ಏಪ್ರಿಲ್ 17 ರಂದು ಕೋಲಾರ ಜಿಲ್ಲೆ ಮಾಲೂರಿನಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಮಾಲೂರು ಕಾಂಗ್ರೆಸ್ ಶಾಸಕ ಕೆ.ವೈ ನಂಜೇಗೌಡ ನೇತೃತ್ವದಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಮಾಲೂರು ಹೊರವಲಯದ ಚೊಕ್ಕಂಡಹಳ್ಳಿ ಗೇಟ್ ಬಳಿ ಬೃಹತ್ ಸಮಾವೇಶಕ್ಕೆ ವೇದಿಕೆ ಸಜ್ಜಾಗಿದೆ. ಸಮಾವೇಶದಲ್ಲಿ ಸುಮಾರು 1 ಲಕ್ಷಕ್ಕೂ ಅಧಿಕ ಮಂದಿಯನ್ನ ಸೇರಿಸಲು ಕಾಂಗ್ರೆಸ್ ನಾಯಕರು ತಯಾರಿ ಮಾಡಿಕೊಂಡಿದ್ದಾರೆ.
ಕೋಲಾರ, ಚಿಕ್ಕಬಳ್ಳಾಪುರ ಹಾಗು ಬೆಂಗಳೂರು ಗ್ರಾಮಾಂತರ ಪ್ರದೇಶದಿಂದಲೂ ಜನರನ್ನು ಕರೆತರುವ ತೀರ್ಮಾನ ಮಾಡಿದ್ದು, ಕೋಲಾರ ಕಾಂಗ್ರೆಸ್ ಅಭ್ಯರ್ಥಿ ಕೆ.ವಿ ಗೌತಮ್ ಪರವಾಗಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಬೃಹತ್ ಸಮಾವೇಶದಲ್ಲಿ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್, ಪ್ರಿಯಾಂಕಾ ಗಾಂಧಿ, ರಣದೀಪ್ ಸಿಂಗ್ ಸುರ್ಜೇವಾಲ ಸೇರಿದಂತೆ ಘಟಾನುಘಟಿ ನಾಯಕರು ಭಾಗಿಯಾಗಲಿದ್ದಾರೆ.
ಈಗಾಗಲೇ ವೇದಿಕೆ ಸಂಪೂರ್ಣ ಸಿದ್ಧಗೊಂಡಿದ್ದು, ಮಾಲೂರು ಶಾಸಕ ಕೆ.ವೈ ನಂಜೇಗೌಡ ಹಾಗು ಬೆಂಬಲಿಗರು ಭೇಟಿ ನೀಡಿ, ಸಮಾವೇಶದ ಸಿದ್ದತೆಗಳನ್ನು ಪರಿಶೀಲನೆ ನಡೆಸಿದ್ದಾರೆ. ಇದೇ ವೇಳೆ ಮಾತನಾಡಿದ ಶಾಸಕ ಕೆ.ವೈ ನಂಜೇಗೌಡ, ಮಾಲೂರಿಗೆ ರಾಹುಲ್ ಗಾಂಧಿ ಆಗಮಿಸುತ್ತಿರುವುದು ನಮ್ಮ ಪಾಲಿನ ಅದೃಷ್ಟ. ಖಚಿತವಾಗಿಯೂ ಕೋಲಾರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ವಿ ಗೌತಮ್ ಜಯಭೇರಿ ಬಾರಿಸಲಿದ್ದಾರೆ ಎಂದಿದ್ದಾರೆ.