ರಾಮನಗರ: ಕಾಂಗ್ರೆಸ್ ಸೇರ್ಪಡೆ ವಿಚಾರ ಕೇವಲ ಮಾಧ್ಯಮಗಳ ಸೃಷ್ಟಿ. ಸದ್ಯ ಅಂತಹ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಸಚಿವ ಸೋಮಣ್ಣ ಸ್ಪಷ್ಟಪಡಿಸಿದ್ದಾರೆ.
ರಾಮನಗರದಲ್ಲಿ ಮಾತನಾಡಿದ ಅವರು, ನನ್ನ ಮನಸ್ಸು ಹಾಗೂ ಆರೋಗ್ಯ ಎರಡೂ ಸರಿ ಇಲ್ಲ. ಹೀಗಾಗಿ ಪಕ್ಷದ ಕೆಲವು ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಿಲ್ಲ. ನನಗೂ ಕೆಲವು ನಿಬಂಧನೆ, ನಿರ್ಧಾರಗಳಿವೆ. ವೈಯಕ್ತಿಕವಾಗಿ ಕೆಲವೊಂದು ವಿಚಾರಗಳಲ್ಲಿ ನೋವು ಇರುತ್ತದೆ. ಅದೆಲ್ಲವನ್ನೂ ಮುಕ್ತವಾಗಿ ಹೇಳಿಕೊಳ್ಳಲು ಆಗುವುದಿಲ್ಲ ಎಂದರು.
75 ವರ್ಷ ಮೀರಿದವರಿಗೆ ಹಾಗೂ ಹಾಲಿ ಶಾಸಕರಲ್ಲಿ ಕೆಲವರಿಗೆ ಪಕ್ಷ ಟಿಕೆಟ್ ನೀಡುವುದಿಲ್ಲ ಎಂಬ ಯಡಿಯೂರಪ್ಪ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅದರ ಬಗ್ಗೆ ನನಗೆ ಗೊತ್ತಿಲ್ಲ. ನನಗಿನ್ನೂ 72 ವರ್ಷವಷ್ಟೇ ಎಂದರು.
ಚುನಾವಣೆ ಎದುರಿಸುವ ಶಕ್ತಿ, ಸಾಮರ್ಥ್ಯವಿದೆ
ಬಿಜೆಪಿ ಮೇಲೆ ನನಗೆ ಅಸಮಾಧಾನವಿಲ್ಲ. ವಿಜಯ ಸಂಕಲ್ಪ ಯಾತ್ರೆ ಸಂದರ್ಭದಲ್ಲಿ ಎರಡು ಗಂಟೆಗೂ ಹೆಚ್ಚು ಸಮಯ ಪಾಲ್ಗೊಂಡಿದ್ದೇನೆ. ಗೋವಿಂದರಾಜನಗರ ವಿಧಾನ ಸಭಾ ಕ್ಷೇತ್ರದಲ್ಲಿನ ಅಭಿವೃದ್ಧಿ ಕೆಲಸಗಳ ಬಗ್ಗೆ ಜನರಿಗೆ ಅಭಿಮಾನವಿದೆ. ನನ್ನ ಕ್ಷೇತ್ರದಲ್ಲಿ ಪಕ್ಷೇತರನಾಗಿಯೂ ಗೆದ್ದಿದ್ದೇನೆ. ಚುನಾವಣೆ ಎದುರಿಸುವ ಶಕ್ತಿ ಮತ್ತು ಸಾಮರ್ಥ್ಯವನ್ನು ಭಗವಂತ ನೀಡಿದ್ದಾನೆ ಎಂದರು.
ಒಂದು ಸಣ್ಣ ಅವಮಾನವಾದರೂ ನಾನು ಸಹಿಸುವುದಿಲ್ಲ
ನಾನು ಹಳ್ಳಿಯಿಂದ ಬಂದವನು, 45 ವರ್ಷಗಳಿಂದ ಮಣ್ಣು ಹೊರುತ್ತಿದ್ದೇನೆ, ಕೆಲಸವನ್ನು ದೇವರು ಎಂಬು ನಂಬಿರುವವನು ನಾನು. ಬಹಳ ನೋವು ಹಾಗೂ ಅನುಭವ ಪಡೆದಿದ್ದೇನೆ, ಒಂದು ಸಣ್ಣ ಅವಮಾನವಾದರೂ ನಾನು ಸಹಿಸುವುದಿಲ್ಲ ಎಂದು ಹೇಳಿದ್ದಾರೆ.