ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಅನ್ನು ದೆಹಲಿಯಲ್ಲಿ ಭೇಟಿಯಾಗಿದ್ದಾರೆ. ಬಹುಕಾಲದಿಂದ ಬಾಕಿ ಉಳಿದಿರುವ ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆ ಕುರಿತಾಗಿ ಚರ್ಚೆ ನಡೆದಿದೆ. ಎಲ್ಲದಕ್ಕಿಂತಲೂ ಮಿಗಿಲಾಗಿ, ಸಂಪುಟದಲ್ಲಿ ಸಚಿನ್ ಪೈಲಟ್ ಬಣದ ಶಾಸಕರಿಗೆ ಸ್ಥಾನ ನೀಡುವ ಕುರಿತು ಹೈಕಮಾಂಡ್ ಒಲವು ವ್ಯಕ್ತಪಡಿಸಿದೆ.
ಕಾಂಗ್ರೆಸ್ ನಾಯಕರಾದ ಪ್ರಿಯಾಂಕ ಗಾಂಧಿ ವಾದ್ರಾ, ಕೆ ಸಿ ವೇಣುಗೋಪಾಲ್ ಮತ್ತು ರಾಜಸ್ಥಾನ ಕಾಂಗ್ರೆಸ್ ಉಸ್ತುವಾರಿ ಅಜಯ್ ಮಾಕೆನ್ ಅವರನ್ನು ಒಳಗೊಂಡ ಹೈಕಮಾಂಡ್ ತಂಡವು ರಾಹುಲ್ ಗಾಂಧಿ ನಿವಾಸದಲ್ಲಿ ಬುಧವಾರ ಸಭೆ ಸೇರಿತ್ತು. ಸಭೆಯಲ್ಲಿ ರಾಹುಲ್ ಗಾಂಧಿ ಗೈರಾಗಿದ್ದರು. ಕಳೆದ ಒಂದು ವರ್ಷದಿಂದ ಸಿಎಂ ಗೆಹ್ಲೋಟ್ ಮುಂದೂಡುತ್ತಾ ಬರುತ್ತಿರುವ ಸಂಪುಟ ವಿಸ್ತರಣೆ ಹಾಗೂ ರಾಜ್ಯ ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕವನ್ನು ಮಾಡಲೇಬೇಕೆಂದು ಹೈಕಮಾಂಡ್ ಒತ್ತಡ ಹೇರಿದೆ.
ಪಂಜಾಬ್ ಕಾಂಗ್ರೆಸ್’ನಂತೆಯೇ ರಾಜಸ್ಥಾನದಲ್ಲಿಯೂ ಕಳೆದ ವರ್ಷ ಭಿನ್ನಮತ ಭುಗಿಲೆದ್ದಿತ್ತು. ಗೆಹ್ಲೋಟ್ ನೇತೃತ್ವದ ಸರ್ಕಾರ ಪತನಗೊಳ್ಳುವ ಮುನ್ಸೂಚನೆಯೂ ಲಭಿಸಿತ್ತು. ಈ ವೇಳೆ ಎರಡೂ ಬಣಗಳನ್ನು ತಣ್ಣಗಾಗಿಸಲು ಸಚಿವ ಸಂಪುಟ ಪುನರ್ ರಚನೆಯ ಭರವಸೆಯನ್ನು ಪ್ರಿಯಾಂಕ ಗಾಂಧಿ ನೀಡಿದ್ದರು. ಸಂಪುಟದಲ್ಲಿ ಪೈಲಟ್ ಬಣದ ಶಾಸಕರಿಗೂ ಸ್ಥಾನ ನೀಡುವ ಕುರಿತು ಮಾತುಕತೆ ನಡೆಸಲಾಗಿತ್ತು. ಈ ಮಾತುಕತೆ ನಡೆದು ಒಂದು ವರ್ಷ ಕಳೆಯುತ್ತಾ ಬಂದರೂ, ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆಗೆ ಕಾಲ ಕೂಡಿ ಬಂದಿರಲಿಲ್ಲ.
ಜುಲೈ ತಿಂಗಳಲ್ಲಿಯೂ ಇಂತಹುದೇ ಸನ್ನಿವೇಷ ಸೃಷ್ಟಿಯಾದ ಸಂದರ್ಭದಲ್ಲಿ ಕಾಂಗ್ರೆಸ್ ಹೈಕಮಾಂಡ್ ಸಂಪುಟ ವಿಸ್ತರಣೆಗೆ ಸೂಚಿಸಿತ್ತು. ತಿಂಗಳ ಒಳಗಾಗಿ ಸಂಪುಟ ವಿಸ್ತರಣೆ ನಡೆದೇ ಹೋಗುತ್ತದೆ ಎಂದು ಭಾವಿಸಿದ್ದ ಪೈಲಟ್ ಬಣಕ್ಕೆ ನಿರಾಸೆ ಕಾದಿತ್ತು.
ಪ್ರಸ್ತುತ ಕ್ಯಾಬಿನೆಟ್ ನಲ್ಲಿ 21 ಸಚಿವರಿದ್ದು ಇನ್ನೂ ಒಂಬತ್ತು ಜನರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಅವಕಾಶವಿದೆ. ಈ ಒಂಬತ್ತರಲ್ಲಿ ಸಿಂಹಪಾಲು ಪಡೆದುಕೊಳ್ಳಲು ಪೈಲಟ್ ಬಣ ಆಲೋಚನೆ ನಡೆಸುತ್ತಿದೆ. ಇವರೊಂದಿಗೆ ಬಿ ಎಸ್ ಪಿಯಿಂದ ಕಾಂಗ್ರೆಸ್’ಗೆ ಹಾರಿದ ಆರು ಜನ ಶಾಸಕರು ಹಾಗೂ ಸರ್ಕಾರವನ್ನು ಬೆಂಬಲಿಸುತ್ತಿರುವ ಹತ್ತು ಜನ ಪಕ್ಷೇತರ ಶಾಸಕರೂ ಇರುವುದರಿಂದ ಸಂಪುಟ ವಿಸ್ತರಣೆ ಕಗ್ಗಾಂಟಾಗಿಯೇ ಉಳಿದಿತ್ತು.
ಈ ಕಾರಣಕ್ಕೆ ಸಂಪುಟ ವಿಸ್ತರಣೆ ನಡೆಸಿದರೂ, ಪೈಲಟ್ ಬಣದ ಆಂತರಿಕ ಬೇಗುದಿ ತಣ್ಣಗಾಗುವ ಸಾಧ್ಯತೆಗಳು ಕಡಿಮೆ. ಬದಲಾಗಿ, ಸಂಪೂರ್ಣ ಸಂಪುಟದ ಪುನರ್ ರಚನೆ ಮಾಡುವ ಸಾಧ್ಯತೆಗಳೇ ಹೆಚ್ಚು. ಅಜಯ್ ಮಾಕೆನ್ ರಾಜಸ್ಥಾನಕ್ಕೆ ಈ ಹಿಂದೆ ಹಲವು ಬಾರಿ ಭೇಟಿಯಾದರೂ ಸಂಪುಟ ವಿಸ್ತರಣೆಗೆ ಅಥವಾ ಪುನರ್ ರಚನೆಗೆ ಸಿಎಂ ಗೆಹ್ಲೋಟ್ ಅವರನ್ನು ಮನವೊಲಿಸುವಲ್ಲಿ ವಿಫಲರಾಗಿದ್ದರು.
ರಾಜಸ್ಥಾನದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಚಿನ್ ಪೈಲಟ್ ಪ್ರಮುಖ ಪಾತ್ರ ವಹಿಸಿದ್ದರು. ಸಿಎಂ ಸ್ಥಾನಕ್ಕೆ ಅಶೋಕ್ ಗೆಹ್ಲೋಟ್ ಅವರಿಗೆ ಪ್ರಬಲ ಸ್ಪರ್ಧೆ ಒಡ್ಡಿದ್ದರು. ರಾಹುಲ್ ಗಾಂಧಿ ಮಧ್ಯಪ್ರವೇಶಿಸಿದ ಕಾರಣಕ್ಕೆ 2018ರಲ್ಲಿ ಡಿಸಿಎಂ ಹುದ್ದೆಗೆ ಸಮಾಧಾನಪಟ್ಟುಕೊಂಡಿದ್ದರು. ಆದರೆ, ಅಂದಿನಿಂದ ಇಂದಿನವರೆಗೂ ಗೆಹ್ಲೋಟ್ ಹಾಗೂ ಪೈಲಟ್ ನಡುವಿನ ಸಂಘರ್ಷ ನಡೆಯುತ್ತಲೇ ಇದೆ.
ಸೆಪ್ಟೆಂಬರ್ ತಿಂಗಳಲ್ಲಿಯೂ ಪೈಲಟ್ ಪ್ರಿಯಾಂಕ ಹಾಗೂ ರಾಹುಲ್ ಗಾಂಧಿಯನ್ನು ಭೇಟಿಯಾಗಿದ್ದರು. ಸರ್ಕಾರದ ಮಟ್ಟದಲ್ಲಿ ಉನ್ನತ ಹುದ್ದೆ ನೀಡುವಂತೆಬೇಡಿಕೆ ಇಟ್ಟಿದ್ದರು. ಆದರೆ, ಈ ಸಂದರ್ಭದಲ್ಲಿ ನಾಯಕತ್ವ ಬದಲಾವಣೆಗೆ ಹೈಕಮಾಂಡ್ ಸುತರಾಂ ನಿರಾಕರಿಸಿತ್ತು. ಹೈಕಮಾಂಡ್ ಪ್ರಕಾರ ಮುಂಬರುವ ಗುಜರಾತ್ ಚುನಾವಣೆಯ ಜವಾಬ್ದಾರಿಯನ್ನು ಪೈಲಟ್ ಹೆಗಲಿಗೆ ಹಾಕುವ ಯೋಚನೆಯಿದೆ. ಈ ಜವಾಬ್ದಾರಿಯನ್ನು ಹೊರಲು ಪೈಲಟ್ ಸಿದ್ದರಿದ್ದಾರೆಯೇ ಎಂಬುದರ ಕುರಿತು ಯಾವುದೇ ಸ್ಪಷ್ಟನೆ ದೊರೆತಿಲ್ಲ.
ಈಗ ಹೈಕಮಾಂಡ್ ಜತೆಗೆ ಗೆಹ್ಲೋಟ್ ನಡೆಸಿರುವ ಸಭೆಯಲ್ಲಿ ಸಂಪುಟ ವಿಸ್ತರಣೆ ನಡೆಸಲೇಬೇಕೆಂಬ ಕಟ್ಟುನಿಟ್ಟಿನ ಸೂಚನೆ ಲಭಿಸಿದ್ದು, ಇದರಲ್ಲಿ ಪೈಲಟ್ ಬಣದ ಶಾಸಕರನ್ನೂ ಸೇರಿಸುವಂತೆ ಆಗ್ರಹಿಸಿದೆ. ಅತೀ ಶೀಘ್ರದಲ್ಲಿಯೇ ರಾಜಸ್ಥಾನ ಸರ್ಕಾರದ ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆ ಆಗುವ ಸಂಭವವಿದೆ.