ಬೆಂಗಳೂರು: ಬಿಜೆಪಿಯ ಸಚಿವರು, ಶಾಸಕರು ಕಾಂಗ್ರೆಸ್ ಸೇರುತ್ತಾರೆ ಎಂಬ ಕಾಂಗ್ರೆಸ್ ನಾಯಕರ ಆಶಯ ನೆರವೇರುವುದಿಲ್ಲ. ಶಾಸಕರಲ್ಲ ಕನಿಷ್ಠ ಬಿಜೆಪಿಯ ಕಾರ್ಯಕರ್ತರನ್ನೂ ಸೆಳೆಯುವ ಶಕ್ತಿ ಅವರಿಗಿಲ್ಲ. ಸುಮ್ಮನೆ ಬುರುಡೆ ಬಿಡುತ್ತಿದ್ದಾರೆ ಬರುತ್ತದೆ ಎಂದು ತೋಟಗಾರಿಕಾ ಸಚಿವ ಮುನಿರತ್ನ ಹೇಳಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಮನಸ್ಸು ಮಾಡಿದರೆ ಆ ಪಕ್ಷದ ಅರ್ಧದಷ್ಟೂ ಶಾಸಕರು ಉಳಿಯುವುದಿಲ್ಲ. ರಾಜ್ಯದಲ್ಲಿ ಶಾಶ್ವತವಾಗಿ ಬಾಗಿಲು ಮುಚ್ಚುವ ಪರಿಸ್ಥಿತಿ ಕಾಂಗ್ರೆಸ್‌ಗೆ ಬರಲಿದೆ ಎಂದು ಹೇಳಿದರು.
ಶಾಸಕರ ಅಭಿಪ್ರಾಯಗಳಿಗೆ ಮನ್ನಣೆ ನೀಡದಿದ್ದರೆ ಏನಾಗುತ್ತದೆ ಎನ್ನುವುದು ಈಗಾಗಲೇ ಕಾಂಗ್ರೆಸ್’ಗೆ ಮನವರಿಕೆಯಾಗಿದೆ. ಆದರೂ, ಪಕ್ಷ ಬಿಟ್ಟು ಹೋದವರು ಮರಳಿ ಬರುತ್ತಾರೆ ಎಂಬ ನಿರೀಕ್ಷೆಯಲ್ಲೇ ಬಾಗಿಲು ತೆರೆದುಕೊಂಡು ಕುಳಿತಿದ್ದಾರೆ. 140 ಕ್ಷೇತ್ರಗಳನ್ನು ಗೆಲ್ಲುವುದಾಗಿ ಘೋಷಣೆ ಮಾಡಿದವರು ಇತರೆ ಪಕ್ಷಗಳ ಶಾಸಕರು, ಮುಖಂಡರನ್ನು ಏಕೆ ನೆಚ್ಚಿಕೊಂಡಿದ್ದಾರೆ ಎಂದು ಪ್ರಶ್ನಿಸಿದರು.

ಡಿಕೆಶಿ ಪರೋಕ್ಷವಾಗಿ ಬಿಜೆಪಿ ಪರ ಪ್ರಚಾರ ಮಾಡುತ್ತಿದ್ದಾರೆ
ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗಬಾರದು ಎಂದು ಡಿ.ಕೆ.ಶಿವಕುಮಾರ್ ಕಿವಿಗೆ ಹೂವು ಇಟ್ಟುಕೊಂಡು ಪರೋಕ್ಷವಾಗಿ ಬಿಜೆಪಿ ಪರ ಪ್ರಚಾರ ಮಾಡುತ್ತಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆ ಗೊತ್ತಾಗಬಾರದು ಎಂದೇ ಕಿವಿಗೆ ಕಮಲದ ಬದಲು, ಚೆಂಡು ಹೂವು ಮುಡಿದಿದ್ದಾರೆ ಎಂದರು.
ಹಂತಹಂತವಾಗಿ ಬೆಂಗಳೂರು ಅಭಿವೃದ್ಧಿ
ಡಬಲ್ ಎಂಜಿನ್ ಸರ್ಕಾರದ ಫಲವಾಗಿ ಬೆಂಗಳೂರು ನಗರ ಜಾಗತಿಕ 25 ನಗರಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 35 ಕಂಪನಿಗಳು 8 ಸಾವಿರ ಕೋಟಿ ಹೂಡಿಕೆ ಮಾಡಲು ಮುಂದಾಗಿವೆ. ಮುಖ್ಯಮಂತ್ರಿ ಅಭಿವೃದ್ಧಿಗಾಗಿ 6 ಸಾವಿರ ಕೋಟಿ ನೀಡಿದ್ದಾರೆ. ಹಂತಹಂತವಾಗಿ ಬೆಂಗಳೂರು ಅಭಿವೃದ್ಧಿಯಾಗುತ್ತಿದೆ ಎಂದು ಸಚಿವ ಮುನಿರತ್ನ ತಿಳಿಸಿದರು.