ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸರ್ವೇಗಳು ಹೇಳಿದ್ದು, ಮಾಧ್ಯಮಗಳಲ್ಲಿ ಚರ್ಚೆ ಆಗಿದ್ದು, ನಾಯಕರು ತಮ್ಮಿಷ್ಟ ಬಂದ ಹಾಗೆ ಹೇಳಿದ್ದು ಎಲ್ಲವೂ ಉಲ್ಟಪಲ್ಟಾ ಆಗಿತ್ತು. ಬಿಜೆಪಿ ಸರ್ಕಾರದ ಭ್ರಷ್ಟಾಚಾರದಿಂದ ಬೇಸತ್ತಿದ್ದ ಜನ, ಕಾಂಗ್ರೆಸ್ ಪಕ್ಷ ನೀಡಿದ್ದ 5 ಗ್ಯಾರಂಟಿಗಳಿಗೆ ಮಾರುಹೋದರು. ಕಾಂಗ್ರೆಸ್ ನಾಯಕರೇ ಒಂದು ಕ್ಷಣ ಗಾಬರಿ ಆಗುವಂತೆ 135 ಸ್ಥಾನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗೇ ಗೆದ್ದು ಬಿಟ್ಟರು. ಇನ್ನೊಂದು ಕ್ಷೇತ್ರದಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಜಯಭೇರಿ ಬಾರಿಸಿದ್ದರು. ಎಲ್ಲರೂ ಅಚ್ಚರಿಯಲ್ಲಿದ್ದಾಗ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಒಂದು ಮಾತನ್ನು ಹೇಳಿದರು. ನಾನು ಚುನಾವಣೆ ನಡೆಯುವ ಮುಂಚೆಯೇ 136 ಸ್ಥಾನಗಳಲ್ಲಿ ಗೆಲ್ಲುತ್ತೇವೆ ಎಂದು ಹೇಳಿದ್ದೆ. ಅದರಂತೆ ನಾವು ಒಂದೇ ಒಂದು ಕ್ಷೇತ್ರವೂ ಮಿಸ್ ಆಗದಂತೆ ಗೆದ್ದಿದ್ದೇವೆ ಎಂದು ಹೆಮ್ಮೆಯಿಂದ ಹೇಳಿದ್ದರು. ಅದಕ್ಕೆ ಕಾರಣವಾಗಿದ್ದು ನಿಖರವಾಗಿ ನಡೆದಿದ್ದ ಸರ್ವೇ.

ವಿಧಾನಸಭಾ ಚುನಾವಣೆ ತಂತ್ರಗಾರಿಕೆ ಮತ್ತೆ ಬಳಕೆ..!

ಕಾಂಗ್ರೆಸ್ ಪಕ್ಷ ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮಾಸ್ಟರ್ ಪ್ಲ್ಯಾನ್ ಮಾಡಿತ್ತು. ಸಾಮಾಜಿಕ ಜಾಲತಾಣದಲ್ಲೂ ಬಿಜೆಪಿ ಎದುರಾಳಿಯಾಗಿ ಸಂಘಟಿತ ಟೀಂ ಕಟ್ಟಿದ್ದ ಕಾಂಗ್ರೆಸ್, ಬಿಜೆಪಿ ಆರೋಪಗಳಿಗೆ ತಕ್ಕ ಪ್ರತ್ಯುತ್ತರ ನೀಡುತ್ತಾ ಸಾಗಿತು. ಅಷ್ಟೇ ಅಲ್ಲದೆ ಪ್ರತಿಯೊಂದು ಕ್ಷೇತ್ರದಲ್ಲೂ ಟಿಕೆಟ್ ಬೇಕಿದ್ದವರು ಅರ್ಜಿ ಹಾಕುವಂತೆ ಸೂಚನೆ ಕೊಟ್ಟಿತ್ತು. ದರ ನಿಗದಿ ಮೂಲಕ ಹಣವನ್ನೂ ಸಂಗ್ರಹ ಮಾಡಿದ್ದಲ್ಲದೆ, ಚುನಾವಣೆಗೆ ನಿಲ್ಲಬೇಕು ಎನ್ನುವ ಅಭ್ಯರ್ಥಿಗಳ ಪಟ್ಟಿಯನ್ನು ರೆಡಿ ಮಾಡಿತ್ತು. ಒಂದೊಂದು ಕ್ಷೇತ್ರದಲ್ಲಿ ನಾಲ್ಕೈದು ಜನರ ಹೆಸರು ಬಂದ ಬಳಿಕ ಜಿಲ್ಲಾ ಮಟ್ಟದಲ್ಲೇ ಮೂರು ಹೆಸರುಗಳನ್ನು ಫೈನಲ್ ಮಾಡುವ ಜವಾಬ್ದಾರಿಯನ್ನು ಜಿಲ್ಲಾ ಅಧ್ಯಕ್ಷರ ತಿರ್ಮಾನಕ್ಕೆ ಬಿಡಲಾಯ್ತು. ಅಂತಿಮವಾಗಿ ಒಂದೊಂದು ಕ್ಷೇತ್ರದಲ್ಲಿ ಮೂರು ಜನರ ಹೆಸರನ್ನು ಪಡೆದ ಬಳಿಕ ಅಸಲಿ ದಾಳ ಉರುಳಿಸಿದ ಸರ್ವೇ ಟೀಂ ಕಾಂಗ್ರೆಸ್ನಿಂದ ಗೆಲ್ಲುವ ಸಮರ್ಥರನ್ನು ಅಭ್ಯರ್ಥಿಗಳನ್ನಾಗಿ ಮಾಡುವಲ್ಲಿ ಗೆಲುವು ಕಂಡಿತ್ತು.
ಮೂವರಲ್ಲಿ ಒಬ್ಬರೇ ಅಭ್ಯರ್ಥಿ.. ಸರ್ವೇ ವರದಿ ಬಳಿಕವೇ ಟಿಕೆಟ್..
ಟಿಕೆಟ್ ಆಕಾಂಕ್ಷಿಗಳಾದ ಮೂವರ ಹೆಸರು ರಾಜ್ಯ ಸಮಿತಿ ಮುಂದೆ ಬಂದ ಕೂಡಲೇ ಆ ಮೂವರ ಹೆಸರನ್ನು ಕೊಟ್ಟು ಕ್ಷೇತ್ರದಲ್ಲಿ ಜನರ ಒಲವು ಯಾರ ಕಡೆಗೆ ಇದೆ ಎನ್ನುವುದನ್ನು ತಿಳಿದುಕೊಳ್ಳಲು ಸರ್ವೇ ಮೊರೆ ಹೋಗಲಾಗಿತ್ತು. ಸುನೀಲ್ ಕನಗೋಳ್ ಅವರ ನೇತೃತ್ವದಲ್ಲಿ ತಂಡ ರಚಿಸಿ, ಸಂಭಾವ್ಯ ಅಭ್ಯರ್ಥಿಗಳ ಮೇಲೆ ವರದಿ ಮಾಡಲು ಸೂಚನೆ ಕೊಡಲಾಯ್ತು. ಸುನೀಲ್ ಕನಗೋಳ್ ಟೀಂ ಸೂಕ್ತ ರೀತಿಯಲ್ಲಿ ಸರ್ವೇ ಕಾರ್ಯ ಮಾಡಿ ವರದಿ ನೀಡಿದ ಬಳಿಕ ಗೆಲ್ಲುವ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಯ್ತು. ಕನಗೋಳ್ ಟೀಂ ಸರ್ವೇ ಆಧಾರದಲ್ಲೇ ಗೆಲ್ಲುವ ಅಭ್ಯರ್ಥಿಗಳ ಪಟ್ಟಿ ಪಡೆದುಕೊಳ್ಳಲಾಯ್ತು. ಆ ಕ್ಷೇತ್ರಗಳ ಕಡೆಗೆ ಹೆಚ್ಚಿನ ಒತ್ತು ನೀಡಲಾಯ್ತು. ಅಂದುಕೊಂಡಿದ್ದ ಫಲಿತಾಂಶವನ್ನು ಪಡೆದಿದ್ದೂ ಆಯ್ತು. ಅಧಿಕಾರಕ್ಕೆ ಬಂದಿದ್ದೂ ಆಯ್ತು. ಇದೀಗ ಲೋಕಸಭೆ ಅಖಾಡಕ್ಕೂ ಕಾಂಗ್ರೆಸ್ ಸಿದ್ಧವಾಗಿದೆ.
ಜನವರಿಯಲ್ಲೇ ಕಾಂಗ್ರೆಸ್ನಿಂದ ಅಭ್ಯರ್ಥಿಗಳ ಪಟ್ಟಿ ರಿಲೀಸ್..
ಕಾಂಗ್ರೆಸ್ ಪಕ್ಷ ಈಗಾಗಲೇ ಗೆಲ್ಲುವ ಅಭ್ಯರ್ಥಿಗಳ ಪಟ್ಟಿಯನ್ನು ರೆಡಿ ಮಾಡಲು ಶುರು ಮಾಡಿದ್ದು, ಕೆಲವೇ ತಿಂಗಳಲ್ಲಿ ಸಂಭಾವ್ಯ ಅಭ್ಯರ್ಥಿಗಳು, ಆಕಾಂಕ್ಷಿಗಳ ಪಟ್ಟಿ ಜೊತೆಗೆ ಒಂದು ಕ್ಷೇತ್ರಕ್ಕೆ ಮೂವರ ಹೆಸರನ್ನು ಅಂತಿಮ ಮಾಡಲು ಸೂಚನೆ ನೀಡಲಾಗಿದೆ. ಆ ಬಳಿಕ ಸುನೀಲ್ ಕನಗೋಳ್ ಅವರ ತಂಡದಿಂದ ಸರ್ವೇ ಕಾರ್ಯ ಮಾಡಿಸಿ, ಆ ಬಳಿಕ ಗೆಲ್ಲುವ ಅಭ್ಯರ್ಥಿ ಆದವರಿಗೆ ಮಾತ್ರ ಟಿಕೆಟ್ ನೀಡಲು ನಿಶ್ಚಯ ಮಾಡಲಾಗಿದೆ. ಚುನಾವಣೆಗೆ ಇನ್ನೂ ಮೂರು ತಿಂಗಳು ಬಾಕಿ ಇರುವಂತೆಯೇ ಜನವರಿ ತಿಂಗಳಲ್ಲಿ ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ ಫಿಕ್ಸ್ ಎನ್ನಲಾಗ್ತಿದೆ. ಮೊದಲಿಗೆ 10 ರಿಂದ 15 ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ ಮಾಡಿ, ಆ ನಂತರ ಉಳಿದ ಕ್ಷೇತ್ರಗಳ ಕಡೆಗೆ ಕಣ್ಣು ಹಾಯಿಸಲು ರಾಜ್ಯ ಕಾಂಗ್ರೆಸ್ ತಯಾರಿ ನಡೆಸಿದೆ. ನವೆಂಬರ್, ಡಿಸೆಂಬರ್ ತಿಂಗಳಲ್ಲಿ ಕಾಂಗ್ರೆಸ್ ಸರ್ವೆ ನಡೆಯಲಿದ್ದು, ಹಾಲಿ ಬಿಜೆಪಿ ಸಂಸದರ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಬಾವುಟ ಹಾರಿಸಲು ವೇದಿಕೆ ಸಜ್ಜಾಗ್ತಿದೆ. ಒಂದೇ ತಂತ್ರಗಾರಿಕೆಯನ್ನು ಎರಡು ಚುನಾವಣೆಗಳಲ್ಲಿ ಬಳಕೆ ಮಾಡ್ತಿರೋ ಕಾಂಗ್ರೆಸ್ ಜನಮನ್ನಣೆ ಪಡೆಯುತ್ತಾ ಕಾದು ನೋಡ್ಬೇಕು..
-ಕೃಷ್ಣಮಣಿ