ಪಂಜಾಬ್ ಕಾಂಗ್ರೆಸ್’ನಲ್ಲಿನ ಭಿನ್ನಾಭಿಪ್ರಾಯ ಅಲ್ಪ ಮಟ್ಟಿಗೆ ತಗ್ಗಿದ ಬೆನ್ನಲ್ಲೇ, ರಾಜಸ್ಥಾನದಲ್ಲಿ ಆಂತರಿಕ ಕಲಹ ಆರಂಭವಾಗಿದೆ. ಕಳೆದ ವರ್ಷ ಇನ್ನೇನು ಸರ್ಕಾರ ಉರುಳಿಹೋಯಿತು ಎಂದು ಅಂದುಕೊಳ್ಳುವಷ್ಟರಲ್ಲಿ ಸಂದಾನ ಯಶಸ್ವಿಯಾಗಿತ್ತು. ಈಗಿನ ಪರಿಸ್ಥಿತಿ ತಿಳಿಗೊಳಿಸಲು ಕಾಂಗ್ರೆಸ್ ಹೈಕಮಾಂಡ್ ನಾಯಕರು ಈಗಾಗಲೇ ರಾಜಸ್ಥಾನಕ್ಕೆ ತಲುಪಿದ್ದಾರೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಹಾಗೂ ರಾಜಸ್ಥಾನ ಕಾಂಗ್ರೆಸ್ ಉಸ್ತುವಾರಿ ಅಜಯ್ ಮಾಕೆನ್ ಅವರು ಜೈಪುರದಲ್ಲಿ ಬೀಡು ಬಿಟ್ಟಿದ್ದಾರೆ. ಶನಿವಾರವೇ ಸಿಎಂ ಅಶೋಕ್ ಗೆಹ್ಲೋಟ್ ಅವರನ್ನು ಭೇಟಿಯಾಗಿರುವ ತಂಡವು ರಾಜ್ಯದ ಇತರ ಹಿರಿಯ ನಾಯಕರೊಡನೆಯೂ ಚರ್ಚೆ ನಡೆಸಿದೆ.
ಸಚಿನ್ ಪೈಲೆಟ್ ಬಣದ ಬಹುಮುಖ್ಯ ದೂರು ಏನೆಂದರೆ, ಸಿಎಂ ಅಶೋಕ್ ಗೆಹ್ಲೋಟ್ ಸಚಿವ ಸಂಪುಟ ವಿಸ್ತರಣೆಗೆ ಮೀನಾಮೇಷ ಎಣಿಸುತ್ತಿರುವುದು. ಈ ಕಾರಣಕ್ಕಾಗಿ ಶೀಘ್ರದಲ್ಲಿ ಸಚಿವ ಸಂಪುಟ್ ವಿಸ್ತರಣೆ ಸೇರಿದಂತೆ ನಿಗಮ ಮಂಡಳಿಗಲ ಅಧ್ಯಕ್ಷ ಸ್ಥಾನವನ್ನೂ ಭರ್ತಿಗೊಳಿಸುವಂತೆ ಹೈಕಮಾಂಡ್ ಸೂಚನೆ ನಿಡುವ ಸಾಧ್ಯತೆಯಿದೆ.
ಬಹುತೇಕ ಮುಂದನ ವಾರದಲ್ಲಿ ಕ್ಯಾಬಿನೇಟ್ ಪುನರ್ ರಚನೆ ಅತವಾ ವಿಸ್ತರಣೆ ಪ್ರಕ್ರಿಯೆ ಸಂಪೂರ್ಣಗೊಳ್ಳಲಿದೆ. ಪ್ರಸ್ತುತ ಕ್ಯಾಬಿನೆಟ್ ನಲ್ಲಿ 21 ಸಚಿವರಿದ್ದು ಇನ್ನೂ ಒಂಬತ್ತು ಜನರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಅವಕಾಶವಿದೆ. ಈ ಒಂಬತ್ತರಲ್ಲಿ ಸಿಂಹಪಾಲು ಪಡೆದುಕೊಳ್ಳಲು ಪೈಲಟ್ ಬಣ ಆಲೋಚನೆ ನಡೆಸುತ್ತಿದೆ.
ಇವರೊಂದಿಗೆ ಬಿ ಎಸ್ ಪಿಯಿಂದ ಕಾಂಗ್ರೆಸ್’ಗೆ ಹಾರಿದ ಆರು ಜನ ಶಾಸಕರು ಹಾಗೂ ಸರ್ಕಾರವನ್ನು ಬೆಂಬಲಿಸುತ್ತಿರುವ ಹತ್ತು ಜನ ಪಕ್ಷೇತರ ಶಾಸಕರಿಗೆ ಯಾವ ರೀತಿ ಸಚಿವ ಸ್ಥಾನ ಹಂಚಿಕೆ ಮಾಡುವರು ಎಂಬುದನ್ನು ನೋಡಬೇಕಿದೆ.
ಅಜಯ್ ಮಾಕೆನ್ ರಾಜಸ್ಥಾನಕ್ಕೆ ಈ ಹಿಂದೆ ಹಲವು ಬಾರಿ ಭೇಟಿಯಾದರೂ ಸಂಪುಟ ವಿಸ್ತರಣೆಗೆ ಸಿಎಂ ಗೆಹ್ಲೋಟ್ ಅವರನ್ನು ಮನವೊಲಿಸುವಲ್ಲಿ ವಿಫಲರಾಗಿದ್ದರು. ಹೀಗಾಗಿ ಈ ಬಾರಿ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿಗೆ ಆಪ್ತರಾಗಿರುವ ಪಕ್ಷದಲ್ಲಿ ಉನ್ನತ ಹುದ್ದೆ ಹೊಂದಿರುವ ವೇಣುಗೋಪಾಲ್ ಅವರ ಮುಖಾಂತರ ಸಿಎಂ ಮನವೊಲಿಸುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ತಿಳಿಸಿದ್ದಾರೆ.
ಹೈಕಮಾಂಡ್ ಮಟ್ಟದಲ್ಲಿ ಸಚಿನ್ ಪೈಲಟ್ ಅವರಿಗೆ ಪ್ರಮುಖ ಹುದ್ದೆಯನ್ನು ನೀಡಬೇಕೆಂಬ ಕೂಗು ಕೂಡಾ ಕೇಳಿ ಬರುತ್ತಿರುವುದರಿಂದ, ಈ ಬಾರಿಯ ಸಂಪುಟ ವಿಸ್ತರಣೆ ಸರ್ಕಸ್ ಕುತೂಹಲಕಾರಿಯಾಗಿರಲಿದೆ.