ಕಾಂಗ್ರೆಸ್ ನಾಯಕರಾದ ರಾಹುಲ್ ಹಾಗು ಸೋನಿಯಾ ಗಾಂಧಿಗೆ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದಂತೆ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ವಿಚಾರವಾಗಿ ಜಾರಿ ನಿರ್ದೇಶನಾಲಯ(ED) ವಿಚಾರಣೆ ನಡೆಸುತ್ತಿದೆ.
ಇನ್ನು ಇಡಿ ಅಧಿಕಾರಿಗಳು ಸತತ ಮೂರನೇ ದಿನವು ರಾಹುಲ್ ಗಾಂಧಿಗೆ ಡ್ರಿಲ್ ಮಾಡಿದ್ದಾರೆ. ಇನ್ನು ಇದೇ ವಿಚಾರವಾಗಿ ಕಾಂಗ್ರೆಸ್ ನಾಯಕರು ಕೆಂಡಾಮಂಡಲವಾಗಿದ್ದು ಮುಚ್ಚಿಹೋಗಿರುವ ಪ್ರಕರಣವನ್ನ ಮತ್ತೆ ಹೊರತೆಗೆದು ಬಿಜೆಪಿ ದ್ವೇಷ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿ ದೇಶಾದ್ಯಂತ ಮೂರನೇ ದಿನವು ತನ್ನ ಪ್ರತಿಭಟನೆಯೆ ಕಿಚ್ಚನ್ನು ಆರದಂತೆ ನೋಡಿಕೊಂಡಿದೆ.
ಇನ್ನು ದೆಹಲಿಯ ಅಕ್ಬರ್ ರಸ್ತೆಯಲ್ಲಿರುವ ಎಐಸಿಸಿ ಮುಖ್ಯ ಕಚೇರಿ ಪ್ರವೇಶಿಸಿದಂತೆ ಕಾಂಗ್ರೆಸ್ ನಾಯಕರಿಗೆ ಪೊಲೀಸರು ನಿರ್ಬಂಧ ಹೇರಿದ್ದು ಪೊಲೀಸರು ಹಾಗು ಕಾರ್ಯಕರ್ತರ ನಡುವೆ ವಾಗ್ವಾದವಾಗಿ ರಣರಂಗವಾಗಿತ್ತು.

ಪೊಲೀಸರು ಕೆಲವೇ ಕೆಲವರನ್ನು ಕಚೇರಿಯ ಒಳಗೆ ಬಿಡುವುದಾಗಿ ಹೇಳಿದ್ದರು. ಇದಕ್ಕೆ ಕುಪಿತಗೊಂಡ ಕಾಂಗ್ರೆಸ್ ನಾಯಕರು ಪೊಲೀಸರು ಹಾಕಿದ ಬ್ಯಾರಿಕೇಟ್ಗಳನ್ನು ಹತ್ತಿ ಕಚೇರಿ ಪ್ರವೇಶಿಸಲು ಯತ್ನಿಸಿದ್ದರು. ಕೆಲವರು ಇದು ಬಿಜೆಪಿ ಸರ್ಕಾರದ ದ್ವೇಷ ರಾಜಕಾರಣ ಎಂದು ಆರೋಪಿಸಿ ಗೋಷಣೆಗಳನ್ನು ಕೂಗಲು ಶುರು ಮಾಡಿದ್ದರು.
ಕಾಂಗ್ರೆಸ್ ನಾಯಕರಾದ ಡಿ.ಕೆ.ಸುರೇಶ್, ದಿನೇಶ್ ಗುಂಡೂರಾವ್, ಸಂಸದ ಹನುಮಂತಪ್ಪ, ಅಶೋಖಕ್ ಗೆಹ್ಲೋಟ್, ಸಚಿನ್ ಪೈಲಟ್, ರಣದೀಪ್ ಸುರ್ಜೆವಾಲಾ, ಯುವ ಕಾಂಗ್ರೆಸ್ ರಾಷ್ಟ್ರಧ್ಯಕ್ಷರಾದ ಬಿ.ವಿ.ಶ್ರೀನಿವಾಸ್ರನ್ನು ಪೊಲೀಸರು ವಶಕ್ಕೆ ಪಡೆದು ನಂತರ ಬಿಟ್ಟು ಕಳುಹಿಸಿದ್ದಾರೆ.
ಈ ವೇಳೆ ಮಾತನಾಡಿದ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಇದು ಪ್ರಜಾಪ್ರಭುತ್ವದ ಕಗ್ಗೋಲೆ ನಮ್ಮ ಪಕ್ಷದ ನಾಯಕರು ಹಾಗು ಕಾರ್ಯಕರ್ತರನ್ನು ಕಚೇರಿ ಒಳಗೆ ಬಿಡದಿರುವುದು ಯಾವ ರೀತಿಯ ಕ್ರಮ ಎಂದು ಪ್ರಶ್ನಿಸಿದ್ದಾರೆ.
ಮುಂದುವರೆದು, ನಮ್ಮ ಪಕ್ಷದ ಹಲವು ನಾಯಕರು ಹಾಗು ಸಂಸದರನ್ನು ಗೃಹ ಬಂಧನದಲ್ಲಿಡಲಾಗಿದೆ ಬಿಜೆಪಿಯ ಈ ದ್ವೇಷ ರಾಜಕಾರಣ ಎಷ್ಟು ದಿನ ನಡೆಯುತ್ತದೆ ಎಂಬುದನ್ನ ನಾವು ನೋಡುತ್ತೀವಿ ಎಂದು ಕಿಡಿಕಾರಿದ್ದಾರೆ.

ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಪ್ರತಿಕ್ರಿಯಿಸಿ ಇಲ್ಲಿ ಏನು ನಡೆಯುತ್ತಿದೆ ಎಂಬುದು ನನ್ನಗೆ ತಿಳಿಯುತ್ತಿಲ್ಲ ಕಚೇರಿಯ ಮುಖ್ಯ ದ್ವಾರ ಹಾಗು ಹಿಂಬಾಗಿಲನ್ನು ಮುಚ್ಚಿದ್ದೀರಿ ನಮ್ಮನ್ನು ಸಹ ಒಳ ಬಿಡುತ್ತಿಲ್ಲ ಇದಕ್ಕೆ ತಕ್ಕ ಪ್ರತ್ಯುತ್ತರವನ್ನ ಮುಂದಿನ ದಿನಗಳಲ್ಲಿ ಕೊಡಲಾಗುವುದು ಎಂದು ಎಚ್ಚರಿಸಿದ್ದಾರೆ.
ಈ ವೇಳೆ ಮಾತನಾಡಿದ ಎಐಸಿಸಿ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಇಂದು ಪೊಲೀಸರು ಬಲವಂತವಾಗಿ ಭಾರತದ ಅತಿ ಪುರಾತನ ಪಕ್ಷದ ಮುಖ್ಯ ಕಚೇರಿಯನ್ನ ಬಲವಂತವಾಗಿ ಪ್ರವೇಶಿದ್ದಾರೆ. ನಮ್ಮ ಹಿರಿಯರು ಈ ದೇಶದ ಸ್ವಾತಂತ್ರ್ಯಕ್ಕಾಗಿ ಹಾಗು ಸಂವಿಧಾನಕ್ಕಾಗಿ ತಮ್ಮ ಪ್ರಾಣವನ್ನ ತ್ಯಾಗ ಮಾಡಿದ್ದಾರೆ. ಇದೊಂದು ಕರಾಳ ದಿನ ಬಿಜೆಪಿ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದೆ ಎಂದು ಕಿಡಿಕಾರಿದ್ದಾರೆ.
ಬುಧವಾರ ಬೆಳ್ಳಗ್ಗೆ ವಿಚಾರಣೆಗೆ ಹಾಜರಾದ ರಾಹುಲ್ ಗಾಂಧಿ ಜೊತೆಗೆ ಹಿರಿಯ ಕಾಂಗ್ರೆಸ್ ನಾಯಕರು ಸಾಥ್ ನೀಡಿದ್ದರು ಕೆಲ ಕಾಲ ಈಡಿ ಮುಖ್ಯ ಕಚೇರಿ ಎದುರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದರು. ಪೊಲೀಸರು ಎಲ್ಲರನ್ನು ವಶಕ್ಕೆ ಪಡೆದು ನಂತರ ಬಿಟ್ಟುಕಳುಹಿಸಿದ್ದರು.












