ಬಸವರಾಜ ಬೊಮ್ಮಾಯಿ ನೇತೃತ್ವದ ಸರಕಾರವನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದ್ದು, “ಸರ್ಕಾರ ಸ್ವಂತವಾಗಿಯೂ ಕೆಲಸ ಮಾಡಲ್ಲ. ಕೋರ್ಟ್ ನಿರ್ದೇಶನ ನೀಡಿದರೂ ಕೆಲಸ ಮಾಡಲ್ಲ” ಎಂದು ಚಾಟಿ ಬೀಸಿದೆ.
ಹೌದು, ʼಗೋಲ್ಡನ್ ಅವರ್’ ಅವಧಿಯಲ್ಲಿ ರೋಗಿಗಳು ಅಥವಾ ಗಾಯಾಳುಗಳನ್ನು ಆಸ್ಪತ್ರೆಗಳಿಗೆ ಸಾಗಿಸುವಾಗ ಆಯಬುಲೆನ್ಸ್ಗಳ ಸುಗಮ ಸಂಚಾರಕ್ಕೆ ‘ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ಆಯಂಬುಲೆನ್ಸ್ ನಿರ್ವಹಣಾ ವ್ಯವಸ್ಥೆ’ ಜಾರಿಗೆ ತರಲು ಹೊಸದಾಗಿ 1,800 ಕೋಟಿ ಮೊತ್ತದ ಟೆಂಡರ್ ಕರೆಯಲು ಅನುಮೋದನೆ ನೀಡಲು ರಾಜ್ಯ ಸಚಿವ ಸಂಪುಟ ವಿಳಂಬ ಮಾಡಿರುವುದಕ್ಕೆ ಹೈಕೋರ್ಟ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
‘ಭಾರತ್ ಪುನರುತ್ಥಾನ ಟ್ರಸ್ಟ್’ ಈ ಸಂಬಂಧವಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ, ಸರ್ಕಾರದ ಕಾರ್ಯ ವೈಖರಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಸರಕಾರದ ವೈಖರಿ ಬೇಸರ ಮೂಡುತ್ತಿದೆ. ಸರ್ಕಾರದ ವ್ಯವಹಾರಗಳು ಹೇಗೆ ನಡೆಯುತ್ತಿವೆ, ಸರಕಾರ ಏನು ಮಾಡುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಲಾಗುತ್ತಿಲ್ಲ. ಸರ್ಕಾರ ಕಾರ್ಯ ವೈಖರಿ ಹೀಗಿರುವುದಕ್ಕೆಯೇ ನ್ಯಾಯಾಲಯಕ್ಕೆ ಅನೇಕ ಪಿಐಎಲ್ಗಳು ಬರುತ್ತಿವೆ. ಸರ್ಕಾರವು ಸ್ವಂತವಾಗಿಯೂ ಕೆಲಸ ಮಾಡುವುದಿಲ್ಲ. ಕೋರ್ಟ್ ನಿರ್ದೇಶನ ನೀಡಿದರೂ ಕೆಲಸ ಮಾಡುವುದಿಲ್ಲ ಎಂದು ನ್ಯಾಯಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.
ತೀವ್ರ ತರಾಟೆಯ ಬಳಿಕ ನ್ಯಾಯಪೀಠ ಸರಕಾರಕ್ಕೆ ಎರಡು ವಾರ ಕಾಲಾವಕಾಶ ನೀಡಿ, ರಾಜ್ಯ ಸರ್ಕಾರ ಈ ವಿಚಾರವನ್ನು ತುರ್ತಾಗಿ ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂಬುದಾಗಿ ನ್ಯಾಯಾಲಯ ನಂಬಿದೆ ಎಂದು ಭರವಸೆ ವ್ಯಕ್ತಪಡಿಸಿದೆ.

ಇದಕ್ಕೂ ಮೊದಲು ಅರ್ಜಿದಾರರ ಪರ ವಕೀಲ ವೆಂಕಟೇಶ್ ದಳವಾಯಿ, ‘ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ಆಯಂಬುಲೆನ್ಸ್ ನಿರ್ವಹಣಾ ವ್ಯವಸ್ಥೆ’ ಜಾರಿಗೆ ಮೊದಲು ಕರೆದಿದ್ದ 1,800 ಕೋಟಿ ಮೊತ್ತದ ಟೆಂಡರ್ ಅನ್ನು ಸರ್ಕಾರ ರದ್ದುಪಡಿಸಿ ಆದೇಶಿಸಿತ್ತು. ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದ ಪರಿಣಾಮ ಆ ಆದೇಶ ಹಿಂಪಡೆದು ಹೊಸದಾಗಿ ಟೆಂಡರ್ ಕರೆಯುವುದಾಗಿ ಹೇಳಿತ್ತು. ಈವರೆಗೂ ಟೆಂಡರ್ ಕರೆದಿಲ್ಲ ಎಂದು ನ್ಯಾಯಾಲಯದ ಗಮನಕ್ಕೆ ತಂದರು.
ಸರ್ಕಾರಿ ಪರ ವಕೀಲರು ಹಾಜರಾಗಿ, ಟೆಂಡರ್ ಕರೆಯಲು ಅನುಮತಿ ನೀಡುವ ವಿಚಾರ ಸಚಿವ ಸಂಪುಟದ ಮುಂದಿದೆ. ಎರಡು ವಾರ ಕಾಲಾವಕಾಶ ನೀಡಿದರೆ ಸಚಿವ ಸಂಪುಟದ ಅನುಮೋದನೆ ಪಡೆದು ನ್ಯಾಯಾಲಯಕ್ಕೆ ಮಾಹಿತಿ ನೀಡುತ್ತೇವೆ ಎಂದು ತಿಳಿಸಿದರು.

ಅದನ್ನು ಆಕ್ಷೇಪಿಸಿದ ನ್ಯಾಯಪೀಠ, ಸಚಿವ ಸಂಪುಟದ ಅನುಮತಿ ಪಡೆಯಲು ಹೈಕೋರ್ಟ್ 2021ರ ಆ.31ರಂದು ಕಾಲಾವಕಾಶ ನೀಡಿತ್ತು. ಅದೇ ಸ್ಥಿತಿ ಇಂದು ಸಹ ಇದೆ. ಈವರೆಗೆ ಏಕೆ ಸಚಿವ ಸಂಪುಟದ ಮುಂದೆ ಈ ವಿಚಾರವನ್ನು ಇಡಲಿಲ್ಲ, ಈ ನಡುವೆ ಸಚಿವ ಸಂಪುಟ ಸಭೆ ನಡೆದಿಲ್ಲವೇ ಎಂದು ಖಾರವಾಗಿ ಪ್ರಶ್ನಿಸಿತು. ಸರ್ಕಾರಿ ವಕೀಲರು, 10 ದಿನ ಕಾಲಾವಕಾಶ ನೀಡಿದರೆ ಅಗತ್ಯ ಕ್ರಮ ಜರುಗಿಸಲಾಗುವುದು ಎಂದು ತಿಳಿದಾಗ ನ್ಯಾಯಪೀಠ ತೀವ್ರ ಬೇಸರ ವ್ಯಕ್ತಪಡಿಸಿ, ಎಲ್ಲ ಪ್ರಕರಣಗಳಲ್ಲೂ ಸರ್ಕಾರ ಇದೇ ರೀತಿ ಹೇಳುತ್ತದೆ. ನಿತ್ಯ ಅಧಿಕಾರಿಗಳನ್ನು ಕೋರ್ಟ್ಗೆ ಕರೆಯಿಸಿ ಸೂಚನೆ ನೀಡಬೇಕೆ? ಸರ್ಕಾರದ ಈ ಧೋರಣೆ ಸರಿಯಲ್ಲ ಎಂದು ಹೇಳಿತು. ಅಲ್ಲದೆ, ಈಗ ಇರುವ 108 ಆಯಂಬುಲೆನ್ಸ್ಗೆ ಜಿಪಿಎಸ್ ಅಳವಡಿಸಿ, ಅವುಗಳ ಸಂಚಾರವನ್ನು ನಿರ್ವಹಣೆ ಮಾಡಲು ಪ್ರತ್ಯೇಕ ಕಂಟ್ರೋಲ್ ರೂ ತೆರೆಯುವ ವಿಚಾರವನ್ನು ಈವರೆಗೂ ಏಕೆ ಪರಿಗಣಿಸಿಲ್ಲ ಎಂಬುದು ಸಹ ಅರ್ಥವಾಗುತ್ತಿಲ್ಲ ಎಂದು ಹೇಳಿತು.











