ಕಾಂಗ್ರೆಸ್ ನವರ ಈ ಪಾದಯಾತ್ರೆಯಿಂದ ಜನರಿಗೆ ಒಳ್ಳೆಯದಾಗುವುದಿಲ್ಲ. ನೀರು ಸಿಗಲ್ಲ ಆದರೆ ಕೋವಿಡ್ ಸಿಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆ ಶಿವಕುಮಾರ್ ತಾನು ಚಾಂಪಿಯನ್ ಆಗಬೇಕು, ಸಿಎಂ ಅಗಬೇಕು ಎನ್ನುವ ಲೆಕ್ಕಾಚಾರದಲ್ಲಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರಿಗೂ ಕೋವಿಡ್ ಹಚ್ಚುವ ಅಧಿಕಾರವನ್ನು ಸೋನಿಯಾ ಗಾಂಧಿ ಕೊಟ್ರಾ? ನೀವು ಸಿಎಂ ಆಗುವ ಭ್ರಮೆಯಲ್ಲಿ ರಾಜ್ಯದ ಜನರಿಗೆ ಕೋವಿಡ್ ಹರಡುವ ಪ್ರಯತ್ನ ಒಳ್ಳೆಯದಲ್ಲ. ಮೊದಲನೆಯದಾಗಿ ನೀವು ಸಿಎಂ ಆಗುವುದೇ ಕನಸು ಎಂದು ವ್ಯಂಗ್ಯವಾಡಿದರು.
ಯಾವುದೇ ಪಕ್ಷದವರಿರಬಹುದು ಆರೋಗ್ಯ ಮುಖ್ಯ. ನನಗೆ ತುಂಬಾ ಸಂತೋಷ ಅನಿಸಿದ್ದು ನಟ ಶಿವರಾಜ್ ಕುಮಾರ್ ಪಾದಯಾತ್ರೆಗೆ ಭಾಗವಹಿಸಲಿಲ್ಲ. ಅವರು ಮೇಕೆದಾಟು ಹೆಸರಲ್ಲಿ ಮಾಡುತ್ತಿರುವ ರಾಜಕಾರಣದಲ್ಲಿ ಜನ ಜಾತ್ರೆಯಾಗುತ್ತಿದೆ. ಏಳು – ಎಂಟು ಸಾವಿರ ಜನರು ಒಟ್ಟಿಗೆ ಮೆರವಣಿಗೆ ಹೋಗುತ್ತಿದ್ದಾರೆ. ಯಾಕಂದ್ರೆ ನಾಳೆ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಚುನಾವಣೆ ಬರ್ತಾ ಇದೆ. ಮುಂದೆ ವಿಧಾನ ಸಭಾ ಚುನಾವಣೆ ಬರುತ್ತೆ. ಇಂತಹ ಪಾದಯಾತ್ರೆಯಲ್ಲಿ ಡಿಕೆ ಶಿವಕುಮಾರ್ ಎದುರು ಶೋ ತೋರಿಸಿದರೆ ರಾಜಕೀಯದಲ್ಲಿ ಲಾಭವಾಗಬಹುದು ಎಂಬುದು ಅವರ ಲೆಕ್ಕಾಚಾರ. ಅಲ್ಲಿಗೆ ಹೋದವರು ಇಡೀ ರಾಜ್ಯಕ್ಕೆ ಕೋವಿಡ್ ಹಚ್ಚುತ್ತಾರೆ. ಮೊದಲು ಕೋವಿಡ್ ನಿಯಮಗಳನ್ನ ಪಾಲಿಸುವುದಾಗಿ ಕಾಂಗ್ರೆಸ್ ಭರವಸೆ ನೀಡಿತ್ತು. ಒಂದು ಲಕ್ಷ ಮಾಸ್ಕ್ ವಿತರಣೆ ಮಾಡುತ್ತೇವೆ ಎಂದು ಹೇಳಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪಾದಯಾತ್ರೆಯಲ್ಲಿ ಸ್ವತಃ ಮಾಸ್ಕ್ ಹಾಕಿಕೊಂಡಿಲ್ಲ. ಯಾವ ರೀತಿಯ ನಿಯಮ ಪಾಲನೆ..? ಸಾಮಾಜಿಕ ಅಂತರವೂ ಇಲ್ಲ.! ಜೊತೆಗೆ ಏನು ಮಾಡ್ಕೋತ್ತಿರಾ ಎಂದು ಬೆದರಿಕೆ ಹಾಕ್ತಾರೆ. ಅಲ್ಲಿ ಏಳೆಂಟು ಸಾವಿರ ಜನರು ಸೇರಿದ್ದಾರೆ ಎಂದು ಪತ್ರಿಕೆಗಳು ವರದಿ ಮಾಡಿವೆ. ಅಲ್ಲಿದ್ದವರೆಲ್ಲಾ ಒಂದೇ ಊರಿನವರಲ್ಲ. ಬೇರೆ ಬೇರೆ ಕಡೆಯಿಂದ ಬಂದವರು. ಉಚಿತ ಪೆಟ್ರೋಲ್ ಬೇರೆ ವಿತರಣೆ ಮಾಡಿದ್ದಾರೆ. ಅದು ಅವರ ಆಂತರಿಕ ವಿಚಾರ ಆದರೆ ಕೋವಿಡ್ ಹರಡಲು ಪೂರಕ ಕೆಲಸ ಮಾಡುತ್ತಿದ್ದಾರೆ.

ಕೋವಿಡ್ ಹಂಚಲು ಯಾರು ಅಧಿಕಾರ ಕೊಟ್ಟವರು? ಸೋನಿಯಾ ಗಾಂಧಿ ಕೊಟ್ಟರಾ..? ನಿಮ್ಮ ಪಾದಯಾತ್ರೆಯಿಂದ ನೀರು ಸಿಗಲ್ಲ, ಕೋವಿಡ್ ಬರುತ್ತೆ. ರಾಜ್ಯದ ಕಾಂಗ್ರೆಸ್ ಕಾರ್ಯಕರ್ತರನ್ನ ಬೆಂಗಳೂರಿಗೆ ಕರೆಸಿಕೊಂಡು ಕೋವಿಡ್ ಹಂಚುತ್ತಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಈಗಾಗಲೇ ಜ್ವರದಿಂದ ಬಳಲುತ್ತಿದ್ದಾರೆ. ಅವರು ಪುನಃ ಹೋದರೋ ಬಿಟ್ಟರೋ ನನಗೆ ಗೊತ್ತಿಲ್ಲ. ಡಿಕೆ ಶಿವಕುಮಾರ್ ಮಾತ್ರ ತಾವು ಚಾಂಪಿಯನ್ ಆಗಬೇಕು, ಮುಂದಿನ ಸಿಎಂ ಆಗಬೇಕು ಎಂಬ ಹಗಲುಗನಸಿನಲ್ಲಿ ಜನರಿಗೆ ಸೋಂಕು ತರುತ್ತಿದ್ದಾರೆ. ಇದಕ್ಕೆ ಮುಂದಿನ ಚುನಾವಣೆಯಲ್ಲಿ ಜನ ಉತ್ತರ ನೀಡ್ತಾರೆ ಎಂದು ಈಶ್ವರಪ್ಪ ಹೇಳಿದರು.
ಕೋವಿಡ್ ಪರೀಕ್ಷೆ ಮಾಡಲೆಂದು ಬಂದ ಅಧಿಕಾರಿಗಳನ್ನ ಗದರಿಸಿದ್ದ ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ ಈಶ್ವರಪ್ಪ ಡಿಕೆ ಶಿವಕುಮಾರ್ ಗೂಂಡಾಗಿರಿ ಮಾಡ್ತಾರೆ ಎಂದು ಕೇಳಿದ್ದೆ ಈಗ ಕಣ್ಣಾರೆ ನೋಡುತ್ತಿದ್ದೇನೆ. ಆರೋಗ್ಯ ಇಲಾಖೆ ಅಧಿಕಾರಿಗಳು ನಿಮ್ಮ ಆರೋಗ್ಯ ತಪಾಸಣೆ ಮಾಡಲು ಬಂದರೆ ಗದರಿಸಿದ್ದೀರಿ ಹಾಗಾಗಿ ಅವರು ಡಿಕೆ ಶಿವಕುಮಾರ್ ಅಲ್ಲ ಕೆಡಿ ಶಿವಕುಮಾರ್ ಎಂದು ಈಶ್ವರಪ್ಪ ಹೇಳಿದರು.