ರಾಜ್ಯ ರಾಜಕಾರಣದಲ್ಲಿ ಪ್ರಜಾಪ್ರಭುತ್ವದ ಹಬ್ಬ ಎಂದೇ ಕರೆಯಲಾಗುವ ಚುನಾವಣೆ ಪ್ರಕ್ರಿಯೆ ಮುಕ್ತಾಯ ಆಗಿದೆ. ಮತದಾನದ ಬಳಿಕ ಚುನವಣೋತ್ತರ ಸಮೀಕ್ಷೆಗಳಲ್ಲಿ ಕಾಂಗ್ರೆಸ್ಗೆ ಬಹುಮತ ಸಿಗುವ ವಿಶ್ವಾಸವಿದೆ. ಕಾಂಗ್ರೆಸ್ ಸರಳ ಬಹುಮತ ಗಳಿಸಿ ಅಧಿಕಾರ ಹಿಡಿಯುವ ಮಾತುಗಳು ಕೇಳಿ ಬರುತ್ತಿರುವ ಈ ಸಮಯದಲ್ಲಿ ಕಾಂಗ್ರೆಸ್ ಹಾಗು ಜೆಡಿಎಸ್ ನಡುವೆ ಮಾತಿನ ಸಮರ ಸೃಷ್ಟಿಯಾಗಿದೆ. ಈ ಹಿಂದೆ ಚುನಾವಣೆಯಲ್ಲಿ ಸೋಲುಂಡಿದ್ದ ಚಾಮುಂಡೇಶ್ವರಿ ಕ್ಷೇತ್ರದ ಬಗ್ಗೆ ಸಿದ್ದರಾಮಯ್ಯ ನೀಡಿದ್ದ ಹೇಳಿಕೆ ಜೆಡಿಎಸ್ ಅಭ್ಯರ್ಥಿ ಜಿ.ಟಿ ದೇವೇಗೌಡರ ಕಣ್ಣು ಕೆಂಪಾಗುವಂತೆ ಮಾಡಿದೆ. ಸಿದ್ದರಾಮಯ್ಯ ಮಾತಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ ಜಿ.ಟಿ ದೇವೇಗೌಡ, ಸಿದ್ದರಾಮಯ್ಯ, ಈ ಹಿಂದೆ ನನಗೆ ಮೋಸ ಮಾಡಿದ್ದರು, ಈಗ ಅವರಿಗೆ ಮೋಸ ಆಗಿದೆ. ಮೋಸ ಮಾಡಿದವರಿಗೆ ಮೋಸ ಆಗುವುದು ಖಚಿತ ಎಂದಿದ್ದಾರೆ.

ಚಾಮುಂಡೇಶ್ವರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ‘ಪತ್ರವಳ್ಳಿ’
ಮೈಸೂರಿನಲ್ಲಿ ನಿನ್ನೆ ರಾತ್ರಿ ಮಾತನಾಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ, ಮಾವಿನಹಳ್ಳಿ ಸಿದ್ದೇಗೌಡ ಮೋಸಗಾರ, ಇಂತಹವನು ಅಂತ ಗೊತ್ತಿದ್ದರೆ ನಮ್ಮ ಹುಡುಗನನ್ನೇ ನಿಲ್ಲಿಸ್ತಿದ್ದೆ ಎಂದು ಚಾಮುಂಡೇಶ್ವರಿ ಕಾಂಗ್ರೆಸ್ ಅಭ್ಯರ್ಥಿ ಮಾವಿನಹಳ್ಳಿ ಸಿದ್ದೇಗೌಡ ವಿರುದ್ಧ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ರು. ಚಾಮುಂಡೇಶ್ವರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಿದ್ದೇಗೌಡ ವಿರುದ್ಧ ಸಿದ್ದರಾಮಯ್ಯಗೆ ಕಾಂಗ್ರೆಸ್ ಕಾರ್ಯಕರ್ತರು ದೂರು ನೀಡಿದ್ದರು. ಮಾವಿನಹಳ್ಳಿ ಸಿದ್ದೇಗೌಡ ಒಬ್ಬ ಪತ್ರವಳ್ಳಿ ಸ್ವಾಮಿ ಎಂದು ಕಾರ್ಯಕರ್ತರು ಹೇಳಿದ ಬಳಿಕ ಕಿಡಿಕಾರಿದ ಸಿದ್ದರಾಮಯ್ಯ, ಆಕ್ರೋಶ ಹೊರ ಹಾಕಿದ್ರು. ಅವನೊಬ್ಬ ಮೋಸಗಾರ ಎಂದು ವಾಗ್ದಾಳಿ ಮಾಡಿದ್ದರು. ಸಿದ್ದರಾಮಯ್ಯ ಮಾತಿಗೆ ತಿರುಗೇಟು ನೀಡಿರುವ ಜಿ.ಟಿ ದೇವೇಗೌಡ, ನನಗೆ ಯಾರೊಂದಿಗೂ ಹೊಂದಾಣಿಕೆ ಮಾಡಿಕೊಳ್ಳುವ ಪ್ರಮೇಯ ಇಲ್ಲ ಎಂದು ತಿರುಗೇಟು ನೀಡಿದ್ದಾರೆ.
ಚಾಮುಂಡೇಶ್ವರಿಯಲ್ಲಿ ನಾನು ಗೆದ್ದೇ ಗೆಲ್ತೇನೆ – ಜಿ.ಟಿ ದೇವೇಗೌಡ
ಮೈಸೂರಲ್ಲಿ ಮಾತನಾಡಿರುವ ಜಿ.ಟಿ ದೇವೇಗೌಡ, ಈ ಬಾರಿಯ ಚುನಾವಣೆ ಚಾಮುಂಡೇಶ್ವರಿ ಆಶೀರ್ವಾದಿಂದ ಗೆಲ್ಲುತ್ತೇನೆ. ಪ್ರಚಾರದ ವೇಳೆ ಎಲ್ಲಾ ಕಾರ್ಯಕರ್ತರು ನನಗೆ ಅದ್ದೂರಿ ಸ್ವಾಗತ ಕೊಟ್ಟಿದ್ರು. ಜನರು ಭಾರೀ ಉತ್ಸಾಹದಿಂದ ಪ್ರೀತಿಯಿಂದ ಜಿಟಿ ದೇವೇಗೌಡರನ್ನು ಗೆಲ್ಲಿಸುವ ಮನಸ್ಸು ಮಾಡಿದ್ದಾರೆ. ಸಿದ್ದೇಗೌಡ ಜಿಟಿಡಿ ಜೊತೆ ಹೊಂದಾಣಿಕೆ ಮಾಡಿದ್ದಾರೆಂಬ ಕಾಂಗ್ರೆಸ್ ಕಾರ್ಯಕರ್ತರ ಆರೋಪಕ್ಕೆ ತಿರುಗೇಟು ಕೊಟ್ಟಿದ್ದಾರೆ. ಮಾಧ್ಯಮದ ಪ್ರಶ್ನೆಗೆ ಸಿಡಿಮಿಡಿಗೊಂಡ ಜಿ.ಟಿ ದೇವೇಗೌಡ, ಸಿದ್ದರಾಮಯ್ಯನವರಿಗೆ ಇಷ್ಟು ವರ್ಷ ಇಲ್ಲಿ ರಾಜಕೀಯ ಮಾಡಿದ್ದಾರೆ. ಆದರೆ ನನ್ನ ವಿರುದ್ಧ ಯಾರನ್ನು ಕಣಕ್ಕಿಳಿಸಬೇಕು ಅನ್ನೋದು ಅವರಿಗೆ ಗೊತ್ತಿಲ್ಲ, ತಾಲೂಕು ಪಂಚಾಯ್ತಿಯಲ್ಲಿ ಸೋತವನನ್ನು ಕರ್ಕೊಂಡು ಬಂದು ನನ್ನ ವಿರುದ್ಧ ನಿಲ್ಲಿಸಿದ್ದಾರೆ. ಈ ಸಿದ್ದೇಗೌಡನನ್ನು ನಾನು ಯಾಕೆ ಬುಕ್ ಮಾಡಲಿ..? ಹೋಟೆಲ್ ಬುಕ್ ಮಾಡಬೇಕಷ್ಟೇ..! ನಾನು ಸಿದ್ದೇಗೌಡನ ಜೊತೆ ಸೇರೋದು ಬಿಡಿ, ಅವನನ್ನು ನನ್ನ ಮನೆ ಬಾಗಿಲಿಗೂ ಸೇರಿಸಲ್ಲ. ನಾನು ಗೆಲ್ಲಲಿ ಸೋಲಲಿ ನನ್ನ ಜಾಯಮಾನದಲ್ಲಿ ಯಾರ ಜೊತೆಗೂ ಹೊಂದಾಣಿಕೆ ಮಾಡಿಕೊಳ್ಳಲ್ಲ ಎಂದಿದ್ದಾರೆ.
‘ಒಮ್ಮೆ ಬಿಟ್ಟು ಹೋದ ಐವರನ್ನು ಹತ್ತಿರ ಸೇರಿಸಲ್ಲ ನಾನು’
ನನಗೆಈ ಹಿಂದೆ ಸಿದ್ದರಾಮಯ್ಯ ಮೋಸ ಮಾಡಿದ್ದರು. ಈಗ ಸಿದ್ದರಾಮಯ್ಯನಿಗೆ ಸಿದ್ದೇಗೌಡ ಮೋಸ ಮಾಡಿದ್ದಾರೆ. ಯಾರು ಮೋಸ ಮಾಡ್ತಾರೋ ಅವರಿಗೆ ಮೋಸ ಆಗುತ್ತೆ ಎಂದಿರುವ ಜಿ.ಟಿ ದೇವೇಗೌಡ, ಚುನಾವಣೆಯ ಅಧಿಕೃತ ಫಲಿತಾಂಶ ಬರಲಿ, ಎಲ್ಲಾ ತಿಳಿಯುತ್ತೆ ಎಂದಿದ್ದಾರೆ. ಸಿದ್ದರಾಮಯ್ಯಗೆ ಚಾಮುಂಡೇಶ್ವರಿ ರಾಜಕಾರಣವೇ ಗೊತ್ತಿಲ್ಲ. ನನ್ನಷ್ಟು ಗಟ್ಟಿ ಸಿದ್ದರಾಮಯ್ಯ ಅಲ್ಲವೇ ಅಲ್ಲ. ಸಿದ್ದರಾಮಯ್ಯ ರೀತಿ ಅಧಿಕಾಕ್ಕಾಗಿ ಯಾರ ಮನೆ ಬಾಗಿಲಿಗೂ ನಾನು ಹೋದವನಲ್ಲ. ತಾಲೂಕು ಬೋರ್ಡ್, ಎಪಿಎಂಸಿ, ಡೈರಿಯಲ್ಲಿ ಅಪ್ಪ ಮಕ್ಕಳು ಸೋತಿದ್ದರು. ಅಂತಹವರನ್ನು ಕರ್ಕೊಂಡು ಬಂದು ನನ್ನ ವಿರುದ್ಧ ನಿಲ್ಲಿಸಿದ್ರು. ಸಿದ್ದರಾಮಯ್ಯ ಬರೀ ದ್ವೇಷಕ್ಕೆ ರಾಜಕಾರಣ ಮಾಡಿದ್ರು. ಒಕ್ಕಲಿಗರಲ್ಲೇ ಟಿಕೆಟ್ ಕೊಡುವುದಿದ್ದರೆ ಸತ್ಯಪ್ಪನ ಮಗ ಅರುಣ್, ನರಸೇಗೌಡ, ಕೃಷ್ಣಸಾಗರ್ ಇದ್ರು. ಅಷ್ಟೂ ಒಳ್ಳೇತನ ಇದ್ರೆ ಅವರಿಗಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ಮರಿಗೌಡನಿಗೆ ಕೊಡಬೇಕಿತ್ತು. ಇವರಿಗೆ ಕೊಟ್ಟಿದ್ರೆ ಗೌರವಯುತವಾಗಿ ಆದರೂ ಸೋಲುತ್ತಿದ್ರು. ಮಾವಿನಹಳ್ಳಿ ಸಿದ್ದೇಗೌಡ ಅವರ ಊರಲ್ಲೇ ಎಷ್ಟು ವೋಟ್ ತಗೋತಾನೆ ನೋಡೊಣ ಎಂದು ಸವಾಲು ಹಾಕಿದ್ದಾರೆ. ಇನ್ನು ಸಿದ್ದೇಗೌಡನನ್ನು ನಾನು ಯಾಕೆ ಬುಕ್ ಮಾಡಲಿ, ನಾನು ಸಿದ್ದೇಗೌಡನ ಜೊತೆ ಸೇರೋದು ಬಿಡಿ, ಅವನನ್ನು ನನ್ನ ಮನೆ ಬಾಗಿಲಿಗೆ ಸೇರ್ಸಲ್ಲ. ನನ್ನ ಬಿಟ್ಟು ಹೋದ ಐದು ಜನರನ್ನೂ ನಾನು ಹತ್ತಿರ ಸೇರಿಸಲ್ಲ ಎಂದು ಕಡ್ಡಿ ಮುರಿದಂತೆ ಮಾತನಾಡಿದ್ದಾರೆ.
ಜೆಡಿಎಸ್ ಹೊಂದಾಣಿಕೆ ರಾಜಕೀಯ ಮಾಡಿಲ್ಲ ಎಂದು ಕಡಾ ಖಂಡಿತವಾಗಿ ಹೇಳಿದ್ರೆ, ಸಾಮಾಜಿಕ ಜಾಲತಾಣದಲ್ಲೂ ಕಾಂಗ್ರೆಸ್ ಅಭ್ಯರ್ಥಿ ಸಿದ್ದೇಗೌಡ ಕಾಂಗ್ರೆಸ್ಗೆ ಮೋಸ ಮಾಡಿದ್ರು ಅನ್ನೋ ಸುದ್ದಿ ವ್ಯಾಪಕವಾಗಿ ಚರ್ಚೆ ಆಗ್ತಿದೆ. ಕಾರ್ಯಕರ್ತರ ಮಾತನ್ನು ಸಿದ್ದರಾಮಯ್ಯ ಕೂಡ ಒಪ್ಪಿಕೊಂಡಿದ್ದಾರೆ. ಅಂದರೆ ಚಾಮುಂಡೇಶ್ವರಿಯಲ್ಲಿ ಕಾಂಗ್ರೆಸ್ ಸೋಲು ಒಪ್ಪಿಕೊಂಡಂತೆ ಆಗಿದೆ.
ಕೃಷ್ಣಮಣಿ