ಕರ್ನಾಟಕ ಅಸೆಂಬ್ಲಿ ಚುನಾವಣೆ ಫಲಿತಾಂಶ ಹೊರ ಬೀಳುವ ಮುನ್ನವೇ ಕಾಂಗ್ರೆಸ್‌ಗೆ ಆಪರೇಷನ್ ಕಮಲದ ಭೀತಿ ಶುರುವಾಗಿದೆ.
ಎಕ್ಸಿಟ್ ಪೋಲ್ ಸಮೀಕ್ಷೆಯಲ್ಲಿ ಅತಂತ್ರ ಸರ್ಕಾರದ ಮುನ್ಸೂಚನೆ ಬಂದಿರುವುದರಿಂದ ಕಾಂಗ್ರೆಸ್ ಎಲ್ಲಾ ರಣತಂತ್ರ ನಡೆಸಲು ಶುರು ಹಚ್ಚಿಕೊಂಡಿದೆ.
ಮೂಲಗಳ ಪ್ರಕಾರ ತನ್ನ ಅಭ್ಯರ್ಥಿಗಳಿಗೆ ಸರ್ಕಾರ ರಚನೆಯಾಗುವವರೆಗೆ ಬೆಂಗಳೂರಿನ ನಿರ್ದಿಷ್ಟ ಸ್ಥಳದಲ್ಲಿ ಬಂದು ವಾಸ್ತವ್ಯ ಮಾಡುವಂತೆ ಕಾಂಗ್ರೆಸ್ ಸೂಚಿಸಿದೆ.
ಎಕ್ಸಿಟ್ ಪೋಲ್ ಸಮೀಕ್ಷೆಯಲ್ಲಿ ಅತಂತ್ರ ಸರ್ಕಾರದ ಬಗ್ಗೆ ಕೆಲವು ವರದಿಗಳು ಬಂದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಆತಂಕಗೊಂಡಿದೆ ಎನ್ನಲಾಗಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಬಹುಮತದ ಸರ್ಕಾರ ರಚಿಸುವ ಬಗ್ಗೆ ಭರವಸೆ ವ್ಯಕ್ತಪಡಿಸಿದೆಯಾದರೂ, ಅಧಿಕಾರದ ಗದ್ದುಗೆ ಹಿಡಿಯಲು ಎರಡೂ ಪಕ್ಷಗಳು ಶಾಸಕರ ಬೇಟೆಗೆ ಸಿದ್ಧವಾಗಿವೆ ಎಂದು ಮೂಲಗಳು ಹೇಳಿವೆ.
ಬಿಜೆಪಿಯ ಆಪರೇಷನ್ ಕಮಲವನ್ನು ಎದುರಿಸಲು ಕಾಂಗ್ರೆಸ್ ರಿವರ್ಸ್ ಆಪರೇಷನ್‌ಗೆ ಸಜ್ಜಾಗಿದೆ. ಒಂದು ವೇಳೆ ಮ್ಯಾಜಿಕ್ ನಂಬರ್ ಬಾರದಿದ್ದರೆ ಆಪರೇಷನ್ ಕಾಂಗ್ರೆಸ್ ಮಾಡಲು ಕಾಂಗ್ರೆಸ್ ಕೂಡಾ ಸಜ್ಜಾಗಿದ್ದು, ಅದಕ್ಕೆ ಬೇಕಾದ ಎಲ್ಲಾ ತಯಾರಿಯನ್ನು ನಡೆಸಿದೆ.

ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಮತ್ತು ವಿಪಕ್ಷನಾಯಕ ಸಿದ್ದರಾಮಯ್ಯ ಎಲ್ಲಾ ಅಭ್ಯರ್ಥಿಗಳೊಂದಿಗೆ ಈಗಾಗಲೇ ವರ್ಚುವಲ್ ಸಭೆ ನಡೆಸಿ, ಆಪರೇಷನ್ ಕಮಲಕ್ಕೆ ಬಲಿಯಾಗದೆ ಉಳಿಯಲು ತಮ್ಮ ಅಭ್ಯರ್ಥಿಗಳಿಗೆ ಒಂದು ಹಂತದ ಮಾರ್ಗದರ್ಶನಗಳನ್ನು ನೀಡಿದ್ದಾರೆ.
ಈ ಬಾರಿ ಕಾಂಗ್ರೆಸ್‌ಗೆ ಸರ್ಕಾರ ರಚಿಸಲು ಅವಕಾಶ ಸಿಗಲಿದ್ದು, ಆಮಿಷಗಳಿಗೆ ಮಣಿಯಬಾರದು ಎಂದು ಕೆಪಿಸಿಸಿ ನಾಯಕರು ತಮ್ಮ ಅಭ್ಯರ್ಥಿಗಳಿಗೆ ಸೂಚಿಸಿದ್ದಾರೆ.
ಹಾಗಾಗಿ, ಅಭ್ಯರ್ಥಿಗಳು ಮುನ್ನಡೆ ಸಾಧಿಸಲು ಪ್ರಾರಂಭಿಸಿದ ತಕ್ಷಣ ಹಾಗೂ ಅವರ ಗೆಲುವು ಖಚಿತವಾದ ಕೂಡಲೇ ಬೆಂಗಳೂರಿಗೆ ಬರುವಂತೆ ಅಭ್ಯರ್ಥಿಗಳಿಗೆ ಸಂದೇಶ ರವಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಸರ್ಕಾರ ರಚನೆಯಾಗುವವರೆಗೆ ಅಭ್ಯರ್ಥಿಗಳು ಬೆಂಗಳೂರಿನ ನಿರ್ದಿಷ್ಟ ಸ್ಥಳದಲ್ಲಿ ಉಳಿಯುವಂತೆಯೂ ಸೂಚಿಸಲಾಗಿದೆ ಎಂದು ಮೂಲಗಳು ಹೇಳಿವೆ.











