ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ ಬರುವ ಮುನ್ನವೇ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಯಾವುದೇ ರಾಜ್ಯಕ್ಕೆ ಪ್ರಧಾನಿ ಭೇಟಿ ಕೊಟ್ಟಾಗ, ಸಹಜವಾಗಿ ರಾಜ್ಯದ ಪರವಾಗಿ ಸಿಎಂ, ಡಿಸಿಎಂ, ರಾಜ್ಯಪಾಲರು ಸ್ವಾಗತ ಮಾಡುವುದು ಪ್ರೋಟೋಕಾಲ್. ಆದರೆ ಪ್ರಧಾನಿ ನರೇಂದ್ರ ಮೋದಿ ಶನಿವಾರದ ಭೇಟಿಯಲ್ಲಿ ಪ್ರೋಟೋಕಾಲ್ ನಿಯಮ ಮೀರಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಬೆಳಗ್ಗೆ 5 ಗಂಟೆ 55 ನಿಮಿಷಕ್ಕೆ ಬಂದು ಇಳಿಯುತ್ತಿದ್ದು, ಸ್ವಾಗತಕ್ಕೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಸಿ.ಕೆ ಶಿವಕುಮಾರ್ಗೆ ಅವಕಾಶ ಕೊಡದಂತೆ ಸೂಚನೆ ನೀಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಪ್ರಧಾನಿ ಮೋದಿ ಅವರ ಈ ನಿರ್ಧಾರ ಕಾಂಗ್ರೆಸ್ ನಾಯಕರ ಕಣ್ಣು ಕೆಂಪಾಗುವಂತೆ ಮಾಡಿದೆ

ಪ್ರಧಾನಿ ಮೋದಿ ನಿರ್ಧಾರ ಟೀಕಿಸಿದ ಜೈರಾಮ್ ರಮೇಶ್
ಪ್ರಧಾನಿ ನರೇಂದ್ರ ಮೋದಿ ನಾಳಿನ ಕರ್ನಾಟಕ ಭೇಟಿ ರಾಜಕೀಯದಿಂದ ಕೂಡಿದೆ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಕಟುವಾಗಿ ಟೀಕಿಸಿದ್ದಾರೆ. ಚಂದ್ರಯಾನ 3 ಯಶಸ್ಸು ಸಾಧಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ, ಬೆಂಗಳೂರಿನ ಇಸ್ರೋ ಕೇಂದ್ರಕ್ಕೆ ಭೇಟಿ ನೀಡಿ, ಅಭಿನಂದನೆ ಸಲ್ಲಿಸಲು ಆಗಮಿಸುತ್ತಿದ್ದಾರೆ. ಇಸ್ರೋ ಮುಂದಿನ ಯೋಜನೆಗಳ ಬಗ್ಗೆ ವಿಜ್ಞಾನಿಗಳ ಜೊತೆಗೆ ಸಮಾಲೋಚನೆ ನಡೆಸಲಿದ್ದಾರೆ ಎನ್ನಲಾಗಿದೆ. ಹೆಚ್‌ಎಎಲ್ ಏರ್‌ಪೋರ್ಟ್‌ನಲ್ಲಿ ಸುಮಾರು 5 ಸಾವಿರ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಭಾಷಣ ಮಾಡಲಿರುವ ಪ್ರಧಾನಿ ನರೇಂದ್ರ ಮೋದಿ, ಸಿಎಂ ಸಿದ್ದರಾಮಯ್ಯ ಹಾಗು ಡಿಸಿಎಂ ಡಿ.ಕೆ ಶಿವಕುಮಾರ್ ಆಹ್ವಾನಕ್ಕೆ ತಡೆ ನೀಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಮೋದಿ ನಿರ್ಬಂಧ ವಿಧಿಸಿದ್ದಕ್ಕೆ ಕಾರಣ ಏನಂತೆ ಗೊತ್ತಾ..?
ಇಸ್ರೋ ಕಚೇರಿಯಲ್ಲಿ ಚಂದ್ರಯಾನ 3 ಸಕ್ಸಸ್ ಆಗ್ತಿದ್ದ ಹಾಗೆ ಪ್ರಧಾನಿ ನರೇಂದ್ರ ಮೋದಿ ನೇರಪ್ರಸಾರದಲ್ಲಿಯೇ ಬಂದು ಮಾರುದ್ದ ಭಾಷಣ ಮಾಡಿದ್ದರು. ವಿಜ್ಞಾನಿಗಳು ಮಾತನಾಡಲು ಬಿಡದೆ ತಾನೇ ಮಾತನಾಡಿದ್ದರು. ಚಂದ್ರಯಾನ ಯಶಸ್ಸಿನ ಬೆನ್ನಲ್ಲೇ ಡಿಸಿಎಂ ಡಿ.ಕೆ ಶಿವಕುಮಾರ್, ಇಸ್ರೋ ಕೇಂದ್ರಕ್ಕೆ ಭೇಟಿ ನೀಡಿ ವಿಜ್ಞಾನಿಗಳನ್ನು ಅಭಿನಂದಿಸಿದ್ದರು. ಆ ಬಳಿಕ ಮರುದಿನ ಸಿಎಂ ಸಿದ್ದರಾಮಯ್ಯ ಕೂಡ ಇಸ್ರೋ ವಿಜ್ಞಾನಿಗಳನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಿದ್ದರು. ಸೆಪ್ಟೆಂಬರ್ 2 ರಂದು ಎಲ್ಲಾ ವಿಜ್ಞಾನಿಗಳನ್ನು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಸನ್ಮಾನ ಮಾಡುವುದಾಗಿಯೂ ತಿಳಿಸಿದ್ದರು. ನನಗಿಂತಲೂ ಮೊದಲೇ ಇಸ್ರೋಗೆ ಹೋಗಿದ್ದಕ್ಕೆ ಮೋದಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್‌ನ ಜೈರಾಮ್ ರಮೇಶ್ ಟೀಕಿಸಿದ್ದಾರೆ
ಪ್ರೋಟೋಕಾಲ್ ನಿಯಮ ಉಲ್ಲಂಘನೆ ಮಾಡಿದ್ರಾ ಮೋದಿ..?
ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಲು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಬರುತ್ತಿರುವುದು ಸರಿ. ಆದರೆ ಪ್ರಧಾನಿ ನರೇಂದ್ರ ಮೋದಿ ಸ್ವಾಗತಕ್ಕೆ ರಾಜ್ಯಪಾಲರು ಹಾಗೂ ಸಿಎಂ ಸಿದ್ದರಾಮಯ್ಯಗೆ ಆಹ್ವಾನ ನೀಡಿಲ್ಲದೆ ಇರುವುದರಿಂದ ಕಾಂಗ್ರೆಸ್ ಸಿಡಿದೆದ್ದಿದೆ. ಪ್ರಧಾನಿ ಕಾರ್ಯಾಲಯದ ನಿರ್ಧಾರಕ್ಕೆ ಸಿಎಂ ಕಾರ್ಯಾಲಯ ಆಕ್ಷೇಪ ವ್ಯಕ್ತಪಡಿಸಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿ, ಡಿಜಿಪಿ, ನಗರ ಪೊಲೀಸ್ ಆಯುಕ್ತರಿಗೆ ಮಾತ್ರ ಅವಕಾಶ ಕೊಡಲಾಗಿದೆ. ಪ್ರಧಾನಿ ಕಾರ್ಯಾಲಯ ಅನುಮತಿ ನೀಡಿದರೆ ಸ್ವಾಗತಕ್ಕೆ ಸಿದ್ಧವಿದ್ದೇವೆ ಎಂದು ಸಿಎಂ ಕಾರ್ಯಾಲಯ ಮಾಹಿತಿ ನೀಡಿದೆ. ಇದರ ಜೊತೆಗೆ ಮೋದಿ ಅವಮಾನ ಮಾಡಿದ್ದು ಕೇವಲ ಸಿದ್ದರಾಮಯ್ಯಗೆ ಮಾತ್ರವಲ್ಲ. ಇಡೀ ಕರ್ನಾಟಕವನ್ನು ಪ್ರತಿನಿಧಿಸುವ ಸಿದ್ದರಾಮಯ್ಯರನ್ನು ನಿರ್ಬಂಧ ಮಾಡುವ ಮೂಲಕ ಕರ್ನಾಟಕ ರಾಜ್ಯಕ್ಕೆ ಅವಮಾನ ಮಾಡಲಾಗಿದೆ ಎನ್ನುವ ಚರ್ಚೆ ಶುರುವಾಗಿದೆ.
ಕೃಷ್ಣಮಣಿ