ರಾಜ್ಯ ಚುನಾವಣೆ ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. ಮತದಾನಕ್ಕೆ ಇನ್ನು ಕೇವಲ ಕೆಲವೇ ಗಂಟೆಗಳು ಮಾತ್ರ ಉಳಿದುಕೊಂಡಿವೆ. ಈ ಸಮಯದಲ್ಲಿದ್ದ ಕಾಂಗ್ರಸ್ನಲ್ಲಿ ಅಸಮಾಧಾನ ಸ್ಫೋಟಗೊಂಡಿದೆ ಎನ್ನುವ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಪತ್ರದಲ್ಲಿ ಮಲ್ಲಿಕಾರ್ಜುನ ಖರ್ಗೆಗೆ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ ಎನ್ನಲಾಗಿದ್ದು, ನಾನು ಕಳೆದ ಮೂರೂವರೆ ವರ್ಷಗಳಿಂದ ಬಿಜೆಪಿ ಪಕ್ಷದ ವಿರುದ್ಧ ಸಮರ್ಥವಾಗಿ ಕೆಲಸ ಮಾಡಿದ್ದೇನೆ. ಚುನಾವಣಾ ವರ್ಷದಲ್ಲಿ ಬಿಜೆಪಿ ವಿರುದ್ಧ ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡಿದ್ದೇನೆ. ಆದರೆ ವಯಸ್ಸಿನಲ್ಲಿ ನನಗಿಂತಲೂ ಕಿರಿಯ ಹಾಗು ಪಕ್ಷದ ಅಧ್ಯಕ್ಷ ಡಿ.ಕೆ ಶಿವಕುಮಾರ್ , ತೆಗೆದುಕೊಳ್ಳುತ್ತಿರುವ ನಿರ್ಧಾರ, ನಡೆದುಕೊಳ್ಳುತ್ತಿರುವ ವರ್ತನೆ ಬಗ್ಗೆ ತೀವ್ರ ಅಸಮಾಧಾನ ಎಂದು ಪತ್ರದಲ್ಲಿದೆ. ಇನ್ನು ಏಕಮುಕ ನಿರ್ಧಾರ ತೆಗೆದುಕೊಳ್ತಾರೆ ಎಂದು ಪತ್ರದಲ್ಲಿ ಉಲ್ಲೇಖ ಆಗಿದೆ.
ಡಿ.ಕೆ ಶಿವಕುಮಾರ್ ವಿರುದ್ಧ ಅಸಮಾಧಾನ ಯಾಕೆ..?
ಕಾಂಗ್ರೆಸ್ ಟಿಕೆಟ್ ಹಂಚಿಕೆ ವೇಳೆ ಇಬ್ಬರು ನಾಯಕರು ತಮ್ಮ ತಮ್ಮ ಬೆಂಬಲಿಗರಿಗೆ ಟಿಕೆಟ್ ಕೊಡಿಸುವ ಉದ್ದೇಶದಿಂದ ಭಾರೀ ಪೈಪೋಟಿ ನಡೆಸಿದ್ದು, ಎಲ್ಲರಿಗೂ ಗೊತ್ತಿರುವ ವಿಚಾರವೇ ಸರಿ. ಇದೀಗ ಸಿದ್ದರಾಮಯ್ಯ ಬೆಂಬಲಿಗರಿಗೆ ಟಿಕೆಟ್ ಕೊಡದಂತೆ ಡಿ.ಕೆ ಶಿವಕುಮಾರ್ ಮಾಡಿದ್ರು ಎಂದು ಪ್ರದಲ್ಲಿ ದೂರಲಾಗಿದೆ. ಚಿತ್ರದುರ್ಗದಲ್ಲಿ ನನ್ನ ಬೆಂಬಲಿಗ ಎನ್ನುವ ಕಾರಣಕ್ಕೆ ರಘು ಆಚಾರ್ಗೆ ಟಿಕೆಟ್ ತಪ್ಪಿಸಲಾಯ್ತು, ತರೀಕೆರೆಯಲ್ಲಿ ಗೋಪಿಕೃಷ್ಣಗೂ ಟಿಕೆಟ್ ತಪ್ಪಿಸಿದ್ರು. ಚಾಮರಾಜಪೇಟೆಯಲ್ಲೂ ಪುಟ್ಟರಂಗಶೆಟ್ಟಿಗೆ ಟಿಕೆಟ್ ತಪ್ಪಿಸಲು ಯತ್ನಿಸಿದ್ರು. ಆದರೆ ನನ್ನ ಕಾರಣದಿಂದ ಟಿಕೆಟ್ ಸಿಕ್ಕಿತು. ವರುಣಾದಲ್ಲಿ ಸೋಮಣ್ಣಗೆ ಕೋಟಿ ಕೋಟಿ ರೂಪಾಯಿ ಹಣ ಸಹಾಯ ಮಾಡಿದ್ದಾರೆ. ಶಿವಕುಮಾರ್ ವರುಣಾದಲ್ಲಿ ಯಾರ ಮನೆಯಲ್ಲಿ ಎಷ್ಟು ಕೋಟಿ ಇಟ್ಟಿದ್ದಾರೆ ಅನ್ನೋ ಮಾಹಿತಿ ನನ್ನ ಬಳಿ ಇದೆ. ಈ ಮೂಲಕ ನಾನು ವರುಣಾದಿಂದ ಹೊರಗೆ ಹೆಚ್ಚು ಪ್ರಚಾರ ಮಾಡದಂತೆ ತಡೆದಿದ್ದಾರೆ ಎಂದು ಪತ್ರದಲ್ಲಿ ಬರೆಯಲಾಗಿದೆ.
ಅಸಮಾಧಾನ ಅನ್ನೋದು ಸುಳ್ಳು, ನಕಲಿ ಎಂದ ಸಿದ್ದರಾಮಯ್ಯ..!
ಡಿ.ಕೆ ಶಿವಕುಮಾರ್ ವಿರುದ್ಧ ಅಸಮಧಾನಗೊಂಡು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಮಾಜಿ ಸಿಎಂ ಸಿದ್ದರಾಮಯ್ಯ ದೂರು ಕೊಟ್ಟಿದ್ದಾರೆ ಎನ್ನುವ ಪತ್ರದ ಬಗ್ಗೆ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಸೋಲಿನ ಭೀತಿಯಿಂದ ಹತಾಶೆಗೊಂಡು ಬಿಜೆಪಿ ಈ ರೀತಿ ಮಾಡುತ್ತಿದೆ. ನನ್ನ ಹೆಸರಿನ ನಕಲಿ ಪತ್ರವನ್ನು ರಚಿಸಿ ಅಪಪ್ರಚಾರ ಮಾಡುತ್ತಿದೆ. ಇಂತಹ ಯಾವ ಪತ್ರವನ್ನು ನಾನು ಬರೆದಿಲ್ಲ. ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳು ಈ ಸುಳ್ಳು ಪ್ರಚಾರಕ್ಕೆ ಬಲಿಯಾಗಬಾರದು ಎಂದಿದ್ದಾರೆ. ಇನ್ನು ನನ್ನ ಮತ್ತು ಡಿ.ಕೆ ಶಿವಕುಮಾರ್ ಸಂಬಂದ ಸೌಹಾರ್ಧಯುತವಾಗಿದೆ. ನಮ್ಮ ಸಂಬಂಧಕ್ಕೆ ಹುಳಿ ಹಿಂಡುವ ಪ್ರಯತ್ನ ಯಶಸ್ಸು ಕಾಣುವುದಿಲ್ಲ. ಶೀಘ್ರದಲ್ಲಿಯೇ ಪೊಲೀಸರಿಗೆ ದೂರು ನೀಡುತ್ತೇನೆ. ಈ ಕಿಡಿಗೇಡಿತನದ ಪತ್ರ ಸೃಷ್ಟಿಸಿ ಹಂಚುತ್ತಿರುವವರ ವಿರುದ್ಧ ಕ್ರಮಕೈಗೊಳ್ಳಲು ಒತ್ತಾಯಿಸುತ್ತೇನೆ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಬಿಜೆಪಿ ವಿರುದ್ಧ ಗುಟುರು.. ಮಾಹಿತಿ ಮಾತ್ರ ಅಸಲಿ..!
ರಾಜ್ಯದಲ್ಲಿ ಜೆಡಿಎಸ್ ಜೊತೆಗೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಲು ಡಿ ಕೆ ಶಿವಕುಮಾರ್ ಯೋಜನೆ ರೂಪಿಸಿದ್ದಾರೆ ಅನ್ನೋ ವಿಚಾರವೂ ಸಿದ್ದರಾಮಯ್ಯ ಬರೆದಿದ್ದಾರೆ ಎನ್ನಲಾದ ಪತ್ರದಲ್ಲಿದೆ. ಪತ್ರದಲ್ಲಿ ಕಾಂಗ್ರೆಸ್ನಲ್ಲಿ ನಡೆದಿರುವ ಬೆಳವಣಿಗೆಗಳ ಬಗ್ಗೆಯೇ ಉಲ್ಲೇಖ ಮಾಡಲಾಗಿದೆ. ಈ ಮಾಹಿತಿ ಸುಳ್ಳು ಎನ್ನುವುದಕ್ಕೆ ಸಾಧ್ಯವಿಲ್ಲ. ಆದರೆ ಕಾಂಗ್ರೆಸ್ ಸೋಲುವ ಭೀತಿಯಲ್ಲಿ ಮೊದಲೇ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಬರೆದಿದ್ದಾರಾ..? ಅಥವಾ ಸಿದ್ದರಾಮಯ್ಯ ಸ್ಪಷ್ಟನೆ ಕೊಟ್ಟಿರುವ ಹಾಗೆ ಸಿದ್ದರಾಮಯ್ಯ ಹಾಗು ಡಿ.ಕೆ ಶಿವಕುಮಾರ್ ನಡುವೆ ಹಗ್ಗಾಜಗ್ಗಾಟ ನಡೆದಿದೆ. ಇಬ್ಬರ ನಡುವಿನ ಸಂಬಂಧ ಸರಿಯಿಲ್ಲ ಎನ್ನುವುದನ್ನು ಬಹಿರಂಗ ಮಾಡಿ ಬಿಜೆಪಿ ಲಾಭ ಮಾಡಿಕೊಳ್ಳುವ ಪ್ರಯತ್ನ ಮಾಡಿದ್ಯಾ..? ಅನ್ನೋದು ಸ್ಪಷ್ಟವಾಗಿಲ್ಲ. ಆದರೆ ಸಿದ್ದರಾಮಯ್ಯ ಇಲ್ಲೀವರೆಗೂ ಯಾವುದೇ ದೂರು ದೂರು ನೀಡಿಲ್ಲ. ದೂರು ನೀಡದಿದ್ದರೆ ಕಾಂಗ್ರೆಸ್ ಮೇಲೆಯೇ ಅನುಮಾನ ಬರುವುದು ಸಹಜ.
ಕೃಷ್ಣಮಣಿ