ಕಲಬುರಗಿ: ಕಾಂಗ್ರೆಸ್ ನ ರಾಷ್ಟ್ರೀಯ ನಾಯಕರು ಬೇಲ್ ಮೇಲೆ ಇದ್ದಾರೆ. ರಾಜ್ಯಾಧ್ಯಕ್ಷರು ಬೇಲ್ ಮೇಲೆ ಇದ್ದಾರೆ. ಹಾಗೆ ನೋಡಿದರೆ ಕಾಂಗ್ರೆಸ್ ನಾಯಕರು ಯಾರೂ ಚುನಾವಣೆಗೇ ನಿಲ್ಲುವ ಹಾಗಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಳಿದರು.ಅವರು ಇಂದು ಚಿತ್ತಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ ಅವರ ಪರವಾಗಿ ರೋಡ್ ಶೋ ನಡೆಸಿ ಮಾತನಾಡಿದರು.
ಹಿಂದೆ ಚಿತ್ತಾಪುರದಲ್ಲಿ ಬಿಜೆಪಿ ನಾಯಕರನ್ನು ಗೆಲ್ಲಿಸಿಕೊಂಡು ಹೋಗಿದ್ವಿ. ಈ ಬಾರಿ ಚಿತ್ತಾಪುರದಲ್ಲಿ ಮಣಿಕಂಠನನ್ನು ಗೆಲ್ಲಿಸಿಕೊಂಡು ಹೋಗಲು ಮತ್ತೆ ಬಂದಿದ್ದೀನಿ. ಮಣಿಕಂಠನ ಮೇಲೆ ಹಲವಾರು ಕೇಸ್ ಇದೆ. ಸಿಎಂ ಅವರ ಪರ ಮತ ಯಾಚನೆ ಮಾಡುವುದು ದುರಂತ ಅಂತ ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ಆದರೆ ಕಾಂಗ್ರೆಸ್ನ ರಾಷ್ಟ್ರೀಯ-ರಾಜ್ಯ ನಾಯಕರ ಮೇಲೆ ಕೇಸ್ ಇದೆ. ಅವರುಗಳು ಬೇಲ್ ಮೇಲೆ ಇದ್ದಾರೆ. ನಿಮ್ಮ ಮಾತಿನಂತೆಯೇ ನಡೆಯುವುದಾದರೇ ನೀವೆಲ್ಲರೂ ರಾಜಕೀಯದಿಂದಲೇ ಹೊರಗುಳಿಯಬೇಕು ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಕಾಂಗ್ರೆಸ್ ವಿಸರ್ಜನೆ ಮಾಡಿ
ಮಹಾತ್ಮಾ ಗಾಂಧಿ ಅವರು ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಕಾಂಗ್ರೆಸ್ ಪಕ್ಷವನ್ನು ವಿಸರ್ಜನೆ ಮಾಡಲು ಹೇಳಿದ್ದರು. ಪೂಜ್ಯ ಗಾಂಧೀ ಅವರ ಕನಸು ನನಸು ಮಾಡುವ ಕಾಲ ಈಗ ಬಂದಿದೆ. ಕರ್ನಾಟಕದಲ್ಲಿ ಈ ಬಾರಿ ಕಾಂಗ್ರೆಸ್ ಸೋಲಿಸಿ ಬೇರು ಸಮೇತ ಕಿತ್ತು ಹಾಕಿ ಕರ್ನಾಟಕವನ್ನು ಕಾಂಗ್ರೆಸ್ ಮುಕ್ತ ಮಾಡುವ ಕಾಲ ಬಂದಿದೆ. ಇದು ಚುನಾವಣೆ ಅಲ್ಲ. ಮಣಿಕಂಠನ ಜಾತ್ರೆ. ಹುರುಪು ಹುಮ್ಮಸ್ಸಿನಿಂದ ಪ್ರಚಾರ ಮಾಡಿ ಮಣಿಕಂಠರನ್ನು ಗೆಲ್ಲಿಸಿ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಎಲ್ಲಿತ್ತು ಕಾಂಗ್ರೆಸ್ ನ ಸಾಮಾಜಿಕ ನ್ಯಾಯ
ಕಾಂಗ್ರೆಸ್ ನವರು ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುತ್ತಾರೆ. ದೀನ ದಲಿತರ ರಕ್ಷಣೆ ಮಾಡ್ತೀವಿ ಎಂದು 30 ವರ್ಷದಿಂದ ಹೇಳಿಕೊಂಡು ಬಂದ್ರಿ. ಮೀಸಲಾತಿ ಹೆಚ್ಚಳಕ್ಕೆ ಮೂವತ್ತು ವರ್ಷದಿಂದ ಬೇಡಿಕೆ ಇದ್ದರೂ ಕಾಂಗ್ರೆಸ್ ನವರು ಸಮುದಾಯಗಳಿಗೆ ಅನ್ಯಾಯ ಮಾಡುತ್ತ ಬಂದರು. ನಾನು ಮೀಸಲಾತಿ ಹೆಚ್ಚಳ ಮಾಡಿದ್ದನ್ನು ಕಾಂಗ್ರೆಸ್ ಅವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಕಲ್ಯಾಣ ಕರ್ನಾಟಕಕ್ಕೆ 5 ಸಾವಿರ ಕೋಟಿ ಕೊಟ್ಟಿದ್ದೀನಿ. ಅದೇ ವರ್ಷ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಮಾಡುವ ಕಾರ್ಯ ಮಾಡುತ್ತೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಕಾಂಗ್ರೆಸ್ ಗ್ಯಾರಂಟಿ ಚುನಾವಣೆವರೆಗೂ ಮಾತ್ರ
ಕಾಂಗ್ರೆಸ್ ಗ್ಯಾರೆಂಟಿ ಸ್ಕೀಮ್ ಗಳು ಮೇ 10 ರ ವರೆಗೆ ಮಾತ್ರ. ಚುನಾವಣೆ ಆದ ಮೇಲೆ ಗಳಗಂಟಿ ಮಾತ್ರ. ಪ್ರಧಾನಿ ಮೋದಿಯವರು ಕಾಂಗ್ರೆಸ್ ನ ಭ್ರಷ್ಟಾಚಾರವೇ ಅವರ ಗ್ಯಾರಂಟಿ ಎಂದು ಹೇಳಿದ್ದಾರೆ. ಮೇ 13 ರಂದು ಚಿತ್ತಾಪುರದಲ್ಲಿ ಗ್ಯಾರಂಟಿ ಇರೋದು ಮಣಿಕಂಠ ಒಬ್ಬನೇ. ಕರ್ನಾಟಕಲ್ಲಿ ಬದಲಾವಣೆ ಗಾಳಿ ಬೀಸುತ್ತಿದ್ದೆ. ಮೋದಿ ಸರ್ಕಾರ ಜನರಿಗೆ ಹಲವಾರು ಯೋಜನೆಗಳನ್ನು ತಂದಿದೆ. ಅದೇ ರೀತಿ ಬಡ ಜನರಿಗೆ ಉಪಯೋಗವಾಗಲು ರಾಜ್ಯ ಸರ್ಕಾರದಿಂದಲೂ ಹಲವು ಜನಪರ ಯೋಜನೆಗಳನ್ನು ಜಾರಿ ಮಾಡಿದ್ದೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಹಿಂದುಳಿದ ಜನ ಭಿಕ್ಷುಕರಾ?
ಬಸವಣ್ಣನ ಪಥದಲ್ಲಿ ನಮ್ಮ ಸರ್ಕಾರ ನಡೆಯುತ್ತಿದೆ. ಆದರೆ ಕಾಂಗ್ರೆಸ್ ನಾಯಕ ಸುರ್ಜೆವಾಲಾ ಅವರು ಲಿಂಗಾಯತರು, ಒಕ್ಕಲಿಗರು ಭಿಕ್ಷುಕರಲ್ಲ ಅಂತ ಹೇಳಿದ್ದಾರೆ. ಹಾಗಾದ್ರೆ ಮೀಸಲಾತಿ ಪಡೆದ ಎಸ್ಸಿ ಎಸ್ಟಿ ಹಿಂದುಳಿದ ಜನರು ಭಿಕ್ಷುಕರಾ ಅಂತ ಕೇಳುತ್ತೇನೆ? ಅಂಬೇಡ್ಕರ್ ಕೊಟ್ಟಿರುವ ಸಂವಿಧಾನ ಅಡಿಯಲ್ಲಿ ಮೀಸಲಾತಿಯನ್ನು ಕೇಳಿದರೆ ಅವರನ್ನು ಭಿಕ್ಷುಕರನ್ನಾಗಿ ನೋಡ್ತೀರಾ? ಈ ರೀತಿ ಒಡೆದು ಆಳುವ ನೀತಿ ಬಂದ್ ಆಗಬೇಕು ಅಂದರೆ ಚಿತ್ತಾಪುರದಲ್ಲಿ ಕಮಲ ಅರಳಬೇಕು. ಇಲ್ಲಿ ಕಮಲ ಅರಳಿಸಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ನಿಮ್ಮ ಜೊತೆಗೆ ನಾವಿರುತ್ತೇವೆ
ಚಿತ್ತಾಪುರ ಕ್ಷೇತ್ರವನ್ನು ಸಂಪೂರ್ಣ ಅಭಿವೃದ್ಧಿ ಮಾಡಿ, ಇಲ್ಲಿ ಎಲ್ಲರಿಗು ಸೂರು, ನೀರಾವರಿ, ಕೈಗೆ ಕೆಲಸ ಕೊಡುತ್ತೀವಿ. ಮಣಿಕಂಠನನ್ನು ಶಾಸಕರಾಗಿ ಆಯ್ಕೆ ಮಾಡಿದರೆ, ಈಗಿನ ಶಾಸಕರು 20 ವರ್ಷದಲ್ಲಿ ಮಾಡದ ಅಭಿವೃದ್ಧಿಯನ್ನು ಮಣಿಕಂಠ ಮಾಡುತ್ತಾನೆ. ಈ ತಾಲ್ಲೂಕಿನ ಸಮಗ್ರ ಅಭಿವೃದ್ಧಿ ಮಾಡಬೇಕು. ನಿಮ್ಮ ಜೊತೆಗೆ ನಾವಿರುತ್ತೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದರು