ಕಾಂಗ್ರೆಸ್ ಪಕ್ಷದಲ್ಲಿ ಗ್ಯಾರಂಟಿ ವಿಚಾರ ತಿರುಗುಬಾಣ ಆಗುವ ಸಾಧ್ಯತೆಗಳು ಕಾಣಿಸುತ್ತಿವೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣವನ್ನು ಕಡಿತ ಮಾಡುವ ಬಗ್ಗೆ ಚಿಂತನೆ ನಡೀತಿದೆ. ಅವಶ್ಯಕತೆ ಇಲ್ಲದವರಿಗೆ ಉಚಿತ ಬಸ್ ವ್ಯವಸ್ಥೆ ತೆಗೆಯುವ ಬಗ್ಗೆ ಚಿಂತನೆ ನಡೆದಿದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದ ಒಂದು ಹೇಳಿಕೆ ರಾಜಕಾರಣದ ಮೇಲೆ ಪ್ರಭಾವ ಬೀರುವ ಆತಂಕ ಸೃಷ್ಟಿಸಿದೆ. ಡಿ.ಕೆ ಶಿವಕುಮಾರ್ ಮಾತನ್ನೇ ಅಸ್ತ್ರವಾಗಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕ ಸರ್ಕಾರದ ವಿರುದ್ಧ ಕಿಡಿಕಾರಿದ್ದರು.
ಕರ್ನಾಟಕದಲ್ಲಿ ಕಾಂಗ್ರೆಸ್‌ನಲ್ಲಿ ಆಂತರಿಕ ಕಿತ್ತಾಟದ ಬಗ್ಗೆ ಪ್ರಸ್ತಾಪ ಮಾಡಿರುವ ಮೋದಿ, ಅಭಿವೃದ್ಧಿ ಬದಲು ರಾಜ್ಯವನ್ನ ಲೂಟಿ ಮಾಡುತ್ತಿದೆ. ಈಗ ಇರುವ ಸ್ಕೀಮ್‌ಗಳನ್ನ ಹಿಂಪಡೆಯಲು ಹೊರಟಿದ್ದಾರೆ ಎಂದು ಟೀಕಿಸಿದ್ದರು.ಇನ್ನು ಹಿಮಾಚಲ ಪ್ರದೇಶದಲ್ಲಿ ಸರ್ಕಾರಿ ನೌಕರರಿಗೆ ಸಂಬಳ ಸಿಗುತ್ತಿಲ್ಲ.ಸಾಲ ಮನ್ನಾಕ್ಕಾಗಿ ತೆಲಂಗಾಣ ರೈತರು ಕಾಯುತ್ತಿದ್ದಾರೆ.ಛತ್ತೀಸ್‌ಗಢ, ರಾಜಸ್ಥಾನದಲ್ಲಿ ಕೆಲ ಭರವಸೆ ನೀಡಿದ್ದರು. ಆದ್ರೆ ಭರವಸೆಗಳು 5 ವರ್ಷಗಳಾದ್ರೂ ಜಾರಿಯಾಗಲಿಲ್ಲ. ಹಿಮಾಚಲ, ಕರ್ನಾಟಕದಲ್ಲಿ ಆರ್ಥಿಕ ವ್ಯವಸ್ಥೆ ಹದಗೆಡುತ್ತಿದೆ.ಜನರೆದುರು ಕಾಂಗ್ರೆಸ್ ನಕಲಿ ಭರವಸೆಗಳ ಅನಾವರಣ ಆಗ್ತಿದೆ ಎಂದಿದ್ದರು.
ಪ್ರಧಾನಿ ಆರೋಪಕ್ಕೆ ತಿರುಗೇಟು ನೀಡಿದ್ದಾರೆ ಸಿಎಂ ಸಿದ್ದರಾಮಯ್ಯ. ಗ್ಯಾರಂಟಿ ಸ್ಕೀಂ ಬಗ್ಗೆ ಪ್ರಧಾನಿ ಮೋದಿ ಲೇವಡಿಗೆ ಸಿಎಂ ತಿರುಗೇಟು ನೀಡಿದ್ದು, ಕಾಂಗ್ರೆಸ್ ಕೊಟ್ಟ ಭರವಸೆ ಎಲ್ಲವನ್ನೂ ಈಡೇರಿಸಿದ್ದೇವೆ. ಗ್ಯಾರಂಟಿ ಸ್ಕೀಂಗೆ 56 ಸಾವಿರ ಕೋಟಿಗೂ ಹೆಚ್ಚು ಮೀಸಲು ಇಟ್ಟಿದ್ದೇವೆ. ಶೇಕಡ 40ರಷ್ಟು ಕಮಿಷನ್ ಮೂಲಕ ಬಿಜೆಪಿ ರಾಜ್ಯವನ್ನು ಲೂಟಿ ಮಾಡಿದೆ.
ಬೆರಳು ಮಾಡುವ ಮುನ್ನ ಬಿಜೆಪಿಯತ್ತ ನೋಡಿ ಎಂದಿದ್ದಾರೆ ಸಿಎಂ ಸಿದ್ದರಾಮಯ್ಯ. ಮೋದಿಯವರೇ ಹಳದಿ ಕನ್ನಡಕದಿಂದ ನೋಡಬೇಡಿ. ರಾಜ್ಯದ ಅಭಿವೃದ್ದಿ ಮಾದರಿಯನ್ನು ಅರ್ಥ ಮಾಡಿಕೊಳ್ಳಿ. ಗ್ಯಾರಂಟಿ ಯೋಜನೆಗಳು ರಾಜ್ಯದಲ್ಲಿ ಯಶಸ್ವಿ ಅನುಷ್ಠಾನ ಆಗಿದೆ. ತೆರಿಗೆ ಸಂಗ್ರಹ ಹೆಚ್ಚಾಗಿದೆ, ಆರ್ಥಿಕತೆಗೆ ಬಲ ಸಿಕ್ಕಿದೆ. ಇದಕ್ಕಾಗಿ ಕರ್ನಾಟಕಕ್ಕೆ ನೀವು ಶಹಾಬಾಸ್ ಗಿರಿ ಕೊಡಬೇಕಿತ್ತು. ಆದರೆ ನೀವು ಸುಳ್ಳಿನ ಬಾಣಗಳಿಂದ ಕನ್ನಡಿಗರನ್ನು ಅವಮಾನಿಸಿದ್ದೀರಿ.ಇದು ಖಂಡನೀಯ, ಸಹಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಪ್ರಧಾನಿ ಮೋದಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಕೂಡ ಕಿಡಿ ಕಾರಿದ್ದು, ಎಕ್ಸ್ ಮೂಲಕ ಮಲ್ಲಿಕಾರ್ಜುನ ಖರ್ಗೆ ತಿರುಗೇಟು ನಿಡಿದ್ದಾರೆ. 140 ಕೋಟಿ ಭಾರತೀಯರ ಮೇಲಿನ ಕ್ರೂರ ಜೋಕ್ ಎಂದು ವ್ಯಂಗ್ಯವಾಡಿದ್ದಾರೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಏನಾಯ್ತು..? ನೀರವ್ ಮೋದಿ, ಚೋಕ್ಸಿ, ಮಲ್ಯ ಪರಾರಿಗೆ ಸಹಕಾರ ಕೊಟ್ಟಿದ್ದು ಯಾರು ಎಂದು ಎಕ್ಸ್ ಮೂಲಕ ಪ್ರಧಾನಿ ಮೋದಿಗೆ ವ್ಯಂಗ್ಯವಾಡಿದ್ದಾರೆ. ಎಲೆಕ್ಟೋರಲ್ ಬಾಂಡ್‌ಗಳ ಮೂಲಕ ಲೂಟಿ ಮಾಡಿದ್ರಿ, ನಾವು ಲಂಚ ತಿನ್ನಲ್ಲ, ತಿನ್ನಲು ಬಿಡಲ್ಲ ಅಂತ ಹೇಳಿದ್ರಿ, ನಿಮ್ಮ ವಿಕಸಿತ ಭಾರತ ಎಲ್ಲಿವರೆಗೆ ಬಂದಿದೆ..? ನಿಮ್ಮ ಅಚ್ಚೇ ದಿನ್ ಏನಾಯ್ತು ಪ್ರಧಾನಿಯವರೇ..? ವರ್ಷಕ್ಕೆ 2 ಕೋಟಿ ಉದ್ಯೋಗಗಳ ಭರವಸೆ ಏನಾಯ್ತು..? ಎಂದು ಕುಟುಕಿದ್ದಾರೆ.
ಪ್ರಧಾನಿ ಮೋದಿ ವಿರುದ್ಧ ಡಿಸಿಎಂ ಡಿ.ಕೆ ಶಿವಕುಮಾರ್ ಕೂಡ ಕಿಡಿ ಕಾರಿದ್ದು, ರಾಜ್ಯದ ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ. ಮೋದಿ ಅವರನ್ನು ಅವರದೇ ಕಚೇರಿ ದಾರಿತಪ್ಪಿಸಿದೆ ಎಂದಿದ್ದಾರೆ. ವಿವಿಧ ರಾಜ್ಯಗಳ ಚುನಾವಣಾ ಸೋಲಿನ ಭಯದಿಂದಾಗಿ ಅನಾವಶ್ಯಕ ವಾಗ್ದಾಳಿ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಯೋಜನೆಗಳನ್ನು ಹಿಂದಕ್ಕೆ ಪಡೆದ ಇತಿಹಾಸವಿಲ್ಲ ಎಂದು ಬೆನ್ನು ತಟ್ಟಿಕೊಂಡಿದ್ದಾರೆ.