್ಮಾನ ಕೈಗೊಳ್ಳಲಾಯ್ತು.
ಕನ್ನಡ ಮಾಧ್ಯಮ ಹಾಗು ಗ್ರಾಮೀಣ ಮಕ್ಕಳಿಗೆ ಆದ್ಯತೆ..!
ಸಿಎಂ ಜೊತೆಗಿನ ಸಭೆ ಬಳಿ ಡಿಸಿಎಂ ಡಿ.ಕೆ ಶಿವಕುಮಾರ್ ಮಾತನಾಡಿದ್ದು, ಉದ್ಯೋಗ ಮೇಳದ ಮೂಲಕ ನಿರುದ್ಯೋಗ ಯುವಕ ಹಾಗೂ ಯುವತಿಯರಿಗೆ ಉದ್ಯೋಗ ಒದಗಿಸಿ, ಯುವ ಶಕ್ತಿ ಆಕರ್ಷಿಸುವ ಸಂಬಂಧ ಸಮಾಲೋಚನೆ ಮಾಡಲಾಗಿದೆ. ಚುನಾವಣಾ ಪ್ರಣಾಳಿಕೆಯಲ್ಲಿ ನಮ್ಮೆಲ್ಲ ಕನ್ನಡಿಗರಿಗೆ ಉದ್ಯೋಗ ಕೊಡಿಸುವ ಕಾರ್ಯಕ್ರಮ ಇತ್ತು. ಖಾಸಗಿ ಕ್ಷೇತ್ರದಲ್ಲಿ ಎಷ್ಟು ಉದ್ಯೋಗ ಸೃಷ್ಟಿ ಮಾಡಬೇಕು ಅಂತ ಸಿಎಂ ಚರ್ಚೆ ಮಾಡಿದ್ದಾರೆ. ಬಿಜೆಪಿ ಉದ್ಯೋಗ ಸೃಷ್ಟಿ ಮಾಡಲಿಲ್ಲ. ಹಾಗಾಗಿ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ನಡೆಸಿದ್ರು. ಆಗ ಯುವಕರಿಗೆ ಭರವಸೆ ನೀಡಲಾಗಿತ್ತು. ಉದ್ಯೋಗ ಯಾವ ರೀತಿ ಕೊಡಬೇಕು. ಇಂಡಸ್ಟ್ರಿ ಜೊತೆ ಹೇಗೆ ವ್ಯವಹಾರ ಮಾಡಬೇಕು ಅಂತ ಸಚಿವರ ಜೊತೆ ಚರ್ಚೆಯಾಗಿದೆ. ಸಲಹೆ ಕೂಡ ನೀಡಿದ್ದಾರೆ. ಇಂಡಸ್ಟ್ರಿಗೆ ತಕ್ಕಂತೆ ಹುಡುಗರನ್ನ ಸಿದ್ಧ ಮಾಡಬೇಕು. ಈಗ ಸಚಿವರ ಸಮಿತಿ ರಚನೆ ಮಾಡಲಾಗಿದೆ. ಪ್ರಾರಂಭದಲ್ಲಿ ಬೆಂಗಳೂರಿನಲ್ಲಿ ಬೃಹತ್ ಕಾರ್ಯಕ್ರಮ ನಡೆಯಲಿದ್ದು, ವಿಶೇಷವಾಗಿ ಗ್ರಾಮೀಣ ಮಕ್ಕಳಿಗೆ ಆದ್ಯತೆ, ಗ್ರಾಮೀಣ, ನಮ್ಮ ಕನ್ನಡ ವಿದ್ಯಾರ್ಥಿಗಳಿಗೆ ಅನುಕೂಲ ಆಗಬೇಕು ಎಂದಿದ್ದಾರೆ.
ಬೃಹತ್ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಮಾತನಾಡಿ, ನರ್ಸ್, ಐಟಿ, ಬಿಟಿ ಬೇರೆ ಬೇರೆ ಉದ್ಯೋಗಗಳು ಇದೆ. ಕೆಲ ಪ್ರಮುಖ ಬೇಡಿಕೆ ಇರುವ ಉದ್ಯೋಗ ಇದೆ. ಅವುಗಳಿಗೆ ತಕ್ಕಂತೆ ಉದ್ಯೋಗ ನೀಡಬೇಕಿದೆ. ಸ್ಕಿಲ್ನಲ್ಲಿ ತರಬೇತಿ ನೀಡಬೇಕು. ಸಚಿವ ಪ್ರಿಯಾಂಕ್ ಖರ್ಗೆ ಒಳ್ಳೆಯ ಕೆಲಸ ಮಾಡ್ತಿದ್ದಾರೆ. ಜನವರಿ ಅಂತ್ಯಕ್ಕೆ ಉದ್ಯೋಗ ಜೊತೆಗೆ ಮಾಹಿತಿ ನೀಡುವ ಕೆಲಸ ಮಾಡಲಾಗುತ್ತೆ. ಹೇಗೆ ಕೆಲಸ ಮಾಡಬೇಕು ಅನ್ನೋ ಮಾಹಿತಿ ಕೂಡ ನೀಡಲಾಗುತ್ತೆ. ಐಟಿ, ಬಿಟಿ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ತಿಳಿಸಲಾಗುತ್ತೆ. ಅನುಕೂಲ ಪಡೆದು, ಸಲಹೆ ಸೂಚನೆ ಕೊಡಲಾಗುತ್ತದೆ. ಬದಲಾವಣೆಗೆ ಹೊಂದಿಕೊಳ್ಳುವ ಅನುಕೂಲ ಆಗುವ ಉದ್ಯೋಗ ನೀಡಬೇಕಿದೆ. ಸ್ಕಿಲ್ ಡೆವಲಪ್ಮೆಂಟ್ಗೆ 80 ಸಾವಿರದಷ್ಟು ರಿಜಿಸ್ಟರ್ ಆಗಿದೆ. ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಕೂಡ ಚರ್ಚೆ ಆಗಲಿದೆ. ಕನ್ನಡಿಗ ಯುವಕರಿಗೆ ಉದ್ಯೋಗ ನೀಡಲಾಗುವುದು. ಉದ್ಯೋಗಕ್ಕೆ ಅರ್ಹ ಆಗುವಂತೆ ಟ್ರೈನಿಂಗ್ ನೀಡಬೇಕು. ಆ ಕೆಲಸ ಮಾಡುತ್ತೇವೆ ಎಂದಿದ್ದಾರೆ.
ಕಾಂಗ್ರೆಸ್ಗೆ ಬೂಸ್ಟ್ ನೀಡಲಿದೆಯೇ ಈ ನಿರ್ಧಾರ..!?
ಕಾಂಗ್ರೆಸ್ ಈಗಾಗಲೇ ಹಲವಾರು ಜನಪರವಾದ ಕೆಲಸಗಳಿಂದ ಜನಮನ್ನಣೆಗೆ ಪಾತ್ರವಾಗಿದೆ. ಇದೀಗ ಯುವನಿಧಿ ಯೋಜನೆಯ ಲಾಭ ಕೂಡ ಕಾಂಗ್ರೆಸ್ಗೆ ಸೇರಲಿದೆ. ಆದರ ಜೊತೆಗೆ ಉದ್ಯೋಗ ಕೊಡಿಸಲು ಪ್ರಾಮಾಣಿಕವಾಗಿ ಶ್ರಮಿಸುವ ಕೆಲಸ ಮಾಡಿದ್ರೆ, ಲೋಕಸಭಾ ಚುನಾವಣೆಗೆ ಬಂಪರ್ ಅಂದರೂ ತಪ್ಪಲ್ಲ. ಜನರು ಉದ್ಯೋಗಕ್ಕಾಗಿಯೇ ಪರದಾಡುತ್ತಿರುವ ಈ ಸಮಯದಲ್ಲಿ ಕೌಶಲ್ಯ ಆಧಾರಿತ ಕೆಲಸಗಳಿಗೆ ಕನ್ನಡಿಗರು ಅದರಲ್ಲೂ ಗ್ರಾಮೀಣ ಭಾಗದ ಯುವಕರಿಗೆ ಆದ್ಯತೆ ಕೊಟ್ಟು ಕೆಲಸ ಕೊಡಿಸುವ ಕೆಲಸ ಮಾಡಿದ್ರೆ ಕಾಂಗ್ರೆಸ್ ಮೇಲಿನ ಆಸಕ್ತಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಕಾಂಗ್ರೆಸ್ಗೆ ಸಹಾಯಕ ಆಗುತ್ತೆ ಅನ್ನೋದು ಚರ್ಚೆಯ ವಿಚಾರವೇ ಅಲ್ಲ. ನಮ್ಮ ನಾಡಿನ ಯುವಕರು ಉದ್ಯೋಗ ಪಡೆಯಲು ಸುವರ್ಣಾವಕಾಶ ಎನ್ನುವುದು ಸಂತಸದ ವಿಚಾರ. ಅಲ್ಲವೇ..?
ಕೃಷ್ಣಮಣಿ