ಬಿಜೆಪಿ ಸರ್ಕಾರದ ವಿರುದ್ಧ ಹೋರಾಟದಲ್ಲಿ ಕ್ರೆಡಿಟ್ ತೆಗೆದುಕೊಳ್ಳಲು ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನಡುವೆ ಪೈಪೋಟಿ ಶುರುವಾಗಿದೆ ಎನ್ನಲಾಗುತ್ತಿದೆ. ಕೊರೊನಾ ವಿಚಾರದಲ್ಲಿ ರಾಜ್ಯ ಸರ್ಕಾರದ ಸಚಿವರು ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿತ್ತು. ಈ ಆರೋಪಕ್ಕೆ ರಾಜ್ಯ ಸರ್ಕಾರ ತುಸು ತಲೆ ಕೆಡಿಸಿಕೊಂಡಿರೋದಂತೂ ಸತ್ಯ. ಇದೇ ಹೋರಾಟದ ವಿಚಾರದಲ್ಲಿ ಇಬ್ಬರು ನಾಯಕರು ತಮ್ಮ ಅಸ್ತಿತ್ವವನ್ನ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಅನ್ನೋ ಚರ್ಚೆ ಶುರುವಾಗಿದೆ.
ಒಂದು ಕಡೆ ಪಕ್ಷದಲ್ಲಿ ಯಾವುದೇ ವಿಷಯ ಎತ್ತಿಕೊಂಡರೂ ಮಾಜಿ ಸಿಎಂ ಸಿದ್ದರಾಮಯ್ಯ ಹೆಸರೇ ಮುಂಚೂಣಿಯಲ್ಲಿದೆ. ಅದರಲ್ಲೂ ವೈದ್ಯಕೀಯ ಉಪಕರಣಗಳ ಖರೀದಿ ಅವ್ಯವಹಾರದ ವಿಷಯದಲ್ಲಿ ಸಿದ್ದರಾಮಯ್ಯಗೆ ಕ್ರೆಡಿಟ್ ಎಂಬ ಚರ್ಚೆ ಶುರುವಾಗಿದ್ಯಂತೆ.
ಇನ್ನು.. ಬಿಜೆಪಿ ಸರ್ಕಾರದ ಸಚಿವರು ವೈದ್ಯಕೀಯ ಉಪಕರಣದಲ್ಲಿ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಆರೋಪಿಸಿ ಬಿಡುಗಡೆ ಮಾಡಿರುವ ದಾಖಲೆಗಳನ್ನ ಸಿದ್ದರಾಮಯ್ಯ ತಮ್ಮ ನಿವಾಸದಲ್ಲೇ ರಿಲೀಸ್ ಮಾಡಲು ತೀರ್ಮಾನಿಸಿದ್ದರಂತೆ. ಒಂದಷ್ಟು ದಾಖಲೆಗಳನ್ನ ಸಂಗ್ರಹಿಸಿ ತಾವೇ ಬಿಡುಗಡೆ ಮಾಡಲು ಮುಂದಾಗಿದ್ದರು. ಇದು ಗೊತ್ತಾಗುತ್ತಿದ್ದಂತೆ ಪಕ್ಷದ ಕಚೇರಿಯಲ್ಲೇ ಬಿಡುಗಡೆ ಮಾಡಬೇಕೆಂದು ಡಿ.ಕೆ. ಶಿವಕುಮಾರ್ ಒತ್ತಾಯಿಸಿದ್ದರು.
ಈ ಬಗ್ಗೆ ಪಕ್ಷದ ಇತರ ಹಿರಿಯ ನಾಯಕರ ಮೂಲಕವೂ ಸಿದ್ದರಾಮಯ್ಯರಿಗೆ ಡಿ.ಕೆ.ಶಿವಕುಮಾರ್ ಹೇಳಿಸಿದ್ದರು. ಕೊನೆಗೆ ನಾಯಕರ ಒತ್ತಡಕ್ಕೆ ಮಣಿದು ಸಿದ್ದರಾಮಯ್ಯ ಪಕ್ಷದ ಕಚೇರಿಯಲ್ಲಿ ದಾಖಲೆಗಳ ಬಿಡುಗಡೆ ಮಾಡಲಾಯಿತು ಅಂತಾ ಹೇಳಲಾಗಿದೆ.
ಸಿದ್ದರಾಮಯ್ಯ ಕೆಲ ದಿನಗಳ ಹಿಂದೆಯೂ ಏಕಾಏಕಿ ವಿಧಾನಸೌಧದಲ್ಲಿ ಡಿ.ಕೆ.ಶಿವಕುಮಾರ್ಗೆ ಗೊತ್ತಿಲ್ಲದೇ ದಾಖಲೆಗಳನ್ನ ರಿಲೀಸ್ ಮಾಡಿದ್ದರು. ತಾವೇ ದಾಖಲೆಯನ್ನು ಸಂಗ್ರಹಿಸಿರುವ ಕಾರಣ ಯಾರನ್ನೂ ಕೇಳದೇ ಸಿದ್ದರಾಮಯ್ಯ ಅವರು ದಾಖಲೆಗಳನ್ನ ಮಾಧ್ಯಮಗಳಿಗೆ ನೀಡಿದ್ದರು ಎನ್ನಲಾಗಿತ್ತು. ಇದರ ಸಂಪೂರ್ಣ ಕ್ರೆಡಿಟ್ ಮಾಜಿ ಸಿಎಂ ಸಿದ್ದರಾಮಯ್ಯರಿಗೆ ಸಿಕ್ಕಿತ್ತು.
ಇದೇ ಕಾರಣಕ್ಕೇ ಪಕ್ಷದ ವೇದಿಕೆಯಲ್ಲೇ ಇತ್ತೀಚೆಗೆ ದಾಖಲೆಗಳ ಬಿಡುಗಡೆ ಮಾಡಲಾಗಿದೆ ಅನ್ನೋ ಮಾತುಗಳು ಕೇಳಿಬಂದಿವೆ. ಇನ್ನು ಇತ್ತೀಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಡಿಕೆ ಶಿವಕುಮಾರ್ಗಿಂತಲೂ ಹೈಲೆಟ್ ಆಗಿದ್ದು ಸಿದ್ದರಾಮಯ್ಯ. ಬಿಜೆಪಿ ಸಚಿವರು ಕೂಡ ಸಿದ್ದರಾಮಯ್ಯ ಪ್ರಶ್ನೆಗಳಿಗೆ ಉತ್ತರ ನೀಡಿದರೇ ಹೊರತು ಡಿಕೆ ಶಿವಕುಮಾರ್ ಮಾತುಗಳಿಗೆ ಅಷ್ಟಾಗಿ ಮನ್ನಣೆ ನೀಡಿಲ್ಲ. ಏನೇ ಮಾಡಿದರೂ ಸಿದ್ದರಾಮಯ್ಯ ಕೈ ಮೇಲಾಗುತ್ತಿದೆ ಎಂಬ ಚಿಂತೆ ಡಿ.ಕೆ ಶಿವಕುಮಾರ್ಗೆ ಕಾಡುತ್ತಿದೆಯಂತೆ.
ಈ ಹಿಂದೆಯೇ ವಿಧಾನಸಭೆ ಚುನಾವಣೆಗೆ ಇನ್ನೂ ಎರಡು ವರ್ಷ ಬಾಕಿಯಿದೆ. ಹೀಗಿರುವಾಗಲೇ ಮುಖ್ಯಮಂತ್ರಿ ಅಭ್ಯರ್ಥಿ ವಿಚಾರ ಕಾಂಗ್ರೆಸ್ ಪಕ್ಷದಲ್ಲಿ ಬಿರುಕಿಗೆ ಕಾರಣವಾಗಿರುವಂತೆಯೇ, 2023ರ ವಿಧಾನಸಭಾ ಚುನಾವಣೆಗಾಗಿ ನನ್ನನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಪ್ರತಿಬಿಂಬಿಸದಂತೆ ಪಕ್ಷದ ಶಾಸಕರಿಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿವಿಮಾತು ಹೇಳಿದ್ದರು.
ಪಕ್ಷದ ನಾಯಕ್ವದ ಆದೇಶದ ಹೊರತಾಗಿಯೂ ಮುಂದೆಯೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಬೇಕೆಂದು ಶಾಸಕರು ಬಹಿರಂಗವಾಗಿ ಹೇಳಿಕೆ ನೀಡುತ್ತಿರುವ ಬೆನ್ನಲ್ಲೇ, ಸಿದ್ದರಾಮಯ್ಯ ಈ ರೀತಿ ಶಾಸಕರಿಗೆ ಹೇಳಿದ್ದಾರೆ.
ಮುಂದಿನ ಮುಖ್ಯಮಂತ್ರಿ ಎಂದು ಹೇಳುತ್ತಿರುವ ಶಾಸಕರನ್ನು ನಿಯಂತ್ರಿಸುವಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ನನ್ನಗೆ ಏನು ಗೊತ್ತಿಲ್ಲ, ಮುಂದಿನ ಮುಖ್ಯಮಂತ್ರಿ ಅಂತಾ ಹೇಳಿಲ್ಲ, ಆದರೆ, ಮುಂದಿನ ಮುಖ್ಯಮಂತ್ರಿ ಅಂತಾ ಹೇಳಿಕೆ ನೀಡದಂತೆ ಪಕ್ಷದ ಶಾಸಕರಲ್ಲಿ ಮನವಿ ಮಾಡುತ್ತೇನೆ ಎಂದರು.
ಮುಂದಿನ ಸಿಎಂ ವಿಚಾರವಾಗಿ ಪಕ್ಷದ ರಾಷ್ಟ್ರೀಯ ನಾಯಕರೊಂದಿಗಿನ ಸಭೆ ನಂತರ ಮಾಧ್ಯಮಗಳ ಜತೆ ಮಾನಾಡಿದ ಡಿಕೆ ಶಿವಕುಮಾರ್, ಕೆಲ ಶಾಸಕರು ನೀಡಿರುವ ಹೇಳಿಕೆಗಳನ್ನು ಮಾಧ್ಯಮಗಳಲ್ಲಿ ನೋಡುತ್ತಿದ್ದೇನೆ. ಇದರ ಬಗ್ಗೆ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೋಡಿಕೊಳ್ಳಲಿದ್ದಾರೆ, ಒಂದು ವೇಳೆ ಅವರು ಗಮನಹರಿಸದಿದ್ದಲ್ಲಿ ಪಕ್ಷ ನೋಡಿಕೊಳ್ಳಲಿದೆ ಎಂದು ಹೇಳಿದ್ದರು.
ಮೊದಲಿನಿಂದಲೂ ಕಾಂಗ್ರೆಸ್ ಮುಂದಿನ ಸಿಎಂ ವಿಚಾರಕ್ಕೆ ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವೆ ವಾರ್ ನಡೆಯುತ್ತಿತ್ತು. ಇದಕ್ಕೆ ಕಾರಣ ಕಾಂಗ್ರೆಸ್ ಶಾಸಕರಾದ ಬಿ.ಝಡ್ ಜಮೀರ್ ಅಹ್ಮದ್ ಖಾನ್, ರಾಘವೇಂದ್ರ ಹಿಟ್ನಾಳ್, ಜೆ.ಎನ್. ಗಣೇಶ್, ಭೀಮಾ ನಾಯಕ್, ರಾಮಪ್ಪ ಮತ್ತು ಆರ್. ಅಖಂಡ ಶ್ರೀನಿವಾಸ ಮೂರ್ತಿ, ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿಯಾಗಬೇಕೆಂದು ಬಹಿರಂಗವಾಗಿ ಹೇಳಿಕೆ ನೀಡಿದ್ದು.