
ನವದೆಹಲಿ: ಹಿಂದುತ್ವದ ಚಿಂತಕ ವಿ.ಡಿ.ಸಾವರ್ಕರ್ ಅವರ ಹೆಸರಿನ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಶುಕ್ರವಾರ ದೆಹಲಿಯಲ್ಲಿ ಶಂಕುಸ್ಥಾಪನೆ ನೆರವೇರಿಸಲಿರುವ ಬೆನ್ನಲ್ಲೇ ಸಾವರ್ಕರ್ ಹೆಸರನ್ನು ಇಡಲು ಕಾಂಗ್ರೆಸ್ ಪಕ್ಷ, ಎನ್‌ಎನ್‌ಯುಐ ಘಟಕಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.

ದೆಹಲಿ ವಿಶ್ವವಿದ್ಯಾಲಯವು ತನ್ನ ಕ್ಯಾಂಪಸ್ ನ್ನು ವಿಸ್ತರಿಸುವ ಉದ್ದೇಶದೊಂದಿಗೆ ಇಲ್ಲಿನ ನಜಫಗಢದಲ್ಲಿ ವೀರ ಸಾವರ್ಕರ್ ಹೆಸರಿನ ಕಾಲೇಜು ಸ್ಥಾಪಿಸಲು ಮುಂದಾಗಿದೆ.. ವಿಶ್ವವಿದ್ಯಾಲಯದ ಮೂರು ವಿವಿಧ ಯೋಜನೆಗಳಲ್ಲಿ ಕಾಲೇಜು ನಿರ್ಮಾಣ ಕೂಡ ಒಂದಾಗಿದ್ದು, ಉಳಿದಂತೆ ಎರಡು ಪ್ರತ್ಯೇಕ ಕ್ಯಾಂಪಸ್‌ಗಳನ್ನು ಅಭಿವೃದ್ಧಿಪಡಿಸಲಿದೆ.ಆದರೆ ಕಾಲೇಜಿಗೆ ಸಾವರ್ಕರ್ ಹೆಸರಿಡುವುದನ್ನು ವಿರೋಧಿಸಿ ಎನ್‌ಎಸ್‌ಯುಐ ಅಧ್ಯಕ್ಷ ವರುಣ್ ಚೌಧರಿ ಅವರು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ‘ಉಲ್ಲೇಖಿತ ಹೊಸ ಕಾಲೇಜಿಗೆ ಮನಮೋಹನ ಸಿಂಗ್ ಅವರ ಹೆಸರಿಡಬೇಕು.
ಇದು, ಸಿಂಗ್ ಅವರಿಗೆ ಗೌರವ ಸಲ್ಲಿಸುವ ಉತ್ತಮ ಮಾರ್ಗವೂ ಆಗಿದೆ’ ಎಂದು ಹೇಳಿದ್ದಾರೆ. ಆದರೆ ಬಿಜೆಪಿ ವಕ್ತಾರರು ಕಾಂಗ್ರೆಸ್ ಆಕ್ಷೇಪವನ್ನು ತಳ್ಳಿ ಹಾಕಿದ್ದು 1971 ರಲ್ಲಿಯೇ ಸ್ವಾತಂತ್ರ ಹೋರಾಟಗಾರ ಸಾವರ್ಕರ್ ಹೆಸರಿನಲ್ಲಿ ಅಂಚೆ ಚೀಟಿಯನ್ನು ಅಂದಿನ ಪ್ರಧಾನಿ ಶ್ರೀ ಮತಿ ಇಂದಿರಾ ಗಾಂಧಿ ಅವರು ಬಿಡುಗಡೆ ಮಾಡಿದ್ದರು.ಈಗ ಕಾಲೇಜಿಗೆ ಹೆಸರಿಡುವುದರಲ್ಲಿ ಏನು ತಪ್ಪು ಎಂದು ಪ್ರಶ್ನಿಸಿದ್ದಾರೆ.